ವಿಪಕ್ಷ ನಾಯಕ ಆಯ್ಕೆ ವಿಳಂಬ: ಸೂಕ್ತ ಸಮಯದಲ್ಲಿ ವಿಪಕ್ಷ ನಾಯಕ ಆಯ್ಕೆ: ಕಟೀಲ್
ಮಂಗಳೂರು, ಜುಲೈ 15: ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದು ಎರಡು ತಿಂಗಳಾದರೂ ವಿಪಕ್ಷ ನಾಯಕನ ಆಯ್ಕೆ ಮಾತ್ರ ಇನ್ನೂ ಕಗ್ಗಂಟಾಗಿದ್ದು, ವಿರೋಧ ಪಕ್ಷದ ನಾಯಕರ ಆಯ್ಕೆ ವಿಳಂವಾಗುತ್ತಿರುವ ಹಿನ್ನಲೆ ಬಿಜೆಪಿ ನಾಯಕರ ವಿರುದ್ದ ಕಾಂಗ್ರೆಸ್ ನಾಯಕರು ತೀವ್ರವಾಗಿ ಟೀಕಿಸುತ್ತಿದ್ದಾರೆ.
ವಿಪಕ್ಷ ನಾಯಕನ ಆಯ್ಕೆ ವಿಳಂಬವಾಗುತ್ತಿರುವ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ರಾಜ್ಯ ಬಿಜೆಪಿಯಲ್ಲಿ ಯಾವುದೇ ಗೊಂದಲಗಳಿಲ್ಲ. ಸೂಕ್ತ ಸಮಯದಲ್ಲಿ ರಾಷ್ಟ್ರೀಯ ನಾಯಕರು ವಿಪಕ್ಷ ನಾಯಕನ ಆಯ್ಕೆ ಮಾಡಲಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿಯ 66 ಶಾಸಕರಲ್ಲಿ ಎಲ್ಲಾರೂ ಸಮರ್ಥ ಸಂಸದೀಯ ಪಟುಗಳಾಗಿದ್ದು , ಪ್ರತಿಯೊಬ್ಬರು ವಿಪಕ್ಷ ನಾಯಕನ ಸ್ಥಾನಕ್ಕೆ ಸಮರ್ಥರಾಗಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಾಕಷ್ಟು ಹತ್ಯೆಗಳು ನಡೆಯುತ್ತಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟು ಹೋಗಿದೆ. ಪೊಲೀಸ್ ಇಲಾಖೆಯು ಸರ್ಕಾರದ ಮಾತು ಕೇಳುತ್ತಿಲ್ಲ. ಜನರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ ಎಂದು ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಕಳೆದ ಒಂದೂವರೆ ತಿಂಗಳಿನಲ್ಲಿ ಜೈನ ಮುನಿಗಳು, ಉದ್ಯಮಿಗಳು, ಯುವ ಬ್ರಿಗೇಡ್ ಕಾರ್ಯಕರ್ತನ ಹಾಗೂ ಕೂಲಿ ಕಾರ್ಮಿಕರ ಸಹಿತ ಹತ್ತಾರು ಮಂದಿಯ ಹತ್ಯೆಗಳು ನಡೆದಿವೆ. ಅಧಿಕಾರಿಗಳ ವರ್ಗಾವಣೆಯನ್ನು ರೇಟ್ ಕಾರ್ಡ್ ಇಟ್ಟುಕೊಂಡು ದಂಧೆಯಾಗಿಸಿ ಈ ಸರ್ಕಾರ ಭ್ರಷ್ಟಚಾರ ನಡೆಸಿದ ಪರಿಣಾಮ ಪೊಲೀಸ್ ಇಲಾಖೆ ಸರ್ಕಾರದ ಮಾತು ಕೇಳದ ಕಾರಣ ಅವ್ಯಾಹತವಾಗಿ ಹತ್ಯೆಗಳು ನಡೆಯುತ್ತಿವೆ ಎಂದು ಕಟೀಲ್ ಆರೋಪಿಸಿದರು.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ಪಕ್ಷೇತರ ಅಭ್ಯರ್ಥಿಯಿಂದಾಗಿ ಬಿಜೆಪಿ ಅಭ್ಯರ್ಥಿಗೆ ಸೋಲಾಯಿತೇ ಹೊರತು ಪಕ್ಷದೊಳಗೆ ಯಾವುದೇ ಗೊಂದಲಗಳಿರಲಿಲ್ಲ. ಯಾರು ಯಾರು ಪಕ್ಷಕ್ಕೆ ಬರಬೇಕೋ ಪಕ್ಷದಲ್ಲಿ ಇರಬೇಕೋ ನಾವು ಅದನ್ನ ಸರಿ ಮಾಡ್ತೇವೆ. ಎಲ್ಲರೂ ಒಗ್ಗಟ್ಟಿನಿಂದ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸ್ಪರ್ಧಿಸುವ ಅವಕಾಶವಿದೆ ಎಂದು ಹೇಳಿದರು.
2024 ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವ ವದಂತಿಗಳ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಈ ಕುರಿತ ಯಾವುದೇ ಚರ್ಚೆಗಳು ಈಗ ನಡೆದಿಲ್ಲ. ಈಗಾಗಲೇ ಚುನಾವಣೆಗೆ ತಯಾರಿ ಮಾಡುವ ಕಾರ್ಯ ನಡೆಯುತ್ತಿದೆ. ಯಾರ ಜತೆ ಹೋಗಬೇಕು, ಯಾರ ಜತೆ ಮೈತ್ರಿ ಮಾಡಿಕೊಳ್ಳಬೇಕು, ಯಾರು ಅಭ್ಯರ್ಥಿ ಎಂಬ ಕುರಿತು ಮುಂದಿನ ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ಯೋಚನೆ ಮಾಡಲಿದ್ದೇವೆ ಎಂದು ತಿಳಿಸಿದರು.












Click it and Unblock the Notifications