Breaking; ಪರಿಷತ್ ಉಪ ಸಭಾಪತಿ ಆಯ್ಕೆಗೆ ಡಿ.23ಕ್ಕೆ ಚುನಾವಣೆ
ಬೆಂಗಳೂರು, ಡಿಸೆಂಬರ್ 21; ಕರ್ನಾಟಕ ವಿಧಾನ ಪರಿಷತ್ ಉಪ ಸಭಾಪತಿ ಆಯ್ಕೆಗೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಬುಧವಾರ ಪರಿಷತ್ ಸಭಾಪತಿಯಾಗಿ ಬಿಜೆಪಿಯ ಬಸವರಾಜ ಹೊರಟ್ಟಿ ಆಯ್ಕೆಗೊಂಡರು.
ಡಿಸೆಂಬರ್ 23ರಂದು ವಿಧಾನ ಪರಿಷತ್ ಉಪ ಸಭಾಪತಿ ಆಯ್ಕೆಗೆ ಚುನಾವಣೆ ನಡೆಯಲಿದೆ. ಗುರುವಾರ ಮಧ್ಯಾಹ್ನ 12ಗಂಟೆಯ ತನಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಲು ಅವಕಾಶವಿದೆ.
ವಿಧಾನ ಪರಿಷತ್ ಉಪ ಸಭಾಪತಿ ಸ್ಥಾನ ಸದ್ಯ ಬಿಜೆಪಿಯ ಕೈಯಲ್ಲಿಯೇ ಇದೆ. ಬಿಜೆಪಿ ಸದಸ್ಯ ಎಂ. ಕೆ. ಪ್ರಾಣೇಶ್ ಉಪ ಸಭಾಪತಿಯಾಗಿದ್ದಾರೆ. ಈ ಹೊಸ ಉಪ ಸಭಾಪತಿ ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ.

ಎಸ್. ಎಲ್. ಧರ್ಮೇಗೌಡ ನಿಧನದ ಕಾರಣ ತೆರವಾಗಿದ್ದ ಉಪ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಆಗ ಬಿಜೆಪಿಯ ಎಂ. ಕೆ. ಪ್ರಾಣೇಶ್, ಕಾಂಗ್ರೆಸ್ ಸದಸ್ಯ ಕೆ. ಸಿ. ಕೊಂಡಯ್ಯ ನಾಮಪತ್ರ ಸಲ್ಲಿಕೆ ಮಾಡಿದ್ದರು.
ವಿಧಾನ ಪರಿಷತ್‌ನಲ್ಲಿ ಜೆಡಿಎಸ್ ಬಿಜೆಪಿಗೆ ಬೆಂಬಲ ನೀಡಿತು. ಜೆಡಿಎಸ್‌ನ ಮತಗಳ ಸಹಾಯದಿಂದ ಉಪ ಸಭಾಪತಿಯಾಗಿ ಎಂ. ಕೆ. ಪ್ರಾಣೇಶ್ ಆಯ್ಕೆಗೊಂಡಿದ್ದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ 10 ದಿನಗಳ ಕಾಲದ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಈ ಕಲಾಪದಲ್ಲಿಯೇ ನೂತನ ಉಪ ಸಭಾಪತಿಗಳ ಆಯ್ಕೆ ನಡೆಯಲಿದೆ.
ಬುಧವಾರ ಕರ್ನಾಟಕ ವಿಧಾನ ಪರಿಷತ್ ಸಭಾಪತಿಯಾಗಿ ಬಸವರಾಜ ಹೊರಟ್ಟಿ ಆಯ್ಕೆಗೊಂಡರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರ್ನಾಟಕ ವಿಧಾನ ಪರಿಷತ್ತಿನ ನೂತನ ಸಭಾಪತಿಗಳಾಗಿ ಆಯ್ಕೆಯಾದ, ಪರಿಷತ್ತಿನ ಅತ್ಯಂತ ಅನುಭವಿ ಮತ್ತು ಹಿರಿಯ ಸದಸ್ಯ ಬಸವರಾಜ ಹೊರಟ್ಟಿಯವರನ್ನು ಅಭಿನಂದಿಸಿದರು.
ಬಸವರಾಜ ಹೊರಟ್ಟಿ ಅವರಿಗೆ ಹಾರ್ದಿಕ ಅಭಿನಂದನೆಗಳು. ಸಭಾಪತಿ ಪೀಠದ ಹಿರಿಮೆ, ಗರಿಮೆಗಳನ್ನು ಎತ್ತಿ ಹಿಡಿಯುವ ಜೊತೆಗೆ ಅತ್ಯಂತ ಸುಗಮವಾದ ರೀತಿಯಲ್ಲಿ ಕಲಾಪವನ್ನು ಮುಂದುವರೆಸಿಕೊಂಡು ಹೋಗುತ್ತಿರೆಂಬ ಅದಮ್ಯ ವಿಶ್ವಾಸ ನಮ್ಮಲ್ಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.












Click it and Unblock the Notifications