ಹಕ್ಕುಚ್ಯುತಿ: ನನಗ್ಯಾವ ಹೆದರಿಕೆಯೂ ಇಲ್ಲ- ಹಿರೇಮಠ್

ಡಿಕೆ ಶಿವಕುಮಾರ್, ರಮೇಶಕುಮಾರ್ ಮತ್ತು ರೋಶನ್ ಬೇಗ್ ಅವರು ಕರ್ನಾಟಕದ ಮಂತ್ರಿಮಂಡಲದಲ್ಲಿ ಸ್ಥಾನ ಪಡೆಯಬಾರದು. ಏಕೆಂದರೆ ಅವರು ಭ್ರಷ್ಟರು. ಹಾಗಾಗಿ ಅವರನ್ನು ತಡೆಯಲು ನನ್ನ ಹೋರಾಟ ಮುಂದುವರಿಸುವೆ ಎಂದು ಹಿರೇಮಠ್ ಸ್ಪಷ್ಟಪಡಿಸಿದ್ದಾರೆ.
ಹಿರೇಮಠ್ ಅವರ ಆರೋಪಕ್ಕೆ ಸಂಬಂಧಿಸಿದಂತೆ ಯಾವ ದಾಖಲೆಯೂ ಇಲ್ಲ ಎಂದು ಸಂತೋಷ್ ಲಾಡ್, ಯಡಿಯೂರಪ್ಪ, ಜನಾರ್ದನ ರೆಡ್ಡಿ ಸೇರಿದಂತೆ ಮುಂತಾದವರು ಹೇಳುತ್ತಿದ್ದರು. ಅದೇ ರೀತಿ ರಮೇಶ್ ಕುಮಾರ್ ಸಹ ದಾಖಲೆಗಳಿಲ್ಲ ಎಂದು ಹೇಳುತ್ತಿದ್ದಾರೆ. ದಾಖಲೆ ಇಲ್ಲದೆ ಯಾವುದೇ ಆರೋಪ ಮಾಡುವುದಿಲ್ಲ. ಈ ಬಗ್ಗೆ ಕಾನೂನು ಹೋರಾಟ ಮುಂದುವರಿಸುವುದಾಗಿ ಪುನರುಚ್ಚರಿಸಿದ್ದಾರೆ.
ರಮೇಶ್ ಕುಮಾರ್ ಅವರು ಒತ್ತುವರಿ ಮಾಡಿರುವ ಅರಣ್ಯ ಭೂಮಿಯ ಸರ್ವೆ ನಡೆಸುವ ಸಂದರ್ಭದಲ್ಲಿ ಬಾಲಸುಬ್ರಹ್ಮಣ್ಯಂ ಅವರನ್ನು ಅಲ್ಲಿಗೆ ಹೋಗದಂತೆ ಒತ್ತಡ ಹೇರಲಾಗಿತ್ತು. ಒತ್ತುವರಿ ತೆರವು ಆದೇಶದಿಂದ ಇಲ್ಲಿಯವರೆಗೆ ಆ ಜಾಗ ಉಳಿಸಿಕೊಳ್ಳಲು ರಮೇಶ್ ಕುಮಾರ್ ಅವರು ಮಾಡಿರುವ ತಂತ್ರಗಳು ಅನೇಕ ಪ್ರಾಮಾಣಿಕ ಅಧಿಕಾರಿಗಳಲ್ಲಿ ಅಸಹನೆ ಮೂಡಿಸಿದೆ. ಆ ನಡುವೆಯೂ ಅವರು ಮತ್ತು ಅಧಿಕಾರಿಗಳ ತಂಡ ಅಲ್ಲಿಗೆ ಹೋಗಿ ಸರ್ವೆ ನಡೆಸಿ ಅಕ್ರಮ ಪತ್ತೆ ಹಚ್ಚಿದೆ. ಇದಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳೂ ಇವೆ.
ಎಸ್ಆರ್ ಹಿರೇಮಠ್ ಇನ್ನೂ ಏನು ಹೇಳಿದ್ದಾರೆಂದರೆ...
ಸದನದಲ್ಲಿ ಹಕ್ಕುಚ್ಯುತಿಯಂತಹ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ಆ ಮೂಲಕ ನನ್ನ ನೈತಿಕ ಸ್ಥೈರ್ಯ ಕುಗ್ಗಿಸಲು ಸಾಧ್ಯವಿಲ್ಲ. ಭ್ರಷ್ಟರ ವಿರುದ್ಧ ಹೋರಾಟವನ್ನು ಮುಂದುವರಿಸುತ್ತೇನೆ. ಮಾಜಿ ಸ್ಪೀಕರ್ ಹಾಗೂ ಶಾಸಕ ರಮೇಶ್ ಕುಮಾರ್ ಅವರು 60 ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿರುವುದು ನಿಜ. ಅವರು ಭ್ರಷ್ಟರಲ್ಲ ಎಂದು ಹೇಳಿಕೊಳ್ಳುವುದಾದರೆ ಮೊದಲು ಆ ಭೂಮಿಯನ್ನು ಸರ್ಕಾರಕ್ಕೆ ಹಿಂದಿರುಗಿಸಲಿ. ಭ್ರಷ್ಟರ ವಿರುದ್ಧ ಕೊನೆ ಉಸಿರಿರುವವರೆಗೂ ಹೋರಾಟ ಮಾಡುತ್ತೇನೆ.
ಇನ್ನು ರಮೇಶ್ ಕುಮಾರ್ ಮಂಡಿಸಿರುವ ಹಕ್ಕುಚ್ಯುತಿ ಕಾನೂನು ಪ್ರಕಾರ ಸಬಲವಾಗಿಲ್ಲ. ಬದಲಿಗೆ, ಅದರಿಂದ ಅವರು ನಮ್ಮ ಹೋರಾಟಕ್ಕೆ ಹೆಚ್ಚು ಪ್ರೇರಣೆ ನೀಡಿದರು. 60 ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿರುವ ಬಗ್ಗೆ ದಾಖಲೆಗಳು, ಬಾಲಸುಬ್ರಹ್ಮಣ್ಯಂ ವರದಿ, ಅರಣ್ಯ ಇಲಾಖೆಯವರು ಸಭೆ ನಡೆಸಿದ ಸಂದರ್ಭದಲ್ಲಿನ ಘಟನೆ ಕಣ್ಣೆದುರಿಗೇ ಇದೆ.
ಬಾಲಸುಬ್ರಹ್ಮಣ್ಯಂ ಅವರು ನೀಡಿರುವ ವರದಿ ಸಂಬಂಧ ಕ್ರಮ ಕೈಗೊಳ್ಳುವಂತೆ ಒಂದು ಸಾವಿರ ಪುಟಗಳ ದಾಖಲೆಗಳ ವಿವರಗಳನ್ನು ಈಗಾಗಲೇ ಹೈಕೋರ್ಟ್‌ಗೆ ನೀಡಲಾಗಿದೆ ಎಂದು ತಿಳಿಸಿದ ಹಿರೇಮಠರು ತತ್ಸಂಬಂಧಿತ ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.












Click it and Unblock the Notifications