ಪತ್ರಿಕೋದ್ಯಮ ಶಿಕ್ಷಣ ಮತ್ತು ತರಬೇತಿಯನ್ನು ಉನ್ನತೀಕರಿಸಿದ ಭಾಸ್ಕರ ಹೆಗಡೆ: ಪ್ರೊ ಎ.ಎಸ್.ಬಾಲಸುಬ್ರಹ್ಮಣ್ಯ ಬರಹ
ಡಾ ಭಾಸ್ಕರ ಹೆಗಡೆ ಅಭಿನಂದನೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಸುದೀರ್ಘ 33 ವರ್ಷಗಳ ಪ್ರಾಧ್ಯಾಪಕರಾಗಿದ್ದವರು ಡಾ ಭಾಸ್ಕರ ಹೆಗಡೆ. ಜನವರಿ 31 ರಂದು ಅವರು ನಿವೃತ್ತರಾಗಲಿರುವ ಹಿನ್ನೆಲೆಯ್ಲಿ ವಿದ್ಯಾರ್ಥಿಗಳು ವಿಶೇಷ 'ಭಾಸ್ಕರ ಪರ್ವ - ಮಾಧ್ಯಮ ಗುರುವಿಗೆ ಅಭಿನಂದನೆ' ಎಂಬ ವಿಶಿಷ್ಟ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಾ ಭಾಸ್ಕರ ಹೆಗಡೆ ಅವರಿಗೆ ಪಾಠ ಮಾಡಿದ್ದ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪತ್ರಿಕೋದ್ಯಮ ಪ್ರಾಧ್ಯಾಪಕ ಹಾಗೂ ಮಾಧ್ಯಮ ತಜ್ಞ ಪ್ರೊ ಎ.ಎಸ್.ಬಾಲಸುಬ್ರಹ್ಮಣ್ಯ ಅವರು ಬರೆದ ವಿಶೇಷ ಲೇಖನವನ್ನು ಇಲ್ಲಿ ಪ್ರಕಟಿಸಲಾಗಿದೆ.
ಕಲಿಕೆ ಎನ್ನುವುದು ಬಹು ಸಂಕೀರ್ಣ ಪ್ರಕ್ರಿಯೆ. ಅನೇಕ ಅಂಶಗಳು ವಿದ್ಯಾರ್ಥಿ ಮತ್ತು ಶಿಕ್ಷಕರ ಮೇಲೆ ಪರಸ್ಪರ ಪೂರಕವಾಗಿ ಪ್ರಭಾವ ಬೀರುತ್ತವೆ. ಅಪಾರ ಆಕಾಂಕ್ಷೆಗಳು ಹಾಗೂ ಭರವಸೆಗಳನ್ನು ಇರಿಸಿಕೊಂಡು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುತ್ತಾರೆ. ಹೆಸರೇ ಸೂಚಿಸುವಂತೆ 'ಉನ್ನತ' ಶಿಕ್ಷಣ ವಿದ್ಯಾರ್ಥಿಯ ಜೀವನದಲ್ಲಿ ನಿರ್ಣಾಯಕ ಘಟ್ಟ. ಉದ್ಯೋಗ ಲಭ್ಯತೆಯನ್ನು ಗಮನದಲ್ಲಿರಿಸಿ ವಿಶೇಷವಾಗಿ ವೃತ್ತಿಪರ ಕೋರ್ಸ್‌ಗಳನ್ನು ವಿದ್ಯಾರ್ಥಿಗಳು ಆಯ್ಕೆಮಾಡುತ್ತಾರೆ. ಗ್ರಾಮಾಂತರ ಪ್ರದೇಶಗಳಿಂದ ಬರುವ ಮಧ್ಯಮ ವರ್ಗದ ವಿದ್ಯಾರ್ಥಿಗಳಂತೂ ಬಹು ದೊಡ್ಡ ಆಸೆಯನ್ನಿರಿಸಿಕೊಂಡು ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುತ್ತಾರೆ. ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಶಿಕ್ಷಕನಾಗಿ 32 ವರ್ಷಗಳ ಸೇವಾವಧಿಯಲ್ಲಿ ವೈವಿಧ್ಯಮಯ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಅನುಭವ ನನ್ನದು.

ಅಂತಹ ಪ್ರತಿಭಾವಂತ ಹಾಗೂ ನಿಷ್ಠಾವಂತ ವಿದ್ಯಾರ್ಥಿಗಳ ಪೈಕಿ ಭಾಸ್ಕರ ಹೆಗಡೆ ನನ್ನ ಶಿಕ್ಷಕ ವೃತ್ತಿಯ ನೆನಪಿನಲ್ಲಿ ಶಾಶ್ವತ ಸ್ಥಾನ ಪಡೆದ ದೈತ್ಯ ಪ್ರತಿಭೆ. ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಯು ಹಲವು ಜಿಲ್ಲೆಗಳಿಗೆ ವಿಸ್ತರಿಸಿತ್ತು. ಉತ್ತರ ಕನ್ನಡ, ಬೆಳಗಾವಿ, ಬಿಜಾಪುರ ಹಾಗೂ ಧಾರವಾಡ (ಇಂದಿನ ಗದಗ ಮತ್ತು ಹಾವೇರಿ ಜಿಲ್ಲೆಗಳನ್ನು ಒಳಗೊಂಡಂತೆ) ಜಿಲ್ಲೆಗಳು ಕವಿವಿ ವ್ಯಾಪ್ತಿಗೆ ಸೇರಿದ್ದವು. ಹೀಗಾಗಿ ವಿವಿಧ ಹಿನ್ನೆಲೆಗಳನ್ನು ಹೊಂದಿದ ವಿದ್ಯಾರ್ಥಿಗಳು ನಮ್ಮ ವಿಭಾಗಕ್ಕೆ ಪ್ರವೇಶ ಪಡೆಯುತ್ತಿದ್ದರು.
ಕನ್ನಡ ಭಾಷೆಯ ಪ್ರೌಢಿಮೆಯಲ್ಲೂ ಏರುಪೇರುಗಳು ಇರುತ್ತಿದ್ದವು. ಪತ್ರಿಕೋದ್ಯಮಕ್ಕೆ ಬೇಕಾದದ್ದೇ ಭಾಷೆಯ ಮೇಲಿನ ಪರಿಣತಿ, ಉತ್ತಮ ಓದು ಮತ್ತು ಸಮಕಾಲೀನ ಘಟನಾವಳಿಗಳ ಕುರಿತ ಸಾಮಾನ್ಯ ಜ್ಞಾನ. ಈ ಎಲ್ಲ ಹಿನ್ನೆಲೆಗಳನ್ನು ಅವಲೋಕಿಸಿದಾಗ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಇತರರಿಗಿಂತ ತುಸು ಮುಂದೆ ಇದ್ದರು. ಅವರ ಬರವಣಿಗೆಯಲ್ಲಿ ಹೆಚ್ಚಿನ ಸ್ಪಷ್ಟತೆ ಇತ್ತು. ಅರ್ಥಪೂರ್ಣ ವಾಕ್ಯ ರಚನೆ ಹಾಗೂ ಪದಗಳ ಬಳಕೆ ನಿಖರವಾಗಿರುತ್ತಿತ್ತು. ಉತ್ತರ ಕನ್ನಡ ಜಿಲ್ಲೆಯ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಪೋಷಕರು ಸಕ್ರಿಯವಾಗಿ ಭಾಗವಹಿಸುವಿಕೆ ಇದಕ್ಕೆ ಪ್ರಮುಖ ಕಾರಣ ಎಂದು ನನ್ನ ಅರಿವಿಗೆ ನಂತರ ಬಂತು. ವಿವಿಧ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ಬರವಣಿಗೆ ತಂತ್ರಗಳನ್ನು ಕಲಿಸುವುದು ಮತ್ತು ಅವರ ಪತ್ರಿಕಾ ಬರವಣಿಗೆಯನ್ನು ಭಾಷೆಯನ್ನು ತಿದ್ದಿ ಸುಧಾರಿಸುವುದು ಶಿಕ್ಷಕರಿಗೆ ಸವಾಲಿನ ಕೆಲಸವಾಗುತ್ತಿತ್ತು.
ವಿದ್ಯಾರ್ಥಿಯಾಗಿದ್ದಾಗಲೇ ಬರಹ ಆರಂಭ
ಉನ್ನತ ಶಿಕ್ಷಣದಲ್ಲಿ ಪ್ರೇರಣೆ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಕಾರಾತ್ಮಕ ಸಂಪರ್ಕಗಳು ನಿರ್ಣಾಯಕವಾಗಿವೆ. ಪತ್ರಿಕೋದ್ಯಮ ಶಿಕ್ಷಣದಲ್ಲಂತೂ ಇದು ಬಹು ಮುಖ್ಯವಾಗುತ್ತದೆ. ಪಾಠ-ಪ್ರವಚನಗಳ ಮೂಲಕ ಜ್ಞಾನಗಳಿಸುವಿಕೆ ಜತೆಗೆ ಸಂವಹನ ಕೌಶಲ್ಯಗಳ ಕಲಿಯುವಿಕೆ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಅಡಿಪಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಎರಡು ವರ್ಷಗಳ ಅವಧಿಯ ಸ್ನಾತಕೋತ್ತರ ಪತ್ರಿಕೋದ್ಯಮ ಶಿಕ್ಷಣ ಮತ್ತು ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಎಲ್ಲರ ಗಮನ ಸೆಳೆದಿದ್ದ ಭಾಸ್ಕರ ಹೆಗಡೆ ಅನೇಕ ಲೇಖನಗಳನ್ನು ಬರೆದು ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದ್ದ. ನಿರಂತರವಾಗಿ ತರಗತಿಗಳಿಗೆ ಹಾಜರಾಗಿ ಜ್ಞಾನಾಭಿವೃದ್ಧಿಗಳಿಸಿದ್ದರು.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಳ್ಕೋಡ್ ಗ್ರಾಮದ ಭಾಸ್ಕರ್ ಹೆಗಡೆ ಹೊನ್ನಾವರ ಎಸ್‌ಡಿಎಂ ಕಾಲೇಜಿನಲ್ಲಿ ಪದವಿ ಪಡೆದು ನಂತರ ಕವಿವಿ, ಧಾರವಾಡದಲ್ಲಿ ಸ್ನಾತಕ ಪದವಿ ಗಳಿಸಿದರು. ಎಂಎ ಪದವಿ ಪಡೆದ ನಂತರ ಹುಬ್ಬಳ್ಳಿಯ ಸಂಜೆವಾಣಿ ಪತ್ರಿಕೆಯಲ್ಲಿ ತಮ್ಮ ಪತ್ರಿಕಾವೃತ್ತಿ ಆರಂಭಿಸಿ ಮೂರು ವರ್ಷ ಕೆಲಸ ಮಾಡಿ ಅನುಭವಗಳಿಸಿದರು. ಉಜಿರೆ ಕಾಲೇಜಿನಲ್ಲಿ ಪತ್ರಿಕೋದ್ಯಮ ಅಧ್ಯಾಪನ ವೃತ್ತಿಯನ್ನು 1993ರಲ್ಲಿ ಆರಂಭಿಸಿದ ಭಾಸ್ಕರ್ ಹೆಗಡೆ ಈ ಕಾಲೇಜಿನ ಪತ್ರಿಕೋದ್ಯಮ ವಿಭಾಗವನ್ನು ರಾಜ್ಯದಲ್ಲಿಯೇ ಪ್ರತಿಷ್ಠಿತ ಪತ್ರಿಕೋದ್ಯಮ ತರಬೇತಿ ಕಾಲೇಜಾಗಿ ಪರಿವರ್ತಿಸಿದರು. ಈ ಸಾಧನೆಯ ಬಹುಪಾಲು ಕೀರ್ತಿ ಭಾಸ್ಕರ್‌ಗೆ ಸಲ್ಲುತ್ತದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳ ಪರಿಪೂರ್ಣ ತರಬೇತಿಗಾಗಿ ತಮ್ಮನ್ನೇ ತಾವು ಅರ್ಪಿಸಿಕೊಂಡ ಇವರು 33 ವರ್ಷಗಳ ಸುದೀರ್ಘ ಅವಧಿಯಲ್ಲಿ ಹಗಲಿರುಳೆನ್ನದೆ ವಿಭಾಗದ ಬೆಳವಣಿಗೆಗೆ ಶ್ರಮಿಸಿದರು. ಮಾಧ್ಯಮ ಕ್ಷೇತ್ರಗಳಲ್ಲಿ ದುಡಿಯಬೇಕೆನ್ನುವ ಪ್ರತಿಭಾವಂತ ಕರಾವಳಿಯ ಆಕಾಂಕ್ಷಿಗಳ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಇವರದು ಮಹತ್ತರ ಪಾತ್ರವಿದೆ. ಓರ್ವ ಶಿಕ್ಷಕನಿಗೆ ಬದ್ಧತೆ ಇದ್ದರೆ ವಿದ್ಯಾರ್ಥಿಗಳು ಸಮನಾಗಿ ಸ್ಪಂದಿಸುತ್ತಾರೆ ಎನ್ನುವುದಕ್ಕೆ ಉಜಿರೆ ಕಾಲೇಜಿನ ವಿದ್ಯಾರ್ಥಿಗಳೇ ಸಾಕ್ಷಿ.
ವಿದ್ಯಾರ್ಥಿಗಳೊಂದಿಗೆ ಭಾವನಾತ್ಮಕ ಸಂಬಂಧ
ಎಸ್‌ಡಿಎಂ ಸಂಸ್ಥೆಯಿಂದ ಪೂರ್ಣ ಸಹಕಾರ ಮತ್ತು ನೆರವು ಭಾಸ್ಕರ್‌ಗೆ ಪ್ರೇರಣೆ ನೀಡಿತು. ಅತ್ಯುತ್ತಮ ಶೈಕ್ಷಣಿಕ ವಾತಾವರಣ, ಉತ್ತಮ ಸಹೋದ್ಯೋಗಿಗಳು ಹಾಗೂ ಪ್ರಯೋಗಾಲಯಗಳು ಇವರ ಸಾಮರ್ಥ್ಯಕ್ಕೆ ಮತ್ತಷ್ಟು ಇಂಬು ನೀಡಿದವು. ವಿಶೇಷವಾಗಿ ವಿದ್ಯಾರ್ಥಿಗಳೊಡನೆ ಭಾಸ್ಕರ್ ಅವರ ಭಾವನಾತ್ಮಕ ಸಂಬಂಧಗಳು ವಿಭಾಗದ ಸಂವರ್ಧನೆಗೆ ಮತ್ತಷ್ಟು ಪುಷ್ಟಿ ನೀಡಿದವು. ಬಹು ಮುಖ್ಯವಾಗಿ ವಿದ್ಯಾರ್ಥಿಗಳ ಪ್ರೇರಣೆ ಮತ್ತು ತೊಡಗಿಸಿಕೊಳ್ಳುವಿಕೆ ಈ ವಿಭಾಗದ ಹೆಗ್ಗಳಿಕೆ ಎನ್ನಬಹುದು. ವಿಭಾಗಕ್ಕೆ ನಾನು ಹಲವಾರು ಸಲ ಶೈಕ್ಷಣಿಕ ಕೆಲಸಗಳಿಗೆ ಭೇಟಿ ನೀಡಿ ಅಲ್ಲಿನ ಶೈಕ್ಷಣಿಕ ಪರಿಸರವನ್ನು ಸೂಕ್ಶ್ಮವಾಗಿ ಅವಲೋಕಿಸಿದ್ದೇನೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸುಮಧುರ ಬಾಂಧವ್ಯ ಬೆಳೆಸುವಲ್ಲಿ ಭಾಸ್ಕರ್ ಗುರುತರ ಪಾತ್ರ ವಹಿಸಿದ್ದಾರೆ.
ವಿದ್ಯಾರ್ಥಿಗಳೊಡನೆ ನಿಯಮಿತ ಪ್ರತಿಕ್ರಿಯೆ ಮತ್ತು ಕಾಳಜಿಯ ಅಭಿವ್ಯಕ್ತಿಗಳು ಸಂಬಂಧಗಳನ್ನು ಬಲಪಡಿಸುತ್ತವೆ. ಆಗ ಕಲಿಕೆ ಅರ್ಥಪೂರ್ಣವಾಗುತ್ತದೆ. ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಬ್ಬರಿಗೂ ಬದ್ಧತೆ ಅಗತ್ಯ. ಇದರರ್ಥ ಪ್ರಕ್ರಿಯೆಗೆ ಸಮಯ ಮತ್ತು ಶ್ರಮವನ್ನು ಮೀಸಲಿಡುವುದು. ಈ ನಿಯಮದ ಪಾಲನೆ ಭಾಸ್ಕರ್ ಅವರ ಯಶಸ್ಸಿಗೆ ಪ್ರಮುಖ ಕಾರಣ. ಅವರು ಎಲ್ಲ ಸಮಯದಲ್ಲೂ ವಿದ್ಯಾರ್ಥಿಗಳಿಗೆ ಲಭ್ಯವಿದ್ದರು. ಅದು ಭಾಷಾಂತರ ಕೆಲಸವಿರಬಹುದು, ಪ್ರಾಯೋಗಿಕ ಪತ್ರಿಕೆಯನ್ನು ಹೊರತರುವ ಸಮಯವಿರಬಹುದು, ಭಾಸ್ಕರ್ ಮತ್ತವರ ಸಹೋದ್ಯೋಗಿಗಳು ವಿದ್ಯಾರ್ಥಿಗಳಿಗೆ ಸಲಹೆ ಸೂಚನೆಗಳನ್ನು ಕೊಡಲು ಸದಾ ಸಿದ್ಧರಿದ್ದರು. ಇದರಿಂದ ಪತ್ರಿಕೋದ್ಯಮ ತರಬೇತಿ ಉಜಿರೆಯಲ್ಲಿ ವಿಜೃಂಭಿಸಿತು. ಪಾಠಪ್ರವಚನಗಳಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ನಂಬಿಕೆ ಮತ್ತು ಬಾಂಧವ್ಯಗಳು ಕಲಿಕೆಗೆ ಪೂರಕವಾಗಿ ನೆರವಾಗುತ್ತದೆ. ಬೋಧನೆ ಮತ್ತು ಕಲಿಕೆಯ ಶೈಲಿಗಳು ಪರಸ್ಪರ ಹೊಂದಾಣಿಕೆಯಾಗಬೇಕು. ಶಿಕ್ಷಕರು ವಿದ್ಯಾರ್ಥಿಗಳ ಅಗತ್ಯಗಳನ್ನು ಅರ್ಥಮಾಡಿಕೊಂಡಾಗ ಮತ್ತು ಆ ಅಗತ್ಯಗಳನ್ನು ಪೂರೈಸಿದಾಗ ಶಿಕ್ಷಣ ಸಾರ್ಥಕತೆಯನ್ನು ಪಡೆಯುತ್ತದೆ. ಈ ಹೊಂದಾಣಿಕೆಯನ್ನು ಸಾಕಾರಗೊಳಿಸುವಲ್ಲಿ ಭಾಸ್ಕರ್ ಅವರ ಪ್ರಾಮಾಣಿಕ ಪ್ರಯತ್ನಗಳು ಅಭಿನಂದನೆಗೆ ಪಾತ್ರವಾಗುತ್ತವೆ.
ತಮ್ಮ ಮೂರು ದಶಕಗಳ ಅಧ್ಯಾಪನ ವೃತ್ತಿಯಲ್ಲಿ ಭಾಸ್ಕರ್ ಅವರು ಅನೇಕ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳೊಡನೆ ನಿಕಟ ಸಂಪರ್ಕವಿರಿಸಿಕೊAಡು ತಮ್ಮ ಅನುಭವಗಳನ್ನು ಪತ್ರಿಕೋದ್ಯಮ ಶಿಕ್ಷಣದ ಉನ್ನತಿಗೆ ಧಾರೆ ಎರೆದಿದ್ದಾರೆ. ವಿಭಾಗದಲ್ಲಿ ಅನೇಕ ಉಪನ್ಯಾಸಗಳು ಹಾಗು ಸೆಮಿನಾರ್‌ಗಳನ್ನೂ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಿಭಾಗದ ಮುಖ್ಯಸ್ಥರಾಗಿ ಉತ್ತಮ ನಾಯಕತ್ವದ ಗುಣಗಳನ್ನು ದೃಢೀಕರಿಸಿದ್ದಾರೆ. ಇವರ ಶ್ರಮ ಹಾಗೂ ಅರ್ಪಣಾ ಮನೋಭಾವ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು. ಶಿಸ್ತಿಗೆ ಹೆಸರಾದ ಧರ್ಮಸ್ಥಳ ವಿದ್ಯಾಸಂಸ್ಥೆಗಳಿಗೆ ಭಾಸ್ಕರ್ ಓರ್ವ ಮಾದರಿ ಶಿಕ್ಷಕ ಎಂದರೆ ಉತ್ಪ್ರೇಕ್ಷೆಯಲ್ಲ. ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಅವರ ಶ್ರೀಮತಿಯವರ ಅಕಾಲ ಮೃತ್ಯುವಿನಿಂದ ಭಾಸ್ಕರ್ ಹೆಗಡೆ ತೀವ್ರವಾಗಿ ಮನನೊಂದಿದ್ದರು. ಆದರೂ ಅವರ ಶೈಕ್ಷಣಿಕ ಚಟುವಟಿಕೆಗಳು ಯಥಾವತ್ತಾಗಿ ಮುಂದುವರಿದವು. ಅವರ ಏಕೈಕ ಪುತ್ರ ಪ್ರತಿಭಾವಂತ. ಮಣಿಪಾಲದಲ್ಲಿ ಎಂಟೆಕ್ ಪದವಿ ಪಡೆದು ಸದ್ಯ ಲಂಡನ್ನಿನಲ್ಲಿ ಉದ್ಯೋಗದಲ್ಲಿದ್ದಾನೆ.
ಭಾಸ್ಕರ್ ಹೆಗಡೆ ಓರ್ವ ನಿಷ್ಕಾಮ ಕರ್ಮಯೋಗಿ. ಯಾರೊಡನೆಯೂ ಏರುಧ್ವನಿಯಲ್ಲಿ ಮಾತನಾಡಿದವರಲ್ಲ. ಈ ದಿನಗಳಲ್ಲಿ ಇಂಥವರು ಬಹು ಅಪರೂಪ. ಅವರಿಗೆ ಶುಭವಾಗಲಿ.
(ಬರಹ: ಪ್ರೊ ಎ.ಎಸ್.ಬಾಲಸುಬ್ರಹ್ಮಣ್ಯ, ವಿಶ್ರಾಂತ ಪತ್ರಿಕೋದ್ಯಮ ಪ್ರಾಧ್ಯಾಪಕರು ಹಾಗೂ ಮಾಧ್ಯಮ ತಜ್ಞರು. ಡಾ ಭಾಸ್ಕರ ಹೆಗಡೆಯವರ ಗುರುಗಳು)
-
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ -
ದುಬೈ ವಿಮಾನ ನಿಲ್ದಾಣಕ್ಕೆ ನುಗ್ಗಿದ ಡ್ರೋನ್, ಎಲ್ಲಾ ವಿಮಾನ ಹಾರಾಟ ದಿಢೀರ್ ಸ್ಥಗಿತ | Operation Roaring Lion -
LPG Price Hike: ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 60 ರೂಪಾಯಿ ಏರಿಕೆ, ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿ ಹೆಚ್ಚಳ -
SWR: ಬೆಂಗಳೂರಿನಿಂದ ಇಲ್ಲಿಗೆ ಮಾ.10ರಿಂದ ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ ಹೀಗಿದೆ












Click it and Unblock the Notifications