BJP President: 'ಶೀಘ್ರ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಆಯ್ಕೆಗೆ ಚುನಾವಣೆ'
ಬೆಂಗಳೂರು, ಜನವರಿ 18: ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಚುನಾವಣೆ ಮೂಲಕ ರಾಜ್ಯ ಬಿಜೆಪಿ ಘಟಕ ಅಧ್ಯಕ್ಷರ ಆಯ್ಕೆ ಮಾಡುತ್ತೇವೆ. ಬೂತ್ ಕಮಿಟಿ ಅಧ್ಯಕ್ಷ ಸ್ಥಾನದಿಂದ ರಾಜ್ಯಾಧ್ಯಕ್ಷ ಸ್ಥಾನದವರೆಗೂ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.
ಒಂದು ಕಡೆ ಪ್ರಸ್ತುತ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿವೈ ವಿಜಯೇಂದ್ರ ಅವರು ನಾನೇ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರಿಯುತ್ತೇನೆ ಎಂದು ಹೇಳಿಕೆ ನೀಡಿದರೆ, ಮತ್ತೊಂದು ಕಡೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಣ ನವದೆಹಲಿಗೆ ತೆರಳಿ ಬಿಜೆಪಿ ಹೈಕಮಾಂಡ್ ಅವರನ್ನು ಭೇಟಿಯಾಗಿ ಇವರ ವಿರುದ್ಧ ದೂರು ನೀಡಿದ್ದಾರೆ. ಇದೆಲ್ಲದರ ನಡುವೆ ಬೆಂಗಳೂರಿಗೆ ಆಗಮಿಸಿರುವ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಶೀಘ್ರ ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ಕುರಿತು ಚುನಾವಣೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಹೇಳಿಕೆ ನೀಡಿದ್ದಾರೆ.

ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಯಾವುದೇ ರೀತಿಯಾದ ಗೊಂದಲ ಇಲ್ಲ. ಎಲ್ಲರೂ ಸೇರಿ ಚರ್ಚಿಸಿ ಬಿಜೆಪಿ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿಕೆ ನೀಡಿದರು. ಇದರಿಂದ ಸಹಜವಾಗಿ ಬಿವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಬೆಂಗಳೂರಿಗೆ ಬಂದಿರುವ ಕೇಂದ್ರ ಸಚಿವರು ಇಂದು ರಾಜ್ಯದ ಕೃಷಿ, ಗ್ರಾಮೀಣಾಭಿವೃದ್ಧಿ, ಕಂದಾಯ ಸಚಿವರ ಜೊತೆ ಕೇಂದ್ರ ಸರಕಾರದ ಯೋಜನೆಗಳ ಸಾಧನೆಯನ್ನು ಪರಿಶೀಲಿಸಿದರು. ನಂತರ ಮಾತನಾಡಿದ ಶಿವರಾಜ್ ಸಿಂಗ್ ಚೌಹಾಣ್ ಅವರು ಅನುದಾನ ಕೇಳದೇ ಇದ್ದರೂ ನಾವೇ ಘೋಷಣೆ ಮಾಡಿದ್ದೇವೆ. ಬಹಳಷ್ಟು ಅನುದಾನ ಈಗಾಗಲೇ ಕೊಟ್ಟಿದ್ದು, ಅದನ್ನು ಇನ್ನೂ ಕರ್ನಾಟಕ ಸರ್ಕಾರ ಖರ್ಚು ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕರ್ನಾಟಕದ ವಿಕಾಸಕ್ಕೆ ಆದ್ಯತೆ ನೀಡುತ್ತಿದ್ದೇವೆ. ಈಗಾಗಲೇ ಬಿಡುಗಡೆ ಮಾಡಿರುವ ಅನುದಾನದ ಸದ್ಬಳಕೆ ಆಗಬೇಕಿದೆ ಎಂದರು.
ಪ್ರತಿ ಬಡವನಿಗೂ ಮನೆ ಸಿಗಬೇಕು ಎಂಬುದು ಮೋದಿಯವರ ಸಂಕಲ್ಪ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕಳೆದ ಸೆಪ್ಟೆಂಬರ್‍ನಲ್ಲಿ ಕರ್ನಾಟಕಕ್ಕೆ 2,57,246 ಮನೆಗಳ ನಿರ್ಮಾಣಕ್ಕೆ ಒಪ್ಪಿಗೆ ಕೊಟ್ಟಿದ್ದೆವು. ಅನುದಾನವನ್ನೂ ಕೊಟ್ಟಿದ್ದೆವು. ಇಂದು ಮತ್ತೆ ಕರ್ನಾಟಕದ ಬಡಜನರಿಗೆ ಮನೆ ಕಟ್ಟಲು ಇರುವ ಗುರಿ ಹೆಚ್ಚಿಸಲಾಗಿದೆ ಎಂದು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಹೇಳಿದರು.
ಇಂದು 4,67,580 ಮನೆಗಳನ್ನು ಕಟ್ಟಲು ಒಪ್ಪಿಗೆ ಕೊಟ್ಟಿದ್ದೇವೆ. ಬಡವರ ಸೇವೆಯೇ ಭಗವಂತನ ಸೇವೆ ಎಂಬ ಚಿಂತನೆ ನಮ್ಮದು. ಎಲ್ಲ ಬಡವರಿಗೆ ಮನೆ ನಿರ್ಮಿಸಿ ಕೊಡುವ ಉದ್ದೇಶ ಈಡೇರಿಸಬೇಕಿದೆ. ಅದಕ್ಕಾಗಿ ಮನೆಗಳ ನಿರ್ಮಾಣ ಕಾರ್ಯಕ್ಕೆ ವೇಗ ಕೊಡಲು ಸೂಚಿಸಲಾಗಿದೆ. ಹಿಂದೆ ನೀಡಿದ್ದ ಅನುದಾನ ಪೂರ್ತಿ ಬಳಕೆ ಮಾಡಲು ತಿಳಿಸಲಾಗಿದೆ ಎಂದು ತಿಳಿಸಿದರು.
ಆತ್ಮ ಯೋಜನೆಯಡಿ ಹೆಚ್ಚುವರಿ ಸಿಬ್ಬಂದಿ ನೀಡಲು ಒಪ್ಪಿಗೆ ಕೊಡಲಾಗಿದೆ. ವಿಕಸಿತ ಭಾರತ ನಿರ್ಮಾಣದ ಸಂಕಲ್ಪ ನಮ್ಮದು. ವಿಕಸಿತ ಭಾರತಕ್ಕಾಗಿ ವಿಕಸಿತ ಕರ್ನಾಟಕ ಎಂಬುದು ನಮ್ಮ ಚಿಂತನೆ ಎಂದು ವಿವರಿಸಿದರು. ರಾಜ್ಯ ಸರಕಾರವು ಸಕಾಲದಲ್ಲಿ ಅನುದಾನವನ್ನು ಬಳಸಿ; ಬಳಕೆ ಸಂಬಂಧಿತ ದೃಢಪತ್ರ ಕಳಿಸಬೇಕು ಎಂದು ಸೂಚಿಸಿದರು.
ಆರೋಪ ಪ್ರತ್ಯಾರೋಪದ ರಾಜಕಾರಣ ನಮ್ಮದಲ್ಲ. ನಮ್ಮದು ವಿಕಾಸದ- ಅಭಿವೃದ್ಧಿಯ ರಾಜಕಾರಣ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು. ಹಲವು ಯೋಜನೆಗಳಲ್ಲಿ ಕರ್ನಾಟಕವು ಅನುದಾನವನ್ನು ಖರ್ಚು ಮಾಡಿಲ್ಲ ಎಂದು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ತಿಳಿಸಿದರು.












Click it and Unblock the Notifications