ರಾಜ್ಯ ಕಾಂಗ್ರೆಸ್ಸಿನ ಒಳಬೇಗುದಿಯನ್ನು ಒಪ್ಪಿಕೊಂಡ ರಾಹುಲ್ ಗಾಂಧಿ?
ತಮಿಳುನಾಡು ಮತ್ತು ಕೇರಳ ರಾಜ್ಯದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದು ಬಂದ ಭಾರತ್ ಜೋಡೋ ಯಾತ್ರೆಗೆ ಸಿಕ್ಕ ಜನಸ್ಪಂದನವನ್ನು ಹೋಲಿಸಿದರೆ, ಕರ್ನಾಟಕದಲ್ಲಿ ಅದಕ್ಕಿಂತ ದುಪ್ಪಟ್ಟು ಬೆಂಬಲ ವ್ಯಕ್ತವಾಗುತ್ತಿರುವುದು ಸತ್ಯ.
ಪಕ್ಷದ ಬೃಹತ್ ಸಭೆ, ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ತಾವೇನು ಎನ್ನುವುದನ್ನು ಡಿ. ಕೆ. ಶಿವಕುಮಾರ್ ಮತ್ತು ತಂಡ ಮತ್ತೊಮ್ಮೆ ತೋರಿಸಿಕೊಟ್ಟಿದೆ. ಭಾರತ್ ಜೋಡೋ ಯಾತ್ರೆ ಸದ್ಯ ತುಮಕೂರು ಜಿಲ್ಲೆಯಲ್ಲಿದೆ. ಶನಿವಾರದ (ಅ 8) ಸಭೆಗೂ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು/ ಮುಖಂಡರು ಹರಿದು ಬಂದಿದ್ದರು.
ಕರ್ನಾಟಕ ಕಾಂಗ್ರೆಸ್ಸಿನಲ್ಲಿರುವ ಬಣ ರಾಜಕೀಯದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ರಾಹುಲ್ ಗಾಂಧಿ ನೀಡಿದ ಉತ್ತರ, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಒಳ ಬೇಗುದಿಯನ್ನು ಒಪ್ಪಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ಚುನಾವಣೆ ಎದುರಿಸಲಿದ್ದೇವೆ ಎನ್ನುವ ಮಾತನ್ನಾಡಿದ್ದಾರೆ.
ಈ ಹಿಂದಿನ ಕಾರ್ಯಕ್ರಮದಲ್ಲಿ ಪರಸ್ಪರ ಆಲಂಗಿಸಿಕೊಳ್ಳುವಂತೆ ರಾಹುಲ್ ಗಾಂಧಿ, ಡಿಕೆಶಿ ಮತ್ತು ಸಿದ್ದರಾಮಯ್ಯನವರಿಗೆ ಸೂಚಿಸಿದ್ದರು. ಇದಾದ ಮೇಲೆ, ಕರ್ನಾಟಕದಲ್ಲಿ ಯಾತ್ರೆ ನಡೆದು ಬರುವ ವೇಳೆ, ಬಹುತೇಕ ಈ ಇಬ್ಬರು ರಾಜ್ಯದ ಪ್ರಮುಖ ನಾಯಕರನ್ನು ಜೊತೆಯಲ್ಲೇ ಇರುವಂತೆ ನೋಡಿಕೊಂಡರು.

ಮುಂಬರುವ ಎಐಸಿಸಿ ಅಧ್ಯಕ್ಷರ ಚುನಾವಣೆ
ಮುಂಬರುವ ಎಐಸಿಸಿ ಅಧ್ಯಕ್ಷರ ಚುನಾವಣೆ ಮತ್ತು ಅಸೆಂಬ್ಲಿ ಚುನಾವಣೆಯಲ್ಲಿ ಬಹುಮತ ಬರದಿದ್ದರೆ ಜೆಡಿಎಸ್ ಜೊತೆಗೆ ಮೈತ್ರಿಯ ಬಗ್ಗೆಯೂ ರಾಹುಲ್ ಗಾಂಧಿ ಹೇಳಿಕೆಯನ್ನು ನೀಡಿದ್ದಾರೆ. ಯಾರೇ ಅಧ್ಯಕ್ಷರಾದರೂ ಗಾಂಧಿ ಕುಟುಂಬದ ರಿಮೋಟ್ ಕಂಟ್ರೋಲ್ ಆಗಿರುವುದಿಲ್ಲ ಎಂದು ಸ್ಪಷ್ಟ ಪಡಿಸಿರುವ ರಾಹುಲ್ ಗಾಂಧಿ, ಜೆಡಿಎಸ್ ಜೊತೆಗಿನ ಮೈತ್ರಿಯ ಬಗ್ಗೆ ನೇರ ಉತ್ತರ ನೀಡದೇ ಡಿಕೆಶಿ ಮತ್ತು ಸಿದ್ದರಾಮಯ್ಯನವರು ಉತ್ತರ ನೀಡುತ್ತಾರೆ ಎಂದು ನುಣುಚಿಕೊಂಡರು.

ಕೆಪಿಸಿಸಿಯ ನಾನಾ..ನೀನಾ? ಎನ್ನುವ ಬಣ ರಾಜಕೀಯ
ಕೆಪಿಸಿಸಿಯಲ್ಲಿ ಇದೆ ಎನ್ನಲಾಗುತ್ತಿರುವ ನಾನಾ..ನೀನಾ ಎನ್ನುವ ಬಣ ರಾಜಕೀಯಕ್ಕೂ ರಾಹುಲ್ ಗಾಂಧಿ ಎಲ್ಲರ ಮುಂದೆ ಖಡಕ್ ಆಗಿ ವಾರ್ನಿಂಗ್ ನೀಡಿದರು. ಸಂಘರ್ಷ ಮರೆತು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು, ಇದು ಅತ್ಯವಶ್ಯಕ. ಒಗ್ಗಟ್ಟು ಕಾಯ್ದುಕೊಂಡು ಮತ್ತು ಇರುವ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು ಜೊತೆಯಾಗಿ ಚುನಾವಣೆ ಎದುರಿಸಬೇಕು ಎನ್ನುವ ವಾರ್ನಿಂಗ್ ಅನ್ನು ನೀಡಿದರು.

ಮುಂದಿನ ಸಿಎಂ ಯಾರು ಎನ್ನುವುದು ಚುನಾವಣೆ ಗೆದ್ದ ನಂತರ ನಿರ್ಧಾರ
ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಪ್ರಶ್ನೆಗೂ ಉತ್ತರವನ್ನು ನೀಡಿದ ರಾಹುಲ್ ಗಾಂಧಿ, "ಮುಂದಿನ ಸಿಎಂ ಯಾರು ಎನ್ನುವುದು ಚುನಾವಣೆ ಗೆದ್ದ ನಂತರ ನಿರ್ಧಾರ ಮಾಡಲಾಗುತ್ತದೆ. ಈಗ ನಡೀತಿರೋ ಮುಂದಿನ ಸಿಎಂ ವಿಚಾರ ಪಕ್ಷದ ವ್ಯವಸ್ಥೆಯನ್ನು ಹಾಳು ಮಾಡುವ ಸಾಧ್ಯತೆ ಇದೆ, ಎಲ್ಲರೂ ಒಗ್ಗಟ್ಟಾಗಿರಬೇಕು"ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ರಾಹುಲ್ ಅವರು ಈ ಮಾತು ಹೇಳುವ ವೇಳೆ, ಸಿದ್ದರಾಮಯ್ಯ, ಡಿಕೆಶಿ ಮತ್ತು ಡಾ.ಪರಮೇಶ್ವರ ಹಾಜರಿದ್ದರು.

ಕೆ.ಎಚ್.ಮುನಿಯಪ್ಪ ಯಾತ್ರೆಯಲ್ಲಿ ಭಾಗಿ
ಭಾರತ್ ಜೋಡೋ ಯಾತ್ರೆಯಲ್ಲಿ ಪಕ್ಷದ ನಾಯಕರ ವಿರುದ್ದ ಬೇಸರಿಕೊಂಡಿರುವ ನಾಯಕರನ್ನು ಮತ್ತೆ ಮುಖ್ಯ ಭೂಮಿಕೆಗೆ ಕರೆತರುವ ಪ್ರಯತ್ನವನ್ನೂ ಮಾಡಲಾಗುತ್ತಿದೆ. ಉದಾಹರಣೆಗೆ, ಕೆ. ಎಚ್. ಮುನಿಯಪ್ಪ. ಪಕ್ಷದ ಮೂವರು ನಾಯಕರ ಮುಂದೆ ಮುಂದಿನ ಸಿಎಂ ಬಗ್ಗೆ ರಾಹುಲ್ ಗಾಂಧಿ ಖಡಕ್ಕಾಗಿ ಉತ್ತರ ಕೊಡುವ ಮೂಲಕ ಚರ್ಚೆಗೆ ಅಂತ್ಯ ಹಾಡುವ ಪ್ರಯತ್ನವನ್ನಂತೂ ಮಾಡಿದ್ದಾರೆ. ಆದರೆ, ಮುಂದಿನ ದಿನಗಳಲ್ಲಿ ಈ ಚರ್ಚೆ ಇನ್ನೂ ಜೋರಾಗಲಿದೆಯಾ ಅಥವಾ ಕಮ್ಮಿಯಾಗಲಿದೆಯಾ ಎನ್ನುವುದು ರಾಜಕೀಯ ಪರಿಸ್ಥಿಯನ್ನು ಆಧರಿಸಿದೆ.












Click it and Unblock the Notifications