ಯತ್ನಾಳ್ ಜನಪ್ರಿಯ ನಾಯಕರು, ಜನರ ಪ್ರೀತಿ ಅವರ ಮೇಲಿದೆ: ಬಿಜೆಪಿ ಶಾಸಕ
ಕರ್ನಾಟಕ ಬಿಜೆಪಿ ಒಳಗೆ ಏನಾಗುತ್ತಿದೆ ಗೊತ್ತಾಗುತ್ತಿಲ್ಲ, ಒಂದು ಕಡೆ ಕಾಂಗ್ರೆಸ್ ಒಳ ಜಗಳದ ರೀತಿಯೇ ಬಿಜೆಪಿ ಒಳಗೂ ಆಂತರಿಕ ಕಿಚ್ಚು ಧಗಧಗಿಸುತ್ತಿದೆ. ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧ ಕೆಲವರು ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಈ ಸಮಯದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರ ಪರ ಬಿಜೆಪಿಯ ಪ್ರಭಾವಿ ಶಾಸಕರೊಬ್ಬರು ಬ್ಯಾಟ್ ಬೀಸಿದ್ದಾರೆ!
ಹೌದು ಶಾಸಕ ಅರವಿಂದ್ ಬೆಲ್ಲದ್ ಮೊದಲಿನಿಂದಲು ಯಡಿಯೂರಪ್ಪ ಅವರ ವಿರುದ್ಧವೇ ಪರೋಕ್ಷವಾಗಿ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಈಗ ಅರವಿಂದ್ ಬೆಲ್ಲದ್ ಅವರಿಗೆ ದೊಡ್ಡ ಹುದ್ದೆ ನೀಡಲಾಗಿದೆ. ವಿಧಾನಸಭೆ ವಿಪಕ್ಷದ ಉಪ ನಾಯಕರಾಗಿ, ಶಾಸಕ ಅರವಿಂದ ಬೆಲ್ಲದ್ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಬಸನಗೌಡ ಪಾಟೀಲ್ ಯತ್ನಾಳ್ ಪರ ಮಾತನಾಡಿದ್ದಾರೆ. ಹಾಗಾದರೆ ಶಾಸಕ ಅರವಿಂದ ಬೆಲ್ಲದ್ ಹೇಳಿದ್ದೇನು? ಈ ಮೂಲಕ ಯಡಿಯೂರಪ್ಪ ಅವರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರಾ? ಮುಂದೆ ಓದಿ.

ಅರವಿಂದ್ ಬೆಲ್ಲದ್ ಹೇಳಿದ್ದು ಇಷ್ಟು..
ಅಂದಹಾಗೆ ಅರವಿಂದ್ ಬೆಲ್ಲದ್ ವಿಧಾನಸಭೆ ವಿಪಕ್ಷದ ಉಪ ನಾಯಕರಾಗಿ ಆಯ್ಕೆಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಪಕ್ಷ ಕೊಟ್ಟ ಜವಾಬ್ದಾರಿ ಜನರ ಆಶೋತ್ತರಗಳಿಗು ಧ್ವನಿಯಾಗಿ ಜವಾಬ್ಧಾರಿ ನಿರ್ವಹಿಸುವೆ. ಉತ್ತರ ಕರ್ನಾಟಕದ ಧ್ವನಿಯಾಗಿ, ಪಕ್ಷ ಈ ಸ್ಥಾನ ನೀಡಿದೆ. ಪಕ್ಷದ ನಾಯಕರಿಗೆ ವಂದನೆ ಸಲ್ಲಿಸುವೆ. ಕಾರ್ಯಕರ್ತರ ಶ್ರಮದಿಂದ ಜವಾಬ್ದಾರಿ ಸಿಕ್ಕಿದೆ ಎಂದಿದ್ದಾರೆ ಬೆಲ್ಲದ್. ಅಲ್ಲದೆ ಅಸಮಾಧಾನ ಶಮನಕ್ಕೆ ಸ್ಥಾನ ಕೊಟ್ಟರಾ? ಎಂಬ ಪ್ರಶ್ನೆಗೆ ಉತ್ತರ ನೀಡಿದ ಅವರು, ಆ ವಿಷಯವೇ ಬೇರೆ ಈ ವಿಷಯ ಬೇರೆ. ಇವತ್ತು ವಿರೋಧ ಪಕ್ಷದಲ್ಲಿದ್ದು ಸರ್ಕಾರದ ಕೆಲಸ ಸರಿಯಾಗಿ ಮಾಡಿಸುವುದು ನಮ್ಮ ಜವಾಬ್ದಾರಿ ಎಂದಿದ್ದಾರೆ. ಇದೇ ವೇಳೆ ಯತ್ನಾಳ್‌ರ ಪರ ಬ್ಯಾಟ್ ಬೀಸಿದ್ದಾರೆ.
ಯತ್ನಾಳ್ ಬಗ್ಗೆ ಬೆಲ್ಲದ್ ಹೇಳಿದ್ದೇನು?
ತಮ್ಮ ಮಾತು ಮುಂದುವರಿಸಿದ ಬೆಲ್ಲದ್ ಅವರು, ಪಕ್ಷದ ಅಧ್ಯಕ್ಷರಾಗಿ ವಿಜಯೇಂದ್ರ ಅವರು ಇದ್ದಾರೆ ಎಂದಿದ್ದಾರೆ. ಹಾಗೇ ಬಸನಗೌಡ ಪಾಟೀಲ್ ಯತ್ನಾಳ್‌ರ ಅಸಮಾಧಾನ ವಿಚಾರವಾಗಿ ಬೆಲ್ಲದ್ ಪ್ರತಿಕ್ರಿಯೆ ನೀಡಿ ಯತ್ನಾಳ್ ಅತ್ಯಂತ ಜನಪ್ರಿಯ ನಾಯಕ. ಹಿಂದುತ್ವ ಪ್ರತಿಪಾದಕರು ಅವರು. ಅವರ ಮೇಲೆ ಜನರ ಪ್ರೀತಿ ಇದೆ, ಆದರೂ ಅವರಿಗೆ ಸ್ಥಾನ ಕೊಟ್ಟಿಲ್ಲ. ಆದ್ರೆ ಮುಂದೆ ಒಳ್ಳೆ ಸ್ಥಾನ ಅವರಿಗೆ ಸಿಗಲಿದೆ ಎನ್ನುವ ಭರವಸೆ ಇದೆ. ಅವರಿಗೆ ಪಕ್ಷ ಉತ್ತಮ ಸ್ಥಾನ ಕೊಡುತ್ತದೆ ಅವರನ್ನ ಯಾರೂ ಕಡೆಗಣನೆ ಮಾಡುತ್ತಿಲ್ಲ ಎಂದು ಇದೇ ವೇಳೆ ಸಮಜಾಯಿಷಿ ನೀಡಿದರು.

ಶಿವಾನಂದ ಪಾಟೀಲ್ ವಿರುದ್ಧ ಗರಂ!
ಇನ್ನು ಇದೇ ವೇಳೆ ಅರವಿಂದ್ ಬೆಲ್ಲದ್ ಅವರು ಶಿವಾನಂದ ಪಾಟೀಲ್ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿದರು, 'ಬಹಳ ದುಃಖ & ವಿಚಿತ್ರ ಅನಿಸಿತು' ಎಂದು ಬೆಲ್ಲದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಜಯಪುರ ಜಿಲ್ಲೆಯ ಒಬ್ಬ ದೊಡ್ಡ ನಾಯಕರು ಅವರು, ವಿಜಯಪುರ ನೀರಾವರಿ ಜಿಲ್ಲೆ. ರಾಜ್ಯದಲ್ಲಿ ಅತ್ಯಂತ ಬರಗಾಲ ಪೀಡಿತ ಜಿಲ್ಲೆ ಅಂದರೂ ಅದು ವಿಜಯಪುರ ಜಿಲ್ಲೆ. ಆ ಜಿಲ್ಲೆ ನಾಯಕರಾದವರು ಇದನ್ನ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ಹೇಳಿಕೆ ಖಂಡಿಸಿದರು. ರೈತರ ಪರವಾಗಿ ಅರವಿಂದ್ ಬೆಲ್ಲದ್, ಶಿವಾನಂದ ಪಾಟೀಲ್ ಅವರ ಹೇಳಿಕೆಯನ್ನ ಇದೇ ವೇಳೆ ಖಂಡಿಸಿದರು.
ಒಟ್ನಲ್ಲಿ ಅರವಿಂದ್ ಬೆಲ್ಲದ್ ಅವರಿಗೆ ರಾಜ್ಯ ಮಟ್ಟದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಹೀಗಾಗಿ, ಬಿಜೆಪಿ ವರಿಷ್ಠರು ರಾಜ್ಯ ಬಿಜೆಪಿಯಲ್ಲಿ ಅಸಮಾಧಾನಕ್ಕೆ ಅಂತ್ಯ ಹಾಡುವ ಪ್ರಯತ್ನವನ್ನು ಮಾಡುತ್ತಿರುವಂತೆ ಕಾಣುತ್ತಿದೆ. ಈಗ ಸ್ವತಃ ಅರವಿಂದ್ ಬೆಲ್ಲದ್ ಅವರು ಯತ್ನಾಳ್ ಅವರ ಪರವಾಗಿ ಬ್ಯಾಟ್ ಬೀಸಿದ್ದು ಭಾರಿ ಕುತೂಹ ಕೆರಳಿಸಿದೆ.












Click it and Unblock the Notifications