ಕೊಪ್ಪಳದಲ್ಲಿ ಸಿಕ್ಕಿಬಿದ್ದ ನಕಲಿ ಕಾಮಿ ಸ್ವಾಮಿ
ಕೊಪ್ಪಳ, ಜು. 29 : ಪವಾಡಗಳ ಹೆಸರಿನಲ್ಲಿ ಮಹಿಳೆಯರನ್ನು ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದ ಕಳ್ಳ ಸ್ವಾಮೀಜಿಯೊಬ್ಬ ಕೊಪ್ಪಳದಲ್ಲಿ ಸಿಕ್ಕಿಬಿದ್ದಿದ್ದಾನೆ. ಮೊದಲು ಹೋಟಲ್ ನಡೆಸುತ್ತಿದ್ದ ಈತ ನಂತರ ಸ್ವಾಮೀಜಿಯಾಗಿ ಬದಲಾಗಿದ್ದ. ನನ್ನ ಮೇಲೆ ದೇವರು ಬರುತ್ತದೆ ಮತ್ತು ಎಲ್ಲಾ ರೋಗಕ್ಕೂ ಔಷಧಿ ಕೊಡುತ್ತದೆ ಎಂದು ಜನರನ್ನು ವಂಚಿಸುತ್ತಿದ್ದ ಕಪಟ ಸ್ವಾಮೀಜಿಯ ನಿಜಬಣ್ಣ ಈಗ ಬಯಲಾಗಿದೆ.
ಮಹಿಳೆಯರನ್ನು ವಂಚಿಸಿ ಸಿಕ್ಕಿಬಿದ್ದಿರುವ ಸ್ವಾಮೀಜಿ ಹೆಸರು ಯಂಕಣ್ಣ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಗ್ರಾಮದ ನಿವಾಸಿಯಾದ ಯಂಕಣ್ಣ ಓದಿರುವುದು 6 ನೇ ತರಗತಿ. ಆದರೆ, ತನ್ನ ಮೇಲೆ ದೇವರು ಬಂದಿದೆ ಎಂದು ಹೇಳುವ ಯಂಕಣ್ಣ ಏಡ್ಸ್, ಕ್ಯಾನ್ಸರ್, ಪಿಡ್ಸ್, ಹೊಟ್ಟೆನೋವು. ದೇಹದಲ್ಲಿರುವ ಕಲ್ಲುಗಳನ್ನು ತೆಗೆಯುತ್ತಾನೆ.

ತನ್ನ ಮೇಲೆ ದೇವರು ಬಂದಿದೆ ಎಂದು ಹೇಳಿಕೊಳ್ಳುವ ಯಂಕಣ್ಣ, ಮಹಿಳೆಯರನ್ನು ಮಾತ್ರ ತನ್ನ ತೊಡೆಯ ಮೇಲೆ ಕೂರಿಸಿಕೊಳ್ಳುತ್ತಾನೆ. ಮಹಿಳೆಯರ ಬಾಯಿಯಲ್ಲಿ ತನ್ನ ಬಾಯಿ ಇಡುತ್ತಾನೆ. ಕಲ್ಲು ತೆಗೆಯುತ್ತೇನೆ ಎಂದು ಹೇಳುತ್ತಾ ಮಹಿಳೆಯರ ಗುಪ್ತಾಂಗಕ್ಕೆ ಕೈ ಹಾಕುತ್ತಾನೆ. ನೂರಾರು ಜನರು ಈತ ಪವಾಡ ಮಾಡುತ್ತಾನೆ ಎಂದು ಸ್ವಾಮೀಜಿ ಬಳಿ ಬರುತ್ತಿದ್ದರು.
ಹೋಟೆಲ್ ಇಟ್ಟುಕೊಂಡಿದ್ದ : ಮೊದಲು ಈ ಸ್ವಾಮಿ ಜೀವನ ನಡೆಸಲು ಹೋಟೆಲ್ ಇಟ್ಟುಕೊಂಡಿದ್ದ. ತನ್ನ ಹೋಟೆಲ್ ಗೆ ಬರುವ ಗ್ರಾಹಕರಿಗೆ ತನ್ನ ಮೇಲೆ ಶ್ರೀ ಶಂಕ್ರಮ್ಮ ದೇವಿ ದೇವರು ಬರುತ್ತಾಳೆ ಎಂದು ನಂಬಿಸುತ್ತಿದ್ದ. ಹೋಟೆಲ್ ಪಕ್ಕದಲ್ಲಿ ಇದ್ದ ಸಣ್ಣ ಮನೆಯಲ್ಲಿ ದೇವಿಯ ಫೋಟೊ ಇಟ್ಟು ಪೂಜೆ ಮಾಡಲು ಆರಂಭಿಸಿದ. [ಕನ್ನಡ ಹೋರಾಟಗಾರರನ್ನು ಕೆಣಕಿದ ನಿತ್ಯಾನಂದ]
ಕಳೆದ ಒಂದು ವರ್ಷದ ಹಿಂದೆ ತನ್ನ ಹೋಟೆಲ್ ತೆರವುಗೊಳಿಸಿ ದೇವಸ್ಥಾನ ಕಟ್ಟಿಸಿದ್ದಾನೆ. ನಾಲ್ಕು ತಿಂಗಳ ಹಿಂದೆ ಈ ದೇವಸ್ಥಾನದಲ್ಲಿ ಶ್ರೀ ಬನಶಂಕರಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾನೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರದಂದು ಯಂಕಣ್ಣನ ಮೈಮೇಲೆ ಶಂಕ್ರಮ್ಮ ದೇವಿ ಬರುತ್ತಾಳೆ, ಇದನ್ನು ನೋಡಲು ನೂರಾರು ಜನರು ಆಗಮಿಸುತ್ತಾರೆ.

ಮಂಗಳವಾರ ಮತ್ತು ಶುಕ್ರವಾರ ಮಧ್ಯಾಹ್ನ 12 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಯಂಕಣ್ಣನ ಮೈ ಮೇಲೆ ದೇವಿ ಇರುತ್ತಾಳೆ. ದೇವರು ಬಂದ ಸಮಯದಲ್ಲಿ ಯಾವ ಸಮಸ್ಯೆಗಳೆ ಇರಲಿ, ಕಾಯಿಲೆ ಇರಲಿ ದೇವರು ಗುಣ ಪಡಿಸುತ್ತದೆ ಎಂದು ಭಕ್ತರಿಗೆ ವಂಚಿಸುತ್ತಾನೆ. ಇಲ್ಲಿಗೆ ಬರುವ ಭಕ್ತರ ಬಳಿ 50, 100, 500 ರಂತೆ ಹಣ ಸಂಗ್ರಹಣೆ ಮಾಡುತ್ತಾರೆ ಯಂಕಣ್ಣನ ಶಿಷ್ಯರು.
ಸ್ವಾಮೀಜಿಯ ಔಷಧಿಗಳು : ಯಂಕಣ್ಣ ಸ್ವಾಮಿಜೀ ಸರ್ವರೋಗಕ್ಕೂ ಚಿಕಿತ್ಸೆ ನೀಡುತ್ತಾನೆ. ವೈದ್ಯರ ಬಳಿ ಹೋಗಿದ್ದವರು ಈ ಶಂಕ್ರಮ್ಮ ದೇವಿಯು ಬಳಿ ಬಂದು ವೈದ್ಯರ ನೀಡಿದ ದಾಖಲೆಗಳನ್ನು ನೀಡಿ ಚಿಕಿತ್ಸೆ ಪಡೆಯುತ್ತಾರೆ. ದೇಹದಲ್ಲಿರುವ ಗಡ್ಡೆಗಳನ್ನು ಈ ದೇವರು ಕಚ್ಚಿ ತಿನ್ನುತ್ತಾನೆ ಎಂದು ಜನರು ನಂಬುತ್ತಾರೆ.
ಗ್ರಾಮಸ್ಥರ ಆಕ್ರೋಶ : ಸ್ವಾಮೀಜಿ ಮಹಿಳೆಯರನ್ನು ತನ್ನ ಮೈಮೇಲೆ ಕುರಿಸಿಕೊಳ್ಳುತ್ತಾನೆ. ಮೈಯನ್ನು ಉಜ್ಜುತ್ತಾನೆ. ತನ್ನ ಕಾಮ ತೃಷೆ ತೀರಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾನೆ. ಜನರನ್ನು ಮರಳು ಮಾಡಿ ವಂಚಿಸುತ್ತಾನೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
ಯಂಕಣ್ಣನ ಮೈಮೇಲೆ ದೇವರು ಬರುತ್ತಾನೆ ಇಲ್ಲವೇ ಗೊತ್ತಿಲ್ಲ. ಆದರೆ, ಜನರಿಗೆ ಮಾತ್ರ ಈತ ಬಾರಿ ಮರಳು ಮಾಡಿದ್ದಾನೆ. ಜನ ಮರಳು ಜಾತ್ರೆ ಮರಳು ಎನ್ನುವ ಹಾಗೇ ಇದನ್ನು ಬಂಡವಾಳ ಮಾಡಿಕೊಂಡು ಮಾನಸಿಗೆ ತಿಳಿದ ಔಷಧಿಗಳನ್ನು ಜನರಿಗೆ ನೀಡುತ್ತಾನೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಸ್ವಾಮೀಜಿ ವಿರುದ್ಧ ದೂರು ದಾಖಲು : ಯಂಕಣ್ಣ ಸ್ವಾಮೀಜಿಯ ವಂಚನೆ ಬಗ್ಗೆ ಕನ್ನಡ ಪರ ಸಂಘಟನೆಗಳು ತವರಗೇರ ಠಾಣೆಯಲ್ಲಿ ದೂರು ದಾಖಲಿಸಿವೆ.
ಸ್ವಾಮೀಜಿ ವಿರುದ್ಧ ಕರವೇ ಶಿವರಾಮೇಗೌಡ ಬಣ ಪ್ರತಿಭಟನೆ ನಡೆಸಿವೆ. [ಚಿತ್ರ ವರದಿ : ಪಬ್ಲಿಕ್ ಟಿವಿ]












Click it and Unblock the Notifications