ಎಂಪೈರ್ ವಿರುದ್ಧ 40 ಪೈಸೆ ಕೇಸು: ದಾವೆ ಹೂಡಿದ್ದ ವಕೀಲ್ ಸಾಬ್‌ಗೆ 4 ಸಾವಿರ ರೂ. ದಂಡ !
ಬೆಂಗಳೂರು, ಮಾ. 12: ಒಂದು ಬಿರಿಯಾನಿಗೆ ಹೆಚ್ಚುವರಿಯಾಗಿ 40 ಪೈಸೆ ಪಡೆದಿದ್ದಾರೆ ಎಂದು ಆರೋಪಿಸಿ ವಕೀಲ, ಸಾಮಜಿಕ ಕಾರ್ಯಕರ್ತ ನರಸಿಂಹಮೂರ್ತಿ ಎಂಪೈರ್ ಹೋಟೆಲ್ ವಿರುದ್ಧ ದಾಖಲಿಸಿದ್ದ ದಾವೆ ಇತ್ಯರ್ಥವಾಗಿದೆ. ದೂರುದಾರ ವಕೀಲ ನರಸಿಂಹಮೂರ್ತಿ ಅವರಿಗೆ ನಾಲ್ಕು ಸಾವಿರ ದಂಡ ವಿಧಿಸಿ ಗ್ರಾಹಕ ವೇದಿಕೆ ನ್ಯಾಯಾಲಯ ಪ್ರಕರಣವನ್ನು ವಜಾ ಮಾಡಿದೆ.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಬೆಂಗಳೂರು 1 ನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವೇದಿಕೆ ನ್ಯಾಯಾಲಯ, ಮಾ. 04 ರಂದು ತೀರ್ಪು ನೀಡಿದೆ. ಈ ತೀರ್ಪಿನ ಸಾರಾಂಶಕ್ಕಿಂತಲೂ ಮೊದಲು ಪ್ರಕರಣದ ವಿವರ ಇಲ್ಲಿ ನೀಡಲಾಗಿದೆ.
ಏನಿದು ಪ್ರಕರಣ:
ದೂರುದಾರ ನರಸಿಂಹಮೂರ್ತಿ ಅವರು 2021 ಮಾ. 21 ರಂದು ಸೆಂಟ್ರಲ್ ಸ್ಟ್ರೀನ್ ನಲ್ಲಿರುವ ಎಂಪೈರ್ ಹೋಟೆಲ್ಗೆ ಹೋಗಿ ಎರಡು ಬಿರಿಯಾನಿ ಅರ್ಡರ್ ಮಾಡಿದ್ದರು. ಒಂದು ಬಿರಿಯಾನಿ ಬೆಲೆ 264.60 ಪೈಸೆ ಇತ್ತು. ಎಂಪೈರ್ ಹೋಟೆಲ್ ಸಿಬ್ಬಂದಿ 40 ಪೈಸೆ ಚಿಲ್ಲರೆ ಕೊಡಲಾಗದೇ ಒಂದು ಬಿರಿಯಾನಿಗೆ ತಲಾ 265 ರೂ. ವಿಧಿಸಿದ್ದರು. ಈ ವೇಳೆ ಎರಡು ಬಿರಿಯಾನಿಯಿಂದ 80 ಪೈಸೆ ಹೆಚ್ಚುವರಿಯಾಗಿ ಪಡೆದ ಬಗ್ಗೆ ನರಸಿಂಹಮೂರ್ತಿ ಹೋಟೆಲ್ ಸಿಬ್ಬಂದಿಯನ್ನು ಪ್ರಶ್ನಿಸಿದ್ದರು. ಇದಕ್ಕೆ ಯಾರೂ ಸಮರ್ಥ ಉತ್ತರ ನೀಡಿರಲಿಲ್ಲ. ಹೀಗಾಗಿ 40 ಪೈಸೆ ರೌಂಡಪ್ ಮಾಡಿ ಹೆಚ್ಚುವರಿ 80 ಪೈಸೆ ಎರಡು ಬಿರಿಯಾನಿಗೆ ಪಡೆದ ಎಂಪೈರ್ ಹೋಟೆಲ್ ವಿರುದ್ಧ ವಕೀಲ ನರಸಿಂಹಮೂರ್ತಿ ಬೆಂಗಳೂರಿನ ಒಂದನೇ ಹೆಚ್ಚುವರಿ ಗ್ರಾಹಕ ನ್ಯಾಯಾಲಯದಲ್ಲಿ ದಾವೆ ಹೂಡಿದಿದ್ದರು. ನನ್ನಿಂದ ಹೆಚ್ಚುವರಿಯಾಗಿ ಸಂಗ್ರಹ ಪಡೆದ ಬಿಲ್ ಮೊತ್ತ 80 ಪೈಸೆ ಕೊಡಿಸಿ ಎಂದು ಅವರು ಗ್ರಾಹಕ ಹಿತರಕ್ಷಣಾ ಕಾಯ್ದೆ ಉಲ್ಲೇಖಿಸಿ ನ್ಯಾಯಾಲಯದ ಮುಂದೆ ಮನವಿ ಮಾಡಿ ತನ್ನ ವಾದ ಮಂಡಿಸಿದ್ದರು.

ಇದಕ್ಕೆ ಪ್ರತಿವಾದ ಮಂಡಿಸಿದ್ದ ಎಂಪೈರ್ ಪರ ಹೋಟೆಲ್‌ನ ವಕೀಲರಾದ ಅನ್ಶುಮಾನ್ ಅವರು, ಸೆಂಟ್ರಲ್ ಗೂಡ್ಸ್ ಅಂಡ್ ಸರ್ವೀಸ್ ಕಾಯ್ದೆ 2017 ರ ಪ್ರಕಾರ 50 ಪೈಸೆ ಒಳಗೆ ಇದ್ದರೆ, ಅದನ್ನು ರೌಂಡಪ್ ಮಾಡಲಾಗುತ್ತದೆ. ಒಂದು ವೇಳೆ 50 ಪೈಸೆ ಮೇಲ್ಪಟ್ಟು ಇದ್ದರೆ, ಅದನ್ನು ಹೆಚ್ಚುವರಿ ಒಂದು ರೂಪಾಯಿ ಎಂದು ಪರಿಗಣಿಸಿ ಪಡೆಯಲಾಗುತ್ತದೆ. ಇದರಲ್ಲಿ ದೂರುದಾರರು ಹೇಳಿರುವಂತೆ ಹೋಟೆಲ್‌ನ ಸೇವೆಯಲ್ಲಿ ತೊಂದರೆ ಆಗಿಲ್ಲ. ಹೀಗಾಗಿ ದೂರನ್ನು ವಜಾ ಮಾಡಿ ಎಂದು ಮನವಿ ಮಾಡಿದ್ದರು. ಅಲ್ಲದೇ 5, 10, 25, 50 ಪೈಸೆಯನ್ನು ಆರ್‌ಬಿಐ ರದ್ದು ಪಡಿಸಿರುವ ಬಗ್ಗೆ ಹಾಗೂ ಬಿಲ್ ರೌಂಡಪ್ ವಾಸ್ತವಿಕತೆ ಬಗ್ಗೆ ನ್ಯಾಯಾಲಯಕ್ಕೆ ಎಂಪೈರ್ ಪರ ವಕೀಲರಾದ ಅಂಶುಮಾನ್ ಮತ್ತು ಆದಿತ್ಯಾ ಪೌಲ್ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.

ಈ ಪ್ರಕರಣದ ವಾದ ಪ್ರತಿವಾದ ಆಲಿಸಿ, ಲಭ್ಯವಿರುವ ಸಾಕ್ಷಾಧಾರಗಳನ್ನು ಪರಿಗಣಿಸಿ ಬೆಂಗಳೂರಿನ ಒಂದನೇ ಹೆಚ್ಚುವರಿ ಗ್ರಾಹಕ ವೇದಿಕೆ ವಕೀಲ ನರಸಿಂಹಮೂರ್ತಿ ಅವರು ಎಂಫೈರ್ ಹೋಟೆಲ್ ವಿರುದ್ಧ 80 ಪೈಸೆ ಗಾಗಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.

ಐದು ಪುಟಗಳ ತೀರ್ಪು
ಈ ಕುರಿತು ಐದು ಪುಟಗಳ ತೀರ್ಪು ನೀಡಿರುವ ನ್ಯಾಯಾಲಯ, ಹೋಟೆಲ್ ನ ಸೇವೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಉಳಿದ 40 ಪೈಸೆ ಹೆಚ್ಚುವರಿಯಾಗಿ ರೌಂಡಪ್ ಮಾಡಿದ ವಿಚಾರ ನಿರ್ಲಕ್ಷ್ಯಸುವಂತದ್ದು. ಮಿಗಿಲಾಗಿ, ಕೇಂದ್ರ ಸರ್ಕಾರ 1 ಪೈಸೆ, 5 ಪೈಸೆ, 10, 20, 50 ಪೈಸೆ ಚಲಾವಣೆ ರದ್ದು ಮಾಡಿದೆ. ಹೀಗಾಗಿ ಐವತ್ತು ಪೈಸೆ ಮೇಲ್ಪಟ್ಟು ಬಿಲ್ ಬಂದಲ್ಲಿ ಅದನ್ನು ಒಂದು ರೂಪಾಯಿ ಎಂದೇ ಪರಿಗಣಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಹೀಗಾಗಿ 40 ಪೈಸೆ ರೌಂಡಪ್ ಮಾಡಿ ಹೆಚ್ಚವರಿಯಾಗಿ ಪಡೆದಿದ್ದಾರೆ ಎಂಬುದನ್ನು ನ್ಯಾಯಾಲಯ ಅಂಗಕರಿಸಲಾಗದು. ದೂರುದಾರರು ಕೇವಲ ತಮ್ಮ ಪ್ರಚಾರದ ಉದ್ದೇಶಕ್ಕಾಗಿ ಈ ದೂರನ್ನು ಸಲ್ಲಿಸಿದಂತಿದೆ ಎಂದು ನ್ಯಾ. ಎಚ್.ಆರ್. ಶ್ರೀನಿವಾಸ್ ಅವರು ತೀರ್ಪಿನಲ್ಲಿ ಸ್ಪಷ್ಟಪಡಿಸಿದ್ದಾರೆ.
ಹೀಗಾಗಿ ದೂರುದಾರರು ಯಾವುದೇ ಪರಿಹಾರ ಪಡೆಯಲು ಅರ್ಹರಾಗಿರುವುದಿಲ್ಲ. ಕೇವಲ ಪ್ರಚಾರದ ಹುಚ್ಚಿಗೆ ಕೇಸು ದಾಖಲಿಸಿ ನ್ಯಾಯಾಲಯದ ಸಮಯ ಹಾಳು ಮಾಡಿದ್ದಕ್ಕೆ ಎರಡು ಸಾವಿರ ದಂಡ ಹಾಗೂ ಎಂಪೈರ್ ಹೋಟೆಲ್‌ಗೆ ಪರಿಹಾರವಾಗಿ ಎರಡು ಸಾವಿರ ರೂ. ದಂಡವನ್ನು ದೂರುದಾರರು ಕಟ್ಟಿಕೊಡಬೇಕು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಬಿಲ್ ರೌಂಡಪ್ ಮಾಡಿ ಹೆಚ್ಚುವರಿಯಾಗಿ 40 ಪೈಸೆ ಪಡೆಯುವುದರ ವಿರುದ್ಧ ಸಮರ ಸಾರಿದ್ದ ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿಗೆ ಗ್ರಾಹಕ ವೇದಿಕೆ ನ್ಯಾಯಾಲಯದಲ್ಲಿ ಹಿನ್ನಡೆ ಉಂಟಾಗಿದೆ.
ಈ ಕುರಿತು 'ಒನ್‌ಇಂಡಿಯಾ ಕನ್ನಡ'ಕ್ಕೆ ಪ್ರತಿಕ್ರಿಯೆ ನೀಡಿದ ಎಂಪೈರ್ ಪರ ವಕೀಲರಾದ ಅಂಶುಮಾನ್ ಮತ್ತು ಆದಿತ್ಯಾ ಅವರು, ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಅವರು ಬಿಲ್ ರೌಂಡಪ್ ಗೆ ಸಂಬಂಧಿಸಿದಂತೆ ಎಂಪೈರ್ ಹೋಟೆಲ್ ವಿರುದ್ಧ ದಾಖಲಿಸಿದ್ದ ದೂರು ವಜಾ ಆಗಿದೆ. ಬಿಲ್ ರೌಂಡಪ್ ವಾಸ್ತವಿಕತೆ ಹಾಗೂ ನಿಯಮಗಳ ಬಗ್ಗೆ ತಿಳಿದುಕೊಳ್ಳದೇ ಪ್ರಚಾರದ ಉದ್ದೇಶದಿಂದ ಹೂಡಿದ್ದ ದಾವೆಯನ್ನು ನ್ಯಾಯಾಲಯ ವಜಾ ಮಾಡಿದೆ ಎಂದು ತಿಳಿಸಿದ್ದಾರೆ.
ಅಡಿಗಾಸ್ ಮೇಲೆ ಗೆದ್ದಿದ್ದ ಮೂರ್ತಿ:
ಈ ಹಿಂದೆ ಚಹಾಗೆ ಒಂದು ರೂಪಾಯಿ ಹೆಚ್ಚುವರಿ ಪಡೆದಿದ್ದ ಅಡಿಗಾಸ್ ಹೋಟೆಲ್ ಮೇಲೆ ನರಸಿಂಹಮೂರ್ತಿ ಇದೇ ರೀತಿಯ ಕೇಸು ದಾಖಲಿಸಿ ಪಾಠ ಕಲಿಸಿದ್ದರು. ರಾಷ್ಟ್ರೀಯ ಗ್ರಾಹಕ ವೇದಿಕೆ ನ್ಯಾಯಾಲಯದ ಮೊರೆ ಹೊಗಿದ್ದ ಅಡಿಗಾಸ್‌ಗೆ ಮುಖಭಂಗವಾಗಿತ್ತು. ಹೆಚ್ಚುವರಿ ಒಂದು ರೂ. ಪಡೆದ ಅಡಿಗಾಸ್ ವಿರುದ್ಧ ಹೆಚ್ಚುವರಿ ಪಡೆದ ಒಂದು ರೂ. ಜತೆಗೆ ಐದು ಸಾವಿರ ರೂಪಾಯಿ ದಂಡ ವಿಧಿಸಿ ಆ ದಂಡದ ಮೊತ್ತವನ್ನು ವಕೀಲರಾದ ನರಸಿಂಹಮೂರ್ತಿ ಅವರಿಗೆ ನೀಡಲು ನ್ಯಾಯಾಲಯ ಆದೇಶಿಸಿತ್ತು. ಈ ಪ್ರಕರಣ ರಾಜ್ಯ ಮಟ್ಟದಲ್ಲಿ ಸದ್ದು ಮಾಡಿತ್ತು.












Click it and Unblock the Notifications