ಅಶ್ಲೀಲ ಸಿಡಿ ಭೀತಿ: ನಿರ್ಬಂಧ ಆದೇಶ ಪಡೆದ ಕೆಎಸ್ ಈಶ್ವರಪ್ಪ ಪುತ್ರ
ಬೆಂಗಳೂರು, ಮೇ 01: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಸಮಯದಲ್ಲಿ ಹಾಸನ ಸಂಸದ, ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ಅಶ್ಲೀಲ ದೃಶ್ಯಗಳ ಪೆನ್ ಡ್ರೈವ್ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಇದೀಗ ಅಶ್ಲೀಲ ಸಿಡಿ ಭೀತಿ ಹಿನ್ನೆಲೆಯಲ್ಲಿ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಪುತ್ರ ಮಾಧ್ಯಮಗಳ ವಿರುದ್ಧ ನಿರ್ಬಂಧದ ಆದೇಶ ಪಡೆದಿದ್ದಾರೆ.
ತಮ್ಮ ವಿರುದ್ಧ ಯಾವುದೇ ಮಾನಹಾನಿ ಆಗುವಂತಹ ವರದಿ, ದೃಶ್ಯ, ಫೋಟೋ ಸೇರಿದಂತೆ ಯಾವುದೇ ರೀತಿಯ ಸುದ್ದಿಗಳನ್ನು ಪ್ರಕಟಿಸದಂತೆ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಪುತ್ರ ಕೆ. ಇ. ಕಾಂತೇಶ್ ಬೆಂಗಳೂರು ನಗರದ ನ್ಯಾಯಾಲಯದಿಂದ ಮಾಧ್ಯಮಗಳ ವಿರುದ್ಧ ನಿರ್ಬಂಧ ಆದೇಶ ಪಡೆದಿದ್ದಾರೆ.

ಹಾಗಾಗಿ ಅವರ ವಿರುದ್ಧ ಯಾವುದೇ ಮಾಧ್ಯಮಗಳು ಅವಹೇಳನಕಾರಿಯಾದ ದೃಶ್ಯ, ಸುದ್ದಿ, ಫೋಟೋಗಳನ್ನು ಪ್ರಸಾರ ಮಾಡುವಂತಿಲ್ಲ. ಕೆ. ಎಸ್. ಈಶ್ವರಪ್ಪ ಮೇ 7ರಂದು ನಡೆಯುವ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಪ್ರಕರಣದ ಸಂಬಂಧ ಎಲ್ಲಾ50 ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿರುವ ನ್ಯಾಯಾಲಯ ವಿಚಾರಣೆಯನ್ನು ಆ.3ಕ್ಕೆ ಮುಂದೂಡಿದೆ. ಕಾಂತೇಶ್ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಆಲಿಸಿದ ಸಿಸಿಎಚ್ 11ನೇ ನ್ಯಾಯಾಲಯ ಇಂಟರ್‌ನೆಟ್, ಫೇಸ್ ಬುಕ್ , ವಾಟ್ಸಪ್, ಯೂಟ್ಯೂಬ್ ಚಾನಲ್ ಸೇರಿದಂತೆ ಎಲ್ಲಾ ಮುದ್ರಣ, ದೃಶ್ಯ ಹಾಗೂ ಸಾಮಾಜಿಕ ಮಾಧ್ಯಮಗಳ ವಿರುದ್ಧ ನಿರ್ಬಂಧ ಆದೇಶವನ್ನು ನೀಡಿದೆ.
ಅರ್ಜಿದಾರರ ಪರ ವಾದ ಆಲಿಸಿದ ಬಳಿಕ ನ್ಯಾಯಾಲಯ, "ಮುಂದಿನ ಅದೇಶದವರೆಗೆ ಅರ್ಜಿದಾರರ ವಿರುದ್ಧ ಅವಹೇಳನಕಾರಿ ಅಥವಾ ಮಾನಹಾನಿಯಾಗುವಂತಹ ಯಾವುದೇ ರೀತಿಯ ಸುದ್ದಿ, ಫೋಟೋ, ದೃಶ್ಯಗಳನ್ನು ಪ್ರಸಾರ ಮಾಡುವಂತಿಲ್ಲ" ಎಂದು ಆದೇಶಿಸಿದೆ.
ಅರ್ಜಿದಾರರು ಸಲ್ಲಿಸಿರುವ ಮಾಹಿತಿಯನ್ನು ಗಮನಿಸಿದರೆ ಮೇಲ್ನೋಟಕ್ಕೆ ಮಾಧ್ಯಮಗಳು ಅವರ ವಿರುದ್ಧ ಮಾನಹಾನಿಕಾರ ವರದಿ, ವಿಡಿಯೋಗಳನ್ನು ಪ್ರಸಾರ ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಸುಪ್ರೀಂಕೋರ್ಟ್‌ನ ಹಲವು ತೀರ್ಪುಗಳ ಆಧಾರದಲ್ಲಿಈ ನಿರ್ಬಂಧ ಆದೇಶ ಹೊರಡಿಸಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.
ಉದ್ದೇಶಪೂರ್ವಕ ಪ್ರಯತ್ನ: ಅರ್ಜಿದಾರರರ ಪರ ವಕೀಲರು, ಪ್ರತಿವಾದಿ ಮಾಧ್ಯಮ ಸಂಸ್ಥೆಗಳು ಅರ್ಜಿದಾರರ ವಿರುದ್ಧ ವರದಿ, ದೃಶ್ಯ, ಫೋಟೋಗಳನ್ನು ಮುದ್ರಣ, ದೃಶ್ಯ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಲು ಪ್ರಯತ್ನಿಸಲಾಗುತ್ತಿದೆ. ಅವು ಮಾನಹಾನಿಕಾರಕವಾಗಿವೆ.
ಲೋಕಸಭಾ ಚುನಾವಣೆಯ ಸಮಯದಲ್ಲಿಉದ್ದೇಶ ಪೂರ್ವಕವಾಗಿಯೇ ಅವರ ಹೆಸರಿಗೆ ಮಸಿ ಬಳಿಯಲು ಪ್ರಯತ್ನ ನಡೆಸಲಾಗುತ್ತಿದೆ. ಹಾಗಾಗಿ ಯಾವುದೇ ರೀತಿಯ ಅಶ್ಲೀಲ ಆಡಿಯೋ, ವಿಡಿಯೋ, ಫೋಟೋಗಳನ್ನು ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಬೇಕು ಎಂದು ನ್ಯಾಯಾಲಯವನ್ನು ಕೋರಿದ್ದರು.
ಮತ್ತೊಂದು ಕಡೆ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಹಲವು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣದಲ್ಲಿ ವಿಶೇಷ ಪ್ರಾಸಿಕ್ಯೂಟರ್ ಆಗಿ ಹೆಚ್ಚುವರಿ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ. ಎನ್. ಜಗದೀಶ್ ಅವರನ್ನು ನೇಮಕ ಮಾಡಲಾಗಿದೆ.
ವಿಚಾರಣಾ ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಲಯಗಳಲ್ಲಿನ ವಿಚಾರಣೆಗೆ ಜಗದೀಶ್ ರಾಜ್ಯ ಸರ್ಕಾರದ ಪರ ಹಾಜರಾಗಲಿದ್ದಾರೆ. ಈ ಕುರಿತ ಅಧಿಸೂಚನೆಯನ್ನು ರಾಜ್ಯ ಒಳಾಡಳಿತ ಇಲಾಖೆಯ ಅಧೀನ ಕಾರ್ಯದರ್ಶಿ ಮಂಗಳವಾರ ಹೊರಡಿಸಿದ್ದಾರೆ.












Click it and Unblock the Notifications