ಡಿಸೆಂಬರ್ 31ರವರೆಗೆ ಹುಬ್ಬಳ್ಳಿ ರಾಮೇಶ್ವರಂ ಎಕ್ಸ್‌ಪ್ರೆಸ್ ರೈಲು ಸೇವೆ ವಿಸ್ತರಣೆ, ವೇಳಾಪಟ್ಟಿ ವಿವರ
ಬೆಂಗಳೂರು, ಸೆಪ್ಟೆಂಬರ್ 29: ನೈಋತ್ಯ ರೈಲ್ವೆ ವಿಭಾಗವು ರೈಲು ಸಂಖ್ಯೆ 07355/07356 ಹುಬ್ಬಳ್ಳಿ ರಾಮೇಶ್ವರಂ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲಿನ ಸೇವೆಗಳನ್ನು ಡಿಸೆಂಬರ್ 31, 2023 ರವರೆಗೆ ವಿಸ್ತರಿಸಲು ನಿರ್ಧರಿಸಿದೆ.
ಹುಬ್ಬಳ್ಳಿ ರಾಮೇಶ್ವರಂ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲಿನ ಸೇವೆಯನ್ನು ಸೆಪ್ಟೆಂಬರ್ 30 ರವರೆಗೆ ಓಡಿಸಲು ಆರಂಭದಲ್ಲಿ ಸೂಚನೆ ನೀಡಲಾಗಿತ್ತು. ಈ ರೈಲಿಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದ್ದರಿಂದ ಡಿಸೆಂಬರ್ 31 ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿತ್ತು. ರೈಲಿನ ವೇಳಾಪಟ್ಟಿ ಮತ್ತು ಇತರ ವಿವರಗಳು ಈ ಕೆಳಗಿನಂತಿವೆ.

ಎಸ್‌ಎಸ್‌ಎಸ್ ಹುಬ್ಬಳ್ಳಿ - ರಾಮೇಶ್ವರಂ (ರಾಮನಾಥಪುರದವರೆಗೆ) ರೈಲು ಸಂಖ್ಯೆ 07355 ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 7, 2023 ರಿಂದ ಡಿಸೆಂಬರ್ 30, 2023 ರವರೆಗೆ ಅನ್ವಯವಾಗುವಂತೆ ಪ್ರತಿ ಶನಿವಾರ ಬೆಳಗ್ಗೆ 6:30 ಕ್ಕೆ ಹುಬ್ಬಳ್ಳಿಯಿಂದ ಹೊರಡಲಿದೆ. ಈ ರೈಲಿನ ಮಾರ್ಗದಲ್ಲಿ ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಅರಸೀಕೆರೆ, ತುಮಕೂರು, ಯಶವಂತಪುರ, ಬಾಣಸವಾಡಿ, ಹೊಸೂರು, ಧರ್ಮಪುರಿಯಲ್ಲಿ ರೈಲು ನಿಲುಗಡೆಯಾಗುತ್ತದೆ.
ಸೇಲಂ, ನಾಮಕ್ಕಲ್, ಕರೂರ್, ತಿರುಚಿರಾಪಳ್ಳಿ ಜಂಕ್ಷನ್, ಪುದುಕ್ಕೊಟ್ಟೈ, ಕಾರೈಕ್ಕುಡಿ ಜಂಕ್ಷನ್, ಮನಮದುರೈ ಜಂಕ್ಷನ್, ಮತ್ತು ರಾಮನಾಥಪುರಂಗಳಲ್ಲೂ ನಿಲುಗಡೆಯಾಗುತ್ತದೆ. ರೈಲು ಸಂಖ್ಯೆ 07356 ರಾಮೇಶ್ವರಂ (ರಾಮನಾಥಪುರದಿಂದ) - ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 8, 2023 ರಿಂದ ಪ್ರತಿ ಭಾನುವಾರದಂದು ರಾತ್ರಿ 9:55ಕ್ಕೆ ರಾಮನಾಥಪುರದಿಂದ ಹೊರಡುತ್ತದೆ.
ರೈಲು ಸಾಪ್ತಾಹಿಕ ಟ್ರಿಪ್‌ಗಳನ್ನು ಅಕ್ಟೋಬರ್ 8, 2023 ರಿಂದ ಡಿಸೆಂಬರ್ 31, 2023 ರವರೆಗೆ ಜಾರಿಗೆ ತರುತ್ತದೆ. ರೈಲು ಮರುದಿನ ಅಂದರೆ ಸೋಮವಾರ ಸಂಜೆ 7:25ಕ್ಕೆ ಎಸ್‌ಎಸ್‌ಎಸ್ ಹುಬ್ಬಳ್ಳಿ ಜಂಕ್ಷನ್ ರೈಲು ನಿಲ್ದಾಣವನ್ನು ತಲುಪುತ್ತದೆ. ರೈಲು 1 ಎಸಿ 2-ಟೈರ್ ಕೋಚ್, 3 ಎಸಿ 3-ಟೈರ್ ಕೋಚ್‌ಗಳು, 9 ಸ್ಲೀಪರ್ ಕೋಚ್‌ಗಳು, 6 ಸೆಕೆಂಡ್ ಕ್ಲಾಸ್ ಕೋಚ್‌ಗಳು ಮತ್ತು 1 ಲಗೇಜ್-ಕಮ್-ಬ್ರೇಕ್‌ವಾನ್ ವಿಕಲಾಂಗ ಸ್ನೇಹಿ ಕಂಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿರುವ 20 ಕೋಚ್‌ಗಳ ಸಂಯೋಜನೆಯನ್ನು ಹೊಂದಿರುತ್ತದೆ.
ಪ್ರಯಾಣಿಕರು ರೈಲಿನ ಸೇವೆಗಳನ್ನು ಬಳಸಿಕೊಳ್ಳುವಂತೆ ವಿನಂತಿಸಲಾಗಿದೆ ಎಂದು ನೈಋತ್ಯ ರೈಲ್ವೆಯ (SWR) ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ. ಹೊಸ ಕೆಲಸದ ವೇಳಾಪಟ್ಟಿಯಲ್ಲಿ ಸಮಯಗಳು ಬದಲಾಗಬಹುದು ಎಂದು ತಿಳಿಸಲಾಗಿರುತ್ತದೆ.












Click it and Unblock the Notifications