Fever: ಜ್ವರ ಬಂದಿದೆಯಾ ಉದಾಸೀನ ಮಾಡಲೇ ಬೇಡಿ..ಯಾಕೆ ಗೊತ್ತಾ?
ಇದೀಗ ಮತ್ತೆ ನಿಫಾ ವೈರಸ್ ಭಯ ಶುರುವಾಗಿದೆ. ಹೀಗಾಗಿ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕೇರಳದಲ್ಲಿ ಕಾಣಿಸಿಕೊಂಡಿರುವ ಈ ವೈರಸ್ ರಾಜ್ಯದ ಮೇಲೆಯೂ ದಾಳಿ ಮಾಡುವ ಲಕ್ಷಣಗಳು ಕಂಡು ಬರುತ್ತಿವೆ. ಕಾರಣ ಕೇರಳಕ್ಕೆ ಹೊಂದಿಕೊಂಡಂತೆ ರಾಜ್ಯದ ಚಾಮರಾಜನಗರ, ಮೈಸೂರು, ಕೊಡಗು ಮತ್ತು ದಕ್ಷಿಣಕನ್ನಡ ಜಿಲ್ಲೆ ಇರುವುದರಿಂದ ಈ ಭಾಗದ ಜನರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
ಬಹುತೇಕ ವೈರಸ್ ಗಳು ಕೇರಳದಲ್ಲಿಯೇ ಕಾಣಿಸಿಕೊಳ್ಳುತ್ತವೆ ಮತ್ತು ಅವು ಅಲ್ಲಿಂದ ಬೇರೆಡೆಗೆ ಹರಡುವುದು ಸಾಮಾನ್ಯವಾಗಿದೆ. ಹೀಗಾಗಿ ಕೇರಳಕ್ಕೆ ಹೊಂದಿಕೊಂಡಂತೆ ಇರುವ ಜಿಲ್ಲೆಗಳು ಮತ್ತು ಕೇರಳದೊಂದಿಗೆ ಒಡನಾಟ ಇಟ್ಟುಕೊಂಡವರು ಎಚ್ಚರಿಕೆ ವಹಿಸುವುದು ಬಹುಮುಖ್ಯವಾಗಿದೆ. ನಿಫಾ ಜ್ವರಕ್ಕೆ ಬಲಿಯಾದ ಸುದ್ದಿಗಳು ಬಂದಿರುವುದರಿಂದ ಜ್ವರ ಬಂದವರು ನಿರ್ಲಕ್ಷ್ಯ ವಹಿಸದೆ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯುವುದು ಬಹುಮುಖ್ಯವಾಗಿದೆ.

ವಾತಾವರಣ ಬದಲಾದಂತೆಲ್ಲ ಜ್ವರಗಳು ಕಾಣಿಸುತ್ತವೆ. ಇದು ಸಾಮಾನ್ಯ ಜ್ವರವೇ ಆಗಿರಬಹುದು ಆದರೆ ಅದು ಯಾವ ಜ್ವರ ಎಂಬುದನ್ನು ತಪಾಸಣೆ ನಡೆಸಿ ಚಿಕಿತ್ಸೆ ಪಡೆಯುವುದು ಬಹುಮುಖ್ಯವಾಗಿದೆ. ಮೊದಲೆಲ್ಲ ಜ್ವರವೆಂದರೆ ಜನ ಅಷ್ಟೊಂದಾಗಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಈಗ ಹಾಗಿಲ್ಲ. ಜ್ವರವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ನಮಗೆ ಬಾಧಿಸಿರುವ ಜ್ವರ ಯಾವುದು ಎಂಬುದನ್ನು ಪರೀಕ್ಷಿಸಿ ಚಿಕಿತ್ಸೆ ಪಡೆದ ಬಳಿಕವೇ ನೆಮ್ಮದಿಯುಸಿರು ಬಿಡಲು ಸಾಧ್ಯವಾಗಲಿದೆ. ಅಲ್ಲಿ ತನಕ ಯಾವ ಜ್ವರ ಯಾರ ಪ್ರಾಣ ತೆಗೆಯುತ್ತದೆಯೋ ಎಂಬುದನ್ನು ಹೇಳಲಾಗುವುದಿಲ್ಲ.
1998ರಲ್ಲಿ ಮಲೇಷ್ಯಾದಲ್ಲಿ ಪತ್ತೆಯಾದ ನಿಫಾ
ಇನ್ನು ನಿಫಾ ಜ್ವರದ ಬಗ್ಗೆ ಹೇಳಬೇಕೆಂದರೆ ಇದರ ವೈರಸ್ ಗಳು ಮೆದುಳು ಮತ್ತು ಹೃದಯವನ್ನು ಘಾಸಿಗೊಳಿಸಿ ಜೀವಕ್ಕೆ ಕುತ್ತು ತರುತ್ತವೆ. ಈ ಅಪಾಯಕಾರಿ ಸೋಂಕು ಮೊದಲು ಕಾಣಿಸಿಕೊಂಡಿದ್ದು 1998ರಲ್ಲಿ ಮಲೇಷ್ಯಾದ ನಿಫಾ ಎಂಬಲ್ಲಿ ಈ ವೈರಸ್ ಪತ್ತೆಯಾಗಿತ್ತು. ನಿಫಾ ಎಂಬ ಊರಲ್ಲಿ ಪತ್ತೆಯಾದ ವೈರಸ್ ನಿಫಾ ಎಂದೇ ಕರೆಯಲ್ಪಟ್ಟಿತು ಎಂದು ಹೇಳಲಾಗುತ್ತಿದೆ. ಆ ನಂತರ 2011ರಲ್ಲಿ ಬಾಂಗ್ಲಾ ದೇಶದಲ್ಲೂ ಈ ಸೋಂಕು ಹರಡಿತ್ತು ಎಂಬುದು ಇತಿಹಾಸ.

ಈಗಾಗಲೇ ನಿಫಾ ವೈರಸ್ ಮಲೇಷ್ಯಾ, ಸಿಂಗಾಪುರ, ಭಾರತ ಮತ್ತು ಬಾಂಗ್ಲಾ ದೇಶಗಳಲ್ಲಿ ಕಾಣಿಸಿಕೊಂಡು ಜನರನ್ನು ಸಂಕಷ್ಟಕ್ಕೀಡು ಮಾಡಿತ್ತು. ನಿಫಾ ಜ್ವರದ ಲಕ್ಷಣಗಳೇನು ಎಂಬುದನ್ನು ನೋಡಿದ್ದೇ ಆದರೆ ತಲೆನೋವು, ಮೈಕೈನೋವು, ವಾಂತಿ, ನಡುಕ, ನಿದ್ರಾಲಸ್ಯ, ತೊದಲುವಿಕೆ, ಪ್ರಜ್ಞಾಹೀನತೆಯಾಗಿದೆ. ಇದಕ್ಕೆ ಯಾವುದೇ ನಿರ್ದಿಷ್ಟವಾದ ಚಿಕಿತ್ಸೆ ಲಭ್ಯವಿಲ್ಲ. ರೋಗ ಲಕ್ಷಣಗಳಿಗೆ ಅನುಗುಣವಾದ ಚಿಕಿತ್ಸೆ ಹಾಗೂ ಸೂಕ್ತ ನಿರ್ವಹಣೆಯಿಂದ ಸೋಂಕನ್ನು ಗುಣಪಡಿಸಬೇಕಾಗಿದೆ. ಸಾಕುಪ್ರಾಣಿಗಳಾದ ಹಂದಿ, ಕುದುರೆ, ನಾಯಿ ಮತ್ತು ಬೆಕ್ಕುಗಳಂತಹ ಸೋಂಕಿತ ಜಾನುವಾರಗಳು ಮಧ್ಯಂತರ ಮೂಲಗಳಾಗಿರುವುದರಿಂದ ಇವುಗಳನ್ನು ಪ್ರತ್ಯೇಕವಾಗಿಡಬೇಕಾಗುತ್ತದೆ.
ಜ್ವರ ಕಾಣಿಸಿದರೆ ವೈದ್ಯರನ್ನು ಭೇಟಿ ಮಾಡಿ
ಸೋಂಕು ತಗುಲಿದ ಅಥವಾ ಶಂಕಿತ ಪ್ರಕರಣಗಳನ್ನು ಪ್ರತ್ಯೇಕವಾಗಿಡಬೇಕು. ರೋಗಿಗಳು ಬಳಸುವ ವಸ್ತುಗಳನ್ನು ಪ್ರತ್ಯೇಕವಾಗಿ ಸಾಬೂನು ನೀರು ಬಳಸಿ ಶುಚಿಗೊಳಿಸಬೇಕು. ಹಸ್ತಲಾಘವ ಕೊಡವುದನ್ನು ತಪ್ಪಿಸಿ ಹಾಗೂ ಸೋಂಕಿತ ಜನರ ಸಂಪರ್ಕಕ್ಕೆ ಬಂದ ನಂತರ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳಬೇಕು. ರೋಗಿಗಳನ್ನು ಉಪಚರಿಸುವಾಗ ಮಾಸ್ಕ್ ಮತ್ತು ಗ್ಲೌಸ್ ತಪ್ಪದೇ ಬಳಸುವುದು, ಎಲ್ಲಾ ರೀತಿಯ ಹಣ್ಣುಗಳನ್ನು ಚೆನ್ನಾಗಿ ತೊಳೆದು, ಸಿಪ್ಪೆ, ಸುಲಿದು ಮತ್ತು ಬೇಯಿಸಿ ತಿನ್ನುವುದು, ಪ್ಲೂ ರೀತಿಯ ಲಕ್ಷಣಗಳು ಕಂಡುಬಂದರೆ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು.
ಪ್ರಾಣಿಗಳು ಮತ್ತು ಪಕ್ಷಿಗಳು ಕಚ್ಚಿರುವ ಹಣ್ಣುಗಳನ್ನು ತಿನ್ನಬಾರದು. ಬಾವಲಿಗಳು ಅತಿ ಹೆಚ್ಚಾಗಿ ಕಂಡು ಬರುವ ಪ್ರದೇಶಗಳಿಂದ ಸಂಗ್ರಹಿಸಿದ ನೀರಾ ಕುಡಿಯಬಾರದು. ಸೋಂಕಿತ ಪ್ರದೇಶಗಳಿಗೆ ಭೇಟಿ ನೀಡುವಾಗ ಪ್ರತಿಬಂಧಕ ಉಪಾಯಗಳನ್ನು ಕೈಗೊಳ್ಳುವುದು ಒಳ್ಳೆಯದು. ರೋಗಿಯ ಶರೀರದ ಸ್ರಾವದೊಂದಿಗೆ(ಜೊಲ್ಲು, ಬೇವರು ಮಾತ್ರ) ಸಂಪರ್ಕ ತಪ್ಪಿಸಬೇಕು. ಹೀಗೆ ಮಾಡುವುದರಿಂದ ನಿಫಾದಿಂದ ರಕ್ಷಿಸಿಕೊಳ್ಳಲು ಸಾಧ್ಯವಿದೆ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ. ಅದು ಏನೇ ಇರಲಿ ಜ್ವರ ಬಂದ ಬಳಿಕ ಕಷ್ಟ ಪಡುವುದಕ್ಕಿಂತ ಅದು ಬರದಂತೆ ನೋಡಿಕೊಳ್ಳುವುದು ಅನಿವಾರ್ಯವಾಗಿದೆ.












Click it and Unblock the Notifications