ಕರ್ನಾಟಕದಲ್ಲಿ ಬರ ಪರಿಸ್ಥಿತಿ? ಮುಂಗಾರು ಮಳೆ ಮತ್ತಷ್ಟು ಲೇಟ್?
ಬೆಂಗಳೂರು: 'ಮುಂಗಾರು ಮಳೆ'.. ಭಾರತಕ್ಕೆ ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಿಗೆ ಈ ಮಳೆ ಅಮೃತಕ್ಕೆ ಸಮಾನ. ಬಿರು ಬೇಸಿಗೆಯಿಂದ ನರಳಿದ ಜಾಗಕ್ಕೆ, ಇದೇ ಮಳೆ ಮತ್ತೆ ಜೀವಕಳೆ ನೀಡುತ್ತದೆ. ದಕ್ಷಿಣ ಭಾರತದಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳಿಗೆ ಈ ಮಳೆಯೇ ಆಧಾರ. ಆದರೆ ಈ ಬಾರಿ ಮುಂಗಾರು ಮಳೆ ತಡವಾಗುತ್ತಿರುವುದು ಭಯ ಹುಟ್ಟಿಸಿದೆ.
ದಕ್ಷಿಣ ಭಾರತದ ಕೇರಳ ಕರಾವಳಿ ಮೂಲಕ ಎಂಟ್ರಿ ಕೊಡುವ ಮುಂಗಾರು ಮಾರುತಗಳು ಜೀವಕಳೆ ನೀಡುತ್ತವೆ. ಅದರಲ್ಲೂ ಕನ್ನಡ ನಾಡಿಗೆ ಇದೇ ಮಾರುತಗಳೇ ಆಧಾರ. ಆದರೆ ಈ ಬಾರಿ ಅಂದುಕೊಂಡ ರೀತಿ ಮುಂಗಾರು ಮೋಡಗಳು ಎಂಟ್ರಿ ಕೊಟ್ಟಿಲ್ಲ. ಮುಂಗಾರು ಮಳೆಯ ಆಗಮನ ತಡವಾಗುತ್ತಿರುವುದು ಈ ಬಾರಿ ಬರದ ಪರಿಸ್ಥಿತಿಯ ಭಯ ಹುಟ್ಟಿಸಿದೆ. ಅದರಲ್ಲೂ ಮುಂಗಾರು ಮಳೆ ತಡವಾಗುತ್ತಿರುವ ಬೆಳವಣಿಗೆ ರಾಜ್ಯದ ರೈತರಲ್ಲಿ ಆತಂಕ ಮೂಡಿಸಿದೆ. ಈ ಕುರಿತು ಹವಾಮಾನ ತಜ್ಞರು ಮಾಹಿತಿ ನೀಡಿದ್ದು, ಅದನ್ನ ಸಂಪೂರ್ಣ ಮಾಹಿತಿ ಇಲ್ಲಿದೆ (Monsoon Rain).

ಕೇರಳ ಕರಾವಳಿಗೆ ಬರುತ್ತಿಲ್ಲ 'ಮುಂಗಾರು'
ಹೌದು ಈಗಾಗಲೇ ಕಳೆದ ಹಲವು ವಾರಗಳಿಂದ ಮುಂಗಾರು ಮಾರುತಗಳ ಬಗ್ಗೆ ಮಾತುಕತೆ ಶುರುವಾಗಿದೆ. ಅದ್ರಲ್ಲೂ ಕೇರಳ ಕರಾವಳಿಗೆ 'ಮುಂಗಾರು ಮಳೆ' ಎಂಟ್ರಿ ಕೊಟ್ಟು, ಅಲ್ಲಿ ಮಳೆ ಸುರಿಸಿದ ನಂತರ ಕರ್ನಾಟಕಕ್ಕೂ ಬರುವುದೇ ವಾಡಿಕೆ. ಆದರೆ ಈ ಬಾರಿ ಜೂನ್ ಮೊದಲ ವಾರ ಕೊನೆಯಾಗುತ್ತಾ ಬಂದರೂ 'ಮುಂಗಾರು ಮಾರುತಗಳ' ಸುಳಿವೇ ಇಲ್ಲ. ನಿನ್ನೆ ಅಥವಾ ಇಂದು ಕೇರಳಕ್ಕೆ ಮುಂಗಾರು ಮಾರುತಗಳು ಬರಬಹುದು ಅನ್ನೋ ನಿರೀಕ್ಷೆ ಇತ್ತು. ಆದರೆ ಇಂದು ಕೂಡ ಮುಂಗಾರು ಮಾರುತ ಕೇರಳಕ್ಕೆ ಪ್ರವೇಶಿಸಲು ವಿಫಲವಾಗಿವೆ. ಹಾಗಾದ್ರೆ ಇದರ ಪರಿಣಾಮವೇನು? ಕರ್ನಾಟಕಕ್ಕೆ ಬರ ಪರಿಸ್ಥಿತಿ ಪಕ್ಕಾನಾ? ಮುಂದೆ ಓದಿ.
ಮುಂಗಾರು ಮಳೆ ತಡವಾದರೆ ಸಂಕಷ್ಟ?
ಭಾರತದ ಮಳೆಯನ್ನ 2 ವಿಭಾಗವಾಗಿ ವಿಂಗಡಣೆ ಮಾಡಲಾಗುತ್ತೆ, 1) ಮುಂಗಾರು ಮಳೆ ಹಾಗೂ ಇನ್ನೊಂದು 2) ಹಿಂಗಾರು ಮಳೆ. ಅದರಲ್ಲೂ ಹಿಂಗಾರು ಮಳೆ ತಡವಾಗಿ ಬಂದ್ರು ಪರವಾಗಿಲ್ಲ, ಮುಂಗಾರು ಮಳೆ ತಡವಾದರೆ ಅನ್ನದಾತ ರೈತ ಚಡಪಡಿಸುತ್ತಾನೆ. ಬಿತ್ತನೆ ಕಾರ್ಯದಿಂದ ಹಿಡಿದು, ಕೃಷಿ ಚಟುವಟಿಕೆಯ ಪ್ರತಿಯೊಂದು ಕೆಲಸ ಕೂಡ ಇದರ ಮೇಲೆ ಅವಲಂಬಿತ. ಹೀಗಾಗಿಯೇ ಮುಂಗಾರು ಮಳೆ ತಡವಾಗುತ್ತಿರುವುದು ಆತಂಕ ಮೂಡಿಸಿದೆ. ಮುಂಗಾರು ಮಳೆ ನಿಗದಿತ ದಿನಕ್ಕಿಂತಲೂ 3-4 ದಿನ ತಡವಾಗಲಿದೆ ಅಂತಾ ಹವಾಮಾನ ತಜ್ಞರು ಹೇಳುತ್ತಿದ್ದಾರೆ. ಮಳೆ ತಡವಾದಷ್ಟೂ ಸಂಕಷ್ಟ ಹೆಚ್ಚಾಗುವ ಸಾಧ್ಯತೆ ಇದೆ.
ಮುಂಗಾರು ತಡವಾದರೂ ಟೆನ್ಷನ್ ಬೇಡ!
ಅಷ್ಟಕ್ಕೂ ಈಗಿನ ಮಾಹಿತಿ ಪ್ರಕಾರ ದಕ್ಷಿಣ ಅರಬ್ಬೀ ಸಮುದ್ರದಲ್ಲಿ ಮುಂಗಾರು ಮಾರುತಗಳ ಚಲನೆ ವೇಗ ಪಡೆದುಕೊಂಡಿದೆ. ಹೀಗಾಗಿ ಮಂದಿನ 1-2 ದಿನದಲ್ಲಿ ಮುಂಗಾರು ಮಾರುತಗಳು ಕೇರಳ ಕರಾವಳಿಗೆ ಎಂಟ್ರಿ ಕೊಡುವ ಸಾಧ್ಯತೆ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಇಂದು ಅಥವಾ ನಾಳೆಯ ಒಳಗೆ ಕೇರಳದಲ್ಲಿ ಮುಂಗಾರು ಮಳೆಯ ಅಬ್ಬರ ಶುರುವಾಗಿ, ನಂತರ ಇದೇ ಮಾರುತಗಳು ಕನ್ನಡ ನಾಡಿಗೂ ಕಂಪು ಹರಿಸಲಿವೆ. ಅಂದರೆ ಇನ್ನೊಂದು 4 ದಿನದ ಒಳಗೆ ಕರ್ನಾಟಕದ ನೆಲವೂ ಹಸಿಯಾವುದು ಪಕ್ಕಾ.

ರಾಜ್ಯದಲ್ಲಿ ಭರ್ಜರಿ ಮಳೆ ಗ್ಯಾರಂಟಿ
ಜೂನ್ ತಿಂಗಳಲ್ಲಿ ಮುಂಗಾರು ರಾಜ್ಯಕ್ಕೆ ಎಂಟ್ರಿ ಕೊಟ್ಟು ಬಿತ್ತನೆಯೂ ಆರಂಭವಾಗುತ್ತದೆ. ಜೂನ್ ಆರಂಭದಲ್ಲಿ ಕೇರಳಕ್ಕೆ ಮುಂಗಾರು ಮಳೆ ಎಂಟ್ರಿ ಕೊಡುವುದು ವಾಡಿಕೆ. ಈ ಬಾರಿ 7 ದಿನ ಲೇಟ್ ಆಗಿ ಮುಂಗಾರು ಮಾರುತಗಳು ಎಂಟ್ರಿ ಕೊಡುತ್ತಿವೆ. ಕೆಲವು ಸಂದರ್ಭದಲ್ಲಿ ಇದೇ ರೀತಿ ಮಳೆ ಮಾರುತ ಆಗಮನ ತಡವಾಗಿ ಬರದ ಪರಿಸ್ಥಿತಿ ಎದುರಾಗಿತ್ತು. ಈಗಲೂ ಮುಂಗಾರು ಮಳೆ ಮಾರುತಗಳು ಎಂಟ್ರಿ ಕೊಡುತ್ತಿರುವುದು ಲೇಟ್ ಆಗಿದೆ. ಹೀಗಾಗಿ ಮತ್ತೆ ರಾಜ್ಯಕ್ಕೆ ಬರ ಬಂತಾ? ಅನ್ನೋ ಪ್ರಶ್ನೆ ಮೂಡಿತ್ತು. ಆದರೆ ಮಳೆ ಲೇಟ್ ಆದ್ರೂ ಚೆನ್ನಾಗಿ ಬೀಳುತ್ತೆ ಅನ್ನೋ ಧೈರ್ಯ ಸಿಕ್ಕಿದೆ.
ಮಳೆ ಬಗ್ಗೆ ಸಿಕ್ಕಿದೆ ಮುನ್ಸೂಚನೆ!
ಮುಂಗಾರು ಮಳೆ ತಡವಾಗಿ ಎಂಟ್ರಿ ಕೊಟ್ಟರೂ 2023ರಲ್ಲಿ ಕರ್ನಾಟಕದಲ್ಲಿ ಉತ್ತಮವಾಗಿ ಮಳೆಯಾಗುತ್ತದೆ ಎಂದು ಹವಾಮಾನ ತಜ್ಞರು ಹೇಳುತ್ತಿದ್ದಾರೆ. ವಾರ್ಷಿಕ ಮಳೆ ಪ್ರಮಾಣದ ಮೇಲೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ಧೈರ್ಯ ಸಿಕ್ಕಿದೆ. ಇನ್ನೊಂದ್ಕಡೆ ಕರ್ನಾಟಕದ ದಕ್ಷಿಣ ಒಳನಾಡಿನ ಕೆಲ ಪ್ರದೇಶಗಳಲ್ಲಿ ಮತ್ತು ಉತ್ತರ ಒಳನಾಡಿನಲ್ಲೂ ಮಳೆ ಅಬ್ಬರಿಸುವ ಸಾಧ್ಯತೆ ಇದೆ. ಹಾಗೇ ಮುಂದಿನ 48 ಗಂಟೆಯಲ್ಲಿ ರಾಜ್ಯದ ಕರಾವಳಿ & ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಹಾಗೂ ಉತ್ತರ ಒಳನಾಡಿನಲ್ಲೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ.

ಕರಾವಳಿಯಲ್ಲಿ ಮೀನುಗಾರರಿಗೆ ಮುನ್ಸೂಚನೆ
ಇನ್ನು ರಾಜ್ಯ ಕರಾವಳಿ ಭಾಗದಲ್ಲಿ ಮಳೆ ಜೊತೆ ಭಾರಿ ಗಾಳಿ ಬೀಸುವ ಬಗ್ಗೆ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ಮೀನುಗಾರರಿಗೂ ಈ ಕುರಿತು ಮಾಹಿತಿ ನೀಡಲಾಗಿದ್ದು, ಮುಂದಿನ 24 ಗಂಟೆಯಲ್ಲಿ ಕರಾವಳಿಯಲ್ಲಿ ಭಾರಿ ಪ್ರಮಾಣದಲ್ಲಿ ಗಾಳಿ ಬೀಸಲಿದೆ. ಗಂಟೆಗೆ 40 ರಿಂದ 45 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಬಹುದು ಎನ್ನಲಾಗಿದೆ. ಹಾಗೇ ಗಾಳಿಯ ವೇಗ 55 ಕಿಲೋ ಮೀಟರ್ ತನಕ ಹೆಚ್ಚಬಹುದು. ಈ ಕಾರಣಕ್ಕೆ ರಾಜ್ಯದ ಕರವಾಳಿ ಮೀನುಗಾರರಿಗೆ ಮಾಹಿತಿ ನೀಡಲಾಗಿದ್ದು, ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚಿಸಿದೆ.
ರಾಜಧಾನಿ ಬೆಂಗಳೂರಲ್ಲಿ ರೈನ್ ಅಲರ್ಟ್!
ಮುಂಗಾರು ಮಳೆಯ ಸಂದರ್ಭದಲ್ಲಿ ರಾಜಧಾನಿ ಬೆಂಗಳೂರು ಸಾಕಷ್ಟು ಸಮಸ್ಯೆ ಎದುರಿಸಿ ಸಮಸ್ಯೆಯ ಸುಳಿಗೆ ಸಿಲುಕುತ್ತದೆ. ಆದರೆ ಈ ಬಾರಿ ಹೊಸ ಸರ್ಕಾರ, ಮಳೆಯ ಅವಾಂತರ ನಿರ್ವಹಿಸಲು ಮೊದಲೇ ಅಲರ್ಟ್ ಆಗಿದೆ. ಹೀಗಾಗಿ ಸಿದ್ದರಾಮಯ್ಯ ಸರ್ಕಾರ ಅಗತ್ಯವಾದ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಈಗಾಗಲೇ ಬೆಂಗಳೂರು ಅಭಿವೃದ್ಧಿ ಖಾತೆ ಹೊಂದಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ಅಗತ್ಯ ಸಭೆ ನಡೆಸಲು ಮುಂದಾಗಿದ್ದಾರೆ. ಬೆಂಗಳೂರು ನಗರದಲ್ಲಿ 200ಕ್ಕೂ ಹೆಚ್ಚು ಸೂಕ್ಷ್ಮ ಮಳೆ ಪ್ರದೇಶಗಳಿದ್ದು ಈ ಪಟ್ಟಿಯ ಆಧಾರದಲ್ಲಿ ಕ್ರಮ ಜರುಗಿಸುವ ಸಾಧ್ಯತೆ ಇದೆ.

ಒಟ್ನಲ್ಲಿ ಇಡೀ ರಾಜ್ಯಕ್ಕೆ ಈಗ ಮಳೆಯದ್ದೇ ಚಿಂತೆ. ಒಂದ್ಕಡೆ ಅನ್ನದಾತರು ಮಳೆ ಬರಲಿ, ಉತ್ತಮವಗಿ ಬೆಳೆ ಸಿಗಲಿ ಅಂತಾ ಕಾಯುತ್ತಿದ್ದಾರೆ. ಆದ್ರೆ ಇನ್ನೊಂದು ಕಡೆ ನಗರ ಪ್ರದೇಶದ ಜನ ಗುಡುಗು & ಮಳೆಯ ಸದ್ದು ಕೇಳಿ ಚಿಂತಿತರಾಗಿದ್ದಾರೆ. ಅದ್ರಲ್ಲೂ ಬೆಂಗಳೂರಿಗೆ ಮಳೆ ಅಂದ್ರೆ ಶಾಪವಾಗಿ ಪರಿಣಮಿಸಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಹೊಸ ಸರ್ಕಾರ ಕೂಡ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುತ್ತಿದೆ. ಇದೆಲ್ಲಾ ಯಾವ ರೀತಿ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications