ಆರೋಗ್ಯ ಸರಿಯಿಲ್ಲದ ಶಿಕ್ಷಕರಿಗೀಗ ಮನೆಯೇ ಆಸ್ಪತ್ರೆ!
ಯಾದಗಿರಿ, ಸೆ. 19 : ಆರೋಗ್ಯ ಸರಿಯಿಲ್ಲ ಎಂದು ಸುಳ್ಳು ಪ್ರಮಾಣ ಪತ್ರ ನೀಡಿ ವರ್ಗಾವಣೆ ಬಯಸಿದ್ದ 10 ಶಿಕ್ಷಕರು ಕೆಲಸ ಕಳೆದುಕೊಂಡಿದ್ದಾರೆ.
ಸುಳ್ಳು ಪ್ರಮಾಣ ಪತ್ರ ನೀಡಿ ಬೆಳಗಾವಿ ಜಿಲ್ಲೆಗೆ ವರ್ಗಾವಣೆ ಬಯಸಿದ್ದ ಯಾದಗಿರಿ ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 10 ಶಿಕ್ಷಕರನ್ನು ಸೇವೆಯಿಂದ ಅಮಾನತು ಮಾಡಿ ಶುಕ್ರವಾರ ಆದೇಶ ಹೊರಡಿಸಿಲಾಗಿದೆ. ಆದರೆ ಇವರಿಗೆ ಸುಳ್ಳು ಪ್ರಮಾಣ ಪತ್ರ ನೀಡಿರುವುದು ಯಾದಗಿರಿ ಮತ್ತು ಗುಲ್ಬರ್ಗ ಜಿಲ್ಲಾ ಆರೋಗ್ಯ ಕೇಂದ್ರ ಎಂಬುದು ಮತ್ತೊಂದು ವಿಶೇಷ.

ಸಸ್ಪೆಂಡ್‌ಗೊಂಡ 10 ಶಿಕ್ಷಕರಲ್ಲಿ 6 ಜನ ಯಾದಗಿರಿ ತಾಲೂಕಿನಲ್ಲಿ ಮತ್ತು ತಲಾ ಇಬ್ಬರು ಶಹಪುರ ಮತ್ತು ಸುರಪುರ ತಾಲೂಕಿನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಮೆಡಿಕಲ್ ಸೀಟು ನಂಬಿದವರಿಗೆ 1.34 ಕೋಟಿ ಪಂಗನಾಮ!)
ಘಟನೆ ಬೆಳಕಿಗೆ ಬಂದಿದದ್ದು ಹೇಗೆ?
ವರ್ಗಾವಣೆ ಸಂಬಂಧ ಧಾರವಾಡಲ್ಲಿ ನಡೆಯುತ್ತಿದ್ದ ಕೌನ್ಸೆಲಿಂಗ್ ನಲ್ಲಿ ಈ ಶಿಕ್ಷಕರು ಪಾಲ್ಗೊಂಡಿದ್ದರು. ಬೆಳಗಾವಿಯ ವಿವಿಧ ಶಾಲೆಗಳಲ್ಲಿ ಹುದ್ದೆ ಖಾಲಿ ಇರುವುದು ಈ ವೇಳೆ ಇವರ ಗಮನಕ್ಕೆ ಬಂದಿತ್ತು. ಅದಕ್ಕೆ ಪೂರಕವಾಗಿ ಆರೋಗ್ಯ ಸರಿಯಿಲ್ಲ ವರ್ಗಾವಣೆ ಅನಿವಾರ್ಯ ಎಂಬ ಪ್ರಮಾಣ ಪತ್ರ ಸಲ್ಲಿಸಿದ್ದರು. ಆದರೆ ಇವರನ್ನು ಬೆಳಗಾವಿ ವೈದ್ಯಕೀಯ ಸಂಸ್ಥೆಯಲ್ಲಿ(ಬಿಐಎಂಎಸ್) ಇನ್ನೊಮ್ಮೆ ತಪಾಸಣೆಗೆ ಒಳಪಡಿಸಿದಾಗ ಯಾವ ಲೋಪವೂ ಕಂಡುಬಂದಿಲ್ಲ. ನಂತರ ಸುಳ್ಳು ಪ್ರಮಾಣ ಪತ್ರ ನೀಡಿದ್ದು ಗೊತ್ತಾಗಿದೆ.
ಕೂಡಲೇ ಧಾರವಾಡದ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಯಾದಗಿರಿ ಶಿಕ್ಷಣ ಇಲಾಖೆ ವಿಭಾಗಕ್ಕೆ ಸುದ್ದಿ ತಿಳಿಸಿದ್ದಾರೆ. ನಕಲಿ ಪ್ರಮಾಣ ಪತ್ರ ನೀಡಿ ಬೆಳಗಾವಿಗೆ ವರ್ಗಾವಣೆ ಬಯಸಿದ್ದರು ಎಂದು ತಿಳಿಸಿ ಕಠಿಣ ಕ್ರಮ ತೆಗೆದುಕೊಳ್ಳಲು ತಿಳಿಸಿದ್ದಾರೆ.
ವಿಷಯ ಮನಗಂಡ ಡಿಡಿಪಿಐ ಕೆಂಚೇಗೌಡ ಕೂಡಲೇ ಜಾರಿಗೆ ಬರುವಂತೆ ಹತ್ತು ಶಿಕ್ಷಕರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.












Click it and Unblock the Notifications