ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ
ಬೆಂಗಳೂರು, ಜೂನ್ 22: ರಾಜ್ಯದಲ್ಲಿ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಆಗಾಗ ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸುತ್ತಲಿರುತ್ತದೆ. ಹಾಗೆಯೇ ಇದೀಗ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಹೊಸ ಸಿಸ್ಟಮ್ ಜಾರಿ ಮಾಡಲು ಮುಂದಾಗಿದೆ. ಹಾಗಾದ್ರೆ ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಕ್ಕಳ ಹಾಜರಾತಿಗೆ ಆನ್‌ಲೈನ್ ಸಿಸ್ಟಮ್ ಜಾರಿ ಆಗಲಿದೆ. ಪ್ರಸಕ್ತ ವರ್ಷದಿಂದಲೇ ಎಐ ಫೇಶಿಯಲ್ ರಿಕಗ್ನಿಷನ್ ತಂತ್ರಜ್ಞಾನ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೆ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. 2025-26ನೇ ಶೈಕ್ಷಣಿಕ ಸಾಲಿನಿಂದಲೇ ಈ ವ್ಯವಸ್ಥೆ ಜಾರಿಗೆ ಬರಲಿದೆ. ಆದ್ದರಿಂದ ಪ್ರಸಕ್ತ ವರ್ಷದಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹೆಸರು ಕರೆದು ಹಾಜರಾತಿ ಹಾಕುವ ಬದಲಾಗಿ, ಶಿಕ್ಷಕರು ಮೊಬೈಲ್‌ನಲ್ಲಿ ವಿದ್ಯಾರ್ಥಿಗಳ ಫೋಟೋ ಕ್ಲಿಕ್ಕಿಸಿಕೊಳ್ಳುವ ಮೂಲಕ ಹಾಜರಾತಿ ದಾಖಲು ಮಾಡಿಕೊಳ್ಳಲಿದ್ದಾರೆ.

ಇದೇ ಶೈಕ್ಷಣಿಕ ಸಾಲಿನಿಂದಲೇ ಸರ್ಕಾರಿ ಹಾಗೂ ಸರ್ಕಾರದ ಅನುದಾನ ಪಡೆಯುವ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಇ-ಹಾಜರಾತಿ ಕಡ್ಡಾಯ ಮಾಡುವ ಆದೇಶವನ್ನೂ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಮಕ್ಕಳ ಮುಖಚರ್ಚೆ ಗುರುತಿಸುವ ಮೂಲಕ ಇ-ಹಾಜರಾತಿ ದಾಖಲಿಸಿಕೊಳ್ಳುವ ನರಂತರ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವುದಾಗಿ ಈ ವರ್ಷದ ಬಜೆಟ್‌ನಲ್ಲಿ ಘೋಷಣ ಮಾಡಲಾಗಿದ್ದು, ಇಲಾಖೆ ಆಯುಕ್ತ ಕೆ.ವಿ.ತ್ರಿಲೋಕ್‌ಚಂದ್ರ ಅವರನ್ನು ಯೋಜನೆ ಅನುಷ್ಠಾನ ಅಧಿಕಾರಿಯಾಗಿ ನೇಮಕ ಮಾಡಿದೆ.
ಮೊಬೈಲ್ ಆಧಾರಿತ ಎಐ ಫೇಶಿಯಲ್ ರಿಕಗ್ನಿಷನ್ ತಂತ್ರಜ್ಞಾನ ಆಧಾರಿತ ಹಾಜರಾತಿ ವ್ಯವಸ್ಥೆ ಇದಾಗಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಈ ವ್ಯವಸ್ಥೆ ಜಾರಿ ಆಗಲಿದೆ. 52,686 ಶಾಲೆಗಳಲ್ಲಿ ಈ ವ್ಯವಸ್ಥೆ ಜಾರಿಯಾಗಲಿದೆ. ಪ್ರತಿನಿತ್ಯ ಈ ಯೋಜನೆಯಡಿ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಸೇರಿ ಒಟ್ಟು 52,686 ಶಾಲೆಗಳ 52 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಹಾಜರಾತಿಯನ್ನು ಕೃತಕ ಬುದ್ಧಿಮತ್ತೆ ಚಾಲಿತ, ಮುಖ ಚಹರೆ ಗುರುತು ಆಧಾರಿತವಾಗಿ ತೆಗೆದುಕೊಳ್ಳಲಾಗುಲಾಗುತ್ತದೆ.
ಸುಮಾರು 5 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯನ್ನು ಕೆಎಸ್‌ಡಿಸಿ ಮೂಲಕ ನಿರ್ವಹಿಸಲಾಗುತ್ತದೆ. ಇದಕ್ಕಾಗಿ ಸಾಫ್ಟ್‌ವೇರ್ ಅನ್ನು ಸಹ ಸಿದ್ಧಪಡಿಸಲಾಗುತ್ತಿದೆ. ಇದು ಗರಿಷ್ಠ ಗೌಪ್ಯತೆ ಮತ್ತು ಸುರಕ್ಷತೆ ಕಾಪಾಡಲಿದೆ. ಪ್ರಸಕ್ತ ವರ್ಷದಿಂದಲೇ ಇ-ಹಾಜರಾತಿ ಜಾರಿಗೆ ಬರಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶದಲ್ಲಿ ತಿಳಸಲಾಗಿದೆ.
ಪ್ರತಿನಿತ್ಯ ನಿಖರ ಹಾಜರಾತಿಯಿಂದ ಸಂಬಂಧಿಸಿದ ಶಾಲೆಯ ವ್ಯವಸ್ಥೆ ಸುಧಾರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುಹುದು. ಪ್ರಸ್ತುತ ಕೈಯಿಂದ ಬರೆಯುವ ಹಾಜರಾತಿಯಲ್ಲಿನ ನ್ಯೂನತೆಗಳು, ಹಾಜರಾತಿಯ ಕಳ್ಳಾಟಕ್ಕೂ ಬ್ರೇಕ್ ಹಾಕಿದಂತಾಗಲಿದೆ. ನಿಖರ ಮಾಹಿತಿ ಲಭ್ಯ ಆಗುವುದರಿಂದ ಮಕ್ಕಳ ಹಾಜರಾತಿಯ ಮೇಲ್ವಿಚಾರಣೆ ಸಾಧ್ಯ ಆಗಲಿದೆ. ಹಾಜರಾತಿ ಹೆಸರಲ್ಲಿ ಅನಗತ್ಯ ಮತ್ತು ಹೆಚ್ಚುವರಿ ಅನುದಾನ ಹಂಚಿಕೆಯನ್ನು ಸಹ ಗಣನೀಯವಾಗಿ ನಿಯಂತ್ರಿಸಬಹುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಇ-ಹಾಜರಾತಿ ಹೇಗೆ ಕಾರ್ಯ ನಿರ್ವಹಿಸಲಿದೆ?: ಶಾಲೆಯ ಮೊದಲ ತರಗತಿಯಲ್ಲಿ ಹಾಜರಾತಿ ಪುಸ್ತಕದಲ್ಲಿ ಹೆಸರು ಕೂಗುವ ಬದಲು, ಶಿಕ್ಷಕರ ಮೊಬೈಲ್‌ಗೆ ಅಳವಡಿಕೆ ಮಾಡಲಾಗಿರುವ ಸಾಫ್ಟ್‌ವೇರ್‌ನಲ್ಲಿ ಮಕ್ಕಳ ಫೋಟೋ ಕ್ಲಿಕ್ಕಿಸಿಕೊಳ್ಳಲಾಗುತ್ತದೆ. ಅದರಲ್ಲಿ ಮಕ್ಕಳ ಹೆಸರು ಮತ್ತು ತರಗತಿ ವಿವರ ಮೊದಲೇ ಫೀಡ್ ಮಾಡಲಾಗಿದ್ದು, ಫೋಟೋ ಕ್ಲಿಕ್ಕಿಸಿದ ತಕ್ಷಣ ಆ್ಯಪ್‌ನಲ್ಲಿ ಸ್ವಯಂಚಾಲಿತವಾಗಿ ಹೆಸರು, ಸಮಯ ಸಹಿತ ಹಾಜರಾತಿ ದಾಖಲಾಗುತ್ತದೆ.
ಈ ವಿವರ ನೇರವಾಗಿ ಕೇಂದ್ರ ಕಚೇರಿಗೆ ರವಾನೆ ಅಗಲಿದ್ದು, ಏಕಕಾಲದಲ್ಲಿ ನಿಖರ ಮಾಹಿತಿ ಶಿಕ್ಷಣ ಇಲಾಖೆಯ ಪ್ರಧಾನ ಕಚೇರಿಗೆ ತಲುಪುತ್ತದೆ. ಒಂದು ವೇಳೆ ಮಕ್ಕಳು ಗೈರಾದರೆ ತೋರಿಕೆಗಾಗಿ ಶಿಕ್ಷಕರು ಹಾಕಬಹುದಾದ ಸಂಭವನೀಯ ನಕಲಿ ಹಾಜರಾತಿಗೂ ಬ್ರೇಕ್ ಬೀಳಲಿದೆ.
ಇ-ಹಾಜರಾತಿ ಪ್ರಯೋಜನಗಳು
* ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಸಮಯದಲ್ಲಿ ಲಭ್ಯ ಆಗುತ್ತದೆ
* ವಿದ್ಯಾರ್ಥಿಗಳ ಹಾಜರಾತಿಯಲ್ಲಿ ನಿಖರತೆ ಸಿಕ್ಕಂತಾಗಲಿದೆ
* ಪ್ರಸ್ತುತ ಹಾಜರಾತಿ ದಾಖಲಾತಿಯಲ್ಲಿನ ವ್ಯವಸ್ಥೆಯಲ್ಲಿನ ನ್ಯೂನ್ಯತೆ ಸರಿಪಡಿಸಿ ನಿಖರ ಹಾಜರಾತಿಯನ್ನು ನಿತ್ಯವೂ ಪಡೆಯಬಹುದು
* ಯಾವುದೇ ಶಾಲೆಯಲ್ಲಿ ಹಾಜರಾತಿಯಲ್ಲಿ ಕೊರತೆ ಕಂಡುಬಂದ್ರೆ ಮೇಲ್ವಿಚಾರಣೆ ಮಾಡಬಹುದು
* ವಿವಿಧ ಪ್ರೋತ್ಸಾಹದಾಯಕ ಯೋಜನೆಗಳ ಅನುಷ್ಠಾನಕ್ಕೆ ನಿಖರ ಮಾಹಿತಿ ಲಭ್ಯ ಆಗಲಿದೆ.
* ವಿದ್ಯಾರ್ಥಿಗಳ ನಿಖರ ಮಾಹಿತಿ ಸಿಗುವುದರಿಂದ ಅನಗತ್ಯ, ಹೆಚ್ಚುವರಿ ಅನುದಾನ ಹಂಚಿಕೆಗೆ ಬ್ರೇಕ್ ಹಾಕಬಹುದು
* ಪ್ರತಿನಿತ್ಯ ಹಾಜರಾತಿ ಲಭ್ಯ ಆಗುವುದರಿಂದ ಶಾಲೆಗಳಲ್ಲಿನ ಶೈಕ್ಷಣಿಕ ವ್ಯವಸ್ಥೆ ಸುಧಾರಿಸಿದಂತಾಗಲಿದೆ
ಒಟ್ಟಿನಲ್ಲಿ ಇನ್ಮುಂದೆ ವಿದ್ಯಾರ್ಥಿಗಳು ಬಾರದಿದ್ದರೂ ಸಹ ಅವರಿಗೆ ಹಾಜರಾತಿ ನೀಡಲು ಸಾಧ್ಯವಿಲ್ಲ. ಇದರಿಂದ ವಿದ್ಯಾರ್ಥಿಗಳಿಗೂ ಉಪಯುಕ್ತ. ಮತ್ತೊಂದೆಡೆ ಅನಗತ್ಯ ಅನುದಾನ ಹಂಚಿಕೆಗೂ ಬ್ರೇಕ್ ಬಿದ್ದಂತಾಗಲಿದೆ. ಅಲ್ಲದೆ, ಶಿಕ್ಷಣ ವ್ಯವಸ್ಥೆಯಲ್ಲಿಯೂ ಸುಧಾರಣೆ ಕಾಣಬಹುದು.












Click it and Unblock the Notifications