ಎಚ್‌ಡಿಕೆ ಗೆಲ್ಲಿಸಿ, ಚನ್ನಪಟ್ಟಣವನ್ನು ಅಭಿವೃದ್ಧಿ ಮಾಡುತ್ತಾರೆ: ಅನಿತಾ
ರಾಮನಗರ , ಮಾರ್ಚ್ 27: ಹೆಚ್.ಡಿ ಕುಮಾರಸ್ವಾಮಿಯವರನ್ನು ಗೆಲ್ಲಿಸಿದರೆ ರಾಮನಗರ ಕ್ಷೇತ್ರದ ಮಾದರಿಯಲ್ಲಿ ಚನ್ನಪಟ್ಟಣ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತಾರೆ ಎಂದು ಪತಿ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಪರ ಪತ್ನಿ ಅನಿತಾ ಕುಮಾರಸ್ವಾಮಿ ಬ್ಯಾಟಿಂಗ್ ಮಾಡಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅನಿತಾ ಕುಮಾರಸ್ವಾಮಿ, ಟಿಕೆಟ್ ಗೊಂದಲದಿಂದ ಕೆಲ ದಿನಗಳಿಂದ ಕ್ಷೇತ್ರದಿಂದ ದೂರವಿದ್ದರು. ನಂತರದಲ್ಲಿ ರಾಮನಗರ, ಚನ್ನಪಟ್ಟಣ ಎರಡು ಕ್ಷೇತದಿಂದ ಸ್ವತಃ ಎಚ್ಡಿಕೆ ಸ್ಪರ್ಧೆಮಾಡುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಪತಿಯ ಪರವಾಗಿ ಪತ್ನಿ ಕ್ಷೇತ್ರ ಪ್ರವಾಸಕ್ಕೆ ಮುಂದಾಗಿದ್ದಾರೆ.
ಚನ್ನಪಟ್ಟಣ ತಾಲೂಕಿನ ಹೂಂಗನೂರು ಸೇರಿದಂತೆ ಹಲವಾರು ಹಳ್ಳಿಗಳಲ್ಲಿ ಬಮೂಲ್ ಕಲ್ಯಾಣ ಟ್ರಸ್ಟ್ ವತಿಯಿಂದ ಗ್ರಾಮೀಣ ಭಾಗದ ಜನರಿಗೆ ಉಚಿತ ನೀರಿನ ಕ್ಯಾನ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಜಿ ಶಾಸಕಿ ಅನಿತಾಕುಮಾರಸ್ವಾಮಿ ಮತಾನಾಡಿದರು.

"ಮನೆ ಮನೆಗೆ ಕುಮಾರಣ್ಣ ಅಭಿಯಾನ ಚನ್ನಪಟ್ಟಣದಲ್ಲಿ ಈಗಾಗಲೇ ಆರಂಭವಾಗಿದೆ . ಚನ್ನಪಟ್ಟಣ ಮೊದಲಿಂದಲೂ ನಮ್ಮ ಪಕ್ಷದ ಶಕ್ತಿ ಕೇಂದ್ರ . ಚನ್ನಪಟ್ಟಣದ ಜನತೆ ಮೊದಲಿನಿಂದಲೂ ದೇವೇಗೌಡರಿಗೆ ಮತ್ತು ಕುಮಾರಣ್ಣ ಅವರಿಗೆ ಶಕ್ತಿ ತುಂಬಿದ್ದಾರೆ. ಅದೇ ಒಂದು ಋಣ ನಮ್ಮ ಕುಟುಂಬದ ಮೇಲೆ ಇಂದಿಗೂ ಇದೆ. ಆದ್ದರಿಂದಲೇ ರಾಮನಗರ ಮತ್ತು ಚನ್ನಪಟ್ಟಣ ನಮ್ಮ ಕುಟುಂಬಕ್ಕೆ ಎರಡು ಕಣ್ಣುಗಳಿದ್ದಂತೆ ಎಂದು ಕುಮಾರಸ್ವಾಮಿ ಮತ್ತು ದೇವೇಗೌಡರು ಹೇಳುತ್ತಾರೆ," ಎಂದು ಅನಿತಾ ಕುಮಾರಸ್ವಾಮಿ ನೆನಪು ಮಾಡಿಕೊಂಡರು.

ಯಾರೇ ಏನೇ ಪೊಳ್ಳು ಭರವಸೆಗಳನ್ನು ಕೊಟ್ಟರೂ ನಂಬಬೇಡಿ. ಪ್ರಾಮಾಣಿಕವಾಗಿ ನಿಷ್ಠೆಯಿಂದ ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ದೇವೇಗೌಡರು ಮತ್ತು ಕುಮಾರಣ್ಣ ಅವರನ್ನು ನೀವು ಬೆಂಬಲಿಸಿ. ಜೆಡಿಎಸ್ ಪಕ್ಷವನ್ನು ಈ ಬಾರಿ ಅಧಿಕಾರಕ್ಕೆ ತರಬೇಕು ಎಂದು ಜನರಲ್ಲಿ ಮನವಿಯನ್ನು ಮಾಡಿದರು.

ನೀವು ಮಾಡುವ ಮತದಾನಕ್ಕೆ ತುಂಬಾ ಬೆಲೆಯಿದೆ. ಯಾರೂ ಅರ್ಹನಲ್ಲದ ವ್ಯಕ್ತಿಗೆ ಮತ ನೀಡಿ ಐದು ವರ್ಷಗಳ ಕಾಲ ತೊಂದರೆಗೆ ಸಿಲುಕಬೇಡಿ. ಚನ್ನಪಟ್ಟಣದ ಜನರು ದೇವೇಗೌಡರಿಗೂ ಆರ್ಶೀವಾದ ಮಾಡಿದ್ದೀರಿ, ಕುಮಾರಸ್ವಾಮಿಯವರು ಎಂ.ಪಿ ಚುನಾವಣೆಗೆ ಸ್ಪರ್ಧಿಸಿದ್ದಾಗ ಅವರಿಗೂ ಆರ್ಶೀವಾದ ಮಾಡಿದ್ದೀರಿ. ಹಾಗಾಗಿ ಈ ಬಾರಿಯೂ ನಿಮ್ಮ ಆರ್ಶೀವಾದ ನಮಗೆ ಬೇಕು ಎಂದು ತಿಳಿಸಿದರು.












Click it and Unblock the Notifications