D.K.Suresh: ಕನ್ನಡದಲ್ಲಿ ಒಳ್ಳೇ ಸಿನಿಮಾಗಳಿಲ್ಲ ಅಂತ ಮುನಿರತ್ನ ನಟನೆಗೆ ಇಳಿದಿದ್ದಾರೆ
ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರ ಮೇಲಿನ ಮೊಟ್ಟೆ ಎಸೆತ ಪ್ರಕರಣವು ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಪಾತ್ರವೂ ಇದೆ ಎಂದು ಮುನಿರತ್ನ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಡಿ.ಕೆ.ಸುರೇಶ್ ಅವರು ಕನ್ನಡದಲ್ಲಿ ಇತ್ತೀಚೆಗೆ ಒಳ್ಳೆಯ ಸಿನಿಮಾಗಳಿಲ್ಲ ಎಂದು ಮುನಿರತ್ನ ಅವರೇ ಒಳ್ಳೆ ಸ್ಕ್ರಿಪ್ಟ್ ಮಾಡಿಕೊಂಡು ನಟನೆಗೆ ಇಳಿದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಅಲ್ಲದೆ ಅವರು ಆಸಿಡ್ ಎಂದ ಮೂರೇ ಸೆಕೆಂಡಿಗೆ ಅವರ ಮೇಲೆ ಮೊಟ್ಟೆ ದಾಳಿ ನಡೆಯುತ್ತೆ. ಮುನಿರತ್ನ ಅವರು ಮೊದಲೇ ನಿರ್ದೇಶಕ, ನಿರ್ಮಾಪಕರು. ಈ ಹಿಂದೆ ಕುರುಕ್ಷೇತ್ರ ಚಿತ್ರವನ್ನು ತಿರುಚಿದ್ದೆ ಎಂದು ಹೇಳಿದ್ದರು. ಅದೇ ರೀತಿ ನಾನೇ ಏಕೆ ನಟನೆ ಮಾಡಬಾರದು ಎಂದು ಒಳ್ಳೆ ಸ್ಕ್ರಿಪ್ಟ್ ಮಾಡಿಕೊಂಡು ಅವರು ಡ್ರಾಮಾ ಮಾಡಿದ್ದಾರೆ ಎಂದು ಕೌಂಟರ್ ಕೊಟ್ಟಿದ್ದಾರೆ.

ಕನ್ನಡದಲ್ಲಿ ಇತ್ತೀಚೆಗೆ ಒಳ್ಳೆಯ ಸಿನಿಮಾಗಳು ಬರುತ್ತಿಲ್ಲ ಎನ್ನುವ ಮಾತಿದೆ. ಮುನಿರತ್ನ ಅವರು ನಿರ್ಮಾಪಕರೂ ಆಗಿರುವುದರಿಂದ ಒಂದೊಳ್ಳೆ ಸ್ಕ್ರಿಪ್ಟ್ ಮಾಡಿಕೊಂಡು ತಾವು ಯಾಕೆ ನಟನೆ ಮಾಡಬಾರದು ಎಂದು ಈ ರೀತಿ ಪ್ರಯತ್ನ ಮಾಡಿದ್ದಾರೆ ಎಂದು ಡಿ.ಕೆ.ಸುರೇಶ್ ಹೇಳಿದ್ದಾರೆ.
ಬೆಂಗಳೂರಿನ ಕಂಠೀರವ ಸ್ಟುಡಿಯೋ ಬಳಿ ಮುನಿರತ್ನ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು ಮೊಟ್ಟೆ ಎಸೆದು ಹಲ್ಲೆಗೆ ಯತ್ನಿಸಿತ್ತು. ಇದಕ್ಕೆ ಡಿ.ಕೆ.ಶಿವಕುಮಾರ್, ಡಿಕೆ ಸುರೇಶ್, ಕುಸುಮಾ ಅವರೇ ಕಾರಣ ಎಂದು ಮುನಿರತ್ನ ಆರೋಪಿಸಿದ್ದರು. ಈ ಘಟನೆ ಬಳಿಕ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿಯೂ ನಡೆದು, ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದರು. ಕೆಲವರನ್ನು ಬಂಧಿಸಿ ಅವರು ಜಾಮೀನಿನ ಮೇಲೆ ಹೊರಬಂದಿದ್ದಾರೆ.

ತಮ್ಮ ಮೇಲಿನ ದಾಳಿ ಖಂಡಿಸಿ, ಮುನಿರತ್ನ ರಸ್ತೆಯಲ್ಲೇ ಕುಳಿತು ಪ್ರತಿಭಟಿಸಿದ್ದರು. ನನ್ನ ಕೊಲೆಯ ಹಿಂದೆ ಮೂವರಿದ್ದಾರೆ.ಡಿಸಿಎಂ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಹಾಗೂ ಕುಸುಮಾ ಹನುಮಂತರಾಯಪ್ಪ ಅವರೇ ನನ್ನ ಮೇಲಿನ ದಾಳಿಗೆ ಕಾರಣ ಎಂದು ಆರೋಪಿಸಿದ್ದರು. ಅಲ್ಲದೆ ನನ್ನ ಜೀವಕ್ಕೆ ಏನೇ ಅಪಾಯ ಆದ್ರೂ ಅದಕ್ಕೆ ಇವರೇ ಕಾರಣ ಎಂದು ದೂರಿದ್ದರು. ನನ್ನ ರಾಜಕೀಯವಾಗಿ ಮುಗಿಸಲು ಕೊಲೆ ಯತ್ನ ನಡೆದಿದ್ದು, ಕುಸುಮಾ ಅವರನ್ನು ಶಾಸಕಿ ಮಾಡಲು ನನ್ನ ಮೇಲೆ ಮೊದಲಿನಿಂದಲೂ ಸಂಚು ನಡೆಯುತ್ತಿದೆ ಎಂದು ಮುನಿರತ್ನ ಆರೋಪಿಸಿದ್ದರು.
ನನ್ನ ಜೀವಕ್ಕೆ ಅಪಾಯವಿದೆ ಎಂದು ರಾಜ್ಯಪಾಲರಿಗೂ ದೂರು ನೀಡಿದ್ದೇನೆ. ನನಗೆ ಗನ್‌ಮ್ಯಾನ್ ಅನ್ನು ಈಗಲೂ ಕೊಟ್ಟಿಲ್ಲ. ಇತ್ತೀಚೆಗೆ ಕೆಲವರು ವಕೀಲರ ವೇಷದಲ್ಲಿ ಬಂದು ನನಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಹೇಳಿದ್ದರು. ರಾಜೀನಾಮೆ ಕೊಡದಿದ್ದರೆ ಪೋಕ್ಸೋ ಕೇಸ್‌ನಲ್ಲಿ ಜೈಲಿಗೆ ಹಾಕ್ತೀವಿ ಎಂದು ವಾರ್ನಿಂಗ್ ಕೊಟ್ಟಿದ್ರು. ಕುಸುಮಾ ಅವರು ಶಾಸಕಿಯಾಗಿ ಸಚಿವೆ ಸ್ಥಾನ ಅಲಂಕರಿಸಬೇಕು ಎನ್ನುವುದು ನಮ್ಮಣ್ಣ ಡಿ.ಕೆ.ಸುರೇಶ್ ಅವರ ಆಸೆ ಎಂದೂ ಧಮ್ಕಿ ಹಾಕಿದ್ದರು ಎಂದು ಮುನಿರತ್ನ ಗಂಭೀರ ಆರೋಪ ಮಾಡಿದ್ದರು.












Click it and Unblock the Notifications