ವಿಜಯೇಂದ್ರಗೆ ಪಟ್ಟ: ರಾಜಕೀಯ ನಿವೃತ್ತಿ ಪಡೆಯುತ್ತೀರಾ ಎಂಬ ಪ್ರಶ್ನೆಗೆ ಕಿಸಿಕಿಸಿ ನಕ್ಕು ಸುಮ್ಮನಾದ ನಳಿನ್ ಕುಮಾರ್ ಕಟೀಲ್!
ಕರ್ನಾಟಕ ಬಿಜೆಪಿಗೆ ಬಿ.ವೈ.ವಿಜಯೇಂದ್ರ ಅಧ್ಯಕ್ಷರಾಗಿ ಆಯ್ಕೆಯಾದ ತಕ್ಷಣ ಸಂಚಲನವೇ ಸೃಷ್ಟಿಯಾಗಿದೆ. ಒಂದು ಕಡೆ ಯಡಿಯೂರಪ್ಪ ಪುತ್ರನಿಗೆ ಅಧ್ಯಕ್ಷ ಪಟ್ಟ ಒಲಿದು ಬಂದಿದೆ, ಇನ್ನೊಂದ್ಕಡೆ ಕರ್ನಾಟಕ ಬಿಜೆಪಿಯಲ್ಲಿ ಮತ್ತೊಮ್ಮೆ ಲಿಂಗಾಯತ ಸಮುದಾಯದ ನಾಯಕ ಉನ್ನತ ಹುದ್ದೆಗೇರಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ಹಾಲಿ ಅಧ್ಯಕ್ಷ ಮತ್ತು ಅಧ್ಯಕ್ಷ ಪಟ್ಟದಿಂದ ನಿರ್ಗಮಿಸುತ್ತಿರುವ ನಳಿನ್ ಕುಮಾರ್ ಕಟೀಲ್, ತಮ್ಮ ರಾಜಕೀಯ ನಿವೃತ್ತಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ!
ಹೌದು, ಕರ್ನಾಟಕ ರಾಜಕೀಯದಲ್ಲಿ ಅದ್ರಲ್ಲೂ ಕರ್ನಾಟಕ ಬಿಜೆಪಿಯಲ್ಲಿ ಹಲವು ದಿನಗಳ ಗೊಂದಲಕ್ಕೆ ತೆರೆ ಬಿದ್ದಿದೆ. ಬರೋಬ್ಬರಿ 6 ತಿಂಗಳಿಂದ ಎದ್ದಿದ್ದ ತಳಮಳಕ್ಕೆ ಉತ್ತರ ಕೂಡ ಸಿಕ್ಕಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕ ಬಿಜೆಪಿ ಹೀನಾಯ ಸೋಲನ್ನು ಕಂಡ ನಂತರ, ಮಹತ್ವದ ಬೆಳವಣಿಗೆ ಇಂದು ನಡೆದಿದೆ.
ಕರ್ನಾಟಕ ಮಾಜಿ ಸಿಎಂ ಮತ್ತು ಬಿಜೆಪಿ ಪಕ್ಷವನ್ನ ಕರ್ನಾಟಕದಲ್ಲಿ 'ಝೀರೋ ಟು ಹೀರೋ' ಸ್ಥಾನಕ್ಕೆ ತಂದು ನಿಲ್ಲಿಸಿರುವ ಯಡಿಯೂರಪ್ಪ ಅವರ ಮಾತಿಗೆ ಬಿಜೆಪಿ ಹೈಕಮಾಂಡ್ ಮಣೆಹಾಕಿದೆ. ಯಡಿಯೂರಪ್ಪರ ಪುತ್ರ ಬಿ.ವೈ.ವಿಜಯೇಂದ್ರಗೆ ಕರ್ನಾಟಕ ಬಿಜೆಪಿ ಅಧ್ಯಕ್ಷ ಪಟ್ಟ ಒಲಿದು ಬಂದಿದೆ. ಹೀಗಾಗಿ ನಿರ್ಗಮಿತ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈ ಬಗ್ಗೆ ಮಾತನಾಡಿದ್ದಾರೆ.

ಕಟೀಲ್ ರಾಜಕೀಯ ನಿವೃತ್ತಿ ಬಗ್ಗೆ ಉತ್ತರ!
ಅಂದಹಾಗೆ ಬಿ.ವೈ.ವಿಜಯೇಂದ್ರ ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ನಳಿನ್ ಕುಮಾರ್ ಕಟೀಲ್, ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ. ಜತೆಗೆ ವಿಜಯೇಂದ್ರ ಅವರ ಆಯ್ಕೆಯಿಂದ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು ಬಂದಿದೆ ಕಾಂಗ್ರೆಸ್ ಪಕ್ಷದಲ್ಲಿ ಆಡಳಿತ ವೈಫಲ್ಯಗಳು ಕಂಡುಬರುತ್ತಿವೆ.
ಕಳೆದ 6 ತಿಂಗಳ ಅವಧಿಯಲ್ಲಿ ಅಭಿವೃದ್ಧಿ ಕಾರ್ಯ ಆಗಿಲ್ಲ, ರಾಜ್ಯದಲ್ಲೀಗ ಭ್ರಷ್ಟಾಚಾರ ತಾಂಡವ ಆಡುತ್ತಿದೆ ಎಂದು ಆರೋಪ ಮಾಡಿದ್ದಾರೆ. ಆದರೆ ಅಸಲಿ ಮ್ಯಾಟರ್ ಇದಲ್ಲ. ವಿಜಯೇಂದ್ರ ಕರ್ನಾಟಕದ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆ, ನಳಿನ್ ಕುಮಾರ್ ಕಟೀಲ್ ರಾಜಕೀಯ ನಿವೃತ್ತಿ ಪಡೆಯುತ್ತಾರಾ? ಎಂಬ ಪ್ರಶ್ನೆಗೆ ನಳಿನ್ ಕುಮಾರ್ ಕಟೀಲ್ ಉತ್ತರ ನೀಡಿದ್ದಾರೆ.
ಮುಗುಳು ನಗೆಯೇ ನೀ ಹೇಳು..
ಹೌದು, ಕರ್ನಾಟಕ ಬಿಜೆಪಿಯ ನಿರ್ಗಮಿತ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಈಗ ಅವರ ನಿವೃತ್ತಿಯ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಅದು ಹೇಗೆ ಗೊತ್ತಾ? ಮುಗುಳು ನಗೆಯ ಮೂಲಕ. ಅಷ್ಟಕ್ಕೂ, ಬಿ.ವೈ.ವಿಜಯೇಂದ್ರ ಅವರು ಬಿಜೆಪಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಗ್ಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್ ಅವರಿಗೆ ಸುದ್ದಿಗಾರರು, 'ರಾಜಕೀಯದಿಂದ ನಿವೃತ್ತಿ ಪಡೆಯುತ್ತೀರಾ' ಎಂಬ ಪ್ರಶ್ನೆ ಮುಂದಿಟ್ಟಿದ್ದರು. ಆಗ ನಗುತ್ತ ಸುಮ್ಮಾನಾದ ನಳಿನ್ ಕುಮಾರ್ ಕಟೀಲ್, ಮುಗುಳು ನಗೆಯ ಮೂಲಕ ಇದಕ್ಕೆ ಉತ್ತರ ನೀಡಿದ್ದಾರೆ.

ಹಲವು ದಿನಗಳಿಂದ ಮೂಡಿದ್ದ ಗೊಂದಲ
ಭೀಕರ ಸೋಲಿನ ಬಳಿಕ ಒಂದ್ಕಡೆ ಕರ್ನಾಟಕ ಬಿಜೆಪಿಯಲ್ಲಿ ಹಾಲಿ ಅಧ್ಯಕ್ಷರ ಬದಲಾವಣೆ ಬಗ್ಗೆ ಕೂಗು ಎದ್ದಿತ್ತು. ಹಾಗೇ ಬಿಜೆಪಿ ಪಕ್ಷದ ನಾಯಕರೇ ಒಳಗೊಳಗೆ ಜಗಳವನ್ನೂ ಶುರು ಮಾಡಿದ್ದರು. ಕೆಲವರು ಬಹಿರಂಗ ಹೇಳಿಕೆ ನೀಡಿ ಅಸಮಾಧಾನ ಹೊರಹಾಕಿ ಗೊಂದಲಕ್ಕೆ ಕೂಡ ಕಾರಣರಾಗಿದ್ದರು. ಇದನ್ನೆಲ್ಲ ನೋಡಿ ನೋಡಿ ಸುಸ್ತಾಗಿ ಹೋಗಿದ್ದ ಕೇಂದ್ರ ಬಿಜೆಪಿ ನಾಯಕರು ಈಗ ಅಂತಿಮವಾಗಿ ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ಅದೂ ಮಾಜಿ ಸಿಎಂ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಸೊನ್ನೆಯಿಂದ ನೂರರ ಗಡಿ ದಾಟಿಸಿದ್ದ BSY ಅವರ ಪುತ್ರನಿಗೆ ಕರ್ನಾಟಕ ಬಿಜೆಪಿ ಅಧ್ಯಕ್ಷರ ಸ್ಥಾನ ನೀಡಿದ್ದಾರೆ.
ಈ ಮೂಲಕ ಕರ್ನಾಟಕ ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆ ಅಂದರೆ, 2024ರ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ಆರಂಭಿಸಿದಂತೆ ಕಾಣ್ತಿದೆ. ಹೀಗೆ, ವಿಧಾನಸಭೆ ಚುನಾವಣೆ ಸೋಲಿನ ಸೇಡು ತೀರಿಸಿಕೊಳ್ಳಲು ಹಾಗೂ ಕಾಂಗ್ರೆಸ್ ಪಕ್ಷವನ್ನು ಲೋಕಸಭೆಯ ವೇಳೆ ಮಣಿಸಲು ಮಾಸ್ಟರ್ ಪ್ಲ್ಯಾನ್ ರೆಡಿಯಾದಂತೆ ಕಾಣುತ್ತಿದೆ. ಮುಂಬರುವ ದಿನಗಳಲ್ಲಿ ಈ ಕುರಿತಾದ ಪ್ರಶ್ನೆಗಳಿಗೆ ಉತ್ತರ ಕೂಡ ಸಿಗಲಿದೆ.












Click it and Unblock the Notifications