ವಿದ್ಯುತ್ ಬಿಲ್ ಹೆಚ್ಚು ಬಂದಿದೆಯೇ?; ಇಲ್ಲಿದೆ ನೋಡಿ ಸ್ಪಷ್ಟನೆ
ಬೆಂಗಳೂರು, ಜೂನ್ 16: ಕರ್ನಾಟಕದಲ್ಲಿ ಆಗಸ್ಟ್‌ನಿಂದ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್‌ಗಳವರೆಗೆ ಉಚಿತವಾಗಿ ವಿದ್ಯುತ್ ನೀಡುವ 'ಗೃಹಜ್ಯೋತಿ' ಯೋಜನೆ ಜಾರಿಗೆ ಬರಲಿದೆ. ಆದರೆ ಇದಕ್ಕೂ ಮೊದಲು ವಿದ್ಯುತ್ ದರ ಏರಿಕೆಯಾಗಿದೆ. ಈ ತಿಂಗಳು ಬಂದಿರುವ ಬಿಲ್ ನೋಡಿ ಜನರು ಕಂಗಾಲಾಗಿದ್ದಾರೆ.
ವಿದ್ಯುತ್ ದರ ಏರಿಕೆ ರಾಜ್ಯದಲ್ಲಿ ರಾಜಕೀಯ ಸ್ವರೂಪ ಪಡೆದಿದೆ. ಪ್ರತಿಪಕ್ಷ ಬಿಜೆಪಿ ಮತ್ತು ಆಡಳಿತ ಪಕ್ಷ ಕಾಂಗ್ರೆಸ್ ನಾಯಕರ ನಡುವಿನ ಜಟಾಪಟಿಗೆ ಕಾರಣವಾಗಿದೆ. ಮತ್ತೊಂದು ಕಡೆ ಉದ್ಯಮಿಗಳು ಸಹ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದು, ಬಿಲ್ ಕಡಿಮೆ ಮಾಡಿ ಎಂದು ಒತ್ತಾಯಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 'ಇಂಧನ ದರ ಏರಿಕೆಯನ್ನು ಹಿಂದಿನ ಸರ್ಕಾರ ಮಾಡಿದೆ ಎಂದು @siddaramaiah ಸುಳ್ಳು ಹೇಳಿ ಜನರನ್ನು ವಂಚಿಸುತ್ತಿದ್ದಾರೆ. ಇಂಧನ ದರ ಏರಿಕೆಯ ಬಗ್ಗೆ ಜೂನ್ 02 ರಂದು ಅಧಿಕೃತ ಆದೇಶ ಹೊರ ಬಂದಿದೆ. ಜೂನ್ 02 ನೇ ತಾರೀಖು ಯಾರ ಸರ್ಕಾರ ಇತ್ತು ಎಂಬುದನ್ನು ರಾಜ್ಯದ ಜನತೆ ಗಮನಿಸಬೇಕು' ಎಂದು ಟ್ವೀಟ್ ಮಾಡಿ ಸರ್ಕಾರವನ್ನು ಟೀಕಿಸಿದ್ದಾರೆ.
ಇಂಧನ ಇಲಾಖೆ ಸ್ಪಷ್ಟನೆ; ಬೆಸ್ಕಾಂ ಸೇರಿದಂತೆ ಎಲ್ಲಾ ವಿದ್ಯುತ್ ಸರಬರಾಜು ನಿಗಮಗಳಲ್ಲಿ ಈ ತಿಂಗಳ ವಿದ್ಯುತ್ ಬಿಲ್‌ನಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಇಂಧನ ಇಲಾಖೆ ವಿದ್ಯುತ್ ದರ ಪರಿಷ್ಕರಣೆ/ ಏರಿಕೆ ಎಂಬ ವಿಚಾರಲ್ಲಿ ಜನರಿಗೆ ಸ್ಪಷ್ಟೀಕರಣವನ್ನು ನೀಡಿದೆ. ಈ ಮೂಲಕ ಜನರ ಗೊಂದಲ ಬಗೆಹರಿಸುವ ಕೆಲಸ ಮಾಡಿದೆ.
* ಭಾರತೀಯ ವಿದ್ಯುಚ್ಚಕ್ತಿ ಕಾಯ್ದೆಯ ಅನ್ವಯ ವಿದ್ಯುತ್ ಸರಬರಾಜು ಕಂಪನಿಗಳಿಗೆ ವಿದ್ಯುತ್ ದರವನ್ನು ನಿಗದಿಪಡಿಸಲು ಎಲ್ಲಾ ರಾಜ್ಯಗಳು ವಿದ್ಯುತ್ ನಿಯಂತ್ರಣ ಆಯೋಗ ಸ್ಥಾಪಿಸಬೇಕು.
* ಹಾಗಾಗಿ ರಾಜ್ಯದ ಎಲ್ಲಾ 5 ವಿದ್ಯುತ್ ಸರಬರಾಜು ಕಂಪನಿಗಳಿಗೆ ವಿದ್ಯುತ್ ದರ ನಿಗದಿ ಪಡಿಸಲು 2002ರಲ್ಲಿ ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ರಚಿಸಲಾಯಿತು.
* ಎಲ್ಲಾ ಎಸ್ಕಾಂಗಳು ತಮ್ಮ ವೆಚ್ಚದ ಮೇಲಿನ ನಿರೀಕ್ಷಿತ ಆದಾಯದ ವಿವರಗಳನ್ನು (ERC Filing) ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಕೆಇಆರ್‌ಸಿಗೆ ಸಲ್ಲಿಸಬೇಕು.
* ಇದನ್ನು ಪರಿಶೀಲಿಸಿ, ಎಲ್ಲಾ ಎಸ್ಕಾಂಗಳು ಮತ್ತು ಸಾರ್ವಜನಿಕರ ಆಹವಾಲುಗಳನ್ನು ಆಲಿಸಿ ಕೆಇಆರ್‌ಸಿಯು ಆರ್ಥಿಕ ವರ್ಷದ ಮಾರ್ಚ್ ಅಂತ್ಯದಲ್ಲಿ ವಿದ್ಯುತ್ ದರವನ್ನು ಏಪ್ರಿಲ್ 1 ರಿಂದ ಅನ್ವಯವಾಗುವಂತೆ ದರವನ್ನು ನಿಗದಿ ಪಡಿಸುತ್ತದೆ.
* ಕರ್ನಾಟಕ ವಿಧಾನಸಭೆಗೆ ಚುನಾವಣೆ ಘೋಷಣೆ ಹಾಗೂ ಚುನಾವಣೆಗೆ ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ ಪ್ರಸಕ್ತ ವರ್ಷದ ವಿದ್ಯುತ್ ದರ ಪರಿಷ್ಕರಣೆ ಅಧಿಸೂಚನೆಯನ್ನು ಕೆಇಆರ್‌ಸಿಯು ದಿನಾಂಕ 12/05/2023ರಂದು ಹೊರಡಿಸಿತು.
* ರಾಜ್ಯದಲ್ಲಿ ಹೊಸ ಸರ್ಕಾರವನ್ನು ದಿನಾಂಕ 20/05/2023 ರಂದು ರಚಿಸಲಾಯಿತು. ಅಂದರೆ ವಿದ್ಯುತ್ ದರ ಪರಿಷ್ಕರಣೆ ಅಧಿಸೂಚನೆಯನ್ನು ನೂತನ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನವೇ ಘೋಷಿಸಲಾಗಿತ್ತು.
* ವಿದ್ಯುತ್ ದರ ಪರಿಷ್ಕರಣೆಯು ಜೂನ್ 2023ರ ಬಿಲ್ಲಿಂಗ್ ನಿಂದ ಅನ್ವಯವಾಗುವಂತೆ ಜಾರಿಗೆ ಬಂದಿದ್ದು, ಈ ಕೆಳಗಿನ ಎರಡು ಕಾರಣಗಳಿಂದಾಗಿ ಜೂನ್ ತಿಂಗಳ ಬಿಲ್ಲಿನಲ್ಲಿ ವಿದ್ಯುತ್ ಶುಲ್ಕ ಹೆಚ್ಚಾಗಿರುವಂತೆ ಕಂಡುಬರುತ್ತದೆ.
* ಎರಡು ತಿಂಗಳ ವಿದ್ಯುತ್ ದರ ಹೆಚ್ಚಳದ ಪರಿಣಾಮ, ಮಾರ್ಚ್ 2023ರಲ್ಲಿ ಹೆಚ್ಚಿನ ವಿದ್ಯುತ್ ಖರೀದಿ ವೆಚ್ಚ ಪಾವತಿಗಳ ಪರಿಣಾಮ ನಂತರದ ತಿಂಗಳುಗಳಲ್ಲಿ ಬರುವ ವಿದ್ಯುತ್ ಬಿಲ್ ತುಲನಾತ್ಮಕವಾಗಿ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
* ರಾಜ್ಯ ಸರ್ಕಾರ ಜಾರಿಗೆ ತಂದಿರುವ 'ಗೃಹಜ್ಯೋತಿ' ಯೋಜನೆಯಡಿಯಲ್ಲಿ ಜುಲೈ ತಿಂಗಳ ವಿದ್ಯುತ್ ಬಳಕೆಗೆ ಆಗಸ್ಟ್ ತಿಂಗಳ ಬಿಲ್‌ನಲ್ಲಿ ಸಹಾಯಧನವನ್ನು ಗೃಹ ಬಳಕೆ ಗ್ರಾಹಕರಿಗೆ ನೀಡಲು ನಿರ್ಧರಿಸಲಾಗಿದೆ.
* ಗ್ರಾಹಕರ ನ್ಯಾಯಯುತ ದೂರುಗಳನ್ನು ಬಗೆಹರಿಸಲು ಎಲ್ಲಾ ಎಸ್ಕಾಂಗಳಿಗೆ ನಿರ್ದೇಶನ ನೀಡಲಾಗಿದೆ. ಸಂದರ್ಭಕ್ಕನುಗುಣವಾಗಿ ಗ್ರಾಹಕರಿಗೆ ಬಿಲ್ ಪಾವತಿಸಲು ಎಸ್ಕಾಂಗಳು ಕಾಲಾವಕಾಶವನ್ನು ನೀಡಬಹುದು.
* 'ಗೃಹಜ್ಯೋತಿ' ಯೋಜನೆಯಡಿಯಲ್ಲಿ ಗೃಹ ಬಳಕೆ ಗ್ರಾಹಕರಿಗೆ ಹಿಂಬಾಕಿಯನ್ನು ಪಾವತಿಸಲು ಸೆಪ್ಟೆಂಬರ್ 2023ರ ವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಸ್ಪಷ್ಟನೆಗಳನ್ನು ನೀಡಲಾಗಿದೆ.
ಒಂದು ವೇಳೆ ವಿದ್ಯುತ್ ಬಿಲ್ ಕುರಿತು ಯಾವುದೇ ಗೊಂದಲವಿದ್ದರೆ 24X7ಸಹಾಯವಾಣಿ 1912 ಸಂಪರ್ಕಿಸಬಹುದು ಎಂದು ಇಂಧನ ಇಲಾಖೆ ಹೇಳಿದೆ.












Click it and Unblock the Notifications