Deepavali Festival: "ದೀಪಾವಳಿ ದಿನದಂದು ಎರಡು ಗಂಟೆಯಷ್ಟೇ ಪಟಾಕಿ ಹೊಡೆಯಬೇಕು"
Deepavali Festival 2024: ಹಿಂದೂಗಳ ಪ್ರಮುಖ ಹಬ್ಬಳಲ್ಲಿ ದೀಪಾವಳಿ ಕೂಡ ಒಂದಾಗಿದೆ. ಸಾಮಾನ್ಯವಾಗಿ ಈ ಹಬ್ಬ ಬಂತೆಂದರೆ ಸಾಕು ಪಟಾಕಿ ಹೆಚ್ಚಾಗಿ ಹೊಡೆಯುತ್ತಾರೆ. ಆದ್ದರಿಂದ ಈ ವೇಳೆ ಯಾವುದೇ ಅನಾಹುತಗಳು ಆಗಬಾರದೆಂದು ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಗೈಡ್‌ಲೈನ್ಸ್‌ಗಳನ್ನು ಹೊರಡಿಸುತ್ತದೆ. ಹಾಗೆಯೇ ಇದೀಗ ಸಚಿವರೊಬ್ಬರು ಈ ಎರಡು ಗಂಟೆಯೊಳಗೆ ಪಟಾಕಿ ಹೊಡೆಯಬೇಕಷ್ಟೇ ಎಂದು ತಿಳಿಸಿದ್ದಾರೆ.
ಈ ಬಾರಿ ದೀಪಾವಳಿ ಹಬ್ಬದಲ್ಲಿ ರಾತ್ರಿ 8 ಗಂಟೆಯಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ಇದೆ. ಈ ಕುರಿತು ಸುಪ್ರೀಂಕೋರ್ಟ್ ನಿರ್ದೇಶನ ಕೂಡ ಇದೆ ಎಂದು ಅರಣ್ಯ ಇಲಾಖೆಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಈಶ್ವರ ಖಂಡ್ರೆ ಅವರು, ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಬಹುದು. ಅದು ಹಸಿರು ಪಟಾಕಿ ಮಾತ್ರ ಸಿಡಿಸಲು ಅವಕಾಶ ಇದೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ನಿಂದ ನಿರ್ದೇಶನವಿದೆ ಎಂದು ಹೇಳಿದರು.
ಕತ್ತಲೆಯಿಂದ ಬೆಳಕಿನತ್ತ ಹೋಗುವಾಗ ಪರಿಸರ ಮಾಲಿನ್ಯ ಬೇಡ. ರಾಸಾಯನಿಕ ಅಲ್ಲದ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು. ಈ ಬಗ್ಗೆ ಪಟಾಕಿ ಮಾರಾಟಗಾರರಿಂದಲೂ ಮುಚ್ಚಳಿಕೆ ಪತ್ರವನ್ನು ಬರೆಸಿಕೊಳ್ಳಲಾಗಿದೆ ಎಂದು ಹೇಳಿದರು.
ಪಟಾಕಿ ಸಿಡಿಸುವುದರಿಂದ ಅಪಾಯಗಳು ಸಂಭವಿಸುತ್ತವೆ. ಈಗಾಗಲೇ ಕೆಲವೆಡೆ ಜೀವ ಹಾನಿ ಆಗಿರುವ ಉದಾಹರಣೆಗಳಿವೆ. ಮಕ್ಕಳು ಕಣ್ಣು ಕೂಡ ಕಳೆದುಕೊಂಡಿದ್ದಾರೆ. ಅಲ್ಲದೆ ಪಟಾಕಿ ಸಿಡಿಸುವುದರಿಂದ ದೊಡ್ಡ ಪ್ರಮಾಣದಲ್ಲಿ ಪರಿಸರ ಹಾನಿ ಆಗುತ್ತದೆ ಎಂದು ಹೇಳಿದ್ದಾರೆ.
ಪಟಾಕಿ ಮಾರಾಟಕ್ಕೆ ಅನುಮತಿ: ದೀಪಾವಳಿ ಆಚರಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಈ ಬಾರಿಯ ಹಬ್ಬಕ್ಕೆ ಹಸಿರು ಪಟಾಕಿಗಳ ಮಾರಾಟಕ್ಕಷ್ಟೇ ಅನುಮತಿ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಶನಿವಾರ ಹೇಳಿದೆ.
ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಮತ್ತು ಸುಪ್ರೀಂ ಕೋರ್ಟ್ ತನ್ನ ಹಲವು ತೀರ್ಪುಗಳಲ್ಲಿ 125 ಡೆಸಿಬಲ್‌ಗಿಂತ ಹೆಚ್ಚು ಶಬ್ದ ಮಾಡುವ ಮತ್ತು ಹೆಚ್ಚು ಹೊಗೆ ಹೊರಹೊಮ್ಮುವ ರಾಸಾಯನಿಕಯುಕ್ತ ಪಟಾಕಿಗಳನ್ನು ನಿಷೇಧಿಸಿದೆ. ಹೀಗಾಗಿ ರಾತ್ರಿ 8 ರಿಂದ 10 ಗಂಟೆವರೆಗೆ ಮಾತ್ರ ಹಸಿರು ಪಟಾಕಿಗಳನ್ನು ಹಚ್ಚಲು ಅವಕಾಶ ಕಲ್ಪಿಸಿದೆ. ಸಾರ್ವಜನಿಕರು ಈ ನಿಯಮಗಳನ್ನು ಪಾಲಿಸಬೇಕೆಂದು ತಿಳಿಸಿದರು.
ಗಣಪತಿ ಹಬ್ಬದ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿಗಳೊಂದಿಗೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಪಟಾಕಿ ಮಳಿಗೆಗೆ ಅನುಮತಿ ನೀಡುವಾಗ ಹಸಿರು ಪಟಾಕಿ ಮಾತ್ರ ದಾಸ್ತಾನು, ಸಾಗಾಟ ಹಾಗೂ ಮಾರಾಟ ಮಾಡುವುದಾಗಿ ಮಳಿಗೆ ಮಾಲೀಕರಿಂದ ಮುಚ್ಚಳಿಕೆ ಬರೆಸಿಕೊಳ್ಳಲು ಸೂಚಿಸಲಾಗಿದೆ.
ನಿಯಮ ಉಲ್ಲಂಘಿಸುವವರಿಗೆ ಮುಂದಿನ ಬಾರಿ ಪಟಾಕಿ ಮಳಿಗೆ ಅನುಮತಿ ನೀಡದಂತೆ ತಿಳಿಸಲಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಸಂಘ ಸಂಸ್ಥೆಗಳು, ಶಿಕ್ಷಕರು, ಬೋಧಕರು, ಉಪನ್ಯಾಸಕರು, ಪರಿಸರ ಪ್ರೇಮಿಗಳು, ಜನಪ್ರತಿನಿಧಿಗಳು ಜನರಲ್ಲಿ ಅದರಲ್ಲೂ ಮಕ್ಕಳಲ್ಲಿ ಪಟಾಕಿಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ಪಟಾಕಿ ತ್ಯಜಿಸುವಂತೆ ಇಲ್ಲವೇ ಹಸಿರು ಪಟಾಕಿ ಮಾತ್ರ ಬಳಸಲು ಮನವಿ ಮಾಡಬೇಕು ಎಂದೂ ಸಚಿವರು ಮನವಿ ಮಾಡಿದರು.












Click it and Unblock the Notifications