ರಾಜ್ಯದ 4 ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ದಿನಾಂಕ ಘೋಷಣೆ: ಬಿಜೆಪಿ ಗೆಲ್ಲುವ ಸ್ಥಾನಗಳೆಷ್ಟು?
ಬೆಂಗಳೂರು, ಜನವರಿ 30: ಭಾರತ ಚುನಾವಣಾ ಆಯೋಗ ರಾಜ್ಯಸಭೆಯ 56 ಸ್ಥಾನಗಳಿಗೆ ಚುನಾವಣೆಯನ್ನು ಘೋಷಿಸಿದ್ದು,ಫೆಬ್ರವರಿ 27ರಂದು ಕರ್ನಾಟಕದ 4 ರಾಜ್ಯಸಭಾ ಸ್ಥಾನಗಳು ಸೇರಿದಂತೆ 15 ರಾಜ್ಯಗಳ 56 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಭಾರತದ ಚುನಾವಣಾ ಆಯೋಗ ಘೋಷಣೆ ಮಾಡಿದೆ.
ಹೌದು, ರಾಜ್ಯಸಭೆಯ 56 ಸ್ಥಾನಗಳಲ್ಲಿ ಕರ್ನಾಟಕ ರಾಜ್ಯದ ನಾಲ್ಕು ಸ್ಥಾನಗಳು ಸಹ ಒಳಗೊಂಡಿವೆ. ರಾಜ್ಯಸಭೆಯ ಈ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ರಾಜ್ಯ ವಿಧಾನಸಭೆಯ 224 ಶಾಸಕರು ಮತದಾರರಾಗಿದ್ದು, ಫೆಬ್ರವರಿ 27 ರಂದು ವಿಧಾನಸೌಧದಲ್ಲಿ ಬೆಳಿಗ್ಗೆ 9:00 ರಿಂದ ಸಂಜೆ 4:00 ಗಂಟೆಯವರೆಗೆ ಮತದಾನ ನಡೆಯಲಿದ್ದು, ಅಂದು ಸಂಜೆ 5:00 ಗಂಟೆಗೆ ಅಲ್ಲಿಯೇ ಮತ ಎಣಿಕೆ ಕಾರ್ಯ ಆರಂಭವಾಗಲಿದೆ.

ಪ್ರಸ್ತುತ ರಾಜ್ಯದಿಂದ ರಾಜ್ಯಸಭೆಯ ಪ್ರತಿನಿಧಿಗಳಾಗಿರುವ ರಾಜೀವ್ ಚಂದ್ರಶೇಖರ್, ಜಿ.ಸಿ ಚಂದ್ರಶೇಖರ್, ಡಾ.ಎಲ್.ಹನುಮಂತಯ್ಯ ಹಾಗೂ ಸೈಯದ್ ನಾಸಿರ್ ಹುಸೇನ್ ಅವರ ಅಧಿಕಾರ ಅವಧಿ ದಿನಾಂಕ: 02-04-2024 ಕ್ಕೆ ಕೊನೆಗೊಳ್ಳಲಿದ್ದು, ಇವರುಗಳಿಂದ ತೆರವಾಗಲಿರುವ 4 ಸ್ಥಾನಗಳಿಗೆ ಈ ಚುನಾವಣೆ ನಡೆಯಲಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಅನಾಯಾಸವಾಗಿ ಮೂರು ರಾಜ್ಯಸಭಾ ಸ್ಥಾನ ಗೆಲ್ಲಬಹುದು. ರಾಜ್ಯದಲ್ಲಿ 65 ಶಾಸಕರನ್ನು ಹೊಂದಿದ ಬಿಜೆಪಿ ಒಂದು ಸ್ಥಾನ ಗೆಲ್ಲುವ ನಿರೀಕ್ಷೆಯಲ್ಲಿದೆ. ಈ ಒಂದು ಸ್ಥಾನ ಗೆಲ್ಲಲು 45 ಶಾಸಕರ ಬೆಂಬಲ ಅಗತ್ಯವಿದೆ. 45 ಶಾಸಕರ ಮೊದಲ ಪ್ರಾಶಸ್ತ್ಯದ ಮತ ಪಡೆದರೆ, ಪಕ್ಷಗಳ ಸಂಖ್ಯಾಬಲದ ಲೆಕ್ಕಾಚಾರದಲ್ಲಿಆಡಳಿತಾರೂಢ ಕಾಂಗ್ರೆಸ್ ಮೂರು ಬಿಜೆಪಿಯಿಂದ ಓರ್ವ ಸದಸ್ಯ ಆಯ್ಕೆಯಾಗುವುದು ಖಚಿತವಾಗಿದೆ.
ಬಿಜೆಪಿಯಿಂದ ಮತ್ತೊಂದು ಬಾರಿಗೆ ರಾಜೀವ್ ಚಂದ್ರಶೇಖರ್ ಅವರೇ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಇನ್ನೂ ಆಡಳಿತರೂಢ ಕಾಂಗ್ರೆಸ್‌ನಿಂದ ನಾಸೀರ್ ಹುಸೇನ್ ಮತ್ತು ಜಿ.ಸಿ. ಚಂದ್ರಶೇಖರ್ ಅವರು ಮತ್ತೊಂದು ಅವಧಿಗೆ ಮುಂದುವರಿಯುವ ಸಾಧ್ಯತೆ ಇದ್ದು, ಮತ್ತೊಂದು ಸ್ಥಾನಕ್ಕೆ ಯಾರು ಅಭ್ಯರ್ಥಿಯಾಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ರಾಜ್ಯಸಭೆಯ ಸ್ಥಾನಗಳ ಚುನಾವಣಾ ವೇಳಾಪಟ್ಟಿ ಈ ಕೆಳಗಿನಂತಿದೆ.
- ಅಧಿಸೂಚನೆ ಹೊರಬೀಳುವ ದಿನ -ಫೆಬ್ರವರಿ . 8
- ನಾಮಪತ್ರ ಸಲ್ಲಿಸಲು ಕೊನೆಯ ದಿನ -ಫೆಬ್ರವರಿ .15
- ನಾಮಪತ್ರಗಳ ಪರಿಶೀಲನೆ - ಫೆಬ್ರವರಿ .16
- ಉಮೇದುವಾರಿಕೆ ವಾಪಸ್ ಪಡೆಯಲು ಕೊನೆಯ ದಿನ -ಫೆಬ್ರವರಿ .20
- ಮತದಾನದ ದಿನ ಮತ್ತು ಮತ ಎಣಿಕೆ - ಫೆಬ್ರವರಿ . 27
- ಚುನಾವಣಾ ಪ್ರಕ್ರಿಯೆ ಅಂತ್ಯ - ಫೆಬ್ರವರಿ .29












Click it and Unblock the Notifications