ಬ್ಯಾಂಕ್‌ಗೆ ಹಣ ತುಂಬುವಾಗ ಫೈರಿಂಗ್: ಎಟಿಎಂ ದರೋಡೆ ಮಾಡಿದ ಆರೋಪಿಗಳ ಬಂಧನಕ್ಕೆ: ಈಶ್ವರ ಖಂಡ್ರೆ ಸೂಚನೆ
ಬೆಂಗಳೂರು, ಜನವರಿ 16: ಬೀದರ್ ನ ಭಾರತೀಯ ಸ್ಟೇಟ್ ಬ್ಯಾಂಕ್ ಬಳಿ ಇಂದು ಹಾಡು ಹಗಲೇ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಇಬ್ಬರು ಸಿಬ್ಬಂದಿಯನ್ನು ಕೊಂದು ಹಣ ದರೋಡೆ ಮಾಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಆರೋಪಿಗಳ ಬಂಧನಕ್ಕೆ ತುರ್ತು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿರುವುದು ತೀವ್ರ ನೋವಿನ ಸಂಗತಿ. ಮೃತರ ಕುಟುಂಬದವರಿಗೆ ಈ ದುಃಖ ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದ ಅವರು, ಈ ನೋವಿನ ಸಂದರ್ಭದಲ್ಲಿ ಸರ್ಕಾರ ಕುಟುಂಬದ ಜೊತೆ ನಿಲ್ಲುತ್ತದೆ ಎಂದು ತಿಳಿಸಿದರು.

ವಿಷಯ ತಿಳಿದ ಕೂಡಲೇ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರೊಂದಿಗೆ ಹಾಗೂ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ತಾವು ಮಾತನಾಡಿದ್ದು, ದುಷ್ಕರ್ಮಿಗಳ ಬಂಧನಕ್ಕೆ ತುರ್ತು ಕ್ರಮ ಕೈಗೊಳ್ಳುವಂತೆ ಮತ್ತು ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಹಾಗೂ ಶಾಂತಿ ಸುವ್ಯವಸ್ಥೆಗೆ ಭಂಗ ಬಾರದಂತೆ ಕ್ರಮ ವಹಿಸಲು ಸೂಚಿಸಿರುವುದಾಗಿ ತಿಳಿಸಿದರು. ಎ.ಟಿ.ಎಂ.ಗೆ ಹಣ ಸಾಗಿಸುವಾಗ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕಿತ್ತು, ಏನು ಲೋಪ ಆಗಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುವುದು, ನಾಳೆ ತಾವು ಬೀದರ್ ಗೆ ತೆರಳುತ್ತಿದ್ದು, ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವುದಾಗಿ ತಿಳಿಸಿದರು.
ರಾಜ್ಯವೇ ಬೆಚ್ಚಿ ಬೀಳುವಂತೆ ಮಾಡಿದೆ: ಬೊಮ್ಮಾಯಿ
ಇನ್ನೂ ಈ ಘಟನೆ ಕುರಿತು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮಾಡಿದ್ದು, ಬೀದರನಲ್ಲಿ ಹಾಡ ಹಗಲೇ ಎಟಿಎಂಗೆ ಹಣ ತುಂಬಲು ಬಂದವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವುದು ರಾಜ್ಯವೇ ಬೆಚ್ಚಿ ಬೀಳುವಂತೆ ಮಾಡಿದೆ.
ರಾಜ್ಯದಲ್ಲಿ ದಿನನಿತ್ಯ ಹಗಲು ದರೋಡೆ, ಪುಟ್ಟ ಮಕ್ಕಳ ಮೇಲೆ ಅತ್ಯಾಚಾರದಂತ ಅಪರಾಧ ಕೃತ್ಯಗಳು ರಾಜಾರೋಷವಾಗಿ ನಡೆಯುತ್ತಿದ್ದು, ಆಡಳಿತ ನಡೆಸುವವರು ಕುರ್ಚಿಗಾಗಿ ಕಿತ್ತಾಟ ನಡೆಸುವುದರಲ್ಲಿ ನಿರತರಾಗಿದ್ದು, ಸರ್ಕಾರಕ್ಕೆ ಪೊಲೀಸರ ಮೇಲೆ ನಿಯಂತ್ರಣ ಇಲ್ಲದಂತಾಗಿದೆ. ಪೊಲಿಸರಿಗೆ ಕ್ರಿಮಿನಲ್ ಗಳ ಮೇಲೆ ನಿಯಂತ್ರಣ ಇಲ್ಲದಂತಾಗಿದ್ದು, ಅಪರಾಧ ಮಾಡುವವರಿಗೆ ಯಾರದೇ ಭಯವಿಲ್ಲದಂತಾಗಿದೆ. ಇದರಿಂದ ಕರ್ನಾಟಕ ಜಂಗಲ್ ರಾಜ್ಯ ಆಗಿದೆ. ಈ ಸರ್ಕಾರದ ಅವಧಿಯಲ್ಲಿ ಮೂಕ ಪ್ರಾಣಿಗಳು, ಮನುಷ್ಯರು ಯಾರಿಗೂ ರಕ್ಷಣೆ ಇಲ್ಲದಂತಾಗಿದೆ. ರಾಜ್ಯ ಸರ್ಕಾರ ತಪ್ಪಿತಸ್ಥರ ಮೇಲೆ ಕೂಡಲೇ ಕ್ರಮ ಕೈಗೊಂಡು ಕಠಿಣ ಶಿಕ್ಷೆ ನೀಡಬೇಕು. ಇಲ್ಲದಿದ್ದರೆ ರಾಜ್ಯದ ಜನರು ದಂಗೆ ಏಳುತ್ತಾರೆ.












Click it and Unblock the Notifications