ಆಳುವುದು ಬೇರೆ, ಆಡಳಿತ ಬೇರೆ: ಜಿಲ್ಲಾಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಪಾಠ
ಬೆಂಗಳೂರು, ಅಕ್ಟೋಬರ್ 17: ಜಿಲ್ಲಾಧಿಕಾರಿಗಳು ಸಮಯೋಚಿತ ತೀರ್ಮಾನಗಳ ಮೂಲಕ ಜನರಿಗೆ ನೆರವಾಗಬೇಕು. ಸಮಯಪ್ರಜ್ಞೆ, ಸ್ಥಿತ ಪ್ರಜ್ಞತೆಯಿಂದ ಕಾರ್ಯ ನಿರ್ವಹಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಲಹೆ ನೀಡಿದರು.
ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿ ಮಾತನಾಡಿದ ಮುಖ್ಯಮಂತ್ರಿಗಳು, ಒಬ್ಬ ಐಎಎಸ್ ಅಧಿಕಾರಿಗೆ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುವುದು ಅದೊಂದು ಮಹತ್ವಪೂರ್ಣ ಅವಕಾಶವೇ ಆಗಿದೆ. ಜಿಲ್ಲೆಯಲ್ಲಿ ನೀವು ಯಾವ ರೀತಿ ಹೆಜ್ಜೆ ಗುರುತು ಮೂಡಿಸುತ್ತೀರಿ ಎನ್ನುವುದು ಮುಖ್ಯವಾಗುತ್ತದೆ ಎಂದರು.
ಇತ್ತೀಚೆಗೆ ಬಹಳಷ್ಟು ಅಧಿಕಾರಿಗಳು ಜಿಲ್ಲಾಧಿಕಾರಿ ಹುದ್ದೆಯನ್ನು ಅಧಿಕಾರದ ಭಾಗವನ್ನಷ್ಟೇ ಆಗಿ ನೋಡುತ್ತಾರೆ. ಆ ಹುದ್ದೆಯ ಜವಾಬ್ದಾರಿ ಮತ್ತು ಆಡಳಿತದ ಪರಿಣಾಮವನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಇಲ್ಲಿ ಆಳುವುದು ಬೇರೆ, ಆಡಳಿತ ಮಾಡುವುದು ಬೇರೆ. ಇದನ್ನು ಗಮನದಲ್ಲಿರಿಸಿಕೊಂಡು ಕಾರ್ಯ ನಿರ್ವಹಿಸಿದರೆ ಅಭಿವೃದ್ಧಿ ಸಾಧ್ಯತೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಸಕಾಲಿಕ ನಿರ್ಧಾರಗಳ ಮೂಲಕ ಉತ್ತಮ ಆಡಳಿತ ನೀಡಿ
ಜಿಲ್ಲಾಧಿಕಾರಿಗಳಾದ ನೀವು ಆಡಳಿತದ ಭಾಗವೇ ಆಗಿದ್ದೀರಿ. ನಿಮಗೆ ಹೆಚ್ಚಿನ ಅಧಿಕಾರವೂ ಇದೆ. ನೀವು ಕೈಗೊಳ್ಳುವ ನಿರ್ಣಯಗಳು ಆಡಳಿತ ನಿರ್ವಹಣೆಯಲ್ಲಿ ಬಹಳ ಮುಖ್ಯವಾಗಿರುತ್ತದೆ. ಯಾವುದೇ ಕೆಲಸ ಮಾಡಬಾರದು ಅಂದುಕೊಂಡರೆ ನೂರು ಕಾರಣ ದೊರೆಯುತ್ತದೆ. ಒಂದು ಒಳ್ಳೆಯ ಕೆಲಸ ಮಾಡಬೇಕೆಂದರೆ ಒಂದೇ ಒಂದು ಕಾರಣ ಸಾಕು. ಆದ್ದರಿಂದ ಸಕಾಲಿಕ ತೀರ್ಮಾನಗಳನ್ನು ಕೈಗೊಳ್ಳುವ ಮೂಲಕ ಉತ್ತಮ ಆಡಳಿತ ನೀಡಿ. ಸಮಸ್ಯೆಗಳಿದ್ದರೆ, ಕೂಡಲೇ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆಯಿರಿ ಎಂದು ಅವರು ಸಲಹೆ ನೀಡಿದರು.
ಇಂದಿನ ಸಭೆಯಲ್ಲಿ ಎಲ್ಲ ಜಿಲ್ಲಾಧಿಕಾರಿಗಳು ಮುಕ್ತವಾಗಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಬೇಕು. ಆಗ ಸರ್ಕಾರ ಸೂಕ್ತ ನಿರರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿಗಳು ಮುಕ್ತವಾಗಿ ಆಹ್ವಾನಿಸಿದರು. ಆಯವ್ಯಯ ಅನುಷ್ಠಾನ ಕುರಿತಂತೆ ಸರ್ಕಾರಿ ಆದೇಶಗಳಾಗಿದೆ. ತಳ ಹಂತದಲ್ಲಿ ಅವುಗಳ ಅನುಷ್ಠಾನಕ್ಕೆ ಕ್ರಮಗಳನ್ನು ಕೈಗೊಂಡು, ವರ್ಷಾಂತ್ಯದಲ್ಲಿ ಗುರಿ ಸಾಧಿಸುವಂತೆ ಜಿಲ್ಲಾಧಿಕಾರಿಗಳಿಗೆ ಈ ವೇಳೆ ಸೂಚಿಸಲಾಯಿತು.

ಸಭೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್, ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್, ವಸತಿ ಸಚಿವ ವಿ.ಸೋಮಣ್ಣ, ಸಾರಿಗೆ ಸಚಿವ ಬಿ.ಶ್ರೀರಾಮುಲು, ಅಬಕಾರಿ ಸಚಿವ ಕೆ. ಗೋಪಾಲಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications