ಲೋಕಸಭಾ ಚುಣಾವಣೆ; ಎಕ್ಸಿಟ್ ಪೋಲ್ ಫಲಿತಾಂಶ: ಬಿ ವೈ ವಿಜಯೇಂದ್ರ ಏನಂದ್ರು?
ಬೆಂಗಳೂರು, ಜೂನ್ 03: ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶ ಬಂದ ಬಳಿಕ ರಾಜ್ಯದ ಆಡಳಿತ ಪಕ್ಷದ ಮುಖಂಡರಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯಯಾದಿಯಾಗಿ ಸಚಿವರಿಗೂ ಕೂಡ ಎದೆಬಡಿತ ಹೆಚ್ಚಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಣ್ಣದಲ್ಲ; ಇದರ ಆಳ ಮತ್ತು ಅಗಲ ಇನ್ನೂ ಹೆಚ್ಚಾಗಿದೆ. ಕೂಡಲೇ ಸಚಿವ ನಾಗೇಂದ್ರರ ರಾಜೀನಾಮೆ ಪಡೆಯಲು ನಾವು ಆಗ್ರಹಿಸಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನೂ ಮನಸ್ಸು ಮಾಡಿಲ್ಲ ಎಂದು ಹೇಳಿದರು.

ತೆಲಂಗಾಣಕ್ಕೆ ಹಣ ವರ್ಗಾವಣೆ, ನಕಲಿ ಕಂಪನಿ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಹಣ ವರ್ಗಾಯಿಸಿದ್ದು ಬಯಲಾಗಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡಿಗೋಸ್ಕರ ಈ ಎಸ್‍ಟಿ ಅಭಿವೃದ್ಧಿ ನಿಗಮದ 187 ಕೋಟಿ ಹಣವನ್ನು ತೆಲಂಗಾಣಕ್ಕೆ ವರ್ಗಾಯಿಸಿದ್ದಾರೆ. ಬೇರೆ ಬೇರೆ ಖಾತೆಗಳಿಂದ ಈ ಹಣ ಚುನಾವಣೆಗೆ ದುರುಪಯೋಗ ಆಗಿದೆ ಎಂದು ಆರೋಪಿಸಿದರು.
ಸಿಬಿಐ ತನಿಖೆಗೆ ಕೋರಿ ಯೂನಿಯನ್ ಬ್ಯಾಂಕ್ ಕೂಡ ಪತ್ರ ಬರೆದಿದೆ. ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿಗಳು ತಮ್ಮ ಕೊಳಕನ್ನು ಮುಚ್ಚಿ ಹಾಕಲು ಆತುರಾತುರವಾಗಿ ಎಸ್‍ಐಟಿ ರಚಿಸಿದ್ದಾರೆ ಎಂದು ಅವರು ಟೀಕಿಸಿದರು. ಬಿಜೆಪಿ ಈ ವಿಚಾರದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.
ವಾಲ್ಮೀಕಿ ನಿಗಮದ ಹಗರಣವು ಕೇವಲ ಸಚಿವರಿಗೆ ಸೀಮಿತವಾಗಿಲ್ಲ. ಬಹಳ ದೊಡ್ಡ ದೊಡ್ಡ ಹೆಸರುಗಳು ಕೇಳಿಬರುತ್ತಿವೆ. ಮುಂದಿನ ದಿನಗಳಲ್ಲಿ ಸತ್ಯಾಂಶ ಹೊರಬರಲಿದೆ ಎಂದ ವಿಜಯೇಂದ್ರ ಅವರು, ಎಸ್‍ಐಟಿಯಿಂದ ನ್ಯಾಯಯುತ ತನಿಖೆ ಅಸಾಧ್ಯ; ಆದ್ದರಿಂದ ಸಿಬಿಐ ತನಿಖೆಗೆ ಒಪ್ಪಿಸಿ ಎಂದು ಆಗ್ರಹಿಸಿದರು. ಸದ್ಯವೇ ರಾಜ್ಯಪಾಲರನ್ನು ಭೇಟಿ ಮಾಡಿ ಈ ವಿಚಾರದಲ್ಲಿ ಒತ್ತಾಯ ಮಾಡಲಿದ್ದೇವೆ ಎಂದು ಅವರು ತಿಳಿಸಿದರು.
ಕೇಂದ್ರದ ವರಿಷ್ಠರು, ಹಿರಿಯರಾದ ಸಿ.ಟಿ.ರವಿ, ಎನ್.ರವಿಕುಮಾರ್, ಮರಾಠ ಸಮಾಜದ ಮುಖಂಡ, ಬಿಜೆಪಿ ಹಿರಿಯರಾದ ಎಂ.ಜಿ.ಮುಳೆ ಅವರನ್ನು ವಿಧಾನಪರಿಷತ್ ಅಭ್ಯರ್ಥಿಗಳಾಗಿ ಆಯ್ಕೆ ಮಾಡಿದ ಕುರಿತು ಸಂತಸ ಸೂಚಿಸಿದರು. ಇದರಿಂದ ಮುಂದಿನ ದಿನಗಳಲ್ಲಿ ಸರಕಾರದ ವಿರುದ್ಧ ಧ್ವನಿ ಎತ್ತಿ ಸರಕಾರಕ್ಕೆ ಚಾಟಿ ಬೀಸುವ ಕೆಲಸ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಚಿವರ ರಾಜೀನಾಮೆಗಾಗಿ ತೀವ್ರ ಹೋರಾಟ: ಆರ್.ಅಶೋಕ್
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಡಿ ಸಚಿವ ನಾಗೇಂದ್ರರ ರಾಜೀನಾಮೆ ಪಡೆಯುವವರೆಗೆ ಬಿಜೆಪಿ ಹೋರಾಟ ಮುಂದುವರೆಸಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತಿಳಿಸಿದರು.
ಕಾಂಗ್ರೆಸ್ ಸರಕಾರ ದಲಿತರ 187 ಕೋಟಿ ಹಣವನ್ನು ನುಂಗಿ ನೀರು ಕುಡಿದಿದೆ ಎಂದು ಆಕ್ಷೇಪಿಸಿದರು. ಸಿದ್ದರಾಮಯ್ಯನವರು ಸಚಿವರ ರಾಜೀನಾಮೆ ಪಡೆಯದೆ ಭಂಡತನ ಮೆರೆಯುತ್ತಿದ್ದಾರೆ ಎಂದು ಟೀಕಿಸಿದರು.
ಮತ್ತೆ ಮೋದಿಯವರು ಪ್ರಧಾನಿ ಆಗಲಿದ್ದು, ಆಮೇಲೆ ತೀರ್ಮಾನ ಮಾಡೋಣ ಎಂದು ಕಾಂಗ್ರೆಸ್ಸಿಗರು ಕಾಯುತ್ತಿದ್ದಾರೆ ಎಂದರು. ಕಳ್ಳ- ಖದೀಮರಾದ ಕಾಂಗ್ರೆಸ್ಸಿಗರು ಒಂದು ದಿನದ ಹೋರಾಟಕ್ಕೆ ಬಗ್ಗುವುದಿಲ್ಲ. ಆದ್ದರಿಂದ ರಾಜ್ಯಪಾಲರ ಭೇಟಿ, ಶಾಸಕರಿಂದ ಗಾಂಧಿ ಪ್ರತಿಮೆ ಎದುರು ಹೋರಾಟ, ಜಿಲ್ಲೆ, ಜಿಲ್ಲೆಗಳಲ್ಲಿ ಹೋರಾಟ ಮಾಡುವ ಕುರಿತು ಚರ್ಚೆ ಮಾಡಿದ್ದೇವೆ ಎಂದು ವಿವರಿಸಿದರು.
ಸಿ.ಟಿ.ರವಿ, ಎನ್.ರವಿಕುಮಾರ್, ಎಂ.ಜಿ.ಮುಳೆ ಅವರ ಆಯ್ಕೆ ಕುರಿತು ಮಾತನಾಡಿ, ಪಕ್ಷಕ್ಕಾಗಿ ದುಡಿದವರಿಗೆ ಆದ್ಯತೆ ಕೊಟ್ಟಿದ್ದಾಗಿ ತಿಳಿಸಿದರು. ವಿಧಾನಪರಿಷತ್ತಿನಲ್ಲಿ ನಮ್ಮ ಧ್ವನಿ ಹೆಚ್ಚಾಗಲು ಇವರನ್ನು ಆಯ್ಕೆ ಮಾಡಿದ್ದಾಗಿ ಹೇಳಿದರು.
ವಿಧಾನಪರಿಷತ್: ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ
ವಿಧಾನಪರಿಷತ್ ಚುನಾವಣೆ ಬಿಜೆಪಿ ಅಭ್ಯರ್ಥಿಗಳಾದ ಸಿ.ಟಿ.ರವಿ, ಎನ್.ರವಿಕುಮಾರ್ ಮತ್ತು ಎಂ.ಜಿ. ಮುಳೆ ಅವರು ಇಂದು ವಿಧಾನಸೌಧದ 1ನೇ ಮಹಡಿ, ಕೊಠಡಿ ಸಂಖ್ಯೆ 121ರಲ್ಲಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್, ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ಶಾಸಕರಾದ ಗೋಪಾಲಯ್ಯ, ಮುನಿರತ್ನ, ಸುನಿಲ್ ಕುಮಾರ್, ಸುರೇಶ್, ಮಾನಪ್ಪ ವಜ್ಜಲ ಅವರು ಉಪಸ್ಥಿತರಿದ್ದರು.












Click it and Unblock the Notifications