ನಂದನ್ ಪರ ಗಿರೀಶ್ ಕಾರ್ನಾಡ್ ಪ್ರಚಾರ
ಬೆಂಗಳೂರು, ಮಾ.30: ನಂದನ್ ಅವರಿಗೆ ರಾಜಕೀಯ ಹಿನ್ನೆಲೆ ಇಲ್ಲ, ನಿಲೇಕಣಿ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ನಂದನ್ ರಂಥ ಪ್ರಮಾಣಿಕ ಉದ್ಯಮಿಗಳು ರಾಜಕೀಯಕ್ಕೆ ಬರಬೇಕು. ನಮ್ಮ ನೆರೆ ಹೊರೆ ಮನೆಗೆ ತೆರಳಿ ಅವರ ಪರವಾಗಿ ಮತಯಾಚನೆ ಮಾಡುತ್ತಿದ್ದೇನೆ ಎಂದು ಸಾಹಿತಿ ಗಿರೀಶ್ ಕಾರ್ನಾಡ್ ಹೇಳಿದ್ದಾರೆ.
ಸಂಸದರಾಗಿರುವ ಅನಂತ್ ಕುಮಾರ್ ಕನ್ನಡಕ್ಕೆ ಮತ್ತು ಬೆಂಗಳೂರಿಗೆ ಏನು ಮಾಡಿದ್ದಾರೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಪ್ರಶ್ನಿಸಿದರು. ನಂದನ್ ನಿಲೇಕಣಿ ಪತ್ನಿ ರೋಹಿಣಿ ನಿಲೇಕಣಿ ಮತ್ತಿತರರ ಜತೆಗೂಡಿ ಗಿರೀಶ್ ಅವರು ಜೆ.ಪಿ ನಗರದಲ್ಲಿ ನಂದನ್ ಪರ ಮತಯಾಚಿಸಿದರು.

*ಗೌರಿಬಿದನೂರಿನ ಮಾಜಿ ಶಾಸಕಿ ಜ್ಯೋತಿ ರೆಡ್ಡಿ. ಜೆಡಿಎಸ್ ಪಕ್ಷವನ್ನು ತೊರೆದು ಭಾನುವಾರ ಬಿಜೆಪಿಗೆ ಸೇರ್ಪಡೆಗೊಂಡರು. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವ ಆರ್. ಅಶೋಕ್, ಚಿಕ್ಕಬಳ್ಳಾಪುರ ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡ ಹಾಗೂ ವಿ. ಸೋಮಣ್ಣ ಅವರ ಸಮ್ಮುಖದಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಮೈಸೂರು: ಮಿಸ್‌ಕಾಲ್ ಕೊಡಿ ಮತಪಟ್ಟಿ ಬಗ್ಗೆ ಮಾಹಿತಿ ಪಡೆಯಿರಿ ಎಂಬ ಹೆಸರಿನಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದ ಹಾಗೂ ಸರ್ಕಾರಿ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಬಿಜೆಪಿ ವಿಧಾನಪರಿಷತ್ ಸದಸ್ಯ ಗೋ.ಮಧುಸೂದನ್ ಅವರ ಕಚೇರಿ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದಾರೆ.

ನಗರದ ಕಾಡಾ ಕಚೇರಿಯಲ್ಲಿ ಮಧುಸೂದನ್ ಅವರ ಶಾಸಕರ ಕಚೇರಿಯಿದ್ದು ಅಲ್ಲಿ ಮತಪಟ್ಟಿ ಬಗ್ಗೆ ಮಾಹಿತಿ ಪಡೆಯಿರಿ ಎಂಬ ಪತ್ರಿಕಾ ಪ್ರಕಟಣೆ ನೀಡಿ ಸಾರ್ವಜನಿಕರಿಂದ ದೂರವಾಣಿ ಕರೆ ಪಡೆದು ಮತಯಾಚನೆ ಮಾಡುತ್ತಿತ್ತು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಈ ಹಿನ್ನೆಲೆಯಲ್ಲಿ ಸೆಕ್ಟರ್ ಮ್ಯಾಜಿಸ್ಟ್ರೇಟರ್ ಸುನಿಲ್‌ಬಾಬು ಅವರನ್ನೊಳಗೊಂಡ ವಿಶೇಷ ತಂಡ ಗೋ.ಮಧುಸೂದನ್ ಅವರ ಕಚೇರಿ ಮೇಲೆ ದಾಳಿ ಮಾಡಿ ಅಲ್ಲಿ ಬಳಸಲಾಗುತ್ತಿದ್ದ 21 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಸರ್ಕಾರಿ ಕಚೇರಿಯಲ್ಲಿ ಪಕ್ಷದ ಪರ ಪ್ರಚಾರ ನಡೆಸಿ ಸರ್ಕಾರಿ ಕಚೇರಿಯನ್ನು ದುರುಪಯೋಗ ಮಾಡಿಕೊಂಡ ಹಿನ್ನೆಲೆಯಲ್ಲಿ ಎಂಎಲ್‌ಸಿ ಮಧುಸೂದನ್ ಅವರ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಡಿ ಪ್ರಕರಣ ದಾಖಲಿಸಿ ಅವರ ಕಚೇರಿಗೆ ಬೀಗ ಮುದ್ರೆ ಹಾಕಲಾಗಿದೆ. ಈ ಸಂಬಂಧ ಕೆ.ಆರ್.ಠಾಣೆಯಲ್ಲಿ ದೂರು ದಾಖಲಾಗಿದೆ.

* ಕೊಪ್ಪಳ: 15 ಪದವಿಗಳನ್ನು ಪಡೆದ ವ್ಯಕ್ತಿ ಲಿಂಗಸಗೂರಿನ ನಾಗರಾಜ ನರಕಲದಿನ್ನಿ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದು ಸುದ್ದಿಯಾಗಿದ್ದರು. ಆದರೆ, ನಾಮಪತ್ರ ಸಲ್ಲಿಸಿದ್ದ ನಾಗರಾಜ ಸರಿಯಾಗಿ ಭರ್ತಿ ಮಾಡದ ಹಿನ್ನೆಲೆಯಲ್ಲಿ ತಿರಸ್ಕೃತವಾಗಿದೆ. 31ನೇ ವಯಸ್ಸಿನಲ್ಲೇ 15 ಪದವಿಗಳನ್ನು ಪಡೆದಿರುವ ನಾಗರಾಜ್ ಜಿಲ್ಲಾಧಿಕಾರಿ ಕೆ.ಪಿ. ಮೋಹನರಾಜ್ ಅವರಿಗೆ ನಾಮಪತ್ರ ಸಲ್ಲಿಸಿ ಗಮನ ಸೆಳೆದಿದ್ದರು.
* ಲೋಕಸಭಾ ಚುನಾವಣೆಗೆ ಮೊದಲೇ ಬಿಜೆಪಿ ಪ್ರಧಾನಿ ಅಭ್ಯರ್ಥಿ (ಮೋದಿ) ಯನ್ನು ಘೋಷಣೆ ಮಾಡಿದೆ. ಕಾಂಗ್ರೆಸ್ನಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮುಂಚೂಣಿಯಲ್ಲಿದ್ದಾರೆ. ಆದರೆ, ತೃತೀಯ ರಂಗಕ್ಕೆ ನಾನೇ ಪ್ರಧಾನಿ ಅಭ್ಯರ್ಥಿಯಾಗಿದ್ದೇನೆ ಎಂದು ಕೊಪ್ಪಳ ಕ್ಷೇತ್ರದ ಭಾರತೀಯ ಡಾ. ಅಂಬೇಡ್ಕರ್ ಜನತಾ ಪಾರ್ಟಿ (ಬಿಎಜೆಪಿ)ಯ ಅಭ್ಯರ್ಥಿ ತಿಮ್ಮಪ್ಪ ಉಪ್ಪಾರ ಘೋಷಣೆ ಮಾಡಿಕೊಂಡಿದ್ದಾರೆ.












Click it and Unblock the Notifications