Siddaramaiah: ಜನರ ದಾರಿತಪ್ಪಿಸುವ ಬಿಜೆಪಿಯನ್ನು ನಂಬಬೇಡಿ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರಣವೇನು
Siddaramaiah: ಭದ್ರಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ಕೇಂದ್ರ ಸರ್ಕಾರವು ದ್ರೋಹವೆಸಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದ್ದಾರೆ.
ಜನಕಲ್ಯಾಣಕ್ಕೆ ಒತ್ತಾಸೆಯಾಗಿರುವ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳೂ ಒಂದು ವಿಧದ ಅಭಿವೃದ್ಧಿಯಾಗಿದ್ದು, ಗ್ಯಾರಂಟಿಗಳ ನಡುವೆಯೂ ರಾಜ್ಯದ ಆರ್ಥಿಕ ಸ್ಥಿತಿ ಕೇಂದ್ರಕ್ಕಿಂತ ಉತ್ತಮವಾಗಿದೆ. 36 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸೇತುವೆಯೂ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಏಪ್ರಿಲ್ 13ರ ಸೋಮವಾರ ಚಾಲನೆ ನೀಡಲಾಗಿದೆ. ವಿರೋಧ ಪಕ್ಷದವರು ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲ, ಗ್ಯಾರಂಟಿಗಳ ನಂತರ ಖಜಾನೆ ಖಾಲಿಯಾಗಿವೆ, ಅಭಿವೃದ್ಧಿ ಶೂನ್ಯ ಎಂದು ಟೀಕಿಸುತ್ತಾರೆ. ಆದರೆ ಗ್ಯಾರಂಟಿಗಳ ಜೊತೆಗೆ ಅಭಿವೃದ್ಧಿಯನ್ನೂ ನಮ್ಮ ಸರ್ಕಾರ ಸಾಧ್ಯವಾಗಿಸಿದೆ.

ಗ್ಯಾರಂಟಿಗಳೂ ಒಂದು ವಿಧದ ಅಭಿವೃದ್ಧಿಯಾಗಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರು ರಾಜಕೀಯ ಸ್ವಾತಂತ್ರ್ಯ ಯಶಸ್ವಿಯಾಗಲು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ವಾತಂತ್ರ್ಯ ಅತ್ಯಗತ್ಯ ಎಂದಿದ್ದರು. ವಿರೋಧ ಪಕ್ಷದವರು ಅಂಬೇಡ್ಕರ್‌ರವರ ಈ ಚಿಂತನೆಯ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು.
ಮೈಸೂರು ಮಹಾರಾಜರಾಗಿದ್ದ ನರಸಿಂಹರಾಜ ಒಡೆಯರ್ ಅವರ ಕಾಲದಲ್ಲಿ ಎಡಳ್ಳಿಯಾಗಿದ್ದ ಈ ಪ್ರದೇಶಕ್ಕೆ ನರಸಿಂಹರಾಜಪುರ ಎಂದು ನಾಮಕರಣವಾಯಿತು. ಈ ಭಾಗದ ಅಭಿವೃದ್ಧಿಯ ಉದ್ದೇಶದಿಂದ, ಇಲ್ಲಿನ ಶಾಸಕರ ಒತ್ತಾಸೆಯಿಂದ ಇಂದು ಸೇತುವೆ ನಿರ್ಮಾಣ ಸಾಧ್ಯವಾಗಿದೆ. ಉಳಿದಂತೆ ರಸ್ತೆ ಅಗಲೀಕರಣ, ಬ್ಯಾರೇಜ್ ಕಂ ಬ್ರಿಡ್ಜ್ ನಿರ್ಮಾಣ, ಪ್ರವಾಸೋದ್ಯಮವೂ ಸೇರಿದಂತೆ ಹಲವು ಬೇಡಿಕೆಗಳ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರವು 2023-24ರ ಆಯವ್ಯಯದಲ್ಲಿ ₹5,300 ಕೋಟಿಗಳನ್ನು ಘೋಷಿಸಿತು. ಆದರೆ ಇದುವರೆಗೆ ಈ ಅನುದಾನ ನೀಡಿಲ್ಲ. ಈ ಮೂಲಕ ರಾಜ್ಯದ ಜನರಿಗೆ ಕೇಂದ್ರ ದ್ರೋಹವೆಸಗಿದೆ. ಕಾಂಗ್ರೆಸ್ ಸರ್ಕಾರವೊಂದೇ ಕೊಟ್ಟ ಮಾತಿನಂತೆ ನಡೆಯುವ ಸರ್ಕಾರವಾಗಿದೆ. ನಮ್ಮ ಸರ್ಕಾರದಿಂದ ಗ್ಯಾರಂಟಿಗಳಿಗೆ ಇದುವರೆಗೆ 1.30 ಲಕ್ಷ ಕೋಟಿಗಳನ್ನು ವೆಚ್ಚ ಮಾಡಲಾಗಿದೆ. ರಾಜ್ಯದ ಗ್ಯಾರಂಟಿಗಳನ್ನು ಟೀಕಿಸುವ ಬಿಜೆಪಿಯವರು ಇತರೆ ರಾಜ್ಯಗಳಲ್ಲಿ ಅವುಗಳನ್ನೇ ಅನುಸರಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಮುಂದುವರಿದು ಕೇಂದ್ರದ ಜಿಡಿಪಿ ದರ 7.14 ರಷ್ಟಿದ್ದರೆ, ರಾಜ್ಯದ ಜಿಡಿಪಿ 8.1 ರಷ್ಟಿದೆ. ದೇಶದಲ್ಲಿ 53.11 ಲಕ್ಷ ಕೋಟಿಗಳಿದ್ದ ಸಾಲದ ಮೊತ್ತ, ಪ್ರಸ್ತುತ ಪ್ರಧಾನಿ ಮೋದಿಯವರ ಅಧಿಕಾರಾವಧಿಯಲ್ಲಿ 218 ಲಕ್ಷ ಕೋಟಿ ರೂ.ಗೆ ತಲುಪಿದೆ. ರಾಜ್ಯದ ಆರ್ಥಿಕ ಬೆಳವಣಿಗೆ ಕೇಂದ್ರಕ್ಕಿಂತ ಗಣನೀಯವಾಗಿ ಹೆಚ್ಚಿದೆ. ಕರ್ನಾಟಕದ ಆರ್ಥಿಕ ಸ್ಥಿತಿಯು ಸದೃಢವಾಗಿದ್ದು, ಆರ್ಥಿಕ ಹೊಣೆಗಾರಿಕೆ ಕಾಯ್ದೆಯ ಮಾನದಂಡಗಳಿಗೆ ಪೂರಕವಾಗಿದೆ.
ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ರಾಜ್ಯದ ಆರ್ಥಿಕತೆ ವಸ್ತುಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ಟೀಕಿಸಿದ್ದಾರೆ. ಅವರು ಬಜೆಟ್‌ನ ಅಂಶಗಳ ಬಗ್ಗೆ ಮನನ ಮಾಡಿಕೊಳ್ಳದೇ, ಕೇವಲ ಪ್ರಚಾರಕ್ಕಾಗಿ ಹೇಳಿಕೆ ನೀಡುತ್ತಿದ್ದಾರೆ. ನಮ್ಮ ಸರ್ಕಾರ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ, ನುಡಿದಂತೆ ನಡೆದಿದೆ. ಜನರ ದಾರಿತಪ್ಪಿಸುವ ಬಿಜೆಪಿಯನ್ನು ನಂಬಬಾರದು ಎಂದು ಹೇಳಿದ್ದಾರೆ.












Click it and Unblock the Notifications