ಅಫ್ಜಲ್‌ಪುರದಲ್ಲಿ ನಿಲ್ಲದ ಪಕ್ಷಾಂತರ ಪರ್ವ, ಬಿಜೆಪಿ ತೊರೆದ ಪಾಟೀಲ್
ಅಫ್ಜಲ್‌ಪುರ ಕ್ಷೇತ್ರದ ರಾಜಕೀಯ ಮೇಲಾಟಗಳು ದಿನೇ ದಿನೇ ಬೇರೆ ಬೇರೆ ರೂಪ ಪಡೆದುಕೊಳ್ಳುತ್ತಿವೆ. ಕಾಂಗ್ರೆಸ್ ಶಾಸಕ ಮಾಲೀಕಯ್ಯ ಗುತ್ತೇದಾರ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೆರ್ಪಡೆಗೊಳ್ಳುವುದಾಗಿ ಘೋಷಿಸುತ್ತಿದ್ದಂತೆ. ಇತ್ತ ಬಿಜೆಪಿಯಲ್ಲಿದ್ದ ಹಿರಿಯ ನಾಯಕ ಎಂ.ವೈ.ಪಾಟೀಲ್ ಅವರು ಪಕ್ಷ ತೊರೆದಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಮಾಲೀಕಯ್ಯ ಗುತ್ತೇದಾರ್ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿಕೊಳ್ಳಲು ಭಾರಿ ವಿರೋಧ ತೋರಿದ್ದ ಮಾಜಿ ಶಾಸಕ ಎಂ.ವೈ.ಪಾಟೀಲ್ ಅವರು ಇಂದು ತಾವು ಬಿಜೆಪಿ ತೊರೆಯುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದು, ಸಂಜೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.
2004 ರಲ್ಲಿ ಜೆಡಿಎಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ಎಂ.ವೈ.ಪಾಟೀಲ್ ಅವರು ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಮುರಿದುಬಿದ್ದ ನಂತರ ಬಿಜೆಪಿ ಸೇರಿ ಯಡಿಯೂರಪ್ಪ ಅವರ ಬಣದಲ್ಲಿ ಗುರುತಿಸಿಕೊಂಡಿದ್ದರು. ಮೂರು ಬಾರಿ ಮಾಲೀಕಯ್ಯ ಗುತ್ತೇದಾರ್ ಅವರ ಎದುರು ಸೋಲುಂಡಿರುವ ಎಂ.ವೈ.ಪಾಟೀಲ್ ಅವರು ಗುತ್ತೇದಾರ್ ಅವರ ಬಿಜೆಪಿ ಸೇರ್ಪಡೆಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದರು, ಗುತ್ತೇದಾರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಲ್ಲಿ ಪಕ್ಷ ತೊರೆಯುವುದಾಗಿ ಬಿಜೆಪಿ ನಾಯಕರಿಗೆ ಮೊದಲೇ ಎಚ್ಚರಿಕೆ ಸಹ ನೀಡಿದ್ದರು.

ಪಾಟೀಲ್ ಅವರನ್ನು ಸಮಾಧಾನಪಡಿಸಲು ಬಿಜೆಪಿ ಪ್ರಯತ್ನಿಸಿತಾದರೂ ಅದು ಫಲ ನೀಡಿದಂತಿಲ್ಲ. ಪಾಟೀಲ್ ಅವರಿಗೆ ಎಂಎಲ್‌ಸಿ ಟಿಕೆಟ್ ಕೊಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದರು. ಆದರೆ ಪಾಟೀಲ್ ಅವರು ಒಪ್ಪಿರಲಿಲ್ಲ. ನಿನ್ನೆ ತಮ್ಮ ಬೆಂಬಲಿಗರ ಸಭೆ ನಡೆಸಿದ ಅವರು ಬಿಜೆಪಿ ತೊರೆಯುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಯಡಿಯೂರಪ್ಪ ಅವರ ಅನುಯಾಯಿ ಆಗಿದ್ದ ಪಾಟೀಲ್ ಅವರು ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿ 6000 ಮತಗಳ ಅಂತರದಿಂದ ಸೋತಿದ್ದರು. ಇದೀಗ ಎಂ.ವೈ.ಪಾಟೀಲ್ ಅವರು ಕಾಂಗ್ರೆಸ್ ಸೇರ್ಪಡೆಗೊಂಡು ಬಿಜೆಪಿಯಿಂದ ಕಣ್ಣಕ್ಕಿಳಿಯುವ ತಮ್ಮ ಬಹುಕಾಲದ ರಾಜಕೀಯ ವಿರೋಧಿ ಮಾಲಕಯ್ಯ ಗುತ್ತೇದಾರ್ ಅವರ ವಿರುದ್ಧ ಮತ್ತೊಮ್ಮೆ ತೊಡೆ ತಟ್ಟಲು ತಯಾರಾದಂತಿದೆ.












Click it and Unblock the Notifications