Cancer Free Future: ಗರ್ಭ ಕ್ಯಾನ್ಸರ್ ಮುಕ್ತ ಭವಿಷ್ಯ, ಡಾ. ರೋಹಿತ್ ರಾನಡೆ ಮಹತ್ವದ ಮಾಹಿತಿ
ಗರ್ಭ ಕ್ಯಾನ್ಸರ್ ವ್ಯಾಪಕವಾಗಿ ಚರ್ಚೆಗೆ ಒಳಗಾಗಿರುವ ಹಾಗೂ ಇತ್ತೀಚಿನ ವರ್ಷಗಳಲ್ಲಿ ಮಹಿಳೆರಯನ್ನು ಕಾಡುತ್ತಿರುವ ಘೋರ ಕಾಯಿಲೆಯಾಗಿದೆ. ಆದರೆ ಒಂದು ಸಣ್ಣ ನಿರ್ಧಾರ ತೆಗೆದುಕೊಳ್ಳುವ ಮೂಲಕ ಈ ಕಾಯಿಲೆಯನ್ನೇ ಸೋಲಿಸಬಹುದಾಗಿದೆ. ಈ ಕುರಿತಾಗಿ ನಾರಾಯಣ ಹೆಲ್ತ್ ಸಿಟಿಯ ಗೈನಕಾಲಜಿಕ್ ಆಂಕಾಲಜಿ ವಿಭಾಗದ ಸೀನಿಯರ್ ಕನ್ಸಲ್ಟೆಂಟ್ ಹಾಗೂ ಕ್ಲಿನಿಕಲ್ ಲೀಡ್ ಆಗಿರುವ, ಡಾ. ರೋಹಿತ್ ರಘುನಾಥ್ ರಾನಡೆ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ಗರ್ಭ ಕ್ಯಾನ್ಸರ್ ಬರದಂತೆ ತಡೆಯಲು ಹಾಗೂ ಗರ್ಭ ಕ್ಯಾನ್ಸರ್ ಮುಕ್ತ ಭವಿಷ್ಯಕ್ಕಾಗಿ ಮುನ್ನೆಚ್ಚರಿಕೆಯ ಕ್ರಮಗಳು ಅಗತ್ಯವಾಗಿವೆ. ಪ್ರಮುಖವಾಗಿ ತಮ್ಮ ಮಗುವಿಗೆ ಲಸಿಕೆ ಹಾಕಿಸಲು ನಿರ್ಧರಿಸುವ ಮೂಲಕ ಅಥವಾ ಮಹಿಳೆಯರು ಪ್ರತಿ 5 ವರ್ಷಕ್ಕೆ ಒಮ್ಮೆ ಮಾಡಿಸಿಕೊಳ್ಳಬೇಕಾದ ಆರೋಗ್ಯ ತಪಾಸಣೆ ತಪ್ಪಿಸದೇ ಮುಂದುವರಿಸಿದರೆ ಈ ಗರ್ಭ ಕ್ಯಾನ್ಸರ್ ಮುಕ್ತ ಭವಿಷ್ಯ ಸಾಧ್ಯವಿದೆ. ಎಚ್‌ಪಿವಿ ಕುರಿತಾದ ಸಾಮಾಜಿಕ ಅನುಮಾನ ತೊಡೆದುಹಾಕುವ ಮೂಲಕ ಮತ್ತು ನಮ್ಮ ಸಮಾಜದಲ್ಲಿನ ಚಿಕಿತ್ಸಾ ಸೌಲಭ್ಯ ಕೊರತೆಯನ್ನ ನೀಗಿಸುವ ಮೂಲಕ ನಾವು ಗರ್ಭಕಂಠ ಕ್ಯಾನ್ಸರ್ ಎಂಬ ಕಂಟಕಕ್ಕೆ ಹೊಸ ಅಂತ್ಯವನ್ನ ಬರೆಯಬಹುದು ಎಂದು ಡಾ. ರೋಹಿತ್ ರಘುನಾಥ್ ರಾನಡೆ ಅವರು ವಿವರಣೆ ನೀಡುತ್ತಾರೆ.

ರೋಗ ಗೆದ್ದವರಿಂದ ಆತ್ಮವಿಶ್ವಾಸದ ಮಾತು
ಈ ವರ್ಷ ಆ ನಿಟ್ಟಿನಲ್ಲಿ ಸಾಗೋಣ, ಈ ರೋಗವನ್ನು ಸೋಲಿಸುವ ಸಂಕಲ್ಪ ಮಾಡೋಣ. ರೋಗವನ್ನು ಇನ್ನಿಲ್ಲವಾಗಿಸುವ ದಿಕ್ಕಿನಲ್ಲಿ ಕೆಲಸವನ್ನು ಮಾಡೋಣ. ಈ ವರ್ಷ 'ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವಿಕೆ ಸಪ್ತಾಹ' ಸಂದರ್ಭದಲ್ಲಿ ವೈದ್ಯಕೀಯ ಸಮುದಾಯ ಒಂದು ಮಹತ್ವದ ಕಾರ್ಯ ಮಾಡುತ್ತಿದೆ. 2026 ರಲ್ಲಿ "ಕಥೆ ಹೇಳುವವರ ಸಬಲೀಕರಣ" ಎಂಬ ಥೀಮ್ ಇಟ್ಟುಕೊಳ್ಳಲಾಗಿದ್ದು, ಈ ಕಾಯಿಲೆಯಿಂದ ಗುಣಮುಖರಾದವರು ಜೀವನದ ಪಯಣವನ್ನು ಹಂಚಿಕೊಂಡು ಸಮಾಜದ ಆತಂಕ ದೂರ ಮಾಡಲು ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಡಾ. ರೋಹಿತ್ ರಘುನಾಥ್ ರಾನಡೆ ತಿಳಿಸಿದ್ದಾರೆ.
ಗರ್ಭ ಕ್ಯಾನ್ಸರ್ ತಡೆಗೆ ಪ್ರಾಥಮಿಕ ಹಂತದಲ್ಲಿ ಲಸಿಕೆ ಒಂದು ಅಸ್ತ್ರವಾಗಿದ್ದರೆ, ದ್ವಿತೀಯ ಹಂತದಲ್ಲಿ ಈ ರೋಗವನ್ನ ತಡೆಗಟ್ಟಲು ತಪಾಸಣೆ ಮುಖ್ಯವಾಗಿರುತ್ತದೆ. ಹಾಗೂ ಅಂತಿಮವಾಗಿ ಸಾರ್ವತ್ರಿಕ ಲಭ್ಯತೆ ಎಂಬ 3 ಅಂಶದ ಕಡೆಗೆ ಗಮನ ಹರಿಸಲಾಗುತ್ತದೆ. ನಮ್ಮ ಜೀವಿತಾವಧಿಯಲ್ಲೇ ಈ ಗರ್ಭಕಂಠ ಕ್ಯಾನ್ಸರ್ ಸಂಪೂರ್ಣ ನಿರ್ಮೂಲನೆ ಮಾಡಲು ಅಗತ್ಯವಿರುವ ಎಲ್ಲಾ ವೈಜ್ಞಾನಿಕ ಪರಿಕರಗಳು ಇಂದು ನಮ್ಮಲ್ಲಿವೆ ಎಂಬ ವಿಚಾರವನ್ನೂ ಡಾ. ರೋಹಿತ್ ರಘುನಾಥ್ ರಾನಡೆ ಅವರು ಸ್ಪಷ್ಟಪಡಿಸುತ್ತಾರೆ.
ಎಚ್‌ಪಿವಿ ಬಗ್ಗೆ ತಿಳಿಯೋಣ ಬನ್ನಿ
ಗರ್ಭಕಂಠ ಕ್ಯಾನ್ಸರ್ ಒಂದು ಅನನ್ಯ ಕಾಯಿಲೆಯಾಗಿದ್ದು, ಇದು ಹ್ಯೂಮನ್ ಪ್ಯಾಪಿಲೋಮ ವೈರಸ್ ಎಂಬ ವೈರಾಣುವಿನಿಂದ ಉದ್ಭವಿಸುತ್ತದೆ. ಎಚ್‌ಪಿವಿ ವೈರಾಣುವಿನ 150ಕ್ಕೂ ಹೆಚ್ಚು ತಳಿಗಳಲ್ಲಿ ಅಧಿಕ-ಅಪಾಯಕಾರಿ ಗುಂಪಿಗೆ ಸೇರಿದ ಎಚ್‌ಪಿವಿ 16 ಮತ್ತು 18 ಎಂಬ ತಳಿ ಜಾಗತಿಕವಾಗಿ ಸುಮಾರು ಶೇಕಡಾ 70 ರಷ್ಟು ಗರ್ಭ ಕ್ಯಾನ್ಸರ್ ಪ್ರಕರಣಗಳಿಗೆ ಕಾರಣವಾಗಿವೆ. ಈ ವೈರಸ್ ಗರ್ಭದ ಜೀವಕೋಶ ಪ್ರವೇಶಿಸಿ, ಹಲವು ವರ್ಷಗಳ ಅವಧಿಯಲ್ಲಿ ಅವುಗಳ ಡಿಎನ್‌ಎ ಅನ್ನು ಮರುರೂಪಿಸುತ್ತವೆ. ಇದು ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆಯುವಂತೆ ಮಾಡಿ ಮತ್ತು ಕ್ಯಾನ್ಸರ್ ಪೂರ್ವ ಹಂತದ ಗಡ್ಡೆಗಳನ್ನ ರೂಪಿಸುತ್ತದೆ. ಆ ನಂತರ ಅಂತಿಮವಾಗಿ ಮಾರಣಾಂತಿಕ ಕ್ಯಾನ್ಸರ್ ಆಗಿ ಬದಲಾಗುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ.
2030ರ ವೇಳೆಗೆ ಗುರಿ ಸಾಧಿಸಬೇಕು
ವಿಶ್ವ ಆರೋಗ್ಯ ಸಂಸ್ಥೆ 2030ರ ವೇಳೆಗೆ ಸಾಧಿಸಬೇಕಾದ ಮಾರ್ಗಸೂಚಿಯನ್ನು ನೀಡಿದ್ದು, ಇದರಲ್ಲಿ ಶೇ. 90ರಷ್ಟು ಹುಡುಗಿಯರಿಗೆ ಲಸಿಕೆ ನೀಡುವುದು, ಶೇ. 70ರಷ್ಟು ಮಹಿಳೆಯರಿಗೆ ಅವರ ಜೀವಿತಾವಧಿಯಲ್ಲಿ ಎರಡು ಬಾರಿ (35 & 45ನೇ ವಯಸ್ಸಿನಲ್ಲಿ) ತಪಾಸಣೆ ಮಾಡುವುದು. ಕ್ಯಾನ್ಸರ್ ಪೂರ್ವ ಹಂತ ಅಥವಾ ಕ್ಯಾನ್ಸರ್ ಪತ್ತೆಯಾದ ಶೇ. 90ರಷ್ಟು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವುದು ವಿಶ್ವ ಆರೋಗ್ಯ ಸಂಸ್ಥೆಯ ಗುರಿಯಲ್ಲಿ ಸೇರಿದೆ. ಇದನ್ನು ಸಾಧಿಸಲು ಚಿಕಿತ್ಸೆಯ ಲಭ್ಯತೆಯಲ್ಲಿರುವ ಅಂತರ ಹೋಗಲಾಡಿಸುವುದು ಅನಿವಾರ್ಯವಾಗಿದೆ.
ಮತ್ತೊಂದು ಕಡೆ ಗ್ರಾಮೀಣ ಅಥವಾ ಆರ್ಥಿಕವಾಗಿ ಹಿಂದುಳಿದ ಸಮುದಾಯದ ಮಹಿಳೆಯರು ಇಂದಿಗೂ ಸ್ಥಳೀಯವಾಗಿ ಸೂಕ್ತ ವೈದ್ಯಕೀಯ ಸೇವೆ ಸಿಗದೆ ಹೆಚ್ಚಿನ ಸಂಖ್ಯೆಯಲ್ಲಿ ಮರಣ ಹೊಂದುತ್ತಿರುವುದು ಈಗ ಕಹಿ ವಾಸ್ತವವಾಗಿದೆ. ಹೀಗಾಗಿ ನಾವು ಈ ರೋಗವನ್ನ ಇತಿಹಾಸದ ಪುಟಕ್ಕೆ ಸೇರಿಸುವ ನಿಟ್ಟಿನಲ್ಲಿ ಮುಂದೆ ಸಾಗುತ್ತಿದ್ದೇವೆ. ಎಚ್‌ಪಿವಿ ಲಸಿಕೆ & ಮಾಲಿಕ್ಯೂಲರ್ ಸ್ಕ್ರೀನಿಂಗ್ ಕ್ಷೇತ್ರಗಳ ಹೊಸ ಅದ್ಭುತ ಆವಿಷ್ಕಾರಗಳು ಎಲ್ಲರಿಗೂ ಸಮಾನವಾಗಿ ತಲುಪಬೇಕಿದ್ದು, ಈ ವಿಚಾರದಲ್ಲಿ ಬದ್ಧತೆಯಿಂದ ಮುನ್ನಡೆಯುತ್ತಿದ್ದೇವೆಂದು ಡಾ. ರೋಹಿತ್ ರಘುನಾಥ್ ರಾನಡೆ ತಿಳಿಸುತ್ತಾರೆ. ಒಟ್ಟಾರೆ ಜಾಗೃತಿ ಮೂಡಿಸುವುದು ಮಾತ್ರ ಅಲ್ಲದೆ ಗರ್ಭಕಂಠ ಕ್ಯಾನ್ಸರ್ ಮುಕ್ತ ಭವಿಷ್ಯ ರೂಪಿಸಲು ಆ ಜಾಗೃತಿಯನ್ನು ವಾಸ್ತವಕ್ಕೆ ತರಬೇಕಿದೆ ಎಂದು ಪ್ರತಿಪಾದಿಸಿದ್ದಾರೆ.












Click it and Unblock the Notifications