ಕರ್ನಾಟಕ ಚುನಾವಣೆ ಬಳಿಕ, ಮಹಾರಾಷ್ಟ್ರದಲ್ಲಿ ಸಿಟಿ ರವಿ ಬ್ಯುಸಿ!
ಬೆಂಗಳೂರು: ಚಿಕ್ಕಮಗಳೂರು ಕ್ಷೇತ್ರದಲ್ಲಿ ಭೀಕರ ಸೋಲು ಕಂಡ ಬಳಿಕ ಸಿಟಿ ರವಿ ಮತ್ತೆ ಬಿಜೆಪಿ ಸಭೆಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಮಹಾರಾಷ್ಟ್ರಕ್ಕೆ ತೆರಳಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಮಹಾರಾಷ್ಟ್ರ ಸ್ಥಳೀಯ ನಾಯಕರ ಬೈಟಕ್‌ನಲ್ಲಿ ಪಾಲ್ಗೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಕಾರ್ಯಕ್ರಮದ ಫೋಟೋ ಶೇರ್ ಮಾಡಿದ್ದಾರೆ ಸಿಟಿ ರವಿ.
ಕರ್ನಾಟಕ ವಿಧಾನಸಭೆ ಚುನಾವಣೆ 2023ರಲ್ಲಿ ಬಿಜೆಪಿ 224 ಸ್ಥಾನಗಳ ಪೈಕಿ ಕೇವಲ 66 ಸ್ಥಾನ ಗಳಿಸಿದೆ. ಈ ಮೂಲಕ ಬಿಜೆಪಿ ಭಾರಿ ಹಿನ್ನಡೆ ಕಂಡಿದೆ, ಅದ್ರಲ್ಲೂ ಹಿಂದುತ್ವದ ಫೈರ್ ಬ್ರ್ಯಾಂಡ್, ಆರ್‌ಎಸ್‌ಎಸ್‌ನ ನಿಕಟ ಸಂಪರ್ಕ ಹೊಂದಿದ್ದ ಸಿ.ಟಿ.ರವಿ ಸೋಲುತ್ತಾರೆ ಅಂತ ಯಾರೂ ಊಹಿಸಿರಲಿಲ್ಲ. ಈ ಬಾರಿ ಸಿಟಿ ರವಿ ಕೂಡ ತಮ್ಮ ಒಂದು ಕಾಲದ ಆಪ್ತನ ಎದುರೇ ಸೋತಿದ್ದಾರೆ. ಭೀಕರ ಸೋಲಿನ ಬಳಿಕ ಮತ್ತೆ ತಮ್ಮ ಕಾರ್ಯದಲ್ಲಿ ಸಿಟಿ ರವಿ ಫುಲ್ ಬ್ಯುಸಿಯಾಗಿದ್ದಾರೆ.

ನೆರೆ ರಾಜ್ಯಗಳಲ್ಲಿ ಸಿಟಿ ರವಿ ಭಾಷಣ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನ ಒಲಿದ ಬಳಿಕ ಸಿ.ಟಿ.ರವಿ (CT Ravi) ವಿವಿಧ ರಾಜ್ಯಗಳಿಗೆ ತೆರಳಿ ಪಕ್ಷದ ಪರ ಪ್ರಚಾರ ನಡೆಸುತ್ತಿದ್ದರು. ಒಂದ್ಕಡೆ ಇದೇ ಅವರ ಸೋಲಿಗೆ ಕಾರಣ ಆಯ್ತು ಎಂಬ ಮಾತು ಕೂಡ ಓಡಾಡ್ತಿದೆ. ಏಕೆಂದರೆ ಇತರ ಕ್ಷೇತ್ರಗಳಲ್ಲಿ ಬ್ಯುಸಿಯಾಗಿದ್ದ ಕಾರಣ, ಸಿಟಿ ರವಿ ತಮ್ಮ ಕ್ಷೇತ್ರದ ಕಡೆಗೆ ಹೆಚ್ಚಿನ ಗಮನ ನೀಡಿರಲಿಲ್ಲ. ಹೀಗಾಗಿ ಸೋಲು ಎದುರಾಯ್ತು ಎನ್ನುವ ಮಾತು ಚಿಕ್ಕಮಗಳೂರು ಕ್ಷೇತ್ರದ BJP ಕಾರ್ಯಕರ್ತರ ಬಾಯಲ್ಲಿ ಕೇಳಿಬರುತ್ತಿದೆ. ಇದೇ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ನಾಯಕರ ಜೊತೆ ಸಭೆಯಲ್ಲಿ ಪಾಲ್ಗೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ ಸಿಟಿ ರವಿ.
ಮಹಾರಾಷ್ಟ್ರ ಚುನಾವಣೆಗೂ ಕೌಂಟ್‌ಡೌನ್
ಅಂದಹಾಗೆ ಪುಣೆಯಲ್ಲಿ ಆಯೋಜಿಸಿದ್ದ ಮಹಾರಾಷ್ಟ್ರ ಸ್ಥಳೀಯ ನಾಯಕರ ಬೈಟಕ್ ಉದ್ಘಾಟನೆ ವೇಳೆ ಸಿಟಿ ರವಿ ಪಾಲ್ಗೊಂಡಿದ್ದಾರೆ. ಇನ್ನೇನು ಒಂದೂವರೆ ವರ್ಷದಲ್ಲಿ ಮಹಾರಾಷ್ಟ್ರದಲ್ಲಿ ಕೂಡ ಅಸೆಂಬ್ಲಿ ಚುನಾವಣೆ ಎದುರಾಗಲಿದೆ. ಇದಕ್ಕಾಗಿ ಈಗಿನಿಂದಲೇ ಬಿಜೆಪಿ ನಾಯಕರು ಪ್ರಚಾರ ಆರಂಭಿಸಿದಂತೆ ಕಾಣುತ್ತಿದೆ. ಈ ಬಾರಿ ಮಹಾರಾಷ್ಟ್ರದಲ್ಲಿ ಪೂರ್ಣ ಪ್ರಮಾಣದ ಸರ್ಕಾರ ರಚಿಸಬೇಕು ಎನ್ನುವುದು ಬಿಜೆಪಿಯ ರಣತಂತ್ರ. ಇದೆಲ್ಲದರ ಭಾಗವಾಗಿ ಸ್ಥಳೀಯ ನಾಯಕರ ಜೊತೆ ಸಭೆಗಳ ಮೇಲೆ ಸಭೆ ನಡೆಯುತ್ತಿದೆ ಎನ್ನಲಾಗುತ್ತಿದೆ.
Participated in the @BJP4Maharashtra Pradesh Karyasamiti Baitak at Pune.
— C T Ravi 🇮🇳 ಸಿ ಟಿ ರವಿ (@CTRavi_BJP) May 18, 2023
BJP Joint NGS (Org) Shri @shivprakashbjp, State President Shri @cbawankule, Central Minister Shri @raosahebdanve, State Minister Shri @ChDadaPatil and other leaders were present in meeting. pic.twitter.com/tdwjGxaQo4
ಸತತ 4 ಬಾರಿ ಗೆದ್ದಿದ್ದ ಸಿಟಿ ರವಿ!
ಹೌದು ಸಿಟಿ ರವಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ತಮ್ಮದೇ ಹವಾ ಇಟ್ಟಿದ್ದರು. ಸಾಲು ಸಾಲು ಗೆಲುವಿನ ಮೂಲಕ ಈ ಬಾರಿ ಕೂಡ ಮತ್ತೆ ಆಯ್ಕೆಯಾಗುವ ವಿಶ್ವಾಸದಲ್ಲಿ ಸಿಟಿ ರವಿ ಇದ್ದರು. ಈ ಚುನಾವಣೆಯೂ ಸೇರಿ ಒಟ್ಟು 6 ಬಾರಿ ಸ್ಪರ್ಧೆ ಮಾಡಿದ್ದರು ಸಿಟಿ ರವಿ. ಸತತ 4 ಗೆಲುವು ರವಿ ಅವರಿಗೆ ಭಾರಿ ಶಕ್ತಿ ತುಂಬಿದ್ದು, ಈಗ ಕೂಡ ಅದೇ ರೀತಿ ಗೆಲ್ಲುತ್ತೇನೆ ಎಂಬ ಉತ್ಸಾಹದಲ್ಲಿ ಇದ್ದರು. ಆದರೆ ಸಿ.ಟಿ.ರವಿ ಆಪ್ತನೇ 5ನೇ ಗೆಲುವಿನ ಕನಸಿಗೆ ಕೊಳ್ಳಿ ಇಟ್ಟಿದ್ದು, ಕರ್ನಾಟಕದ ಮುಂದಿನ ಸಿಎಂ ಆಗುವ ಕನಸು ಕಂಡಿದ್ದ ಸಿಟಿ ರವಿಗೆ ಹಿನ್ನಡೆ ಮಾಡಿದೆ. ಹಾಗಾದ್ರೆ ಸಿಟಿ ರವಿ ಸೋಲಿಗೆ ಪ್ರಮುಖ ಕಾರಣ ಏನು? ಅದರ ಮಾಹಿತಿ ಇಲ್ಲಿದೆ ಓದಿ.
2018ರಲ್ಲಿ ಗೆದ್ದು 2023ರಲ್ಲಿ ಸೋತರು
2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸಿ.ಟಿ.ರವಿಗೆ ಸಾಕಷ್ಟು ಪ್ಲಸ್ ಪಾಯಿಂಟ್ ಇತ್ತು. 2018ರ ಚುನಾವಣೆ ರವಿ ಅವರಿಗೆ ಕಷ್ಟವೂ ಆಗಿರಲಿಲ್ಲ. ಜತೆಗೆ ಪಕ್ಷದ ಒಗ್ಗಟ್ಟು, ಜನಾಭಿಪ್ರಾಯ ಕೂಡ ಅವರ ಪರ ಇದ್ದಿದ್ದು ಒಳ್ಳೆಯದೇ ಆಗಿತ್ತು. ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಅಷ್ಟು ಸವಾಲು ನೀಡದೆ ಸಿಟಿ ರವಿ ಗೆಲುವಿಗೆ ವೇದಿಕೆ ಒದಗಿಸಿದರು. ಆದರೆ ಈ ಬಾರಿ ಎಲ್ಲವೂ ಉಲ್ಟಾ ಆಗಿ, ಸಿಟಿ ರವಿ ಭಾರಿ ದೊಡ್ಡ ಸಂಕಷ್ಟದಲ್ಲಿ ಸಿಲುಕಿಬಿಟ್ಟರು. ಅದನ್ನ ಇಲ್ಲಿ ವಿವರವಾಗಿ ತಿಳಿಯೋಣ.

ಸಿಟಿ ರವಿ ವಿರುದ್ಧ ನಿಂತ ಜೆಡಿಎಸ್
2023ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕಣದಲ್ಲಿದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲಎಂಬತಾಗಿತ್ತು. ತಮ್ಮದೇ ಪಕ್ಷದ ಅಭ್ಯರ್ಥಿ ಇದ್ದರೂ ಜೆಡಿಎಸ್ ಮುಖಂಡ ಹಾಗೂ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಕಾಂಗ್ರೆಸ್ ಪರ ಮತ ನೀಡಲು ಕರೆಕೊಟ್ಟಿದ್ದರು. ಇದು ಸಿ.ಟಿ.ರವಿಗೆ ದೊಡ್ಡ ಹೊಡೆತ ನೀಡುವ ಜೊತೆಗೆ, ನೂರಾರು ಸವಾಲು ಎದುರಿಸುವಂತೆ ಮಾಡಿತ್ತು. ಜಿಲ್ಲೆಯ ವಿವಿಧ ಸಂಘಟನೆಗಳು ಒಗ್ಗಟ್ಟು ಪ್ರದರ್ಶಿಸಿ ಸಿ.ಟಿ.ರವಿ ಸೋಲಿಸಲು ತಂತ್ರ ರೂಪಿಸಿದ್ದವು. ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ.ತಮ್ಮಯ್ಯ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದ್ದು ಕೂಡ ಸಿಟಿ ರವಿಯ ಸೋಲಿಗೆ ದೊಡ್ಡ ಕೊಡುಗೆ ನೀಡಿತು.
ಬೇರೆ ನಾಯಕರನ್ನು ಬೆಳೆಯಲು ಬಿಡಲಿಲ್ವಾ?
ಯಾವುದೇ ಕ್ಷೇತ್ರದಲ್ಲಿ ಅಭ್ಯರ್ಥಿ ಒಬ್ಬ ಸತತವಾಗಿ ಒಂದೇ ಪಕ್ಷದಿಂದ ಆಯ್ಕೆಯಾಗಿ ಬರುತ್ತಿದ್ದಾನೆ ಎಂದರೆ ಆ ಕ್ಷೇತ್ರದಲ್ಲಿ ಬೇರೆಯವರಿಗೆ ಬೆಳೆಯಲು ಅವಕಾಶ ಇಲ್ಲ ಎಂದೇ ಅರ್ಥ. ಚಿಕ್ಕಮಗಳೂರು ಕ್ಷೇತ್ರದಲ್ಲೂ ಅಷ್ಟೇ ಇಂತಹದ್ದೇ ಪರಿಸ್ಥಿತಿ ಇತ್ತು. ಸಿಟಿ ರವಿ ಹೊರತು ಪರ್ಯಾಯ ನಾಯಕತ್ವ ಕ್ಷೇತ್ರದಲ್ಲಿ ಬೆಳೆಯಲೇ ಇಲ್ಲ. ಈ ಕಾರಣ ಕೂಡ ಸಿಟಿ ರವಿಗೆ ದೊಡ್ಡ ಹೊಡೆತ ನೀಡಿತ್ತು. 20 ವರ್ಷದಲ್ಲಿ ಸಿ.ಟಿ.ರವಿ ತಮ್ಮ ಕಾರ್ಯಕರ್ತರಿಗೆ ದೊಡ್ಡ ಹುದ್ದೆ ಕೊಡಿಸಲಿಲ್ಲ ಎಂಬ ಆರೋಪ ಅಸಮಾಧಾನದ ಹೊಗೆಯನ್ನ ಒಳಗೊಳಗೆ ಹುಟ್ಟುಹಾಕಿತ್ತು.

ಕನಕಪುರದಲ್ಲಿ ಅಮೇಥಿ ಡೈಲಾಗ್!
ಚುನಾವಣೆಗೆ ಮೊದಲು ಪ್ರಚಾರಕ್ಕೆ ಅಂತಾ ಕನಕಪುರ ಕ್ಷೇತ್ರಕ್ಕೆ ಬಂದಾಗ, ಅಮೇಥಿಯನ್ನೇ ಬಿಟ್ಟಿಲ್ಲ ಇನ್ನು ಕನಕಪುರ ಬಿಡ್ತೀವಾ? ಅಂತಾ ಡೈಲಾಗ್ ಬೇರೆ ಹೊಡೆದಿದ್ದರು. ಆದ್ರೆ ಅದು ಬರೀ ಡೈಲಾಗ್ ಆಗಿಯೇ ಉಳಿದು ಹೋಯ್ತು. ಕನಕಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು ಸಿಗಲಿಲ್ಲ. ಇದರ ಜೊತೆಗೆ ತಮ್ಮ ಕ್ಷೇತ್ರದಲ್ಲೂ ಸಿಟಿ ರವಿ ಈ ಬಾರಿ ಗೆಲ್ಲಲು ಆಗಲೇ ಇಲ್ಲ, ಸತತವಾಗಿ ಗೆದ್ದಿದ್ದ ಕ್ಷೇತ್ರ ಸಿಟಿ ರವಿ ಕೈಬಿಟ್ಟು ಹೋಗಿದೆ. ಒಂದು ಕಾಲದ ಸಿಟಿ ರವಿ ಆಪ್ತ ವ್ಯಕ್ತಿಯೇ ಸಿಟಿ ರವಿಗೆ ಈ ಬಾರಿ ಸೋಲನ್ನ ಕರುಣಿಸಿದ್ದರು.
ಒಟ್ನಲ್ಲಿ ವಿಧಾನಸಭೆ ಚುನಾವಣೆಯ ಸೋಲಿನ ಹಿನ್ನಡೆಯನ್ನ ಲೋಕಸಭೆ ಚುನಾವಣೆಯಲ್ಲಿ ಫಿಲ್ ಮಾಡಲು ಬಿಜೆಪಿ ನಾಯಕರು ಪಣತೊಟ್ಟಂತೆ ಕಾಣುತ್ತಿದೆ. ಹೀಗಾಗಿ ಬಿಜೆಪಿ ನಾಯಕರು ಅಲರ್ಟ್ ಆಗಿದ್ದಾರೆ. ತಮ್ಮ ಕೆಲಸದಲ್ಲಿ ಫುಲ್ ಬ್ಯುಸಿಯಾಗಿದ್ದು, ಕರ್ನಾಟಕದಲ್ಲೂ ಶೀಘ್ರದಲ್ಲೇ ಬಿಜೆಪಿ ಲೀಡರ್ಸ್ ಪುಟಿದೇಳುವ ವಿಶ್ವಾಸ ಹೊಂದಿದ್ದಾರೆ. ಇದಕ್ಕೆ ಕಾಂಗ್ರೆಸ್ & ಜೆಡಿಎಸ್ ಯಾವ ರೀತಿ ತಿರುಗೇಟು ನೀಡುತ್ತವೋ ಕಾದು ನೋಡ್ಬೇಕು.












Click it and Unblock the Notifications