ಆದಷ್ಟು ಬೇಗ ಪ್ರತಿಪಕ್ಷ ನಾಯಕರನ್ನು ಆಯ್ಕೆ ಮಾಡಿ: ಬಿಜೆಪಿ ವರಿಷ್ಠರಿಗೆ ಕುಮಾರಸ್ವಾಮಿ ಮನವಿ
ಬೆಂಗಳೂರು, ಜುಲೈ 17: ಆದಷ್ಟು ಬೇಗ ವಿಧಾನಸಭೆಯಲ್ಲಿ ನಿಮ್ಮ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ನಾಯಕರಿಗೆ ಮನವಿ ಮಾಡಿದರು.
ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಬಿಜೆಪಿ ವರಿಷ್ಠರಿಗೆ ಸಲಹೆ ಕೊಡುವಷ್ಟು ದೊಡ್ಡವನಲ್ಲ. ಆದರೆ, ಈ ಸರ್ಕಾರದ ವಿರುದ್ಧ ಸದನದಲ್ಲಿ ದೊಡ್ಡ ಹೋರಾಟದ ಅಗತ್ಯ. ನಾವೆಲ್ಲ ಪ್ರತಿಪಕ್ಷದಲ್ಲಿ ಇರುವುದರಿಂದ ಸಂಘಟಿತ ಹೋರಾಟದ ಅಗತ್ಯವಿದೆ ಎಂದರು.

ಬಿಜೆಪಿ 65 ಸ್ಥಾನ ಗೆದ್ದಿದೆ. ಆ ಪಕ್ಷದಲ್ಲಿ ದೊಡ್ಡ ನಾಯಕರಿದ್ದಾರೆ. ಮಾಜಿ ಮುಖ್ಯಮಂತ್ರಿಗಳು, ಮಾಜಿ ಉಪ ಮುಖ್ಯಮಂತ್ರಿಗಳು, ಮಾಜಿ ಸಚಿವರು ಇದ್ದಾರೆ. ಯಾರಾದರೂ ಇಬ್ಬರನ್ನು ನೇಮಕ ಮಾಡಿ. ಇಷ್ಟು ದಿನ ಪ್ರತಿಪಕ್ಷ ಸ್ಥಾನವನ್ನು ಖಾಲಿ ಬಿಡುವುದು ಒಳ್ಳೆಯದಲ್ಲ ಎಂದು ಹೇಳಿದರು.
ಕುಮಾರಸ್ವಾಮಿ ಅವರು ವಿಪಕ್ಷ ನಾಯಕ ಆಗ್ತಾರಂತೆ. ಕೇಂದ್ರದ ಮಂತ್ರಿಗಿರಿಗೆ ಟವೆಲ್ ಹಾಕಿದ್ದಾರಂತೆ. ಹೀಗೆಲ್ಲಾ ಮಾಧ್ಯಮದಲ್ಲಿ ಬರುತ್ತಿದೆ. ನಮ್ಮ ಪಕ್ಷದಲ್ಲಿ 19 ಶಾಸಕರಿದ್ದಾರೆ. ನಾನು ಅವರ ಜೊತೆಯಲ್ಲೇ ಹೋರಾಟ ಮಾಡ್ತೀನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ನಾವು ಎಲ್ಲರೂ ಸೋತು ಎರಡು ಮೂರು ಕ್ಷೇತ್ರ ಗೆದ್ದಾಗಲೇ ಧೃತಿಗೆಡಲಿಲ್ಲ. ಈಗ 19 ಕ್ಷೇತ್ರಗಳಲ್ಲಿ ಗೆದ್ದಿದ್ದೇವೆ, ಈಗ ಹೆದರುತ್ತೇವೆಯಾ? ನಮ್ಮ ಮುಂದಿನ ನಡೆ ಏನು? ಯಾರ ಜೊತೆ ಸೇರಬೇಕು, ಬಿಡಬೇಕು ಎನ್ನುವ ಬಗ್ಗೆ ಯೋಚನೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ರಾಜ್ಯದಲ್ಲಿ ಸರಣಿ ಆತ್ಮಹತ್ಯೆಗಳು ನಡೆಯುತ್ತಿದ್ದರೆ ಇವರು ಪಂಚತಾರಾ ಹೋಟೆಲಿನಲ್ಲಿ ಘಟಬಂಧನ್ ಸಭೆ ಮಾಡುತ್ತಿದ್ದಾರೆ. ನಮ್ಮನ್ನು ತಾಜ್ ವೆಸ್ಟ್ ಎಂಡ್ ಹೋಟೆಲಿನಲ್ಲಿ ಇದ್ದಿದಕ್ಕೆ ಟೀಕೆ ಮಾಡಿದ್ದರು. ನಾವಿದ್ದರೆ ತಪ್ಪು, ಅವರಿದ್ದರೆ ಸರಿ. ಯಾಕೆಂದರೆ ನಾವು ರೈತ ಮಕ್ಕಳು ಅಲ್ಲವೇ? ಅದನ್ನು ಅವರು ಸಹಿಸಲು ಆಗುತ್ತಿಲ್ಲ. ಅವರು ಹೊಲದಲ್ಲಿ ಉತ್ತಿ, ಬಿತ್ತಿ ಬೆಳೆ ತೆಗೆದು ದುಡಿಮೆ ಮಾಡಿ ಹೋಟೆಲ್ ಬಿಲ್ಲು ಕಟ್ಟುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕೆಂಪೇಗೌಡ ವಿಮಾನ ನಿಲ್ದಾಣದಿಂದ ಪ್ರಾರಂಭವಾಗಿ, ವೆಸ್ಟ್ ಎಂಡ್ ಹೋಟೆಲ್‌ವರೆಗೂ ಕಟೌಟ್‌ಗಳು ರಾರಾಜಿಸ್ತಿವೆ. ಯಾರ ಸಮಾಧಿ ಮೇಲೆ ವಿಜೃಂಭಣೆಯಿಂದ ಈ ಸಭೆ ನಡೆಸುತ್ತಿದ್ದೀರಿ? ಎರಡು ತಿಂಗಳಿಂದ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಎಲ್ಲೆಲ್ಲೂ ಕಟೌಟ್ ಗಳು ಕಣ್ಣಿಗೆ ರಾಚುತ್ತಿವೆ. ರೈತರ ಸಮಾಧಿಯ ಮೇಲೆ ಈ ಸಮಾವೇಶವಾ? ಇಲ್ಲಿಂದ ದೇಶಕ್ಕೆ ಯಾವ ದೇಶದಲ್ಲಿ ಯಾವ ಸಂದೇಶ ಕೊಡ್ತೀರಿ? ಇದು ಗ್ಯಾರಂಟಿ ಮಾಡಲ್ ಅಂತೆ. ಗ್ಯಾರಂಟಿಗಳನ್ನು ಜಾರಿ ಮಾಡಿದ ಮೇಲೆಯೇ ರೈತ ಆತ್ಮಹತ್ಯೆಗಳು ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಬಗ್ಗೆ ಮಹಾಘಟಬಂಧನ್ ಸಭೆಯಲ್ಲಿ ಏನು ಹೇಳ್ತೀರಿ ಹೇಳಿ. ಸದನದಲ್ಲಿಯು ಮೊದಲು ಈ ಬಗ್ಗೆ ಚರ್ಚೆ ಮಾಡಿ. ಆರ್ಥಿಕ ಪರಿಸ್ಥಿತಿ ಬಗ್ಗೆ ಕುಮಾರಸ್ವಾಮಿ ಮಾತಾಡಿದರು ಅಂತ ಕಾಂಗ್ರೆಸ್ ನಾಯಕರು ಸುಳ್ಳು ಹೇಳಿಕೊಂಡು ಓಡಾಡ್ತಾ ಇದ್ದಾರೆ. ಎಸ್.ಎಂ ಕೃಷ್ಣಾ, ಧರ್ಮಸಿಂಗ್ ಕಾಲದಲ್ಲಿ ಆದ ಸಾಲದ ಬಗ್ಗೆ ಗೊತ್ತಿದೆಯಾ? ಕಾಂಗ್ರೆಸ್ ಕಾಲದಲ್ಲಿ ಅತಿ ಹೆಚ್ಚು ಸಾಲ ಮಾಡಲಾಗಿದೆ. ಈಗ 85 ಸಾವಿರ ಕೋಟಿ ಸಾಲ ಯಾಕೆ ಮಾಡುತ್ತಿದ್ದೀರಿ? ರೈತರನ್ನು ಬದುಕುಳಿಸಲು ಸಾಲ ಮಾಡುತ್ತಿದ್ದೀರಾ? ಶಿಕ್ಷಣ, ಆರೋಗ್ಯ ಇಲಾಖೆಗೆ ಏನು ಕೊಟ್ಟಿರಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications