ನಕಲಿ ಪತ್ರ; ಪೆನ್ ಡ್ರೈವ್ ಶೂರರಿಗೆ ಕಾಂಗ್ರೆಸ್ ಟ್ವೀಟ್ ಬಾಣ!
ಬೆಂಗಳೂರು, ಆಗಸ್ಟ್ 08; ಕರ್ನಾಟಕದ ರಾಜಕೀಯದಲ್ಲಿ ಸದ್ಯ ಭಾರೀ ಚರ್ಚೆಯಲ್ಲಿರುವ ಹೆಸರು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ. ಸಚಿವರ ವಿಚಾರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಆರೋಪ, ಪ್ರತ್ಯಾರೋಪ ನಡೆಯುತ್ತಿದೆ.
ಲಂಚಕ್ಕಾಗಿ ಒತ್ತಡ ಹಾಕಿರುವ ಸಚಿವ ಚೆಲುವರಾಯಸ್ವಾಮಿ ವಿರುದ್ಧ ಸಹಾಯಕ ಕೃಷಿ ನಿರ್ದೇಶಕರು ಮತ್ತು ಸಿಬ್ಬಂದಿಗಳು ತಿರುಗಿಬಿದ್ದಿದ್ದಾರೆ. ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎಂಬುದು ಸದ್ಯ ಚರ್ಚೆಯ ವಿಷಯವಾಗಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, "ಮಂಡ್ಯ ಜಿಲ್ಲೆಯ ಅಧಿಕಾರಿಗಳು ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎಂಬರ್ಥದಲ್ಲಿ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪತ್ರ ನಕಲಿಯಾದುದು ಎಂದು ಬಯಲಾಗಿದೆ" ಎಂದು ಹೇಳಿದ್ದಾರೆ.

"ಅಂತಹ ಅಧಿಕಾರಿಗಳು ಯಾರು ಜಿಲ್ಲೆಯಲ್ಲಿ ಇಲ್ಲ ಎಂದು ಮಂಡ್ಯದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ಹೀಗಿದ್ದರೂ ಈ ಸಂಬಂಧ ಪರಿಶೀಲನೆ ನಡೆಸಿ, ಅಗತ್ಯ ಕಂಡುಬಂದಲ್ಲಿ ತನಿಖೆ ನಡೆಸುತ್ತೇವೆ. BJP Karnatakaದ ನಾಯಕರೇ ಇಂತಹ ನಕಲಿ ಪತ್ರವನ್ನಿಟ್ಟುಕೊಂಡು ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ನೀವೇ ಇದರ ಸೃಷ್ಟಿಕರ್ತರೋ? ಅಥವಾ ನಿಮ್ಮ "ಬ್ರದರ್ರೋ"?" ಎಂದು ಪ್ರಶ್ನಿಸಿದ್ದಾರೆ.
ಪೆನ್ ಡ್ರೈವ್ ಶೂರರು; ಕರ್ನಾಟಕ ಕಾಂಗ್ರೆಸ್ ಮಂಗಳವಾರ ಟ್ವೀಟ್ ಮಾಡಿದ್ದು, 'ನಕಲಿ ಪೆನ್ ಡ್ರೈವ್ ಆಯ್ತು, ಶಾಸಕ ಬಿ. ಆರ್. ಪಾಟೀಲ್ ಹೆಸರಿನ ನಕಲಿ ಪತ್ರ ಆಯ್ತು, ಈಗ ಅಧಿಕಾರಿಗಳ ಹೆಸರಲ್ಲಿ ನಕಲಿ ದೂರು!. ಸರ್ಕಾರವನ್ನು ಎದುರಿಸಲು ಅಸಲಿ ವಿಷಯಗಳಿಲ್ಲದೆ ವಿಪಕ್ಷಗಳು ನಕಲಿ ವಿಷಯ ಸೃಷ್ಟಿಸಿ ಹೆದರಿಸಲು ಮುಂದಾಗಿವೆ' ಎಂದು ದೂರಿದೆ.
'ಪತ್ರದಲ್ಲಿ ಹೆಸರಿಸಿರುವ ಅಧಿಕಾರಿಗಳು ಯಾರೂ ಮಂಡ್ಯದಲ್ಲಿಲ್ಲ, ಈ ಪತ್ರದ ಕುರಿತು ಮಾಹಿತಿಯೂ ಮಂಡ್ಯದ ಅಧಿಕಾರಿಗಳಿಗಿಲ್ಲ ಎಂದು ಖಚಿತಪಡಿಸಿದ್ದಾರೆ, ಈ ನಕಲಿ ಪತ್ರಗಳ ಕುರಿತು ಸರ್ಕಾರ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಿದೆ' ಎಂದು ಹೇಳಿದೆ.
'ಇದರ ಹಿಂದಿರುವುದು @BJP4Karnataka ಫೇಕ್ ಫ್ಯಾಕ್ಟರಿಯೋ ಅಥವಾ ಪೆನ್ ಡ್ರೈವ್ ಶೂರರೋ ಎಂಬುದನ್ನು ಬಯಲಿಗಿಡುತ್ತೇವೆ' ಎಂದು ತಿಳಿಸಿದೆ.
ಮತ್ತೊಂದು ಟ್ವೀಟ್‌ನಲ್ಲಿ, 'ರಾಜ್ಯಪಾಲರ ಕಛೇರಿಯನ್ನೇ ಯಮಾರಿಸುವಷ್ಟು ಬಿಜೆಪಿಯ ನಕಲಿ ಪತ್ರಕೋರರು ನಿಷ್ಣಾತರಾಗಿದ್ದಾರೆ! ಈ ಹಿಂದೆ ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರ ಬರೆದ ಅಸಲಿ ಪತ್ರದ ಬಗ್ಗೆ ಚಕಾರ ಎತ್ತದ @BJP4Karnataka ಆತನ ಸಾವಿಗೆ ಕಾರಣವಾಗಿತ್ತು. ನಕಲಿ ಪತ್ರದ ಬಗ್ಗೆ ಪ್ರತಾಪ ತೋರಿಸುವ ಪೆನ್ ಡ್ರೈವ್ ಶೂರರು ಆಗ ಅಸಲಿ ಪತ್ರದ ಬಗ್ಗೆ ತುಟಿ ಬಿಚ್ಚಲಿಲ್ಲ ಏಕೆ?' ಎಂದು ಕಾಂಗ್ರೆಸ್ ಪಕ್ಷ ಪ್ರಶ್ನೆ ಮಾಡಿದೆ.
ಇನ್ನೊಂದು ಟ್ವೀಟ್‌ನಲ್ಲಿ, 'ಬಿಜೆಪಿ ಅಧಿಕಾರಾವಧಿಯಲ್ಲಿ ಕೃಷಿ ಸಚಿವರಾಗಿದ್ದ @bcpatilkourava ಅವರ ವಿರುದ್ಧ ಹಾಫ್ತಾ ವಸೂಲಿಯ ಬಗ್ಗೆ ಅಧಿಕಾರಿಗಳು, ನೌಕರರೇ ಅಸಲಿ ಪತ್ರ ಬರೆದಿದ್ದರು. ನಕಲಿ ಪತ್ರ ಹಿಡಿದು ಜಗ್ಗಾಡುತ್ತಿರುವ @BJP4Karnataka ತಮ್ಮ ಸಚಿವರ ವಿರುದ್ಧದ ಆರೋಪಗಳಿಗೆ ಕೈಗೊಂಡಿದ್ದ ಕ್ರಮಗಳೇನು? ಆ ಪತ್ರ ಕಸದ ಬುಟ್ಟಿಗೆ ಸೇರಿದ್ದೇಕೆ?' ಎಂದು ಬಿಜೆಪಿಯನ್ನು ಕಾಂಗ್ರೆಸ್ ಕೇಳಿದೆ.
ಕೃಷಿ ಸಚಿವರನ್ನು ಸಮರ್ಥಿಸಿಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು. 'ಮಂತ್ರಿಗಳ ಮಾನಗೇಡಿ ಕೃತ್ಯಗಳನ್ನೂ ಸಮರ್ಥನೆ ಮಾಡಿಕೊಳ್ಳುವ ಲಜ್ಜೆಗೇಡಿ ಮುಖ್ಯಮಂತ್ರಿ ಈ ರಾಜ್ಯಕ್ಕೆ ವಕ್ಕರಿಸಿದ್ದಾರೆ!! ಸಚಿವರ ಸುಲಿಗೆಯನ್ನೇ ಸಿಗ್ಗಿಲ್ಲದೆ ಸಮರ್ಥನೆ ಮಾಡಿಕೊಳ್ಳುವ 'ಸಿದ್ದಕಲೆ' ಅಸಹ್ಯ ಮತ್ತು ವಾಕರಿಕೆ ತರಿಸುತ್ತಿದೆ' ಎಂದು ಹೇಳಿದ್ದರು.
'ನಿಮ್ಮ ಸಚಿವರ ವಿರುದ್ಧ ನಿಮ್ಮ @INCKarnatakaಶಾಸಕರೇ ಬರೆದ ಪತ್ರವನ್ನೇ ನಕಲಿ ಎಂದು ಬಿಂಬಿಸಿದ 'ನಕಲಿರಾಮ'ನ ಉಪ್ಪುಹುಳಿ ಖಾರದ ಬಗ್ಗೆ ನನಗೆ ಗೊತ್ತಿಲ್ಲದ್ದೇನಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಉಗಿದು ಉಪ್ಪಾಕಿದ ಮೇಲೆ ಆ ನಕಲಿ ಪತ್ರ 'ಅಸಲಿ'ಯಾದ ಕಥೆಯ ಹಕೀಕತ್ತು ಏನಿರಬಹುದು ಸಿಎಂ ಸಾಹೇಬರೇ?' ಎಂದು ಸಿದ್ದರಾಮಯ್ಯರನ್ನು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications