Upendra FIR: ನಟ ಉಪೇಂದ್ರ ಹೇಳಿದ್ದೇನು? ಎಫ್‌ಐಆರ್ ಆಗಿದ್ದೇಕೆ?
ನಟ ಉಪೇಂದ್ರ ಅಭಿಮಾನಿಗಳಿಗೆ ಇಂದು ದೊಡ್ಡ ಆಘಾತ ಸಿಕ್ಕಿದೆ. ಕನ್ನಡ ಚಿತ್ರರಂಗದಲ್ಲಿ ಬುದ್ಧಿವಂತ ಎಂಬ ಬಿರುದು ಪಡೆದಿರುವ ರಿಯಲ್ ಸ್ಟಾರ್ ಉಪೇಂದ್ರ ಅವರ ಅದೊಂದು ಹೇಳಿಕೆ ಈಗ ಬಿರುಗಾಳಿ ಎಬ್ಬಿಸಿದೆ. ಹಾಗೇ ಉಪೇಂದ್ರ ಅವರ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ. ಹಾಗಾದರೆ ನಟ ಉಪೇಂದ್ರ ಹೇಳಿದ್ದೇನು? ಎಫ್‌ಐಆರ್ ದಾಖಲಾಗಿದ್ದೇಕೆ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ರಿಯಲ್ ಸ್ಟಾರ್ ಉಪೇಂದ್ರ (Actor Upendra) ತಮ್ಮ ಸಿನಿಮಾ ಜೊತೆಗೆ ರಾಜಕೀಯದಲ್ಲೂ ಸದ್ದು ಮಾಡಲು ಹೊರಟಿದ್ದಾರೆ. ಹೀಗಾಗಿ ಪಾಲಿಟಿಕ್ಸ್ ಅಲ್ಲೂ ಉಪ್ಪಿ ಈಗ ಜಾಸ್ತಿ ಬ್ಯುಸಿ ಆಗಿದ್ದಾರೆ. ಈ ಮಧ್ಯೆ ಆಗಾಗ ಫೇಸ್ಬುಕ್ ಲೈವ್ ಬಂದು ಅಭಿಮಾನಿಗಳ ಜೊತೆ ಚರ್ಚೆಯೂ ನಡೆಸುತ್ತಾರೆ. ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಲೈವ್‌ಗೆ ಬಂದಾಗ ಆಕ್ಷೇಪಾರ್ಹ ಪದ ಬಳಸಿದ್ದಾರೆ ಅನ್ನೋ ಆರೋಪ ಕಿಚ್ಚು ಹೊತ್ತಿಸಿದೆ. ಅಲ್ಲದೆ ನಟ ಉಪೇಂದ್ರ ಇದೀಗ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಉಪೇಂದ್ರ ವಿರುದ್ಧ ರೊಚ್ಚಿಗೆದ್ದು ಪ್ರತಿಭಟನೆಗಳು ಮೊಳಗಿವೆ. ಇಷ್ಟೆಲ್ಲದರ ನಡುವೆ ಉಪೇಂದ್ರ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ.

ನಟ ಉಪೇಂದ್ರ ಹೇಳಿದ್ದು ಏನು?
ಅಂದಹಾಗೆ ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡುವಾಗ ಅನೇಕ ವಿಚಾರಗಳ ಬಗ್ಗೆ ಮಾತಾಡಿದ ಉಪೇಂದ್ರ, ಗಾದೆ ಮಾತು ಪ್ರಸ್ತಾಪಿಸಿದ್ದಾರೆ. ಈ ಗಾದೆ ಮಾತು ಒಂದು ಸಮುದಾಯದವರನ್ನ ಅವಮಾನಿಸಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ವಿಚಾರಕ್ಕೆ ನಟ ಉಪೇಂದ್ರ ವಿರುದ್ಧ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ. ಅಲ್ಲದೆ ನಟನ ವಿರುದ್ಧ ರಾಜ್ಯದ ವಿವಿಧೆಡೆ ಹೋರಾಟ, ಪ್ರತಿಭಟನೆ ಜೊತೆ ಆಕ್ರೋಶ ಕೂಡ ಮೊಳಗಿದೆ. ಈ ನಡುವೆ ಉಪ್ಪಿ ಅಭಿಮಾನಿ ಬಳಗಕ್ಕೆ ಈ ಬೆಳವಣಿಗೆ ದೊಡ್ಡ ಶಾಕ್ ಕೂಡ ಕೊಟ್ಟಿದೆ.
ರಿಯಲ್ ಸ್ಟಾರ್ ವಿರುದ್ಧ ಅಟ್ರಾಸಿಟಿ ಕೇಸ್
ಇನ್ನು ನಟ ಉಪೇಂದ್ರ ಶಬ್ಧ ಬಳಕೆ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹೊತ್ತಿಸಿದೆ. ಇದು ಬೇರೆ ರೂಪವನ್ನೇ ಪಡೆಯುತ್ತಿದ್ದು, ಅನೇಕರು ನಟನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಉಪೇಂದ್ರ ವಿರುದ್ಧ ಪ್ರತಿಭಟನೆ ಶುರುವಾಗಿದ್ದು, ರಾಮನಗರಲ್ಲಿ ನಟ ಉಪೇಂದ್ರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಹಾರೋಹಳ್ಳಿ ವೃತ್ತದಲ್ಲಿ ದಲಿತ ಪರ ಸಂಘಟನೆಗಳ ಮುಖಂಡರು ಉಪೇಂದ್ರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದ್ದಾರೆ. ನಟ ಉಪೇಂದ್ರ ಹೇಳಿಕೆ ಖಂಡಿಸಿ ದಲಿತ ಪರ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿವೆ.
ಕ್ಷಮೆ ಕೇಳಿದ ನಟ ಉಪೇಂದ್ರ
ಒಂದು ಕಡೆ ನಟ ಉಪೇಂದ್ರ ಅವರ ಪ್ರತಿಭಟನೆ ಹಾಗೂ ಆಕ್ರೋಶ ಜೋರಾಗುತ್ತಿರುವ ಈ ಹೊತ್ತಲ್ಲೇ ನಟ ಉಪೇಂದ್ರ ಕೂಡ ಕ್ಷಮೆ ಕೇಳಿದ್ದಾರೆ. ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಉಪೇಂದ್ರ ಕ್ಷಮೆ ಕೇಳಿದ್ದಾರೆ. ಅಲ್ಲದೆ ಫೇಸ್ ಬುಕ್ ಲೈವ್ ನಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ ವಿರುದ್ಧ ಆಕ್ರೋಶ ವ್ಯಕ್ತವಾದ ಬಳಿಕ ನಟ ಉಪೇಂದ್ರ ಆ ವಿಡಿಯೋ ಡಿಲೀಟ್ ಮಾಡಿದ್ರು. ಈಗ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ಹಾಗಾದರೆ ನಟ ಉಪ್ಪಿ ಪೋಸ್ಟ್‌ನಲ್ಲಿ ಏನಿದೆ, ಆ ಬಗ್ಗೆ ಮಾಹಿತಿ ಮುಂದೆ ಇದೆ ಓದಿ.

ನಟ ಉಪೇಂದ್ರ ಅವರು ಇದೀಗ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮೂಲಕ ಕ್ಷಮೆ ಕೋರಿದ್ದಾರೆ. 'ಇಂದು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನೇರ ಪ್ರಸಾರದಲ್ಲಿ ಬಾಯಿ ತಪ್ಪಿ ಒಂದು ಗಾದೆ ಮಾತನ್ನು ಬಳಸಿದ್ದು. . ಅದರಿಂದ ಹಲವರ ಭಾವನೆಗಳಿಗೆ ಧಕ್ಕೆ ಉಂಟಾಗಿರುವುದು ಕಂಡು ಬಂದ ತಕ್ಷಣವೇ ಆ ಲೈವ್ ವಿಡಿಯೋ ವನ್ನು ನನ್ನ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿರುತ್ತೇನೆ.. ಮತ್ತು ಈ ಮಾತಿಗೆ ಕ್ಷಮೆಯಿರಲಿ...' ಎಂದು ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿ ನಟ ಉಪೇಂದ್ರ ಬರೆದುಕೊಂಡಿದ್ದಾರೆ.












Click it and Unblock the Notifications