ಯಡಿಯೂರಪ್ಪ ವಿರುದ್ಧ ಮತ್ತೊಂದು ಬಾಂಬ್ ಸಿಡಿಸಿದ ಈಶ್ವರಪ್ಪ

By: ಸೂರ್ಯಕಾಂತ್
Subscribe to Oneindia Kannada

ಕಲಬುರಗಿ, ಜನವರಿ 10 : ಭಾರತೀಯ ಜನತಾ ಪಕ್ಷದ ಬಗ್ಗೆ ತಮಗಿರುವ ನಿಷ್ಠೆ, ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಯಡಿಯೂರಪ್ಪನವರನ್ನು ಬಿಂಬಿಸುತ್ತಿರುವ, ಬೆಂಬಲಿಸುತ್ತಿರುವ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುವ ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಅವರು ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಬಿಜೆಪಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆದ್ದರೆ ಯಡಿಯೂರಪ್ಪನವರೇ ನಮ್ಮ ಮುಖ್ಯಮಂತ್ರಿ ಅಂತ ಒಂದು ಬಾರಿ ಹೇಳಿದರೆ, ಈ ನನ್ನ ಸ್ಥಿತಿಗೆ (ಅಯೋಮಯ) ಯಡಿಯೂರಪ್ಪನವರೇ ಕಾರಣ ಎಂದು ಛಕ್ಕನೆ ಬಾಣ ಬಿಟ್ಟಿರುತ್ತಾರೆ. ಈಶ್ವರಪ್ಪನವರ ಮಾತನ್ನು ನಂಬುವ ಸ್ಥಿತಿಯಲ್ಲಿ ಸದ್ಯ ಯಾವ ನಾಯಕನೂ ಇಲ್ಲ.[ನನ್ನ ಈ ಸ್ಥಿತಿಗೆ ಯಡಿಯೂರಪ್ಪ ಕಾರಣ: ಕೆಎಸ್ ಈಶ್ವರಪ್ಪ]

ಮುಖ್ಯಮಂತ್ರಿ ಗಾದಿಯ ಮೇಲೆ ಸದಾ ಕಣ್ಣಿಟ್ಟಿರುವ ಮಹತ್ವಾಕಾಂಕ್ಷಿ ರಾಜಕಾರಣಿ ಈಶ್ವರಪ್ಪ ಅವರು ಈ ಮತ್ತೊಂದು ಮಾತಿನ ವರಸೆ ಶುರುಮಾಡಿದ್ದು ಅದೆಲ್ಲಿಗೆ ಬಂದು ನಿಲ್ಲುತ್ತದೋ ಗೊತ್ತಿಲ್ಲ. ಅವರು ಹೇಳಿದ್ದೇನೆಂದರೆ, ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡುವ ಗುರಿ ರಾಯಣ್ಣ ಬ್ರಿಗೇಡ್ ಗೆ ಇಲ್ಲ!

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪುಣ್ಯತಿಥಿಯಾದ ಜನವರಿ 26 ಗಣರಾಜ್ಯೋತ್ಸವದಂದು ಬಾಗಲಕೋಟೆಯ ಕೂಡಲ ಸಂಗಮ ಕ್ಷೇತ್ರದಲ್ಲಿ ರಾಯಣ್ಣ ಬ್ರಿಗೇಡ್ ನ ಬೃಹತ್ ಸಮಾವೇಶ ಮಾಡಲು ಸಿದ್ಧತೆ ನಡೆಸಿರುವ ಈಶ್ವರಪ್ಪ, ತಮ್ಮ ಮನದಲ್ಲೇನಿದೆ ಎಂಬುದನ್ನು ಜಗಜ್ಜಾಹೀರು ಮಾಡಿದ್ದಾರೆ.[ಮುಂದಿನ ದಿನದಲ್ಲಿ ಯಾರು ಕಂಸ ತಿಳಿಯಲಿದೆ: ಬಿಎಸ್ ವೈ]

ಇದು ಯಡಿಯೂರಪ್ಪನವರಿಗೆ ತಿಳಿಯದ ವಿಷಯವೇನಲ್ಲ. ಮೇಲ್ನೋಟಕ್ಕೆ ನಮ್ಮಿಬ್ಬರ ನಡುವೆ ಯಾವುದೇ ದ್ವೇಷವಿಲ್ಲ, ಬಿಜೆಪಿಗೂ ರಾಯಣ್ಣ ಬ್ರಿಗೇಡ್ ಗೂ ಯಾವುದೇ ಸಂಬಂಧವಿಲ್ಲ ಎಂದು ಸಾರುವ ಯಡಿಯೂರಪ್ಪ, ಕೆಲ ದಿನಗಳ ಹಿಂದೆ ಬಿಜೆಪಿಯಲ್ಲಿ ಯಾರು ಕಂಸ ಎಂಬುದನ್ನು ಸಾಬೀತುಪಡಿಸುವೆ ಎಂದು ಅಬ್ಬರಿಸಿದ್ದರು.

ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚನೆ

ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚನೆ

ಕೆಲ ದಿನಗಳ ಹಿಂದೆ, ಸಂಗೊಳ್ಳಿ ರಾಯಣ್ಣನನ್ನು ನೇಣಿಗೇರಿಸಿದ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿ ನಡೆಸಿದ್ದ ರಾಯಣ್ಣ ಬ್ರಿಗೇಡ್ ಸಮಾವೇಶದಲ್ಲಿ ಯಾವ ಬಿಜೆಪಿ ನಾಯಕರೂ ಪಾಲ್ಗೊಳ್ಳಬಾರದು ಎಂದು ಬಿಜೆಪಿ ಹೈಕಮಾಂಡ್ ಸ್ಪಷ್ಟವಾಗಿ ಸಂದೇಶ ನೀಡಿತ್ತು.

ಬೂದಿ ಹಾರಿಹೋದ ಕೆಂಡದಂತೆ

ಬೂದಿ ಹಾರಿಹೋದ ಕೆಂಡದಂತೆ

ಶಿವಮೊಗ್ಗ ಜಿಲ್ಲೆಯವರಾದ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ನಡುವಿನ ಶೀತಲಸಮರ, ಬೂದಿ ಹಾರಿಹೋದ ಕೆಂಡದಂತೆ ನಿಗಿನಿಗಿ ಉರಿಯುತ್ತಲೇ ಇದೆ. ಕೆಲ ದಿನಗಳ ಹಿಂದೆ ಬರಪೀಡಿತ ಪ್ರದೇಶಗಳ ಪ್ರವಾಸ ಮಾಡುವ ತಂಡದಿಂದ ಈಶ್ವರಪ್ಪ ಅವರನ್ನು ಯಡಿಯೂರಪ್ಪ ಬೇಕಂತಲೇ ದೂರವಿಟ್ಟಿದ್ದರು.

ರಾಯಣ್ಣ ಬ್ರಿಗೇಡ್ ರಾಜಕೀಯ ಪಕ್ಷವಲ್ಲ

ರಾಯಣ್ಣ ಬ್ರಿಗೇಡ್ ರಾಜಕೀಯ ಪಕ್ಷವಲ್ಲ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದವರ ಏಳಿಗೆಗಾಗಿ ಹುಟ್ಟುಹಾಕಿರುವ ರಾಯಣ್ಣ ಬ್ರಿಗೇಡ್ ರಾಜಕೀಯ ಪಕ್ಷವಲ್ಲ, ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ ಎಂದು ಈಶ್ವರಪ್ಪ ಹೇಳಿದ್ದರೂ, ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯಾಗಿ ಬೆಂಬಲಿಸುವುದಿಲ್ಲ ಎಂದು ಹೇಳಿದ್ದರ ಹಿಂದಿನ ತಂತ್ರ ಏನಿದೆಯೋ?

ಇವರಿಬ್ಬರ ನಡುವಿನ ಯುದ್ಧಕ್ಕೆ ಕಹಳೆ

ಇವರಿಬ್ಬರ ನಡುವಿನ ಯುದ್ಧಕ್ಕೆ ಕಹಳೆ

ಆಗಸ್ಟ್ ತಿಂಗಳಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಗೆ ಈಶ್ವರಪ್ಪ ಚಾಲನೆ ನೀಡಿದಾಗಲೇ, ಇವರಿಬ್ಬರ ನಡುವಿನ ಯುದ್ಧಕ್ಕೆ ಕಹಳೆಯೂದಿಯಾಗಿತ್ತು. ಯಡಿಯೂರಪ್ಪನವರನ್ನು ಬಗ್ಗುಬಡಿಯಲೆಂದೇ ರಾಯಣ್ಣ ಬ್ರಿಗೇಡ್ ಈಶ್ವರಪ್ಪ ಸ್ಥಾಪಿಸಿದ್ದೆಂದು ಶಾಲಾ ಮಕ್ಕಳು ಕೂಡ ಅಧಿಕಾರಯುತವಾಗಿ ಹೇಳುತ್ತಾರೆ.

ಕವಡೆ ಕಾಸಿನ ಕಿಮ್ಮತ್ತು ನೀಡಿರಲಿಲ್ಲ

ಕವಡೆ ಕಾಸಿನ ಕಿಮ್ಮತ್ತು ನೀಡಿರಲಿಲ್ಲ

ರಾಜ್ಯಾಧ್ಯಕ್ಷರಾಗಿ ಯಡಿಯೂರಪ್ಪನವರು ಅಧಿಕಾರ ಸ್ವೀಕರಿಸಿದ ಮೇಲೆ ಪದಾಧಿಕಾರಿಗಳನ್ನು ನೇಮಕ ಮಾಡುವಾಗ ಈಶ್ವರಪ್ಪನವರ ಮಾತಿಗೆ ಕವಡೆಕಾಸಿನ ಕಿಮ್ಮತ್ತು ನೀಡಿರಲಿಲ್ಲ. ಏಕಪಕ್ಷೀಯ ನಿರ್ಧಾರವನ್ನು ಪ್ರಶ್ನಿಸಿ ಈಶ್ವರಪ್ಪನವರು ಅಂದೇ ಯಡಿಯೂರಪ್ಪನವರ ವಿರುದ್ಧ ಸಿಡಿದೆದ್ದಿದ್ದರು.

ಈಶ್ವರಪ್ಪಗೆ ಯಡಿಯೂರಪ್ಪ ಕಟ್ಟೆಚ್ಚರ

ಈಶ್ವರಪ್ಪಗೆ ಯಡಿಯೂರಪ್ಪ ಕಟ್ಟೆಚ್ಚರ

ಈ ನಡುವೆ, ಯಾರೇ ನಾಯಕರು, ಅವರು ಎಷ್ಟೇ ಪ್ರಭಾವಶಾಲಿಯಾಗಿರಲಿ, ಪಕ್ಷವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವುದು ಸಾಬೀತಾದರೆ ನಿರ್ದಾಕ್ಷಿಣ್ಯವಾಗಿ ಕಿತ್ತುಹಾಕಲಾಗುವುದು ಎಂದು ಯಡಿಯೂರಪ್ಪ ಕಟ್ಟೆಚ್ಚರಿಕೆ ನೀಡಿದ್ದಾರೆ. ಇವರಿಬ್ಬರ ಕಾದಾಟವನ್ನು ಉಳಿದವರು ತಣ್ಣಗೆ ಕುಳಿತು ನೋಡುತ್ತಿದ್ದಾರೆ.

ಬಿಜೆಪಿ ಹೈಕಮಾಂಡ್ ಗೆ ತಿಳಿಯದ ಸಂಗತಿಯೇನಲ್ಲ

ಬಿಜೆಪಿ ಹೈಕಮಾಂಡ್ ಗೆ ತಿಳಿಯದ ಸಂಗತಿಯೇನಲ್ಲ

ಕರ್ನಾಟಕದ ಬಿಜೆಪಿಯಲ್ಲಿ ಇಷ್ಟೆಲ್ಲ ನಡೆಯುತ್ತಿದ್ದರೂ ಬಿಜೆಪಿ ಹೈಕಮಾಂಡ್ ಕೈಕಟ್ಟಿ ಕುಳಿತಿಲ್ಲ. ಇಬ್ಬರ ಸಂಧಾನಕ್ಕೆ ಸಾಕಷ್ಟು ಪ್ರಯತ್ನ ನಡೆಸಿದೆ. ಪಕ್ಷವಿರೋಧಿ ಚಟುವಟಿಕೆ ನಡೆಸಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದೆ. ಆದರೂ, ದೆಹಲಿಯ ಹಿರಿಯ ನಾಯಕರು ಯಾಕೋ ಅಷ್ಟು ಮುತುವರ್ಜಿ ವಹಿಸಿದಂತೆ ಕಾಣಿಸುತ್ತಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former deputy chief minister of Karnataka, opposition leader KS Eshwarappa has fired another salvo against BJP's chief ministerial candidate BS Yeddyurappa in Kalaburagi, by saying Rayanna Brigade will not support Yeddyurappa for CM post.
Please Wait while comments are loading...