ಡಿಕೆಶಿ ಮೆಗಾಪ್ಲಾನ್; ಸಿ. ಎಸ್. ದ್ವಾರಕಾನಾಥ್ ಕಾಂಗ್ರೆಸ್ ಸೇರ್ಪಡೆ
ಬೆಂಗಳೂರು, ಆಗಸ್ಟ್ 20; ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷರಾದ ಸಿ. ಎಸ್. ದ್ವಾರಕಾನಾಥ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. 2023ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಪಕ್ಷಕ್ಕೆ ಕರೆತರಲಾಗಿದೆ.
ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಸಿ. ಎಸ್. ದ್ವಾರಕಾನಾಥ್ ಕಾಂಗ್ರೆಸ್ ಪಕ್ಷ ಸೇರಿದರು. ಪ್ರತಿಪಕ್ಷ ನಾಯಕ ಸಿದ್ದರಾಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಪಕ್ಷದ ಧ್ವಜ ನೀಡಿ ದ್ವಾರಕಾನಾಥ್ ಬರಮಾಡಿಕೊಂಡರು. ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯುವ ಉದ್ದೇಶದಿಂದ ಡಿ. ಕೆ. ಶಿವಕುಮಾರ್ ಮೆಗಾ ಪ್ಲಾನ್ ರೂಪಿಸಿದ್ದಾರೆ. ಇದರ ಭಾಗವಾಗಿಯೇ ಸಿ. ಎಸ್. ದ್ವಾರಕಾನಾಥ್‌ರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ಮೊದಲು ಅಹಿಂದ ಹೋರಾಟ ಆರಂಭಿಸಿದ ದ್ವಾರಕಾನಾಥ್ ಆಗಮನ ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ಶಕ್ತಿ ತುಂಬಲಿದೆ? ಕಾದು ನೋಡಬೇಕಿದೆ.
ವಕೀಲರೂ ಆಗಿರುವ ಸಿ. ಎಸ್. ದ್ವಾರಕಾನಾಥ್ ದಲಿತ, ಹಿಂದುಳಿದ ವರ್ಗ, ಜನಪರ ಹೋರಾಟಗಳಲ್ಲಿ ಸಕ್ರಿಯರಾಗಿದ್ದಾರೆ. ವಕೀಲರು ಆಗಿರುವ ಅವರು ಮೀಸಲಾತಿ ವಿಚಾರದಲ್ಲಿ ಆಳವಾದ ಜ್ಞಾನ ಹೊಂದಿದ್ದಾರೆ. ವಿವಿಧ ಪತ್ರಿಕೆಗಳಿಗೆ ಅಂಕಣಗಳನ್ನು ಸಹ ಬರೆಯುತ್ತಾರೆ.

ಬಿಎಸ್ಆರ್ ಕಾಂಗ್ರೆಸ್ ಸೇರಿದ್ದರು
ಬಿ. ಶ್ರೀರಾಮುಲು ಬಿ. ಎಸ್. ಆರ್. ಕಾಂಗ್ರೆಸ್ ಪಕ್ಷ ಸ್ಥಾಪನೆ ಮಾಡಿದಾಗ ಸಿ. ಎಸ್. ದ್ವಾರಕಾನಾಥ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಪಕ್ಷದ ಮಾರ್ಗದರ್ಶಕರಾಗಿ ಹಿಂದುಳಿದ, ಅಲ್ಪ ಸಂಖ್ಯಾತ ವರ್ಗದ ನಾಯಕರನ್ನು ಪಕ್ಷಕ್ಕೆ ಕರೆತರುವಲ್ಲಿ ಪ್ರಮುಖ ಪಾತರವನ್ನು ವಹಿಸಿದ್ದರು. ಬಳಿಕ ಭಿನ್ನಾಭಿಪ್ರಾಯ ಉಂಟಾಗಿ ಪಕ್ಷ ತೊರೆದಿದ್ದರು. ರಾಜಕೀಯ ಚಿತ್ರಣ ಬದಲಾಗಿದ್ದು, ಬಿ. ಶ್ರೀರಾಮುಲು ಬಿಜೆಪಿಗೆ ವಾಪಸ್ ಆಗಿದ್ದಾರೆ. ಸದ್ಯ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಅವರು ಸಾರಿಗೆ ಸಚಿವರು.

ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು
ಸಾಮಾಜಿಕ ಮತ್ತು ಜನಪರ ಹೋರಾಟದಲ್ಲಿ ತೊಡಗಿದ್ದ ಸಿ. ಎಸ್. ದ್ವಾರಕಾನಾಥ್ 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಎಸ್‌ಪಿ ಸೇರಿದ್ದರು. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಲೋಕಸಭೆ ಚುನಾವಣೆ ಕಣಕ್ಕಿಳಿದಿದ್ದರು 23,446 ಮತಗಳನ್ನು ಪಡೆದಿದ್ದರು. ಚುನಾವಣೆ ಬಳಿಕ ರಾಜಕೀಯವಾಗಿ ಅಲ್ಲದಿದ್ದರೂ ಹೋರಾಟಗಳ ಮೂಲಕ ಸಕ್ರಿಯರಾಗಿದ್ದಾರೆ. ಈಗ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ.

ಅಹಿಂದ ಹೋರಾಟ ಆರಂಭ
ಸಿ. ಎಸ್. ದ್ವಾರಕಾನಾಥ್ ಕರ್ನಾಟಕದಲ್ಲಿ ಅಹಿಂದ ಹೋರಾಟವನ್ನು ಮೊದಲು ಆರಂಭಿಸಿದರು. ಬಳಿಕ ಸಿದ್ದರಾಮಯ್ಯ ಹೋರಾಟ ಮುಂದುವರೆಸಿದರು. ಸಿದ್ದರಾಮಯ್ಯ ರಾಜಕೀಯ ಜೀವನಕ್ಕೆ ಅಹಿಂದ ಹೋರಾಟ ಬಹುದೊಡ್ಡ ಕೊಡುಗೆಯನ್ನು ನೀಡಿದೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಆದರೆ ಸಿದ್ದರಾಮಯ್ಯ ಅನೇಕ ನಡೆಗಳು ಸಿ. ಎಸ್. ದ್ವಾರಕಾನಾಥ್ ಅಸಮಾಧಾನಕ್ಕೆ ಸಹ ಕಾರಣವಾಗಿತ್ತು. ರಾಜಕೀಯ ಲಾಭಕ್ಕೆ ಹೋರಾಟವನ್ನು ಬಳಸಿಕೊಂಡರು ಎಂಬುದು ಪ್ರಮುಖ ಆರೋಪವಾಗಿತ್ತು. ಈಗ ಕಾಂಗ್ರೆಸ್ ಪಕ್ಷ ಸೇರಿದ್ದು ಸಿದ್ದರಾಮಯ್ಯ ಕುರಿತು ಸಿ. ಎಸ್. ದ್ವಾರಕಾನಾಥ್ ನಿಲುವು ಬದಲಾಗಲಿದೆಯೇ? ಕಾದು ನೋಡಬೇಕು.
Recommended Video

ಪಕ್ಷ ಸಂಘಟನೆ ಮಾಡುವುದು
ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡಲು ಡಿ. ಕೆ. ಶಿವಕುಮಾರ್ ಹಲವು ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ. ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಈಗಾಗಲೇ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ. ಈಗ ಚಿಕ್ಕಬಳ್ಳಾಪುರ ಮೂಲದ ಸಿ. ಎಸ್. ದ್ವಾರಕಾನಾಥ್‌ರನ್ನು ಡಿ. ಕೆ. ಶಿವಕುಮಾರ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇದು ಹೇಗೆ ಉಪಯೋಗವಾಗಲಿದೆ? ಎಂದು ಕಾದು ನೋಡಬೇಕಿದೆ.












Click it and Unblock the Notifications