ನಮ್ಮ ಹೆಣದ ಮೇಲೆ ಕಸ ಸುರೀರಿ; ಗೊರೂರು ಜನಾಗ್ರಹ
ಮಾಗಡಿ, ಡಿ. 10: ಬೆಂಗಳೂರಿನ ಕಸ ಗೊರೂರು ಜನರ ನೆಮ್ಮದಿಯನ್ನು ಕಿತ್ತುಕೊಂಡಿದೆ. ಸರ್ಕಾರದ ಎಚ್ಚರಿಕೆ, ಬೆದರಿಕೆಗೂ ಬಗ್ಗದ ಜನ ರಾಮನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ.
ಗೊರೂರು ಕಸ ವಿಲೇವಾರಿ ಘಟಕ ಪರಿಶೀಲನೆಗೆ ಬಂದಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಇಕ್ಬಾಲ್ ಹುಸೇನ್ ಅವರನ್ನು ಮುತ್ತಿಗೆ ಹಾಕಿದ ಸ್ಥಳೀಯರು, ಬೆಂಗಳೂರಿನ ಕಸ ಗೊರೂರು ಘಟಕಕ್ಕೆ ಸುರಿಯುವುದೇ ನಿಜವಾದರೆ ನಮ್ಮ ಹೆಣದ ಮೇಲೆ ಹಾಕಿರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. [ಮಾತು ಉಳಿಸಿಕೊಂಡ ಸರ್ಕಾರ]

ಕಸ ವಿಲೇವಾರಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸರು ಅಮಾಯಕರ ಮೇಲೆ ಹಲ್ಲೆ ನಡೆಸಿದ್ದಾರೆ. ಏಟು ತಿಂದಿದ್ದೇವೆ. ಇನ್ನು ಪ್ರಾಣ ಹೋದರೂ ಹೆದರುವುದಿಲ್ಲ ಎಂದು ಹೇಳಿದ್ದಾರೆ.
ರೈತರೊಂದಿಗೆ ಮಾತನಾಡಿದ ಇಕ್ಬಾಲ್, ನಾನೂ ರೈತನ ಮಗನೇ. ಗೊರೂರಲ್ಲಿ ಕಸ ಸುರಿಯುವುದು ಬೇಡ ಎಂದು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ರೈತರಿಗೆ ತೊಂದರೆಯಾದರೆ ನಾನೂ ಹೋರಾಟಕ್ಕೆ ಸಿದ್ಧ ಎಂದು ಭರವಸೆ ನೀಡಿದರು. [ಬೆಂಗಳೂರು ಕಸಕ್ಕೆ ಮಾಗಡಿ ಗ್ರಾಮಸ್ಥರ ವಿರೋಧ]
ಜನರ ಆಗ್ರಹದ ಮೇರೆಗೆ ಗೊರೂರಿಗೆ ಭೇಟಿ ನೀಡಿದ ಇಕ್ಬಾಲ್ ಹುಸೇನ್ ಜನರ ಅಹವಾಲು ಆಲಿಸಿದರು. ಅಧಿಕಾರಿಗಳು, ಪೊಲೀಸರು ಗೊರೂರಿಗೆ ಬಂದಾಗ ಹೊಲದಲ್ಲಿನ ರಾಗಿ ತೆನೆಗಳನ್ನು ತುಳಿದು ಹಾಳು ಮಾಡಿದ್ದಾರೆ. ಇದಕ್ಕೆ ಪರಿಹಾರ ಕೊಡಿಸಬೇಕೆಂದು ಜನರು ಮನವಿ ಮಾಡಿದರು. [ಕಸ ಹಾಕಿ ಗೊರೂರನ್ನು ಮಂಡೂರು ಮಾಡ್ಬೇಡಿ]












Click it and Unblock the Notifications