ರೈತರಿಗೆ ಗುಡ್ನ್ಯೂಸ್: ನಾಳೆಯಿಂದಲೇ ₹2,500 ಮಧ್ಯಂತರ ಪರಿಹಾರ ಬಿಡುಗಡೆ!
ರಾಜ್ಯದಲ್ಲಿ ತೀವ್ರ ಬರಗಾಲದಿಂದಾಗಿ ಬೆಳೆ ನಷ್ಟ ಎದುರಿಸುತ್ತಿರುವ ಅರ್ಹ ರೈತರಿಗೆ ಗರಿಷ್ಠ 2,500 ರೂಪಾಯಿಗಳ ಮಧ್ಯಂತರ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಿದ್ದು, ಸೋಮವಾರದಿಂದಲೇ ರೈತರ ಖಾತೆಗಳಿಗೆ ಹಣ ಜಮೆಯಾಗುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಈ ಕುರಿತು ಅಧಿಕೃತ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸೋಮವಾರದ ನಂತರ ಪರಿಹಾರ ವಿತರಣೆ ಪ್ರಕ್ರಿಯೆ ಆರಂಭವಾಗಲಿದ್ದು, ಅರ್ಹ ರೈತರ ಖಾತೆಗಳಿಗೆ ಮಧ್ಯಂತರ ಪರಿಹಾರದ ಹಣ ಜಮಾ ಮಾಡಲು ನಿರ್ಧರಿಸಿದ್ದೇವೆ. ಇದು ಪರಿಹಾರದ ಮೊದಲ ಕಂತು ಮಾತ್ರವೇ ಹೊರತು ರೈತರಿಗೆ ಸಲ್ಲಬೇಕಾದ ಸಂಪೂರ್ಣ ಪರಿಹಾರವಲ್ಲ. ಕೇಂದ್ರ ಸರ್ಕಾರವು NDRF ಅನುದಾನ ಬಿಡುಗಡೆ ಮಾಡಿದ ಕೂಡಲೇ ಮುಂದಿನ ಕಂತಿನ ಪರಿಹಾರವನ್ನು ವಿತರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಪರಿಹಾರ ನೀಡುವುದು ಸರ್ಕಾರದ ಆದ್ಯತೆ
ಬರದಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಮಧ್ಯಂತರ ಪರಿಹಾರ ವಿತರಿಸಲು ರೂಪಿಸಿರುವ ಮಾರ್ಗಸೂಚಿಗಳ ಕುರಿತು ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ಮಾಡಿರುವ ಆರೋಪಗಳನ್ನು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ ಅವರು ತೀವ್ರವಾಗಿ ಖಂಡಿಸಿದ್ದಾರೆ. ಅರ್ಹ ರೈತರಿಗೆ ಯಾವುದೇ ಅನಗತ್ಯ ತೊಂದರೆಯಾಗದಂತೆ ಪರಿಹಾರ ತಲುಪಿಸುವುದೇ ರಾಜ್ಯ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬರದಿಂದಾಗಿ ಕರ್ನಾಟಕದ ಲಕ್ಷಾಂತರ ರೈತ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ತಮ್ಮ ಜೀವನೋಪಾಯವನ್ನು ಉಳಿಸಿಕೊಳ್ಳಲು ರೈತರು ಹೋರಾಡುತ್ತಿರುವ ಇಂತಹ ಸಂದರ್ಭದಲ್ಲಿ ಅವರ ಬೆಂಬಲಕ್ಕೆ ನಿಲ್ಲುವುದು, ಅವರಲ್ಲಿ ಆತ್ಮವಿಶ್ವಾಸ ತುಂಬುವುದು ಹಾಗೂ ಸಾಧ್ಯವಿರುವ ಎಲ್ಲ ನೆರವು ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ರೈತರ ಸಂಕಷ್ಟಕ್ಕೆ ಬೇಕಿರುವುದು ಪರಿಹಾರವೇ ಹೊರತು ರಾಜಕೀಯ ವಿವಾದಗಳಲ್ಲ ಎಂದು ಡಾ. ಪರಮೇಶ್ವರ ಅವರು ತಿಳಿಸಿದ್ದಾರೆ.
ಸರ್ಕಾರಿ ಆದೇಶದಲ್ಲಿರುವ 17 ಅಂಶಗಳು
ವಿರೋಧ ಪಕ್ಷದ ನಾಯಕರು ಸರ್ಕಾರಿ ಆದೇಶದಲ್ಲಿರುವ 17 ಅಂಶಗಳನ್ನು ರೈತರಿಗೆ ವಿಧಿಸಿರುವ 17 ತೊಡಕುಗಳಂತೆ ಬಿಂಬಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಈ ಅಂಶಗಳು ಫಲಾನುಭವಿಗಳ ಅರ್ಹತೆ, ದಾಖಲೆಗಳ ಪರಿಶೀಲನೆ ಹಾಗೂ ಆಡಳಿತ ವ್ಯವಸ್ಥೆಯ ಜವಾಬ್ದಾರಿಗಳಿಗೆ ಸಂಬಂಧಿಸಿವೆ. ನೈಜ ಫಲಾನುಭವಿಗಳಿಗೆ ಪರಿಹಾರ ತಲುಪಿಸುವುದು, ಒಂದೇ ಪ್ರಕರಣಕ್ಕೆ ಎರಡೆರಡು ಬಾರಿ ಹಣ ಪಾವತಿಯಾಗುವುದನ್ನು ತಡೆಯುವುದು ಹಾಗೂ ಸಾರ್ವಜನಿಕ ಹಣದ ಸದ್ಬಳಕೆಯನ್ನು ಖಚಿತಪಡಿಸಿಕೊಳ್ಳುವುದು ಇವುಗಳ ಉದ್ದೇಶವಾಗಿದೆ. ಈ 17 ಅಂಶಗಳನ್ನೂ ಪ್ರತಿಯೊಬ್ಬ ರೈತ ಕಡ್ಡಾಯವಾಗಿ ಪೂರೈಸಬೇಕಾದ ಪ್ರತ್ಯೇಕ ಷರತ್ತುಗಳೆಂಬಂತೆ ಬಿಂಬಿಸುವುದು ತಪ್ಪುದಾರಿಗೆಳೆಯುವ ಪ್ರಯತ್ನವಾಗಿದೆ ಎಂದು ಅವರು ಹೇಳಿದ್ದಾರೆ.
ಅರ್ಹ ಫಲಾನುಭವಿಗಳನ್ನು ಗುರುತಿಸಿ, ಪರಿಹಾರವನ್ನು ಅವರ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲು FRUITS ದತ್ತಾಂಶ ವ್ಯವಸ್ಥೆ, ಡಿಜಿಟಲ್ ಬೆಳೆ ಸಮೀಕ್ಷೆ, ಪರಿಹಾರ (Parihara) ಪೋರ್ಟಲ್ ಹಾಗೂ ಈಗಾಗಲೇ ಲಭ್ಯವಿರುವ ಕಂದಾಯ ದಾಖಲೆಗಳನ್ನು ಸಂಯೋಜಿಸಿ ಸಂಪೂರ್ಣ ಡಿಜಿಟಲ್ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಅಳವಡಿಸಿಕೊಂಡಿದೆ ಎಂದು ಡಾ. ಪರಮೇಶ್ವರ ಅವರು ತಿಳಿಸಿದ್ದಾರೆ.
ಈ ಪರಿಹಾರ ಪಡೆಯಲು ರೈತರು ಹೊಸದಾಗಿ ಅರ್ಜಿ ಸಲ್ಲಿಸುವ ಅಥವಾ ಒಂದು ಸರ್ಕಾರಿ ಕಚೇರಿಯಿಂದ ಮತ್ತೊಂದು ಕಚೇರಿಗೆ ಅಲೆಯುವ ಅಗತ್ಯವಿಲ್ಲ. ಅಗತ್ಯವಿರುವ ಮಾಹಿತಿಯು ಈಗಾಗಲೇ ಸರ್ಕಾರದ ಬಳಿ ಲಭ್ಯವಿದೆ. ಆ ಮಾಹಿತಿಯನ್ನು ಪರಿಶೀಲಿಸಿ ಪರಿಹಾರ ವಿತರಿಸುವ ಜವಾಬ್ದಾರಿ ಆಡಳಿತ ವ್ಯವಸ್ಥೆಯದ್ದಾಗಿದೆ. ಸರ್ಕಾರಿ ದಾಖಲೆಗಳಲ್ಲಿ ಯಾವುದೇ ವ್ಯತ್ಯಾಸಗಳಿದ್ದಲ್ಲಿ, ನಿಗದಿತ ಪರಿಶೀಲನಾ ಪ್ರಕ್ರಿಯೆಯ ಮೂಲಕ ಅವುಗಳನ್ನು ಸರಿಪಡಿಸುವ ಜವಾಬ್ದಾರಿಯೂ ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳದ್ದೇ ಆಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಡಿಜಿಟಲ್ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಣೆ
1.5 ಕೋಟಿಗೂ ಅಧಿಕ ದಾಖಲೆಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿ ಆ ಬಳಿಕ ಪರಿಹಾರ ವಿತರಿಸಲು ಮುಂದಾಗಿದ್ದರೆ ಕನಿಷ್ಠ ಮೂರು ತಿಂಗಳ ಕಾಲಾವಕಾಶ ಬೇಕಾಗುತ್ತಿತ್ತು. ಇದರಿಂದ ಮಾಹಿತಿ ದಾಖಲಿಸುವಲ್ಲಿ ದೋಷಗಳು ಉಂಟಾಗುವ ಹಾಗೂ ಅರ್ಹ ಫಲಾನುಭವಿಗಳು ಪರಿಹಾರದಿಂದ ಹೊರಗುಳಿಯುವ ಸಾಧ್ಯತೆಯೂ ಹೆಚ್ಚಾಗುತ್ತಿತ್ತು. ಆದರೆ 2023ರ ಬರ ಪರಿಸ್ಥಿತಿಯಲ್ಲಿ ಯಶಸ್ವಿಯಾಗಿ ಬಳಸಲಾದ ಡಿಜಿಟಲ್ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಿ ಪ್ರಸ್ತುತ ಪರಿಹಾರ ವಿತರಣೆಗೆ ಬಳಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ರೈತರು ಪರಿಹಾರಕ್ಕಾಗಿ ಅಲೆಯುವ ಪರಿಸ್ಥಿತಿ ಇರಬಾರದು. ಬದಲಾಗಿ ಸರ್ಕಾರದ ವ್ಯವಸ್ಥೆಗಳೇ ಜನರ ಬಳಿಗೆ ಹೋಗುವಂತಾಗಬೇಕು ಎಂಬುದು ನಮ್ಮ ನಿಲುವು. ತಂತ್ರಜ್ಞಾನ ಬಳಸುವುದರಿಂದ ರೈತರ ಕೆಲಸ ಸುಲಭವಾಗಬೇಕು. ಅನಗತ್ಯ ದಾಖಲೆಗಳ ತೊಂದರೆ ತಪ್ಪಬೇಕು. ಸರ್ಕಾರದ ಸೇವೆಗಳು ಜನರಿಗೆ ಸುಲಭವಾಗಿ ಸಿಗುವಂತಾಗಬೇಕು ಎಂಬುದು ನಮ್ಮ ಉದ್ದೇಶ ಎಂದು ಡಾ. ಪರಮೇಶ್ವರ ಅವರು ತಿಳಿಸಿದ್ದಾರೆ.
ಎರಡು ಹೆಕ್ಟೇರ್ ಮಿತಿಗೆ ಸಂಬಂಧಿಸಿದ ಆರೋಪಗಳಿಗೆ ಉತ್ತರಿಸಿರುವ ಅವರು, ಈ ಮಿತಿಯು ಕೇಂದ್ರ ಸರ್ಕಾರದ SDRF/NDRF ಪರಿಹಾರ ಮಾನದಂಡಗಳ ಭಾಗವಾಗಿದ್ದು, 2005ರಿಂದಲೇ ಜಾರಿಯಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ರೈತರು ಪರಿಹಾರಕ್ಕೆ ಅನರ್ಹರು ಎಂದರ್ಥವಲ್ಲ
ಎರಡು ಹೆಕ್ಟೇರ್ ಮಿತಿಯು ಬೆಳೆಹಾನಿ ಪರಿಹಾರಕ್ಕೆ ಪರಿಗಣಿಸಬಹುದಾದ ಗರಿಷ್ಠ ವಿಸ್ತೀರ್ಣಕ್ಕೆ ಸಂಬಂಧಿಸಿದ್ದೇ ಹೊರತು, ಎರಡು ಹೆಕ್ಟೇರ್ಗಿಂತ ಹೆಚ್ಚು ಜಮೀನು ಹೊಂದಿರುವ ರೈತರು ಪರಿಹಾರಕ್ಕೆ ಅನರ್ಹರು ಎಂದರ್ಥವಲ್ಲ. ಇದು ಕರ್ನಾಟಕ ಸರ್ಕಾರ ಹೊಸದಾಗಿ ವಿಧಿಸಿರುವ ನಿರ್ಬಂಧವಲ್ಲ. ಕೇಂದ್ರ ಸರ್ಕಾರ ನಿಗದಿಪಡಿಸಿರುವ ನಿಯಮಗಳಿಗೂ, ಅವುಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಅಳವಡಿಸಿಕೊಂಡಿರುವ ಪ್ರಕ್ರಿಯೆಗಳಿಗೂ ಇರುವ ವ್ಯತ್ಯಾಸವನ್ನು ವಿರೋಧ ಪಕ್ಷದವರು ಅರ್ಥಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಉಂಟಾಗಿರುವ ತೀವ್ರ ಬರ ಪರಿಸ್ಥಿತಿಯನ್ನು ಉಲ್ಲೇಖಿಸಿರುವ ಡಾ. ಪರಮೇಶ್ವರ ಅವರು, ಒಟ್ಟು 226 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿರುವುದು ಸಮೀಕ್ಷೆಯಿಂದ ದೃಢಪಟ್ಟಿದೆ. ಕೇಂದ್ರ ಸರ್ಕಾರದಿಂದ ಆರ್ಥಿಕ ನೆರವು ಬಿಡುಗಡೆಯಾಗುವುದನ್ನು ಕಾಯದೆ, ರಾಜ್ಯ ಸರ್ಕಾರವು ಬರದಿಂದ ಬೆಳೆ ನಷ್ಟ ಅನುಭವಿಸಿರುವ ಅರ್ಹ ರೈತರಿಗೆ ಗರಿಷ್ಠ ₹2,500 ಮಧ್ಯಂತರ ಪರಿಹಾರ ಘೋಷಿಸಿದೆ. ಇದಕ್ಕಾಗಿ ಅಂದಾಜು ₹1,250 ಕೋಟಿ ವೆಚ್ಚವಾಗಲಿದೆ ಎಂದು ಅವರು ತಿಳಿಸಿದ್ದಾರೆ.
Drought Relief: ₹30,000 ಪರಿಹಾರ ನೀಡಲು ಅವಕಾಶ
ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಪರಿಷ್ಕೃತ SDRF/NDRF ಮಾನದಂಡಗಳ ಪ್ರಕಾರ, ಮಳೆಯಾಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್ಗೆ ₹11,000, ನೀರಾವರಿ ಬೆಳೆಗಳಿಗೆ ₹22,000 ಹಾಗೂ ಬಹುವಾರ್ಷಿಕ ಮತ್ತು ತೋಟಗಾರಿಕೆ ಬೆಳೆಗಳಿಗೆ ₹30,000 ಪರಿಹಾರ ನೀಡಲು ಅವಕಾಶವಿದೆ. ನಿಗದಿತ ಮಿತಿಗಳ ಅನ್ವಯ ಅರ್ಹ ರೈತರಿಗೆ ಸಲ್ಲಬೇಕಾದ ಉಳಿದ ಪರಿಹಾರವನ್ನು ಅಗತ್ಯ NDRF ಅನುದಾನ ಬಿಡುಗಡೆಯಾದ ಬಳಿಕ ವಿತರಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.
"ಕೇಂದ್ರದ ನೆರವಿಗಾಗಿ ಕಾಯದೆ ರೈತರ ನೆರವಿಗೆ ಧಾವಿಸುವ ತನ್ನ ಬದ್ಧತೆಯನ್ನು ರಾಜ್ಯ ಸರ್ಕಾರ ಈಗಾಗಲೇ ತೋರಿಸಿದೆ. ಈಗ ಕೇಂದ್ರ ಸರ್ಕಾರವೂ ಅಷ್ಟೇ ತುರ್ತಾಗಿ ಸ್ಪಂದಿಸಬೇಕಾಗಿದೆ. ಕರ್ನಾಟಕದ ರೈತರು ಯಾರಿಂದಲೂ ದಾನ ಕೇಳುತ್ತಿಲ್ಲ. ವಿಪತ್ತು ಪರಿಹಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಾರಿಯಲ್ಲಿರುವ ನಿಯಮಗಳ ಅಡಿಯಲ್ಲಿ ತಮಗೆ ನ್ಯಾಯಯುತವಾಗಿ ಸಲ್ಲಬೇಕಾದ ನೆರವನ್ನು ಸಕಾಲದಲ್ಲಿ ನೀಡುವಂತೆ ಕೇಳುತ್ತಿದ್ದಾರೆ" ಎಂದು ಡಾ. ಪರಮೇಶ್ವರ ಅವರು ತಿಳಿಸಿದ್ದಾರೆ.
ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರ ಪರಿಹಾರದ ಅನುದಾನವನ್ನು ಶೀಘ್ರವಾಗಿ ಬಿಡುಗಡೆ ಮಾಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದೊಂದಿಗೆ ಸಹಕರಿಸುವಂತೆ ವಿರೋಧ ಪಕ್ಷದವರಿಗೆ ಅವರು ಮನವಿ ಮಾಡಿದ್ದಾರೆ.


Click it and Unblock the Notifications
