Breaking: ಡಿಕೆ ಶಿವಕುಮಾರ್‌ಗೆ ತಪ್ಪದ ಇಡಿ ಸಂಕಷ್ಟ, ಮತ್ತೆ ಸಮನ್ಸ್
ಬೆಂಗಳೂರು, ನ. 04: ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ಗೆ ಇಡಿ ಸಂಕಷ್ಟ ತಪ್ಪಿಲ್ಲ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮತ್ತೆ ನೋಟಿಸ್ ನೀಡಿದೆ.
ನವೆಂಬರ್ 7 ರಂದು (ಸೋಮವಾರ) ವಿಚಾರಣೆಗೆ ಬರುವಂತೆ ಡಿ. ಕೆ. ಶಿವಕುಮಾರ್‌ಗೆ ನೋಟಿಸ್ ನೀಡಲಾಗಿದೆ.
ಜಾರಿ ನಿರ್ದೇಶನಾಲಯ ಮತ್ತು ಡಿ. ಕೆ. ಶಿವಕುಮಾರ್ ನಡುವಿನ ಜಟಾಪಟಿ ಇಂದಿನದ್ದಲ್ಲ. ಹಲವು ಬಾರಿ ವಿಚಾರಣೆಗೆ ಸಮನ್ಸ್ ನೀಡಿ, ಹಲವು ಬಾರಿ ವಿಚಾರಣೆ ನಡೆಸಿರುವ ಇಡಿ ವಿರುದ್ಧ ಡಿ. ಕೆ. ಶಿವಕುಮಾರ್ ಹಲವು ಬಾರಿ ಗರಂ ಆಗಿದ್ದಾರೆ.

ಕಳೆದ ತಿಂಗಳು ನೀಡಿದ್ದ ನೋಟಿಸ್‌ಗೆ ಪ್ರತಿಕ್ರಿಯೆಯಾಗಿ ಭಾರತ್ ಜೋಡೋ ಯಾತ್ರೆಯನ್ನು ಉಲ್ಲೇಖಿಸಿ ಡಿಕೆಶಿ ಸಮಯಾವಕಾಶ ಕೇಳಿದ್ದರು. ಆದರೆ, ಇಡಿ ಅಧಿಕಾರಿಗಳು ಸಮಯಾವಕಾಶ ನೀಡಿರಲಿಲ್ಲ. ಇದೇ ಬೇಸರದಲ್ಲಿ ಡಿಕೆಶಿ ದೆಹಲಿಗೆ ತೆರಳಿ ವಿಚಾರಣೆಗೆ ಹಾಜರಾಗಿದ್ದರು.
ವಿಷಯವನ್ನು ಇಷ್ಟಕ್ಕೆ ಬಿಡದ ಕೆಪಿಸಿಸಿ ಅಧ್ಯಕ್ಷ, ಕೆಲ ದಿನಗಳ ಹಿಂದೆ ತಮ್ಮ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ರದ್ದುಗೊಳಿಸುವಂತೆ ದೆಹಲಿ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಈ ಮನವಿ ಮೇರೆಗೆ ಸದ್ಯ ದೆಹಲಿ ಹೈಕೋರ್ಟ್ ನವೆಂಬರ್ 2ರಂದು ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ.
ಅಕ್ಟೋಬರ್ 7ರಂದು ದೆಹಲಿಯಲ್ಲಿ ತನಿಖಾ ಸಂಸ್ಥೆಯ ಮುಂದೆ ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ಡಿ. ಕೆ. ಶಿವಕುಮಾರ್ ಮಾಡಿದ್ದ ಮನವಿಯನ್ನು ಜಾರಿ ನಿರ್ದೇಶನಾಲಯ ತಿರಸ್ಕರಿಸಿತ್ತು.
ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಇಡಿ ವಿಚಾರಣೆಗೆ ಹಾಜರಾಗಿದ್ದರು. ಇದೇ ಪ್ರಕರಣದಲ್ಲಿ ಡಿ. ಕೆ. ಶಿವಕುಮಾರ್ ಸಹೋದರ, ಸಂಸದ ಡಿ. ಕೆ. ಸುರೇಶ್ ಅವರನ್ನು ಇಡಿ ವಿಚಾರಣೆ ನಡೆಸುತ್ತಿದೆ.












Click it and Unblock the Notifications