ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒನ್ ಇಂಡಿಯಾ ಕನ್ನಡದ ಜೊತೆ ಯಡಿಯೂರಪ್ಪ ಮನ್ ಕೀ ಬಾತ್

By ಸಂದರ್ಶನ : ಬಾಲರಾಜ್ ತಂತ್ರಿ
|
Google Oneindia Kannada News

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ಶಿವಮೊಗ್ಗ ಸಂಸದ ಬಿ ಎಸ್ ಯಡಿಯೂರಪ್ಪ ಸಕ್ರಿಯ ರಾಜಕಾರಣದಲ್ಲಿ ಪಾದರಸದಂತಹ ವ್ಯಕ್ತಿತ್ವದವರು. ಒಲ್ಲದ ಮನಸ್ಸಿನಿಂದಲೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ, ಗೆದ್ದ ಯಡಿಯೂರಪ್ಪ ಮತ್ತೆ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ.

ಕಳೆಗುಂದಿದ್ದ ರಾಜ್ಯ ಬಿಜಿಪಿಗೆ ಹೊಸ ಹುರುಪನ್ನು ನೀಡಿದ್ದು ಯಡಿಯೂರಪ್ಪನವರ ಯಶಸ್ವೀ 'ರೈತ ಚೈತನ್ಯ ಯಾತ್ರೆ'. ರಾಜ್ಯ ರಾಜಕಾರಣದ ಬಗ್ಗೆ, ಕುಮಾರಸ್ವಾಮಿ ಜೊತೆಗಿನ ಬಾಂಧವ್ಯ, ಬಿಬಿಎಂಪಿ ಚುನಾವಣೆ, ವಿದ್ಯುತ್ ಸಮಸ್ಯೆ, ಕಳಸಾ ಬಂಡೂರಿ ಬಗ್ಗೆ ಯಡಿಯೂರಪ್ಪ 'ಒನ್ ಇಂಡಿಯಾ ಕನ್ನಡ' ಜೊತೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. (ಬಿಎಸ್ವೈ ಸಂದರ್ಶನದ ವಿಡಿಯೋ)

ಪ್ರ: ರೈತ ಚೈತನ್ಯ ಯಾತ್ರೆಯಲ್ಲಿ ನಿಮಗೆ ಸಿಗುತ್ತಿದ್ದ ಜನಬೆಂಬಲ ಸದ್ಯದ ರಾಜಕೀಯ ಪರಿಸ್ಥಿತಿಗೆ ಏನು ಮೆಸೇಜ್ ನೀಡುತ್ತೆ. ಇದು ರಾಜ್ಯ ಸರಕಾರದ ವಿರುದ್ದ ರೈತರ ಆಕ್ರೋಶನೋ, ಯಡಿಯೂರಪ್ಪನವರಿಗೆ ರಾಜ್ಯ ರಾಜಕಾರಣಕ್ಕೆ ಒಂದು ವೇದಿಕೆಯೋ ಅಥವಾ ಯಡಿಯೂರಪ್ಪನವರ ಜನಪ್ರಿಯತೆಯೋ?

ಬಿಎಸ್ವೈ: ಬರಗಾಲಕ್ಕೆ ತತ್ತರಿಸುವಂತಿರುವಂತಹ ರಾಜ್ಯ, ಮುಂಗಾರು ಬೆಳೆ ನಾಶ ಮುಂತಾದ ಕಾರಣಗಳಿಂದ 450ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 136 ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶ ಎಂದು ರಾಜ್ಯ ಸರಕಾರ ಘೋಷಣೆ ಮಾಡಿದೆ. ಜಲಾಶಯಗಳಲ್ಲಿ ನೀರಿಲ್ಲ, ಮುಂಗಾರು ಬೆಳೆ ನಾಶವಾಗಿದೆ. (ರಾಜ್ಯ ಬಿಎಸ್ವೈಗೆ ಸರಿಸಾಟಿ ಯಾರು)

ಐದು ವರ್ಷ ಆಡಳಿತ ನಡೆಸಿದ ಅನುಭವವಿರುವ ನಮಗೆ ರೈತರ ತೊಂದರೆಯನ್ನು ಸರಕಾರಕ್ಕೆ ಮನದಟ್ಟು ಮಾಡಬೇಕು ಎನ್ನುವ ಸದುದ್ದೇಶದಿಂದ ಈ ಯಾತ್ರೆ ಮಾಡುತ್ತಿದ್ದೇವೆ. ನಾವೂ ನಿರೀಕ್ಷೆ ಮಾಡದಷ್ಟು ಜನ ನಮ್ಮ ಯಾತ್ರೆಗೆ ಸ್ಪಂದಿಸಿದ್ದಾರೆ.

ಅದಕ್ಕೆ ಕಾರಣ ನಾವು ಕೊಟ್ಟ ಐದು ವರ್ಷದ ಆಡಳಿತ ಮನೆಮನೆಗೆ ತಲುಪಿದೆ. ಈಗಿನ ಸರಕಾರ ಏನೂ ಮಾಡುತ್ತಿಲ್ಲ ಎನ್ನುವ ಆಕ್ರೋಶ ದೊಡ್ಡ ಪ್ರಮಾಣದಲ್ಲಿ ಜನ ಸೇರಲು ಕಾರಣವಾಗಿದೆ.

ಹಾಗಾಗಿ ಇದು ವೈಯಕ್ತಿಕ ಪ್ರತಿಷ್ಠೆಯ ಪ್ರಶ್ನೆಯಲ್ಲ, ನನ್ನ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಪ್ರಲ್ಹಾದ್ ಜೋಷಿ ನೇತೃತ್ವದಲ್ಲಿನ ಎರಡೂ ತಂಡಕ್ಕೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮುಂದೆ ಓದಿ..

ರೈತರ ಆತ್ಮಹತ್ಯೆಯ ಬಗ್ಗೆ

ರೈತರ ಆತ್ಮಹತ್ಯೆಯ ಬಗ್ಗೆ

ಪ್ರ: ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬವನ್ನು ಭೇಟಿ ಮಾಡಿದ್ರಿ, ವಸ್ತುಸ್ಥಿತಿ ಹೇಗಿದೆ ಸರ್?

ಬಿಎಸ್ವೈ : ಆರು ತಂಡಗಳಲ್ಲಿ ತೆರಳಿ ನಮ್ಮ ಪಕ್ಷದವರು ಸಾಂತ್ವನ ಹೇಳಿ ಬಂದಿದ್ದಾರೆ. ನಾನೂ ಬಹಳಷ್ಟು ಕುಟುಂಬವನ್ನು ಭೇಟಿ ಮಾಡಿದ್ದೇನೆ. ಆತ್ಮಹತ್ಯೆಗೆ ಕೆಲವು ಕಾರಣಗಳಿವೆ, ಒಂದು ರೈತ ತಾನು ತೆಗೆದುಕೊಂಡ ಸಾಲ, ಸ್ವಾಭಿಮಾನಕ್ಕೆ ಅಂಜಿ ಸಾಲ ಕಟ್ಟಲು ಆಗಲಿಲ್ಲವಲ್ಲಾ ಎನ್ನುವ ನೋವಿನಿಂದ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.

ತಾನು ಬೆಳೆದ ಬೆಳೆಗೆ ಪ್ರತಿಫಲ ಸಿಗುತ್ತಿಲ್ಲ ಎನ್ನುವುದಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು. ರಾಜ್ಯ ಸರಕಾರ ನಮ್ಮ ನೋವಿಗೆ ಸ್ಪಂದಿಸುತ್ತಿಲ್ಲ ಎನ್ನುವ ನೋವಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೇಂದ್ರ ಸರಕಾರಕ್ಕೆ ಸರಿಯಾದ ಅಂಕಿಅಂಶ ನೀಡಿದ್ದರೆ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ಪಡೆಯುವಲ್ಲಿ ನಾವು ಸಹಕರಿಸುತ್ತಿದ್ದೆವು. ಆತ್ಮಹತ್ಯೆ ಮಾಡಿಕೊಂಡವರು ಹೆಚ್ಚಿನವರು ಯುವಕರು, ಸಾಧ್ಯವಾದಷ್ಟು ರೈತರಿಗೆ ಮನವರಿಕೆ ಮಾಡಿದ್ದೇವೆ.

ಕಳಸಾ ಬಂಡೂರಿ ಸಮಸ್ಯೆಯ ಬಗ್ಗೆ

ಕಳಸಾ ಬಂಡೂರಿ ಸಮಸ್ಯೆಯ ಬಗ್ಗೆ

ಪ್ರ: ಕಳಸಾ ಬಂಡೂರಿ ಸಮಸ್ಯೆಯ ಬಗ್ಗೆ ಮೂರು ರಾಜ್ಯಗಳ ಸಿಎಂ ಜೊತೆ ಮಾತುಕತೆ ನಡೆಸಿ 24 ಗಂಟೆಯಲ್ಲಿ ಪರಿಹಾರ ನೀಡುತ್ತೇನೆ ಎಂದು ಹೇಳಿದ್ದೀರಿ. ಈ ಸಮಸ್ಯೆ ಇಷ್ಟು ಜಟಿಲವಾಗಿದೆಯಾ, ಅಥವಾ ಇದರಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯೋ, ಸರಕಾರದ ಉದಾಸೀನತೆಯೋ ಅಥವಾ ಕೇಂದ್ರದಿಂದ ಸರಿಯಾದ ಪ್ರತಿಕ್ರಿಯೆ ಸಿಗುತ್ತಿಲ್ಲವೇ?

ಬಿಎಸ್ವೈ: ನಾನು ಉಪಮುಖ್ಯಂತ್ರಿಯಾಗಿದ್ದಾಗ ನೂರು ಕೋಟಿ ಕೊಟ್ಟು ಕೆಲಸ ಶುರುಮಾಡಿಸಿದ್ದೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದ ಸಿಎಂಗಳ ಮನವೊಲಿಕೆ ನಾನು ಮಾಡುತ್ತೇನೆ. ಕಾಂಗ್ರೆಸ್ ಮುಖಂಡರ ಜೊತೆ ನೀವು ಮಾತಾಡಿ ಎಂದು ಸಿದ್ದರಾಮಯ್ಯನವರಿಗೆ ಹೇಳಿದ್ದೆ. ಮನೋಹರ್ ಪಾರಿಕ್ಕರ್ ಕೂಡಾ ಗೋವಾದ ಸಿಎಂ, ಕಾಂಗ್ರೆಸ್ ಮುಖಂಡರ ಜೊತೆ ಸಿದ್ದು ಮಾತುಕತೆ ನಡೆಸಲಿ ಎಂದು ಹೇಳಿದ್ದರು.

ಪ್ರಧಾನಿಯವರು ಈ ಹಳೆಯ ಸಮಸ್ಯೆಯನ್ನು ಪರಿಹರಿಸಲು ಸಿದ್ದರಿದ್ದಾರೆ. ಸೋನಿಯಾ ಗಾಂಧಿಯವರು ಹಿಂದೆ ಗೋವಾದ ಅಸೆಂಬ್ಲಿ ಚುನಾವಣೆಯ ಸಂದರ್ಭದಲ್ಲಿ ಒಂದು ಹನಿ ನೀರನ್ನೂ ಕರ್ನಾಟಕಕ್ಕೆ ಬಿಡುವುದಿಲ್ಲ ಎಂದಿದ್ದರು. ಈಗ ಸೋನಿಯಾ ಕಾಂಗ್ರೆಸ್ ಮುಖಂಡರ ಮನವೊಲಿಕೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲಿ. ನಾವು ಹದಿನೇಳು ಸಂಸದರು ಪ್ರಧಾನಿಯವರನ್ನು ಒಪ್ಪಿಸುವ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ. ಎಲ್ಲದಕ್ಕೂ ಪ್ರಮುಖವಾಗಿ ಸಿದ್ದರಾಮಯ್ಯನವರಿಗೆ ಈ ಸಮಸ್ಯೆ ಪರಿಹರಿಸಲು ಇಚ್ಚಾಶಕ್ತಿ ಇರಬೇಕು ಅಷ್ಟೇ.

ಬಿಬಿಎಂಪಿ ಮೇಯರ್ ಚುನಾವಣೆ ವೈಫಲ್ಯದ ಬಗ್ಗೆ

ಬಿಬಿಎಂಪಿ ಮೇಯರ್ ಚುನಾವಣೆ ವೈಫಲ್ಯದ ಬಗ್ಗೆ

ಪ್ರ: ಬಿಬಿಎಂಪಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ್ದು ಅಪವಿತ್ರ ಮೈತ್ರಿ ಅನ್ನೋದಕ್ಕಿಂತ ಬಿಜೆಪಿ ವೈಫಲ್ಯ ಅನ್ನಬಹುದಾ?

ಬಿಎಸ್ವೈ: ಆಡಳಿತದಲ್ಲಿರುವ ಪಕ್ಷ ಬಿಬಿಎಂಪಿ ಚುನಾವಣೆ ಗೆದ್ದಿರುವುದು ಇಲ್ಲಿಯವರೆಗಿನ ಇತಿಹಾಸ. ನಾವು ನೂರು ಸ್ಥಾನ ಗೆದ್ದಿದ್ದೆವು, ಕಾಂಗ್ರೆಸ್ 74 ಸ್ಥಾನ ಗೆದ್ದಿತ್ತು. ರಾಜಕೀಯದಲ್ಲಿ ಮೈತ್ರಿ ಸಹಜ, ನಾನು ಇದನ್ನು ಅಪವಿತ್ರ ಮೈತ್ರಿ ಎಂದು ಹೇಳುವುದಿಲ್ಲ. ಆದರೂ ಕುರ್ಚಿಗಾಗಿ ಕಾಂಗ್ರೆಸ್ ಜನಾದೇಶದ ವಿರುದ್ದ ನಡೆದಿದೆ. ಈಗಲಾದರೂ ಸರಕಾರ ಅವರದ್ದೇ ಇದೆ, ಬಿಬಿಎಂಪಿಯಲ್ಲೂ ಅವರದ್ದೇ ಕಾರುಬಾರು. ಬೆಂಗಳೂರಿನ ಅಭಿವೃದ್ದಿಗೆ ಕಾಂಗ್ರೆಸ್ ವಸ್ತುನಿಷ್ಠ ಪ್ರಯತ್ನ ಮಾಡಲಿ.

ವಿದ್ಯುತ್ ಸಮಸ್ಯೆಯ ಬಗ್ಗೆ

ವಿದ್ಯುತ್ ಸಮಸ್ಯೆಯ ಬಗ್ಗೆ

ಪ್ರ: ವಿದ್ಯುತ್ ಸಮಸ್ಯೆ ಯಾವ ಸರಕಾರವನ್ನೂ ಬಿಟ್ಟಿಲ್ಲ. ಇಲ್ಲಿ ಸಿದ್ದು ಮತ್ತು ಡಿಕೆಶಿ ನಡುವೆ ಸಮನ್ವಯದ ಕೊರತೆಯಿದೆಯಾ? ಯಾಕೆ ಈ ಸಮಸ್ಯೆ ಇಷ್ಟು ಜಟಿಲವಾಗಿದೆ?

ಬಿಎಸ್ವೈ: ನಿಶ್ಚಿತವಾಗಿಯೂ ಇದು ಸಮನ್ವಯದ ಕೊರತೆ. ಗ್ರಿಡ್ ಸಿಗುತ್ತಿಲ್ಲ ಎಂದು ರಾಜ್ಯ ಸರಕಾರ ಹೇಳುತ್ತೆ. ನಮ್ಮ ಕಾಲದಲ್ಲಿ ಹೇಗೆ ಸಿಕ್ತು. ವೆಲ್ ಇನ್ ಅಡ್ವಾನ್ಸ್ ಬುಕ್ ಮಾಡಬೇಕು. ಜಲಾಶಯದಲ್ಲಿ ನೀರಿಲ್ಲ ಎನ್ನುವುದು ಗೊತ್ತಿದ್ದರೂ ಸುಮ್ಮನೆ ಕೂತರೆ ಆಗುವುದಿಲ್ಲ. ನಮ್ಮ ಕಾಲದಲ್ಲೂ ಬರಗಾಲವಿತ್ತು, ಆದರೂ ಐದಾರು ಗಂಟೆ ವಿದ್ಯುತ್ ಕೊಡುತ್ತಿದ್ದೆವು.

ದೇಶದಲ್ಲಿ ವಿದ್ಯುತ್ತಿನ ಕೊರತೆಯಿಲ್ಲ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಕೇಂದ್ರ ರಾಜ್ಯಕ್ಕೆ ವಿದ್ಯುತ್ ಕೊಡಲು ಸಿದ್ದವಿದೆ, ಅದಕ್ಕೆ ಬೇಕಾದ ಪೂರ್ವತಯಾರಿ ರಾಜ್ಯ ಸರಕಾರ ಮಾಡಬೇಕು. ಶಾಖೋತ್ಪನ್ನ ಘಟಕಗಳು ಕೈಕೊಟ್ಟಾಗ ಕೂಡಲೇ ಟೆಕ್ನಿಷಿಯನ್ಸ್ ಗಳನ್ನು ಕಳುಹಿಸಿ ಸರಿಪಡಿಸಬೇಕು. ಎಲ್ಲಾ ವಿಚಾರದಲ್ಲೂ ಸಿದ್ದರಾಮಯ್ಯನವರ ಉದಾಶೀನತೆ ಇದಕ್ಕೆಲ್ಲಾ ಕಾರಣ.

ಅಹಿಂದ ವರ್ಗಕ್ಕೆ ಸರಕಾರದಿಂದ ಏನು ಲಾಭವಾಗಿದೆ?

ಅಹಿಂದ ವರ್ಗಕ್ಕೆ ಸರಕಾರದಿಂದ ಏನು ಲಾಭವಾಗಿದೆ?

ಪ್ರ: ಅಹಿಂದ ಹೆಸರು ಹೇಳಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರು. ಆದರೆ ಆ ವರ್ಗಕ್ಕೆ ಏನೂ ಮಾಡಿಲ್ಲ ಎಂದು ಬಿಜೆಪಿ ಜನರ ಬಳಿ ಹೋಗಲು ಸಿದ್ದತೆ ನಡೆಸಿದೆ. ಈ ಬಗ್ಗೆ?

ಬಿಎಸ್ವೈ: ನಾನು ಅಹಿಂದ ಸಿಎಂ ಎಂದು ಸಿದ್ದರಾಮಯ್ಯನವರೇ ಹೇಳಿದ್ದು. ಅವರ ಎರಡು ಕಾಲು ವರ್ಷದ ಅವಧಿಯಲ್ಲಿ ಆ ವರ್ಗಕ್ಕೆ ಏನೇನು ಮಾಡಿದರು ಎಂದು ಶ್ವೇತಪತ್ರ ಹೊರಡಿಸಲಿ. ನನ್ನ ಅಧಿಕಾರದ ಅವಧಿಯಲ್ಲಿಆ ವರ್ಗಕ್ಕೆ ಏನೇನು ಬೆನಿಫಿಟ್ ಕೊಟ್ಟಿದ್ದೇನೆ ಎನ್ನುವುದನ್ನು ಬಿಡುಗಡೆ ಮಾಡುತ್ತೇನೆ. ನನ್ನ ಅವಧಿಯಲ್ಲಿ ಯಾವ ವರ್ಗಕ್ಕೂ ತಾರತಮ್ಯ ಮಾಡಿಲ್ಲ.

ಹಜ್ ಭವನಕ್ಕೆ ಮೂವತ್ತು ಕೋಟಿ, ಕನಕಪೀಠಕ್ಕೂ ಹಣ ಬಿಡುಗಡೆ ಮಾಡಿದ್ದೆ. ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳುವುದಕ್ಕೋಸ್ಕರ ಅಹಿಂದ ಪದ ಬಳಕೆ ಮಾಡುತ್ತಿದ್ದಾರೆ. ಒಂಬತ್ತು ಸಾವಿರ ಕೋಟಿ ವಾಣಿಜ್ಯ ತೆರಿಗೆ ಸಂಗ್ರಹಿಸುವಲ್ಲಿ ಸರಕಾರ ವಿಫಲವಾಗಿದೆ. ಕಾಂಗ್ರೆಸ್ ಹೈಕಮಾಂಡ್ ವೀಕ್ ಯಿದೆ, ಹೇಗೋ ಐದು ವರ್ಷ ಅಧಿಕಾರ ನಡೆಸಿದರೆ ಸಾಕು ಅನ್ನೋದು ಸಿದ್ದರಾಮಯ್ಯನವರ ಕಾರ್ಯವೈಖರಿ.

ಮೌಢ್ಯ ವಿರೋಧಿ ಕಾನೂನು ಜಾರಿಯಾಗ ಬೇಕೋ, ಬೇಡವೋ?

ಮೌಢ್ಯ ವಿರೋಧಿ ಕಾನೂನು ಜಾರಿಯಾಗ ಬೇಕೋ, ಬೇಡವೋ?

ಪ್ರ: ಮೌಢ್ಯ ವಿರೋಧಿ ಕಾನೂನು ಜಾರಿಯಾಗ ಬೇಕೋ, ಬೇಡವೋ?

ಬಿಎಸ್ವೈ: ಇದು ಅರ್ಥವಿಲ್ಲದ ಪದ. ಸಾವಿರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಪದ್ದತಿ, ಸಂಪ್ರದಾಯವನ್ನು ನಮ್ಮವರು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಅದರಿಂದ ಏನಾದರೂ ಕೆಟ್ಟದಾಗುವಂತಿದ್ದರೆ, ಸರಕಾರ ನಿಷೇಧ ಮಾಡಲಿ. ಉಡುಪಿ ಮಠವನ್ನು ತೆಗೆದುಕೊಳ್ಳುತ್ತೇವೆಂದು ಗೊಂದಲ ಎಬ್ಬಿಸಿದರು, ಇದಾದ ನಂತರ ಧರ್ಮಸ್ಥಳ. ಹಿಂದೂಗಳ ಮನಸ್ಸಿಗೆ ನೋವು ತರುವಂತಹ ಕೆಲಸವನ್ನು ಸಿದ್ದರಾಮಯ್ಯ ಮಾಡಲು ಹೊರಟಿದ್ದಾರೆ.

ಮುಜುಗರ ತರುತ್ತಿರುವ ಈಶ್ವರಪ್ಪ ಹೇಳಿಕೆ

ಮುಜುಗರ ತರುತ್ತಿರುವ ಈಶ್ವರಪ್ಪ ಹೇಳಿಕೆ

ಪ್ರ: ಈಶ್ವರಪ್ಪನವರ ಕೆಲವೊಂದು ಹೇಳಿಕೆಗಳು ಪಕ್ಷಕ್ಕೆ ಮುಜುಗರ ತರುತ್ತಿಲ್ಲವೇ?

ಬಿಎಸ್ವೈ: ಈಶ್ವರಪ್ಪ ಆವೇಶದಲ್ಲಿ ನೇರವಾಗಿ ಮಾತನಾಡುವಂತಹ ಸ್ವಭಾವದವರು. ಅನೇಕ ಬಾರಿ ದುಡುಕಿ ಹೇಳಿರುವ ಮಾತನ್ನು ವಾಪಸ್ ತೆಗೆದುಕೊಳ್ಳುತ್ತೇನೆಂದು ಈಗಾಗಲೇ ಅವರು ಹೇಳಿದ್ದಾರೆ. ಅವರು ಹಿಂದುಳಿದ ವರ್ಗದಿಂದ ಬಂದವರು, ಹೋರಾಟಗಾರರು. ಏನಾದರೊಂದು ಕೊರತೆ ಮನುಷ್ಯರಲ್ಲಿವುದು ಸಹಜ, ಸರಿಪಡಿಸಿಕೊಂಡು ಮುಂದಕ್ಕೆ ಹೋಗಬೇಕು.

ರಾಜ್ಯದ ಸದ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ?

ರಾಜ್ಯದ ಸದ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ?

ಪ್ರ: ರಾಜ್ಯದ ಸದ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ?

ಬಿಎಸ್ವೈ: ಎಲ್ಲಿದೆ ಕಾನೂನು ಸುವ್ಯವಸ್ಥೆ? ಎಲ್ಲಾ ಸರಕಾರದ ಮೊದಲ ಆದ್ಯ ಕರ್ತವ್ಯ, ಲಾ ಎಂಡ್ ಆರ್ಡರ್. ಕೊಲೆ, ಸುಲಿಗೆ, ಅತ್ಯಾಚಾರ ನಿರಂತರವಾಗಿ ನಡೆಯುತ್ತಿದೆ. ಇದನ್ನು ಹತೋಟಿ ತರುವ ಪ್ರಾಮಾಣಿಕ ಪ್ರಯತ್ನವನ್ನು ಗೃಹ ಸಚಿವಾರಾಗಲಿ, ಅಧಿಕಾರಿಗಳಾಗಲಿ ಮಾಡುತ್ತಿಲ್ಲ. ಎಲ್ಲಾ ವಿಷಯದಲ್ಲಿ ಸಿದ್ದರಾಮಯ್ಯ ಸರಕಾರದ್ದು ಅಸಡ್ಡೆ.

ಎಚ್ಡಿಕೆಗೆ ನಿಮ್ಮ ಮೇಲೆ ಸಾಫ್ಟ್ ಕಾರ್ನರ್ ಇದೆಯಾ?

ಎಚ್ಡಿಕೆಗೆ ನಿಮ್ಮ ಮೇಲೆ ಸಾಫ್ಟ್ ಕಾರ್ನರ್ ಇದೆಯಾ?

ಪ್ರ: ಕುಮಾರಸ್ವಾಮಿ ನಿಮ್ಮ ಮೇಲೆ ಸಾಫ್ಟ್ ಕಾರ್ನರ್ ಹೊಂದಿದ್ದಾರೆ ಎನ್ನುವ ಮಾತಿದೆ.

ಬಿಎಸ್ವೈ: ಈ ಪ್ರಶ್ನೆಯೇ ಉದ್ಭವಿಸುವುದಿಲ್ಲ. ರಾಜಕೀಯದಲ್ಲಿ ಯಾರೂ ವಿರೋಧಿಗಳಿಲ್ಲ, ಸಿದ್ದಾಂತಗಳು ಬೇರೆ ಇರಬಹುದು ಅಸ್ಟೇ. ಅವರ ಪಕ್ಷ ಕಟ್ಟುವ ಕೆಲಸವನ್ನು ಅವರು ಮಾಡುತ್ತಿದ್ದಾರೆ, ನಾವು ನಮ್ಮ ಪಕ್ಷವನ್ನು ಕಟ್ಟುವ ಕೆಲಸ ಮಾಡುತ್ತಿದ್ದೇವೆ. ನಾವೆಲ್ಲಾ ಚೆನ್ನಾಗಿದ್ದೇವೆ. ಹುಬ್ಬಳ್ಳಿ ಗೆಸ್ಟ್ ಹೌಸಿನಲ್ಲಿ ಕುಮಾರಸ್ವಾಮಿ ನನ್ನ ಜೊತೆ ಮಾತನಾಡಲು ಬಂದಿದ್ದು ಹೌದು. ನನ್ನ ಅವರ ಬಾಂಧವ್ಯ ಚೆನ್ನಾಗಿದೆ.

ರಾಜ್ಯ ರಾಜಕಾರಣಕ್ಕೆ ನೀವು ಬರುವುದರ ಬಗ್ಗೆ?

ರಾಜ್ಯ ರಾಜಕಾರಣಕ್ಕೆ ನೀವು ಬರುವುದರ ಬಗ್ಗೆ?

ಪ್ರ: ರಾಜ್ಯ ರಾಜಕಾರಣಕ್ಕೆ ನೀವು ಬರುವುದರ ಬಗ್ಗೆ?

ಬಿಎಸ್ವೈ: ನಾನಿರುವುದೇ ರಾಜ್ಯ ರಾಜಕಾರಣದಲ್ಲಿ. ಕೇಂದ್ರದ ನಾಯಕರು ಒತ್ತಡ ತಂದ್ರು, ಅನಿವಾರ್ಯ ಕಾರಣಗಳಿಂದ ಲೋಕಸಭೆಗೆ ಹೋಗಬೇಕಾಯಿತು. ನಾನು ರಾಷ್ಟ್ರೀಯ ಉಪಾಧ್ಯಕ್ಷ ಆದ ಮೇಲೂ, ಕರ್ನಾಟಕಾದ್ಯಂತ ಪ್ರವಾಸ ಮಾಡುತ್ತಿದ್ದೆ. ರಾಜ್ಯದ ರೈತ ಈಗ ಸಂಕಷ್ಟದಲ್ಲಿದ್ದಾನೆ, ಈ ಸಮಯದಲ್ಲಿ ನನ್ನ ಎಲ್ಲಾ ಸಮಯವನ್ನು ರಾಜ್ಯ ರಾಜಕಾರಣಕ್ಕೆ ಮೀಸಲಿಡುತ್ತೇನೆ. ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡುತ್ತೇನೆ. ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನನ್ನ ಗುರಿ.

English summary
An exclusive interview with former Chief Minister of Karnataka and present Shivamooga MP B S Yeddyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X