ಉತ್ತರ ಕನ್ನಡ : ಮುಂಡಗೋಡದಲ್ಲಿ ಕಾಡಾನೆ ಸಾವು
ಉತ್ತರ ಕನ್ನಡ, ಮಾರ್ಚ್ 06 : ಮುಂಡಗೋಡ ತಾಲೂಕಿನ ಗಡಿಭಾಗವಾದ ಕುರ್ಲಿ ಅರಣ್ಯ ಪ್ರದೇಶದ ಕರಕಲಜಡ್ಡಿ-ಬಾಳೆಕೊಪ್ಪದ ಬಳಿ ಹೆಣ್ಣಾನೆಯೊಂದು ಸಾವನ್ನಪ್ಪಿದೆ. ವಿದ್ಯುತ್ ಅವಘಡದಿಂದಾಗಿ ಆನೆ ಮೃತಪಟ್ಟಿದ್ದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.
ಆನೆ ಮೃತಪಟ್ಟು 6-7 ದಿನಗಳಾಗಿರಬಹುದೆಂದು ಅಂದಾಜಿಸಲಾಗಿದೆ. ಆನೆ ಮೃತಪಡಲು ಕಾಡಿನಲ್ಲಿ ಹಾದು ಹೋಗಿರುವ ಹೈಟೆನ್ಶನ್ ವಿದ್ಯುತ್ ತಂತಿಯೇ ಕಾರಣವೆಂದು ಶಂಕಿಸಲಾಗಿದೆ.
'ಕಾಡಿನಲ್ಲಿ ಬೆಳೆದ ಎತ್ತರದ ಮರಗಿಡಗಳ ಟೊಂಗೆಗಳು ವಿದ್ಯುತ್ ತಂತಿಗೆ ತಾಗಿ ವಿದ್ಯುತ್ ಹರಿದು ಆನೆ ಸತ್ತಿರಬಹುದು' ಎಂದು ವಿಭಾಗೀಯ ಅರಣ್ಯಧಿಕಾರಿಗಳು ತಿಳಿಸಿದ್ದಾರೆ.

ಮರಣೋತ್ತರ ಪರಿಕ್ಷೆಯಲ್ಲಿಯೂ ವಿದ್ಯುತ್ ತಾಗಿರುವುದರಿಂದ ಆನೆ ಮೃತಪಟ್ಟಿದೆ ಎಂದು ಹೇಳಲಾಗಿದೆ. ಆನೆಯ ಅಂತ್ಯಸಂಸ್ಕಾರ ಸೋಮವಾರ ಮಾಡಿಲಾಗಿದೆ.
ಉಪವಿಭಾಗದ ಎಸಿಎಫ್ ಜಿ.ಆರ್. ಶಶಿಧರ, ಆರ್.ಎಫ್.ಒ ಮಹೇಶ ಗೌಡ, ವಿಭಾಗೀಯ ಅರಣ್ಯಧಿಕಾರಿ ಡಿ.ಎಸ್.ಆಗೇರ ಮುಂತಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶನಿವಾರವೂ ಆನೆ ಮೃತಪಟ್ಟಿತ್ತು : ಶಿರಸಿಯ ಬಿಸಲಕೊಪ್ಪ ಬಳಿಯ ಉಲ್ಲಾಳದಲ್ಲಿ ಆನಾರೋಗ್ಯ ಪೀಡಿತ ಹೆಣ್ಣಾನೆಯೊಂದು ಶನಿವಾರ ಮೃತಪಟ್ಟಿತ್ತು. ಆನೆಗಳ ಹಿಂಡಿನಿಂದ ತಪ್ಪಿಸಿಕೊಂಡು ನಾಡಿಗೆ ಬಂದು, ಗಾಯಗೊಂಡಿದ್ದ ಆನೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿತ್ತು.












Click it and Unblock the Notifications