ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ: ಆಡಿಯೋದಲ್ಲಿ ಮಹಿಳೆ ಸ್ಫೋಟಕ ಮಾಹಿತಿ
ಕಾಂಗ್ರೆಸ್ ಸಚಿವ ಕೆ.ಎನ್.ರಾಜಣ್ಣ ಅವರು ಹನಿಟ್ರ್ಯಾಪ್ ಬಾಂಬ್ ಸಿಡಿಸಿದ್ದರೆ, ಅವರ ಪುತ್ರ ಎಂಎಲ್‌ಸಿ ರಾಜೇಂದ್ರ ಅವರು ಕೊಲೆ ಯತ್ನದ ಬಾಂಬ್ ಸಿಡಿಸಿದ್ದಾರೆ. ಈ ಪ್ರಕರಣ ಈಗಾಗಲೇ ದೂರು ದಾಖಲಾಗಿ ಎಫ್‌ಐಆರ್ ಕೂಡ ಆಗಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಶಾಕಿಂಗ್ ವಿಚಾರಗಳು ತಿಳಿದುಬಂದಿದೆ. ಇದೀಗ ರಾಜೇಂದ್ರ ಅವರ ಹತ್ಯೆಗೆ ಸಂಬಂಧಿಸಿದ್ದು ಎನ್ನಲಾದ ಆಡಿಯೋ ಸಿಕ್ಕಿದೆ. ಇದರಲ್ಲಿ ರಾಜೇಂದ್ರ ಅವರ ಕೊಲೆ ನಡೆಸುವ ಸಂಬಂಧ ಸ್ಫೋಟಕ ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಇದರಲ್ಲಿ ಮಹಿಳೆಯೊಬ್ಬರು ಮಾತನಾಡಿದ್ದಾರೆ.
ರಾಜೇಂದ್ರ ಅವರ ಸುಪಾರಿಗೆ ಸಂಚು ರೂಪಿಸಿದ್ದು ಎನ್ನಲಾದ ಆಡಿಯೋದಲ್ಲಿ ಸ್ಫೋಟಕ ಸಂಗತಿಗಳ ಬಗ್ಗೆ ಚರ್ಚೆಯಾಗಿದೆ. ಸುಪಾರಿಯ ಇಂಚಿಂಚೂ ಮಾಹಿತಿ ಇದರಲ್ಲಿದ್ದು, ರಾಜೇಂದ್ರ ಅವರಿಗೂ ಈ ಆಡಿಯೋ ಸಿಕ್ಕಿದ ನಂತರವೇ ತಮ್ಮ ಮೇಲೆ ಕೊಲೆಗೆ ಸಂಚು ನಡೆದಿರುವುದು ಗೊತ್ತಾಗಿದೆ. ಇದೇ ಆಡಿಯೋ ಅನ್ನು ರಾಜೇಂದ್ರ ಅವರು ಪೊಲೀಸರಿಗೆ ಸಲ್ಲಿಸಿ ದೂರು ನೀಡಿದ್ದಾರಂತೆ. ಈ ಆಡಿಯೋದಲ್ಲಿ ಪುಷ್ಪಾ ಎಂಬ ಮಹಿಳೆ ಹಾಗೂ ರಾಕಿ ಎಂಬುವವರ ನಡುವೆ ಸಂಭಾಷಣೆ ನಡೆದಿದೆ. ಈಗಾಗಲೇ ಸುಪಾರಿ ಸಂಬಂಧ ಎ1 ಆರೋಪಿಯಾಗಿರುವ ಸೋಮನ ಆಪ್ತೆಯೇ ಈ ಮಹಿಳೆ ಎನ್ನಲಾಗಿದೆ. ಸುಪಾರಿ ಬಗ್ಗೆ ಮಹಿಳೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ರಾಜೇಂದ್ರ ಅವರನ್ನು ಕೊಲೆ ಮಾಡಲು ಸುಪಾರಿ ಪಡೆದಿದ್ದಾಗಿ ಆರೋಪಿ ಸೋಮ ಈ ಮಹಿಳೆಗೆ ಹೇಳಿಕೊಂಡಿದ್ದ. ಬಳಿಕ ಈಕೆ ಸುಪಾರಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆದಿದ್ದರು. ಬಳಿಕ ಈ ಎಲ್ಲ ವಿಚಾರ ತಿಳಿದುಕೊಂಡು ಅದನ್ನ ರಾಜೇಂದ್ರ ಅವರ ಗಮನಕ್ಕೆ ತರಲು ರಾಕಿ ಎಂಬ ಯುವಕನ ಜೊತೆ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಮಾಧ್ಯಮಗಳಿಗೆ ಲಭ್ಯವಾಗಿದೆ.
ಇನ್ನು ಪುಷ್ಪಾ ಎನ್ನುವ ಮಹಿಳೆ ಮಾತನಾಡಿದ್ದನ್ನ ರಾಕಿ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದ. ಇದಾದ ನಂತರ ರಾಜೇಂದ್ರ ಅವರಿಗೆ ಆಡಿಯೋ ತಲುಪಸಿಲಾಗಿತ್ತು. ಈ ಆಡಿಯೋ ಕೇಳಿ ರಾಜೇಂದ್ರ ಅವರು ಶಾಕ್ ಆಗಿದ್ದರು. ಬಳಿಕ ಸೀದಾ ಹೋಗಿ ತುಮಕೂರು ಎಸ್‌ಪಿಗೆ ದೂರು ಕೂಡ ಕೊಟ್ಟಿದ್ದರು.

ಆಡಿಯೋದಲ್ಲಿ ಸುಪಾರಿ ಬಗ್ಗೆ ಮಾತನಾಡಿದ್ದ ಮಹಿಳೆ, ಕಳೆದ ನವೆಂಬರ್‌ನಲ್ಲೇ ರಾಜೇಂದ್ರ ಅವರ ಮಗಳ ಹುಟ್ಟುಹಬ್ಬಕ್ಕೆ ಜೈಪುರದ ಇಬ್ಬರು ಹುಡುಗರು ಬಂದಿದ್ದರು. ಆಗಲೇ ಸೋಮ ಹತ್ಯೆಗೆ ಯತ್ನ ನಡೆಸಿದ್ದ. ಕೊಲೆ ಸುಪಾರಿಗೆ ಸೋಮನಿಗೆ 5 ಲಕ್ಷ ಹಣ ಬಂದಿದ್ದು ನಿಜ, ಬೇಕಾದ್ರೆ ಸೋಮನ್ನ ಪೊಲೀಸರು ವಿಚಾರಿಸಿದ್ರೆ ಎಲ್ಲ ಹೊರಬರುತ್ತೆ. ಈ ವಿಚಾರನ ನಾನೇ ಬೇಕಾದ್ರೆ ರಾಜೇಂದ್ರ ಅವರಿಗೆ ಹೇಳ್ತೀನಿ. ನನ್ನ ಅವರ ಬಳಿ ಕರ್ಕೊಂಡು ಹೋಗು ಎಂದು ರಾಕಿಗೆ ಕೇಳಿದ್ದಾರೆ.
ಅಲ್ಲದೆ ಸೋಮ ಅವನ ಜೀವ ಹೋದ್ರೂ ಬಾಯಿ ಬಿಡೋದಿಲ್ಲ, ಅವನಿಗೆ ಎಲ್ಲ ಗೊತ್ತು, ಅವನ ಬಾಸ್‌ಗೋಸ್ಕರ ಜೈಲಿಗೆ ಬೇಕಾದ್ರೂ ಹೋಗಿ ಇದ್ದುಬಿಡುತ್ತಾನೆ. ಇದನ್ನೆಲ್ಲ ನಾನು ರಾಜೇಂದ್ರ ಅವರಿಗೆ ಹೇಳೇ ಹೇಳ್ತೀನಿ, ನಿಂಗ್ಯಾಕೆ ನನ್ನನ್ನ ಅವರ ಬಳಿ ಕರ್ಕೊಂಡು ಹೋಗು ಎಂದು ಮಾತನಾಡಿರುವುದು ಈ ಆಡಿಯೋದಲ್ಲಿದೆ.












Click it and Unblock the Notifications