ಶಾಲಾ ಮಕ್ಕಳಿಗೆ ಮೊಟ್ಟೆ, ಬಾಳೆ ಹಣ್ಣು ವಿತರಣೆ; ಅವಧಿ ವಿಸ್ತರಣೆ
ಬೆಂಗಳೂರು, ಜುಲೈ 12; ಶಾಲಾ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವಾಗಿ ಬೇಯಿಸಿದ ಮೊಟ್ಟೆ, ಬಾಳೆ ಹಣ್ಣು ಅಥವಾ ಶೇಂಗಾ ಚಿಕ್ಕಿ ವಿತರಿಸುವಂತೆ ಸುತ್ತೋಲೆ ಹೊರಡಿಸಲಾಗಿತ್ತು. ಈಗ ಇದನ್ನು ವಿತರಣೆ ಮಾಡುವ ಅವಧಿ ವಿಸ್ತರಣೆ ಮಾಡುವಂತೆ ಹೊಸ ಸುತ್ತೋಲೆಯನ್ನು ಕಳಿಸಲಾಗಿದೆ. ಸುಭ ಕಲ್ಯಾಣ್, ನಿರ್ದೇಶಕರು ಪಿ.ಎಂ.ಪೋಷಣ್, ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. 20/5/2023, 21/7/2023 ಸುತ್ತೋಲೆಗಳನ್ನು ಉಲ್ಲೇಖ ಮಾಡಿದ್ದಾರೆ.
2023-24ನೇ ಸಾಲಿಗೆ ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಣೆಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1-8ನೇ ತರಗತಿ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವಾಗಿ ಬೇಯಿಸಿದ ಮೊಟ್ಟೆ (ಮೊಟ್ಟೆ ಸ್ವೀಕರಿಸದ ಮಕ್ಕಳಿಗೆ ಬಾಳೆ ಹಣ್ಣು ಅಥವಾ ಶೇಂಗಾ ಚಿಕ್ಕಿ) ವಿತರಿಸುವಂತೆ ಹೊರಡಿಸಿದ ಸುತ್ತೋಲೆ ಅವಧಿ ವಿಸ್ತರಿಸಿರುವ ಬಗ್ಗೆ ಎಂದು ವಿಷಯ ಪ್ರಸ್ತಾಪಿಸಲಾಗಿದೆ. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕರ್ನಾಟಕ ಸರ್ಕಾರ ಇವರು ದಿನಾಂಕ 10/7/2023ರಂದು ನಡೆದ ಸಭೆಯಲ್ಲಿ ನೀಡಿರುವ ಸೂಚನೆಯಂತೆ ಈ ಸುತ್ತೋಲೆಯನ್ನು ಪ್ರಕಟಿಸಲಾಗಿದೆ.

ಸುತ್ತೋಲೆಯ ವಿವರಗಳು; 2023-24ನೇ ಸಾಲಿನಲ್ಲಿ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 1-6 ನೇ ತರಗತಿ ಮಕ್ಕಳಿಗೆ ಅಪೌಷ್ಟಿಕತೆ ಮತ್ತು ಅನಿಮಿಯ ನಿವಾರಣೆಗಾಗಿ ಪೂರಕ ಪೌಷ್ಟಿಕ ಆಹಾರವಾಗಿ ಬೇಯಿಸಿದ ಮೊಟ್ಟೆ (ಮೊಟ್ಟೆ ಸ್ವೀಕರಿಸದ ಮಕ್ಕಳಿಗೆ ಬಾಳೆ ಹಣ್ಣು ಅಥವಾ ಶೇಂಗಾ ಚಿಕ್ಕಿ) ಮಧ್ಯಾಹ್ನದ ಬಿಸಿಯೂಟದೊಂದಿಗೆ ಒಬ್ಬ ವಿದ್ಯಾರ್ಥಿಗೆ ವಾರದಲ್ಲಿ ಒಂದು ಮೊಟ್ಟೆಯಂತ ದಿನಾಂಕ 20/6/2023ರಿಂದ ಪ್ರಾರಂಭಿಸಿ ದಿನಾಂಕ 15/7/2023ರವರೆಗೆ ಸರ್ಕಾರದ ಮುಂದಿನ ಆದೇಶ ಬರುವವರೆಗೂ ತರಗತಿವಾರು ಫಲಾನುಭವಿ ಮಕ್ಕಳ ಹಾಜರಾತಿಗೆ ಅನುಗುಣವಾಗಿ ವಿತರಿಸುವಂತೆ ಸೂಚಿಸಲಾಗಿತ್ತು.
ಈ ಆದೇಶಕ್ಕೆ ಪೂರಕವಾಗಿ 10ನೇ ತರಗತಿ ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರವಾಗಿ ಬೇಯಿಸಿದ ಮೊಟ್ಟೆ (ಮೊಟ್ಟೆ ಸ್ವೀಕರಿಸದ ಮಕ್ಕಳಿಗೆ ಬಾಳೆ ಹಣ್ಣು ಅಥವಾ ಶೇಂಗಾ ಚಿಕ್ಕಿ) ಯನ್ನು ವಿತರಿಸುವ ಅವಧಿಯನ್ನು ದಿನಾಂಕ 15/7/2023 ರಿಂದ ದಿನಾಂಕ 31/7/2023 ರವರೆಗೆ ಅಂದರೆ 2 ವಾರಗಳ ಅವಧಿಗೆ ಸರ್ಕಾರದ ಮುಂದಿನ ಆದೇಶ ಬರುವವರೆಗೂ ವಾರಕ್ಕೆ ಒಂದು ಮೊಟ್ಟೆಯಂತ ವಿವರಿಸುವ ಕ್ರಮವನ್ನು ಕೈಗೊಳ್ಳಲು ಸೂಚನೆಯಂತೆ ತಿಳಿಸಿರುತ್ತದೆ.
ವಿತರಣೆಯ ಅವಧಿಯ ವಿಸ್ತರಣೆ ಸಂಬಂಧ ಅಗತ್ಯ ಕ್ರಮವಹಿಸುವಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಸಂಬಂಧಿಸಿದ ಅಧಿಕಾರಿಗಳಿಗೆ ಈ ಮೂಲಕ ಸೂಚಿಸಲಾಗಿದೆ. ಪ್ರಸ್ತುತ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪ್ರತಿ ವಿಧ್ಯಾರ್ಥಿಗೆ ಒಂದು ದಿನಕ್ಕೆ ಒಂದು ಮೊಟ್ಟೆ, ಬಾಳಹಣ್ಣು/ಶೇಂಗಾ ಚಿಕ್ಕಿಯ ಘಟಕ ವೆಚ್ಚ ರೂ. 6 ರಂತೆ ನಿಗದಿಪಡಿಸಿರುತ್ತದೆ. ಇದರಂತೆ ವೆಚ್ಚ ಭರಿಸಲು ಸೂಚಿಸಲಾಗಿದೆ.
ರಾಜ್ಯದ ಕಲ್ಯಾಣ ಕರ್ನಾಟಕ ವಿಭಾಗದ 8 ಜಿಲ್ಲೆಗಳಾದ ಯಾದಗಿರಿ, ಕಲಬುರಗಿ, ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಬೀದರ್, ವಿಜಯಪುರ ಈ ಜಿಲ್ಲೆಗಳಲ್ಲಿ 2023-24ನೇ ಸಾಲಿನ ಪಿ.ಎ.ಬಿ ಅನುಮೋದನೆ ಮತ್ತು ಅನುದಾನ ಹಂಚಿಕೆಯಂತೆ ಕೇಂದ್ರ ಮತ್ತು ರಾಜ್ಯದ ಪಾಲಿನ ಫ್ಲೆಕ್ಸಿ ಅನುದಾನದಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1-8ನೇ ತರಗತಿಯ ಫಲಾನುಭವಿ ಮಕ್ಕಳಿಗೆ ಸದರಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಂತೆ ಸೂಚಿಸಿದೆ.
ಈ ಹಿಂದಿನ ಮಾರ್ಗಸೂಚಿಯಂತೆ ಅಗತ್ಯ ಕ್ರಮಗಳನ್ನು ಕೈಗೊಂಡು ಫಲಾನುಭವಿ ವಿದ್ಯಾರ್ಥಿಗಳಿಗೆ ಎಸ್.ಡಿ.ಎಂ.ಸಿ ನೇತೃತ್ವದಲ್ಲಿ ಪೂರಕ ಪೌಷ್ಟಿಕ ಆಹಾರವನ್ನು ವಿತರಿಸುವಂತೆ ಶಾಲೆಯ ಮುಖ್ಯಶಿಕ್ಷಕರಿಗೆ ಸೂಚಿಸಿದ್ದು ಈ ಸಂಬಂಧ ವೆಚ್ಚವನ್ನು K2 PFMS ಅಡಿಯಲ್ಲಿ ಭರಿಸಿ ಖರ್ಚು ವೆಚ್ಚುಗಳನ್ನು ನಿರ್ವಹಿಸುವಂತೆ ಸೂಚಿಸಿದೆ.
ಉಳಿದಂತೆ ರಾಜ್ಯದ 23 ಜಿಲ್ಲೆಗಳಲ್ಲಿ 1-8ನೇ ತರಗತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಫಲಾನುಭವಿ ಮಕ್ಕಳಿಗೆ ಮೇಲ್ಕಂಡಂತೆ ಶಾಲೆಯ ಮುಖ್ಯಶಿಕ್ಷಕರು ಹಿಂದಿನ ಮಾರ್ಗಸೂಚಿಯಂತೆ ಎಸ್.ಡಿ.ಎಂ.ಸಿ ನೇತೃತ್ವದಲ್ಲಿ ಅಗತ್ಯ ಕ್ರಮ ಕೈಗೊಂಡು ಪೂರಕ ಪೌಷ್ಟಿಕ ಆಹಾರವನ್ನು ವಿತರಿಸುವಂತೆ ಈ ಮೂಲಕ ಸೂಚಿಸಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 13 ಜಿಲ್ಲೆಗಳಲ್ಲಿ ಪಿ.ಎಂ.ಪೋಷನ್ ಅಡಿಯಲ್ಲಿ ಜಿಲ್ಲಾ ಪಂಚಾಯತ್ ನೊಂದಿಗೆ Mou ಮಾಡಿಕೊಂಡು ಭಾಗವಹಿಸಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸಿದ್ಧಪಡಿಸಿದ ಮಧ್ಯಾಹ್ನದ ಬಿಸಿಯೂಟ ವಿತರಿಸುತ್ತಿರುವ ಎಲ್ಲಾ ಸ್ವಯಂ ಸೇವಾ ಸಂಸ್ಥೆಗಳು (NGO) ಸಹ ಮೇಲ್ಕಂಡ ಉಲ್ಲೇಖಿತ ಮಾರ್ಗಸೂಚಿಯಂತೆ ವಿಸ್ತರಿಸಿರುವ ಅವಧಿಯಲ್ಲಿ ಪೂರಕ ಪೌಷ್ಟಿಕ ಆಹಾರವನ್ನು ವಿತರಿಸುವ ಕ್ರಮ ವಹಿಸುವಂತೆ ನಿರ್ದೇಶನ ನೀಡಲಾಗಿದೆ. ಈ ಕುರಿತು ಸಂಬಂಧಿಸಿದ ಜಿಲ್ಲೆಗಳ ಜಿಲ್ಲಾ ಪಂಚಾಯತ್ ಶಿಕ್ಷಣಾಧಿಕಾರಿಗಳು ಪಿ.ಎಂ.ಪೋಷಣ್ ಹಾಗೂ ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕರು ಪಿ.ಎಂ.ಪೋಷಣ್, ಕೂಡಲೇ ಅಗತ್ಯ ಕ್ರಮ ಕೈಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸೂಚಿಸಿದೆ.












Click it and Unblock the Notifications