ಲೋಕಾಯುಕ್ತ ಜೊತೆಗೆ ಸಿಎಂ ಸಿದ್ದರಾಮಯ್ಯಗೆ EDಯಿಂದಲೂ ಶಾಕ್!
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನಗಳ ಹಂಚಿಕೆ ಪ್ರಕರಣವು ಸಿಎಂ ಸಿದ್ದರಾಮಯ್ಯ ಅವರಿಗೆ ಪಾಶದಂತೆ ಸುತ್ತಿಕೊಳ್ಳುತ್ತಿದೆ. ಕೋರ್ಟ್ ನಿರ್ದೇಶನದ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ಈಗಾಗಲೇ ಸಿದ್ದರಾಮಯ್ಯ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ, ಎ1 ಆರೋಪಿ ಮಾಡಿದ್ದಾರೆ.
ಈಗ ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಅವರ ಚಲನವಲನಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಕೂಡ ಹದ್ದಿನಕಣ್ಣಿಟ್ಟಿದ್ದು, ಶೀಘ್ರದಲ್ಲೇ ಸಿಎಂ ಆಪ್ತರ ನಿವಾಸಗಳು ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಿದೆ ಎಂದು ವರದಿಯಾಗಿದೆ. ಮುಡಾದ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿರುವ ಆರೋಪ ಸಂಬಂಧ ಜಾರಿ ನಿರ್ದೇಶನಾಲಯ ಕೂಡ ಇಸಿಐಆರ್ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಹಾಗಾಗಿ ಇಡಿ ಅಧಿಕಾರಿಗಳು ಸಿದ್ದರಾಮಯ್ಯ ಅವರಿಗೆ ಯಾವುದೇ ಕ್ಷಣದಲ್ಲಾದರೂ ನೋಟಿಸ್ ನೀಡಿ, ವಿಚಾರಣೆ ನಡೆಸಲಿದೆ. ಜೊತೆಗೆ ಸಿಎಂ ಸಿದ್ದರಾಮಯ್ಯ ಅವರ ನಿವಾಸ, ಕಚೇರಿಗಳ ಮೇಲೂ ದಾಳಿ ಮಾಡಿ ಪರಿಶೀಲನೆ ನಡೆಸಲು ಮುಂದಾಗಿದೆ ಎನ್ನಲಾಗಿದೆ. ಈ ಸಂಬಂಧ ಈಗಾಗಲೇ ಇಡಿ ಅಧಿಕಾರಿಗಳು ಭರದ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಸಿಎಂ ಆಪ್ತರ ಮೇಲೆ ನಿಗಾ ಇಟ್ಟಿದ್ದಾರೆ. ಅಲ್ಲದೆ ಸಿಎಂ ಸಿದ್ದರಾಮಯ್ಯ ಅವರಿಗೆ ಯಾರೆಲ್ಲ ಹತ್ತಿರದಲ್ಲಿದ್ದರು ಎಂಬ ಮಾಹಿತಿ ಕಲೆ ಹಾಕಿದ್ದಾರಂತೆ.
ಶೀಘ್ರದಲ್ಲೇ ದಾಳಿ ನಡೆಸುವ ಸಂಬಂಧ ಎಲ್ಲ ಸಿದ್ಧತೆ ನಡೆದಿದ್ದು, ರಾಜ್ಯದ ವಿವಿಧೆಡೆ ಕಾರ್ಯಾಚರಣೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರ ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ, ಹಣ ವರ್ಗಾವಣೆ ಸೇರಿದಂತೆ ಮಹತ್ವದ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಒಂದೆಡೆ ಲೋಕಾಯುಕ್ತ ಅಧಿಕಾರಿಗಳು ಸಿಎಂ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಫೀಲ್ಡಿಗಿಳಿದಿದ್ದು, ಮತ್ತೊಂದೆಡೆ ಇಡಿ ಅಧಿಕಾರಿಗಳು ಕೂಡ ಸಿದ್ದರಾಮಯ್ಯ ಅವರನ್ನು ಲಾಕ್ ಮಾಡಲು ಮುಂದಾಗಿದೆ.

ಈಗಾಗಲೇ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿ ತನಿಖೆ ಕೂಡ ಶುರುವಾಗಿದೆ. ಈ ಬೆನ್ನಲ್ಲೇ ಸಿದ್ದರಾಮಯ್ಯ ಅವರಿಗೆ ಇಡಿಯಿಂದಲೂ ಸಂಕಷ್ಟ ಎದುರಾಗಿದೆ. ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಪ್ರಕರಣ ದಾಖಲಿಸಿಕೊಂಡಿದೆ.
ಜಾರಿ ನಿರ್ದೇಶನಾಲಯದ ಇಸಿಐಆರ್ ಎನ್ನುವುದು ಪೊಲೀಸರ ಎಫ್‌ಐಆರ್‌ಗೆ ಸರಿಸಮಾನವಾದ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಸೆಕ್ಷನ್‌ಗಳ ವ್ಯಾಪ್ತಿಗೆ ಒಳಪಡುತ್ತದೆ. ಇಸಿಐಆರ್ ದಾಖಲಾದ ಬಳಿಕ ಆರೋಪಿಗಳನ್ನು ವಿಚಾರಣೆಗೆ ಕರೆಯುವ ಅಧಿಕಾರವನ್ನು ಜಾರಿ ನಿರ್ದೇಶನಾಲಯ ಹೊಂದಿರುತ್ತದೆ. ತನಿಖೆಯ ಸಂದರ್ಭದಲ್ಲಿ ಅಕ್ರಮ ನಡೆದಿರುವ ಮುನ್ಸೂಚನೆ ಸಿಕ್ಕರೆ, ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಕೂಡ ಇವರಿಗೆ ಇರುತ್ತದೆ.
ಮುಡಾದಿಂದ ಸಿಎಂ ಸಿದ್ದರಾಮಯ್ಯನವರ ಪತ್ನಿಗೆ 14 ನಿವೇಶನ ಹಂಚಿಕೆ ಮಾಡುವಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪವಿತ್ತು. ಈ ಸಂಬಂಧ ಸಿಎಂ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದರು. ಇದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು, ಆದರೆ ಹೈಕೋರ್ಟ್ ಸಿಎಂ ಸಿದ್ದರಾಮಯ್ಯ ಅವರ ಅರ್ಜಿಯನ್ನು ತಿರಸ್ಕರಿಸಿತ್ತು.
ನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ನಿರ್ದೇಶನ ನೀಡಿತ್ತು. ಅದರಂತೆ ಸಿದ್ದರಾಮಯ್ಯ ಹಾಗೂ ಅವರ ಆಪ್ತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.












Click it and Unblock the Notifications