ಕರ್ನಾಟಕ ಅನ್‌ಲಾಕ್ 3.0: ತಜ್ಞರಿಂದ ಸೋಂಕು ಹೆಚ್ಚಳದ ಎಚ್ಚರಿಕೆ
ಬೆಂಗಳೂರು, ಜುಲೈ 02: ರಾಜ್ಯದಲ್ಲಿ ಅನ್‌ಲಾಕ್ 3.0ಗೆ ಸರ್ಕಾರ ನಿರ್ಧರಿಸಿದ್ದು, ಕೊರೊನಾ ಸೋಂಕು ಹೆಚ್ಚಳವಾಗುವ ಎಚ್ಚರಿಕೆಯನ್ನು ವಿಜ್ಞಾನಿಗಳು ನೀಡಿದ್ದಾರೆ.
ರಾಜ್ಯ ಸರ್ಕಾರ ಈ ನಡೆ ಕುರಿತು ಮಾಹಿತಿಯಿಲ್ಲದ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ತಜ್ಞರು, ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲಾ ಆರ್ಥಿಕ ಚಟುವಟಿಕೆಗಳಿಗೂ ಅವಕಾಶ ಮಾಡಿಕೊಡುವುದು ಸೂಕ್ತವಲ್ಲ.
ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಸೋಂಕು ಉಲ್ಬಣಗೊಂಡಿದ್ದು, ಈ ಸಮಯದಲ್ಲಿ ಕರ್ಫ್ಯೂ ತೆಗೆದಿದ್ದೇ ಆದರೆ, ರಾಜ್ಯದಲ್ಲಿ ಸೋಂಕು ಉಲ್ಬಣಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಯಲಿದ್ದು, ಜುಲೈ 5 ರಿಂದ ರಾಜ್ಯಾದ್ಯಂತ ಸಂಪೂರ್ಣ ಅನ್‌ಲಾಕ್ ಮಾಡುವ ಬಗ್ಗೆ ಈ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ನಿರೀಕ್ಷೆಗಳಿವೆ.
ಜನರು ಕೊರೊನಾ ನಿಯಮಗಳನ್ನು ಮರೆಯಬಾರದು. ಜೀವನ ಮತ್ತು ಜೀವನೋಪಾಯ ಎರಡೂ ಕಡೆ ಗಮನಹರಿಸಬೇಕಿದೆ. ಜೀವನೋಪಾಯಕ್ಕೆ ಜನರು ಹೊರಗೆ ಬರಲೇಬೇಕೆಂಬುದನ್ನು ನಾನು ಒಪ್ಪುತ್ತೇನೆ. ಆದರೆ, ಪ್ರತಿಯೊಬ್ಬ ನಾಗರೀಕನೂ ಕೊರೊನಾ ನಿಯಮವನ್ನು ಜವಾಬ್ದಾರಿಯುತವಾಗಿ ಪಾಲನೆ ಮಾಡಬೇಕು. ಇಲ್ಲದೇ ಹೋದಲ್ಲಿ ಮರಳಿ ಲಾಕ್ಡೌನ್ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಡಾ.ಮಂಜುನಾಥ್ ಅವರು ಎಚ್ಚರಿಸಿದ್ದಾರೆ.

ಕೊರೊನಾ ನಿರ್ಬಂಧಗಳ ಕುರಿತು ನಿರ್ಧಾರ
ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಯಲಿದ್ದು, ಕೊರೊನಾ ನಿರ್ಬಂಧಗಳ ಕುರಿತು ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿಎನ್ ಅಶ್ವತ್ಥ ನಾರಾಯಣ್ ಅವರು ಹೇಳಿದ್ದಾರೆ.
ಆದರೆ, ತಜ್ಞರ ಸಮಿತಿಯು ರಾಜ್ಯ ಸರ್ಕಾರ ಇನ್ನೆರಡು ವಾರಗಳ ಕಾದು ಪರಿಸ್ಥಿತಿ ಆಧರಿಸಿ ನಿರ್ಧಾರ ಕೈಗೊಳ್ಳಬೇಕೆಂದು ಸಲಹೆ ನೀಡಿದ್ದಾರೆ.
ಹೆಚ್ಚು ಜನ ಸೇರುವುದಕ್ಕೆ ಅವಕಾಶ ಬೇಡ
ಜಯದೇವ ಆಸ್ಪತ್ರೆಯ ನಿರ್ದೇಶಕ ಹಾಗೂ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ಸಿಎನ್.ಮಂಜುನಾಥ್ ಅವರು ಮಾತನಾಡಿ, ''ಹೆಚ್ಚೆಚ್ಚು ಜನರು ಸೇರುವುದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬಾರದು. ಸರ್ಕಾರ ಹೆಚ್ಚು ಸಮಯದವರೆಗೆ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗದಿದ್ದರೂ, ವಾರಾಂತ್ಯದ ಕರ್ಫ್ಯೂ ಮುಂದುವರೆಸಬೇಕು'' ಎಂದು ಹೇಳಿದ್ದಾರೆ.

ಇನ್ನೆರಡು ವಾರ ಕಾಯಬೇಕು
ನಿಯಮಗಳನ್ನು ಸಂಪೂರ್ಣವಾಗಿ ಸಡಿಲಗೊಳಿಸುವುದಕ್ಕೂ ಮುನ್ನ ಸರ್ಕಾರ ಇನ್ನೆರಡು ವಾರಗಳ ಕಾಲ ಕಾದುನೋಡಬೇಕಿದೆ. ಕನಿಷ್ಠ ಪಕ್ಷ ರಾತ್ರಿ ಕರ್ಫ್ಯೂವನ್ನಾದರೂ ಮುಂದುವರೆಸಬೇಕು.

ಬೇರೆ ರಾಜ್ಯಗಳಿಂದ ಜನರ ಆಗಮನ
ಕೊರೊನಾ ಮೊದಲನೇ ಹಾಗೂ ಎರಡನೇ ಅಲೆಯನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಸೋಂಕು ಉಲ್ಬಣಗೊಂಡ ನಾಲ್ಕು ವಾರಗಳ ಬಳಿಕ ರಾಜ್ಯದಲ್ಲಿಯೂ ಸೋಂಕು ಉಲ್ಬಣಗೊಂಡ ಬೆಳವಣಿಗೆಗಳು ಕಂಡು ಬಂದಿತ್ತು.
ರಾಜ್ಯಕ್ಕೆ ಹೆಚ್ಚೆಚ್ಚು ಜನರು ಬರುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿಯೂ ಸೋಂಕು ಉಲ್ಬಣಗೊಳ್ಳುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.











Click it and Unblock the Notifications