Breaking: ಡಾ.ಪುನೀತ್ ರಾಜ್‌ಕುಮಾರ್: ನವೆಂಬರ್ 1 ರಂದು 'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ: ಸಿಎಂ
ಬೆಂಗಳೂರು, ಅಕ್ಟೋಬರ್ 20: ಕನ್ನಡ ರಾಜ್ಯೋತ್ಸವದಂದು ದಿ.ಡಾ.ಪುನೀತ್ ರಾಜಕುಮಾರ್ ಅಭಿಮಾನಿಗಳಿಗೆ ರಾಜ್ಯ ಸರ್ಕಾರವೊಂದು ಸಿಹಿ ಸುದ್ದಿ ನೀಡುತ್ತಿದೆ. ರಾಜ್ಯ ಸರ್ಕಾರ ನವೆಂಬರ್ 1ರಂದು ನೆಚ್ಚಿನ ನಟ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ ಮಾಡಲಿದೆ.
ಬೆಂಗಳೂರಿನಲ್ಲಿ ಗುರುವಾರ ಸಭೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕನ್ನಡ ರಾಜ್ಯೋತ್ಸವಂದು ನವೆಂಬರ್ 1ರಂದು ಸಂಜೆ 4ಗಂಟೆಗೆ ವಿಧಾನಸೌಧ ಮುಂಭಾಗ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ನೆಚ್ಚಿನ ನಟ ಪುನೀತ್ ಸ್ಮರಣಾರ್ಥ ಸಮಾರಂಭದಲ್ಲಿ ಅವರಿಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ಘೋಷಿಸಲಾಗಿತ್ತು. ಅದರಂತೆ ರಾಜ್ಯೋತ್ಸವದಂದು ನೀಡಲಾಗುತ್ತಿದೆ ಎಂದು ವಿವರಿಸಿದರು.
'ಕರ್ನಾಟಕ ರತ್ನ' ಪ್ರಶಸ್ತಿಯು ಇದೊಂದು ರಾಜ್ಯ ಅತ್ಯಂತ ಶ್ರೇಷ್ಠ ಪ್ರಶಸ್ತಿಯಾಗಿದೆ. ಈಗಾಗಲೇ ಎಂಟು ಜನಕ್ಕೆ ಮಾತ್ರ ಕೊಡಲಾಗಿದ್ದು, 2009ರ ನಂತರ ಯಾರಿಗೂ ಕೊಟ್ಟಿರಲಿಲ್ಲ. ಇದೀಗ ಆ ಪ್ರಶಸ್ತಿಯನ್ನು ನೆಚ್ಚಿನ ನಟ ಅಪ್ಪುರವರಿಗೆ ನೀಡಲಾಗುತ್ತಿದೆ ಎಂದರು.

ಪುನೀತ್ ರಾಜ್‌ಕುಮಾರ್ ಅವರು ಜೀವಿತಾವಧಿಯಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ತಮ್ಮ ನಟನೆ, ನಗು, ಸಾಮಾಜಿಕ ಕಾರ್ಯಗಳಿಂದಲೇ ಎಲ್ಲರ ಮನದಾಳದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಅವರ ಸದಾಕಾಲ ಯುವಜನತೆಗೆ ಸ್ಪೂರ್ತಿಯಾಗಿದ್ದಾರೆ. ಅವರ ಹೆಸರು ಹಸಿರಾಗಿಸಲು ಸರ್ಕಾರ ಅವರಿಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ ಮಾಡುತ್ತಿದೆ.
ಪ್ರಶಸ್ತಿ ನೀಡುವ ಕುರಿತು ಗುರುವಾರ ಸಭೆ ನಡೆಸಿದ್ದು, ಡಾ.ರಾಜಕುಮಾರ್ ಕುಟುಂಬ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಅನ್ಯ ಕಾರಣಗಳಿಂದ ಅಪ್ಪು ಅವರ ಸಹೋದರ ನಟ ಶಿವರಾಜಕುಮಾರ್ ಅವರು ಸಭೆ ಬಾರದ ಹಿನ್ನಲೆ ಸರ್ಕಾರ ತೀರ್ಮಾನಕ್ಕೆ ಬದ್ಧ ಎಂದು ತಿಳಿಸಿದ್ದಾರೆ ಎಂದರು. ನವೆಂಬರ್ 1ರ ಅರ್ಥಪೂರ್ಣ ಸಮಾರಂಭಕ್ಕೆ ರಾಜಕೀಯ ಗಣ್ಯರು, ಹಿರಿಯ ಸಾಹಿತಿಗಳು, ಹಿರಿಯ ಕಲಾವಿದರು, ನಟರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.












Click it and Unblock the Notifications