ಉದ್ಯೋಗ ಖಾತ್ರಿಗೆ ಕತ್ತರಿ; ಜಿ ರಾಮ್ ಜಿ ಕಾಯ್ದೆ ಹಿಂಪಡೆಯುವವರೆಗೂ ಕೇಂದ್ರದ ವಿರುದ್ಧ ಹೋರಾಟ: ಡಿ.ಕೆ. ಶಿವಕುಮಾರ್
ಬೆಂಗಳೂರು: ರಾಜ್ಯದ ಕೂಲಿ ಕಾರ್ಮಿಕರ ಬದುಕು ಹಾಗೂ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಮಾರಕವಾಗಿರುವ ವಿಬಿ ಜಿ ರಾಮ್ ಜಿ ಮಸೂದೆಯನ್ನು ಕೇಂದ್ರ ಸರ್ಕಾರ ಹಿಂಪಡೆಯುವವರೆಗೂ ಪಕ್ಷತೀತವಾಗಿ ಆಂದೋಲನ ರೂಪಿಸಲಾಗುವುದು. ಈ ಮಸೂದೆ ವಿರುದ್ಧದ ಹೋರಾಟ ಕೇವಲ ಪಕ್ಷ ಅಥವಾ ಸರ್ಕಾರಕ್ಕೆ ಮಾತ್ರ ಸೀಮಿತವಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಜತೆ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಶಿವಕುಮಾರ್ ಅವರು ಮಾತನಾಡಿ, ಪ್ರತಿ ಪಂಚಾಯ್ತಿಯಲ್ಲಿ ಪ್ರತಿಯೊಬ್ಬರನ್ನು ಆಹ್ವಾನ ನೀಡಿ ನಮ್ಮ ನಾಯಕರು ಸೇರಿ ಸಮಾವೇಶ ಹಾಗೂ ಗ್ರಾಮ ಸಭೆ ನಡೆಸುತ್ತೇವೆ. ಅಲ್ಲಿ ಇದರ ಬಗ್ಗೆ ಚರ್ಚೆ ಮಾಡುತ್ತೇವೆ. ನಂತರ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ. ಕೇಂದ್ರ ಸರ್ಕಾರ ಹೇಗೆ ಕೃಷಿ ಕರಾಳ ಕಾಯ್ದೆ ಹಿಂಪಡೆಯಿತೋ ಅದೇ ರೀತಿ ಈ ಮಸೂದೆಯನ್ನು ಹಿಂಪಡೆಯುವಂತೆ ಮಾಡಲು ಆಂದೋಲನ ಮಾಡುತ್ತೇವೆ. ಪಕ್ಷಬೇಧ ಮರೆತು ನಮ್ಮ ಹೋರಾಟ ರೂಪಿಸುತ್ತೇವೆ ಎಂದು ಹೇಳಿದರು.

ಬಿಜೆಪಿ ನಾಯಕರು ಗಾಂಧೀಜಿ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಳೆದುಕೊಂಡಿದ್ದಾರೆ. ತಮ್ಮ ಕಚೇರಿಗಳಲ್ಲಿ ಗಾಂಧೀಜಿ ಅವರ ಫೋಟೋ ಇಟ್ಟುಕೊಳ್ಳುವ ಯೋಗ್ಯತೆ ಕೂಡ ಅವರು ಉಳಿಸಿಕೊಂಡಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹರಿಹಾಯ್ದರು. ಬಿಜೆಪಿ ನಾಯಕರು ಇನ್ನು ಮುಂದೆ ಮಹಾತ್ಮಾ ಗಾಂಧಿ ಅವರ ಪ್ರತಿಮೆ ಮುಂದೆ ಕೂತು ಹೋರಾಟ ಮಾಡುವ ಹಕ್ಕನ್ನು ಕಳೆದುಕೊಂಡಿದ್ದಾರೆ. ಮಹಾತ್ಮಾ ಗಾಂಧಿ ಅವರ ಫೋಟೋಗಳನ್ನು ತಮ್ಮ ಕಚೇರಿಗಳಲ್ಲಿ ಹಾಕಿಕೊಳ್ಳುವ ಅರ್ಹತೆಯನ್ನು ಕಳೆದುಕೊಂಡಿದ್ದಾರೆ.
ಗಾಂಧಿಜೀ ಅವರ ಫೋಟೋ ಹಾಕಿಕೊಳ್ಳುವ ಯೋಗ್ಯತೆ ನಿಮಗಿಲ್ಲ. ಅವರ ಹೆಸರನ್ನು ಯೋಜನೆಯಿಂದ ತೆಗೆದ ಮೇಲೆ ನಿಮಗೆ ಯಾವ ನೈತಿಕತೆ ಇದೆ? ನೀವು ಮಹಾತ್ಮಾ ಗಾಂಧಿ ಬಗ್ಗೆ ಮಾತನಾಡುವ ಹಾಗೂ ಅವರ ಪ್ರತಿಮೆಗೆ ಹೂವಿನ ಹಾರ ಹಾಕುವ ಹಕ್ಕೂ ಇಲ್ಲ. ನಿಮ್ಮ ಬಳಿ ಇರುವ ಮಹಾತ್ಮಾ ಗಾಂಧೀಜಿ ಅವರ ಫೋಟೋಗಳನ್ನು ನಮಗೆ ಕೊಟ್ಟುಬಿಡಿ, ನಾವು ಅವುಗಳನ್ನು ನಮ್ಮ ಹಾಗೂ ಗಾಂಧಿಜಿಯನ್ನು ಗೌರವಿಸುವ ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ ಎಂದರು.
ಮಹಾತ್ಮಾ ಗಾಂಧೀಜಿ ಅವರು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಲು ನೇತೃತ್ವ ವಹಿಸಿ ನೂರು ವರ್ಷಗಳು ತುಂಬಿವೆ. ಇಂತಹ ಸಂಭ್ರಮಾಚರಣೆ ವೇಳೆ ಅವರ ಹೆಸರನ್ನು ತೆಗೆದು, ಮತ್ತೊಮ್ಮೆ ಅವರ ಕೊಲೆ ಮಾಡುತ್ತಿದ್ದೀರಲ್ಲಾ, ಈ ದೇಶದಲ್ಲಿ ಇದಕ್ಕಿಂತ ದೊಡ್ಡ ಅಪಮಾನ ಬೇರೋಂದಿಲ್ಲ. ಕಳೆದ 20 ವರ್ಷಗಳಿಂದ ಹಳ್ಳಿ ಜನ ತಮ್ಮ ಬೆವರು ಸುರಿಸಿ ತಮ್ಮ ಹಳ್ಳಿಗಳ ಅಭಿವೃದ್ಧಿ ಮಾಡುವ ಪ್ರಯತ್ನಕ್ಕೆ ಅಂತ್ಯ ಹಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಹೊಸ ಮಸೂದೆ ನಮ್ಮ ಕರಾವಳಿ ಭಾಗದ ಮೀನುಗಾರರಿಗೂ ಅನ್ಯಾಯವಾಗಲಿದೆ.
ಮನರೇಗಾ ಯೋಜನೆಯಲ್ಲಿ ಮೀನುಗಾರರಿಗೂ ಕೂಲಿ ಪಡೆಯುವ ಅವಕಾಶವಿತ್ತು. ಇದನ್ನೂ ಕಸಿಯಲಾಗಿದೆ. ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಯೋಜನೆಯನ್ನು ಸರಿ ಎಂದು ಸ್ವಾಗತಿಸುತ್ತಿಲ್ಲ, ತಪ್ಪು ಎಂದು ವಿರೋಧ ಮಾಡುತ್ತಿಲ್ಲ. ಈ ವಿಚಾರದಲ್ಲಿ ಮೌನ ವಹಿಸಿದ್ದಾರೆ ಯಾಕೆ? ಎಂದು ಪ್ರಶ್ನಿಸಿದರು.
ಮನರೇಗಾ ಪ್ರತಿ ಕೂಲಿ ಕಾರ್ಮಿಕರ ಕುಟುಂಬಕ್ಕೆ ಶಕ್ತಿ ತುಂಬಿತ್ತು. ಇಂದಿರಾ ಆವಾಸ್, ರಾಜ್ಯ ಹಾಗೂ ಕೇಂದ್ರ ವಸತಿ ಯೋಜನೆ ಸೇರಿದಂತೆ ವಿವಿಧ ವಸತಿ ಯೋಜನೆಗಳಲ್ಲಿ ತಾನು ತನ್ನ ಮನೆ ಕಟ್ಟಿಕೊಳ್ಳಲು ಮನರೇಗಾ ಯೋಜನೆ ಕೂಲಿ ನೀಡುತ್ತಿತ್ತು. ರೈತರು ತಮ್ಮದೇ ಜಮೀನನ್ನು ಮಟ್ಟು ಮಾಡಿಕೊಳ್ಳಲು, ಇಂಗು ಗುಂಡಿ ನಿರ್ಮಿಸಲು, ವಿವಿಧ ಬೆಳೆ ಹಾಕಲು ಮನರೇಗಾ ಯೋಜನೆಯಲ್ಲಿ ಕೂಲಿ ಪಡೆದುಕೊಳ್ಳಬಹುದಾಗಿತ್ತು. ಇದು ತೋಟಗಾರಿಗೆ, ರೇಷ್ಮೆ ಮೂಲಕ ಜೀವನೋಪಾಯದಕ್ಕೆ ದಾರಿ ಮಾಡಿಕೊಳ್ಳಲಾಗಿತ್ತು. ಈಗ ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಇಂದಿರಾ ಅವಾಸ್, ರಾಜ್ಯ ಹಾಗೂ ಕೇಂದ್ರ ಅವಾಸ್ ಯೋಜನೆಗಳ ಮನೆ ನಿರ್ಮಾಣಕ್ಕೆ ನೀಡಲಾಗುತ್ತಿದ್ದ ಕೂಲಿಯನ್ನು ತೆಗೆದುಹಾಕಲಾಗಿದೆ. ಕೇವಲ ಪ್ರಧಾನಮಂತ್ರಿ ಅವಾಸ್ ಯೋಜನೆ ಮಾತ್ರ ಅವಕಾಶ ನೀಡಿದ್ದಾರೆ ಎಂದು ಕಿಡಿ ಕಾರಿದರು.












Click it and Unblock the Notifications