Bengaluru-Mysuru expressway; ಕಳ್ಳತನದ ಬಗ್ಗೆ ಸಂಸದರ ಟ್ವೀಟ್
ಬೆಂಗಳೂರು, ಜೂನ್ 05; ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಮಾರ್ಗವನ್ನು ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನಿಸಿದ್ದರು. ಕರ್ನಾಟಕದ ಅಭಿವೃದ್ಧಿಗೆ ಈ ಮಾರ್ಗ ಮಹತ್ತರ ಕೊಡುಗೆ ನೀಡಲಿದೆ ಎಂದು ಬಣ್ಣಿಸಿದ್ದರು. ಆದರೆ ವಿವಿಧ ಕಾರಣಗಳಿಗೆ ಈ ರಸ್ತೆ ಸದಾ ಸುದ್ದಿಯಲ್ಲಿ ಇರುತ್ತದೆ.
ಸೋಮವಾರ ಮೈಸೂರು ಸಂಸದ ಪ್ರತಾಪ್ ಸಿಂಹ ಮಾಡಿರುವ ಟ್ವೀಟ್ ಮತ್ತೆ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ ಸುದ್ದಿಯಾಗುವಂತೆ ಮಾಡಿದೆ. ಸಂಸದರು ಮಾಡಿರುವ ಟ್ವೀಟ್‌ನಲ್ಲಿ ಹೆದ್ದಾರಿಯಲ್ಲಿ ನಡೆಯುವ ಕಳ್ಳತನದ ಫೋಟೋಗಳಿವೆ.

ಸಂಸದ ಪ್ರತಾಪ್ ಸಿಂಹ ತಮ್ಮ ಟ್ವೀಟ್‌ನಲ್ಲಿ, 'ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ವಿದ್ಯುತ್ ಕಂಬಗಳ ಬ್ರೆಸಿಂಗ್ ಕದ್ದು ಗುಜರಿಗೆ ಹಾಕುತ್ತಿದ್ದಾರೆ ಎಂಬುದಕ್ಕೆ ತಾಜಾ ಉದಾಹರಣೆ ನೋಡಿ ಹಾಗೂ ವ್ಯತ್ಯಾಸ ಗಮನಿಸಿ' ಎಂದು ಹೇಳಿದ್ದಾರೆ.
ಮೊದಲು ವಿದ್ಯುತ್ ಕಂಬಗಳ ಬ್ರೆಸಿಂಗ್ ಹೇಗಿತ್ತು. ಈಗ ಹೇಗೆ ಇದೆ? ಎಂದು ಪ್ರತಾಪ್ ಸಿಂಹ ಫೋಟೋಗಳಲ್ಲಿ ಗುರುತು ಮಾಡಿ ತೋರಿಸಿದ್ದಾರೆ. ಜೂನ್ 4ರಂದು ಸಂಸದರು, ಬಾಂಧವರಲ್ಲಿ ಪ್ರಾರ್ಥನೆ! , ಹೆದ್ದಾರಿ ಬೇಲಿಯನ್ನು ಕದ್ದು ಗುಜುರಿಗೆ ಹಾಕಬೇಡಿ ಎಂದು ನೀಡಿದ್ದ ಹೇಳಿಕೆಯಲ್ಲಿ ಟ್ವೀಟ್‌ನಲ್ಲಿ ಉಲ್ಲೇಖ ಮಾಡಿದ್ದಾರೆ.
ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ವೇ ನಲ್ಲಿ ವಿದ್ಯುತ್ ಕಂಬಗಳ ಬ್ರೆಸಿಂಗ್ ಕದ್ದು ಗುಜರಿಗೆ ಹಾಕುತ್ತಿದ್ದಾರೆ ಎಂಬುದಕ್ಕೆ ತಾಜಾ ಉದಾಹರಣೆ ನೋಡಿ ಹಾಗು ವ್ಯತ್ಯಾಸ ಗಮನಿಸಿ. https://t.co/sW68Qvw3fS pic.twitter.com/fmPTpxsLC1
— Pratap Simha (@mepratap) June 5, 2023
ಏನು ಮಾತನಾಡಿದ್ದರು?; ಜೂನ್ 4ರಂದು ಮಾಧ್ಯಮಗಳ ಜೊತೆ ಮಾತನಾಡಿದ್ದ ಪ್ರತಾಪ್ ಸಿಂಹ, "ಬೆಂಗಳೂರಿನಿಂದ ಮೈಸೂರಿನ ತನಕ 118 ಕಿ. ಮೀ. ವ್ಯಾಪ್ತಿಯಲ್ಲಿ ಬರುವ ಎಲ್ಲಾ ನನ್ನ ಕನ್ನಡದ ಬಾಂಧವರಿಗೂ ನಮ್ಮೆಲ್ಲ ಸಾರ್ವಜನಿಕರಿಗೆ ಕೇಳಿಕೊಳ್ಳುತ್ತೇನೆ" ಎಂದು ಹೇಳಿದ್ದರು.

"ಲಿಂಕ್ ರಸ್ತೆಯಲ್ಲಿ ಫೆನ್ಸಿಂಗ್ ಮಾಡಲಾಗಿದೆ. ಇದು ದಕ್ಷಿಣ ಭಾರತದ ಮೊದಲ ಪ್ರವೇಶ ಮತ್ತು ನಿರ್ಗಗಮ ನಿರ್ಬಂದಿತ ಹೆದ್ದಾರಿ ಆದ್ದರಿಂದ ಫೆನ್ಸಿಂಗ್ ಮಾಡಿದ್ದೇವೆ. ಇಲ್ಲಿ ಒಂದು ನಾಯಿಯೂ ಅಡ್ಡ ಬರಬಾರದು, ಪ್ರಾಣಿಗಳು ಬರಬಾರದು. ವಾಹನಗಳು 120, 140 ಕಿ. ಮೀ. ವೇಗದಲ್ಲಿ ಸಾಗುತ್ತಿರುತ್ತವೆ. ಪ್ರಾಣಿಗಳು ಬಂದರೆ ಅಪಘಾತವಾಗಿ ದುರಂತ ನಡೆಯುತ್ತದೆ' ಎಂದು ತಿಳಿಸಿದ್ದರು.
"ಆದ್ದರಿಂದ ಫೆನ್ಸಿಂಗ್ ಮಾಡಲಾಗಿದೆ, ಆ ಫೆನ್ಸಿಂಗ್, ಚೈನ್ ಲಿಂಕ್‌ಗಳನ್ನು, ಆಂಗ್ಲರ್‌ಗಳನ್ನು ಕಟ್ ಮಾಡಿ ತಗೊಂಡು ಹೋಗುತ್ತಿದ್ದೀರಿ ಅಂದರೆ ಇದು ನಮಗೆ ನಾಚಿಕೆ ಗೇಡಿನ ಸಂಗತಿ. ರಸ್ತೆ ಪಕ್ಕದಲ್ಲಿ ಹೈಟೆಕ್ಷನ್ ಎಲೆಕ್ಟ್ರಿಕ್ ಪೋಲ್‌ಗಳಿವೆ. ಆ ಪೋಲ್‌ಗಳಲ್ಲಿ ಬ್ರೆಸಿಂಗ್ ಇರುತ್ತದೆ. ಅದನ್ನು ಬಿಚ್ಚಿಕೊಂಡು ಹೋಗುತ್ತೀರಿ" ಎಂದು ಹೇಳಿಕೆ ನೀಡಿದ್ದರು.
"ಗುಜರಿಗೆ ಹಾಕೋದಿಕ್ಕೆ ಏನಾದರೂ ಸರಿ ಮನೆಯಲ್ಲಿ ಇರುವುದನ್ನು ಗುಜರಿಗೆ ಹಾಕಿ. ನಿಮ್ಮ ದುಡ್ಡಿನಲ್ಲಿ ನಿರ್ಮಾಣ ಮಾಡಿರುವ ಹೈವೇ ಫೆನ್ಸಿಂಗ್, ಆಂಗ್ಲರ್, ಬ್ರೆಸಿಂಗ್ ಕಿತ್ತುಕೊಂಡು ಗುಜರಿಗೆ ಹಾಕುವಂತಹ ಕೆಲಸ ಮಾಡಬೇಡಿ" ಎಂದು ಪ್ರತಾಪ್ ಸಿಂಹ ಮನವಿ ಮಾಡಿದ್ದರು.
ಸಂಸದ ಪ್ರತಾಪ್ ಸಿಂಹ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ನಡೆಯುವ ಕಳ್ಳತನದ ಕುರಿತು ಹಲವು ಬಾರಿ ಮಾತನಾಡಿದ್ದಾರೆ. ಆದರೆ ಇನ್ನೂ ಸಹ ಕಳ್ಳತನ ನಿಂತಿಲ್ಲ.
"ಮೈಸೂರು, ಮಂಡ್ಯ, ರಾಮನಗರ ಭಾಗದಲ್ಲಿ ಯಾರಾದರೂ ತಂತಿ ಬೇಲಿ ಕಳುವು ಮಾಡುತ್ತಿರುವುದು ಕಂಡು ಬಂದರೆ ಮಾಹಿತಿ ನೀಡಿ. ರಾಜ್ಯ ಸರ್ಕಾರವು ರಸ್ತೆ ಸುರಕ್ಷತೆ ಕಾಯ್ದೆಯಲ್ಲಿ ಬಿಡುಗಡೆ ಮಾಡುವ ಹಣದಲ್ಲಿ ಹೆದ್ದಾರಿಗೆ ಎಐ ಕ್ಯಾಮರಾಗಳನ್ನು ಅಳವಡಿಕೆ ಮಾಡಲು 80 ಕೋಟಿ ರೂ. ಅನುದಾನ ಕೋರಿದ್ದೇವೆ" ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
"ಅನುದಾನ ಬಿಡುಗಡೆ ಆಗಿ ಕ್ಯಾಮರಾ ಅಳವಡಿಸುವ ತನಕ ಆಸ್ತಿ ರಕ್ಷಿಸಲು ಸಾರ್ವಜನಿಕರು ಸಹಕರಿಸಬೇಕು. ಬೇಲಿ ತುಂಡರಿಸಿ ವಾಹನಗಳು ಅತ್ತ ಇತ್ತ ಚಲಿಸುವುದನ್ನು ನಿಲ್ಲಿಸಿ" ಎಂದು ಸಂಸದರು ಮನವಿ ಮಾಡಿದ್ದಾರೆ.












Click it and Unblock the Notifications