CM Post Fight: ತಾಳ್ಮೆಗೆ ಅಂತಿಮ ಗಡುವು; ಭಗವಂತನ ಇಚ್ಛೆ, ಹಣೆಯಲ್ಲಿ ಬರೆದಿದ್ದರೆ ಸಿಎಂ ಆಗುತ್ತಾರೆ: ಡಿ ಕೆ ಸುರೇಶ್
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಕೂಗು ಜೋರಾಗಿದೆ. ಇತ್ತ ಮುಖ್ಯಮಂತ್ರಿ ಪಟ್ಟಕ್ಕಾಗಿ ಪಟ್ಟು ಹಿಡಿದಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನ ಭೇಟಿಯಾಗಿದ್ದು, ಸದ್ಯ ಹೈಕಮಾಂಡ್ ನಾಯಕತ್ವ ಬದಲಾವಣೆಗೆ ಬ್ರೇಕ್ ಹಾಕಿದೆ. ಇನ್ನೂ ಅಣ್ಣನಿಗೆ ಮುಖ್ಯಮಂತ್ರಿ ಸ್ಥಾನ ಸಿಗುವ ಕುರಿತು ಬೇಸರದಿಂದ ಮಾಜಿ ಸಂಸದ ಹಾಗೂ ಬಮೂಲ್ ಅಧ್ಯಕ್ಷರಾದ ಡಿ.ಕೆ. ಸುರೇಶ್ ಅವರು ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಡಿ ಕೆ ಸುರೇಶ್ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, ರಾಜಕಾರಣದಲ್ಲಿ ಇದ್ದ ಮೇಲೆ, ಯಾವುದೂ ಶಾಶ್ವತವಲ್ಲ. ಅಧಿಕಾರ, ತಾಳ್ಮೆ ಎರಡೂ ಶಾಶ್ವತವಲ್ಲ. ಭಗವಂತನ ಇಚ್ಛೆ, ಏನೇನು ತೀರ್ಮಾನವಾಗುತ್ತದೋ ಕಾದು ನೋಡೋಣ, ಎಲ್ಲದಕ್ಕೂ ಅಂತ್ಯ ಇದ್ದೇ ಇರುತ್ತದೆ. ಹಣೆಯಲ್ಲಿ ಬರೆದಿದ್ದರೆ ನಮ್ಮ ಅಣ್ಣ ಸಿಎಂ ಆಗುತ್ತಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ತಾಳ್ಮೆಯಿಂದ ಇರಲು ಹೇಳಿದೆ. ರಾಹುಲ್ ಗಾಂಧಿ ಅವರು ಮೈಸೂರಿನಲ್ಲಿ ಭೇಟಿ ಮಾಡಿದಾಗ, ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಶಿವಕುಮಾರ್ ಮೊದಲಿನಿಂದಲೂ ಪಕ್ಷದ ಶಿಸ್ತಿನ ಸಿಪಾಯಿ. ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂಬ ಗುರಿಯೊಂದಿಗೆ ಪಕ್ಷದ ಆದೇಶಕ್ಕಾಗಿ ಕಾಯುತ್ತಿದ್ದಾರೆ ಎಂದರು.
ಅಧಿಕಾರ ಯಾರಿಗೂ ಸುಲಭವಾಗಿ ಬರುವುದಿಲ್ಲ. ನಮ್ಮ ಅಣ್ಣನ ಹಣೆಯಲ್ಲಿ ಬರೆದಿದ್ದರೆ ಅವರು ಸಿಎಂ ಆಗುತ್ತಾರೆ. ಈ ಮೊದಲು ಹೇಳಿದ್ದೆ, ಈಗಲೂ ಅದನ್ನೇ ಹೇಳುತ್ತೇನೆ. ಮುಖ್ಯಮಂತ್ರಿ ಹುದ್ದೆ ಸುಲಭವಾಗಿ ಸಿಗುವಂಥದ್ದಲ್ಲ. ಎಲ್ಲರೂ ಸೇರಿ ಇದರಲ್ಲಿ ಭಾಗಿಯಾಗಬೇಕು. ನಮ್ಮ ಗುರಿ 2028 ರ ಚುನಾವಣೆ. ಈ ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸಬೇಕು. ಈ ದೃಷ್ಟಿಯಿಂದ ಶಾಸಕರು, ಕಾರ್ಯಕರ್ತರ ಹಿತದೃಷ್ಟಿಯಿಂದ ತಾಳ್ಮೆಯಿಂದಲೇ ಇರಬೇಕಾಗುತ್ತದೆ, ತಾಳ್ಮೆಯಿಂದಲೇ ನೋಡಬೇಕು. ಅವರು ಪಕ್ಷದ ಅಧ್ಯಕ್ಷರಾಗಿದ್ದು, ಮೊದಲು ಅವರಲ್ಲಿ ಶಿಸ್ತು ಕಾಣಬೇಕು? ಹಾಗಾಗಿ ಅವರು ಶಿಸ್ತು ಪಾಲಿಸುತ್ತಿದ್ದಾರೆ ಎಂದು ತಿಳಿಸಿದರು.
ಎಷ್ಟು ದಿನ ತಾಳ್ಮೆಯಿಂದ ಇರಬೇಕು ಎಂಬ ಪ್ರಶ್ನೆ ಶಿವಕುಮಾರ್ ಅವರ ಬೆಂಬಲಿಗ ಶಾಸಕರಲ್ಲಿದೆ ಎಂದು ಕೇಳಿದಾಗ, ಅನಿವಾರ್ಯವಾಗಿ ವಿಶೇಷ ಅಧಿವೇಶನ ಕರೆಯಲಾಗಿದೆ. ರಾಷ್ಟ್ರದಲ್ಲಿ ಉದ್ಯೋಗ ಖಾತರಿ ಯೋಜನೆಯ ಹಕ್ಕು ಕಸಿಯುವ ಕೆಲಸವನ್ನು ಕೇಂದ್ರ ಬಿಜೆಪಿ ಸರ್ಕಾರ ಮಾಡಿದೆ. ಕಳೆದ ಆರು ತಿಂಗಳಿಂದ ಈ ಯೋಜನೆ ಪ್ರಗತಿ ಸಾಧಿಸುತ್ತಿಲ್ಲ. ಬೇಸಿಗೆ ಪ್ರಾರಂಭವಾಗುತ್ತಿದ್ದು, ಈಗ ಹೆಚ್ಚು ಉದ್ಯೋಗ ಬೇಕು. ಈ ಸಂದರ್ಭದಲ್ಲಿ ಕೇಂದ್ರದ ನಿರ್ಧಾರ ರೈತರು, ಕೂಲಿ ಕಾರ್ಮಿಕರಿಗೆ ಅನ್ಯಾಯವಾಗಿದೆ. ಇದು ನಮ್ಮ ಮೊದಲ ಆದ್ಯತೆ. ಹೀಗಾಗಿ ಅಧಿವೇಶನ ಕರೆಯಲು ತೀರ್ಮಾನಿಸಲಾಗಿದೆ. ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯ ಕೈಗೊಳ್ಳಬೇಕು. ವಿರೋಧ ಪಕ್ಷಗಳು ಮನರೇಗಾ ಬಗ್ಗೆ ಚರ್ಚೆಗೆ ಆಹ್ವಾನಿಸಿದ್ದರು. ಇದೆಲ್ಲಾ ಆದ ಬಳಿಕ ಏನು ತೀರ್ಮಾನ ಮಾಡುತ್ತಾರೆ ಕಾದು ನೋಡೋಣ ಎಂದರು.
ನಾಯಕತ್ವ ಬದಲಾವಣೆಯಾದರೆ ಒಂದು ವರ್ಗದ ಮತ ಕಾಂಗ್ರೆಸ್ ಪಕ್ಷಕ್ಕೆ ಬರಲ್ಲ ಎಂದು ಬಿಂಬಿಸುತ್ತಿರುವ ಕುರಿತು ಮಾತನಾಡಿ, ಆ ವರ್ಗ, ಈ ವರ್ಗ ಎಂಬುದಿಲ್ಲ. ಎಲ್ಲಾ ವರ್ಗದ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬೇಕು. ರಾಜಕಾರಣಿಗೆ ಒಕ್ಕಲಿಗರು, ಲಿಂಗಾಯತರು, ಪರಿಶಿಷ್ಟರ ಮತಗಳು ಬೇಕು. ಕೇವಲ ಒಬ್ಬರನ್ನು ಓಲೈಸಿಕೊಳ್ಳುವುದಲ್ಲ. ಎಲ್ಲರ ಮತಗಳು ಮುಖ್ಯವಾಗುತ್ತದೆ. ಜಾತಿ ಮೇಲೆ ನಡೆಯುವ ರಾಜಕಾರಣ ರಾಜ್ಯ ಹಾಗೂ ರಾಷ್ಟ್ರದ ಅಭಿವೃದ್ಧಿ ಕುಂಠಿತ ಮಾಡಲಿದೆ. ಶಿವಕುಮಾರ್ ಅವರು ಪಕ್ಷಕ್ಕೆ ನಿಷ್ಠರಾಗಿದ್ದಾರೆಯೇ ಹೊರತು, ವ್ಯಕ್ತಿಗೆ ಅಲ್ಲ. ಕೆಲವರು ವ್ಯಕ್ತಿಗೆ ನಿಷ್ಠರಾಗಿದ್ದಾರೆ. ಅವರು ಅಧಿಕಾರಕ್ಕಾಗಿಯೇ ಇರುತ್ತಾರೆ. ಡಿ.ಕೆ. ಶಿವಕುಮಾರ್ ಅವರು ಮೊದಲಿನಿಂದ ಪಕ್ಷ ಅಧಿಕಾರದಲ್ಲಿ ಇದ್ದಾಗ, ಇಲ್ಲದಿದ್ದಾಗ ಎಲ್ಲಾ ತರಹದ ನೋವು, ಕಷ್ಟಗಳನ್ನು ಪಕ್ಷದೊಂದಿಗೆ ಹಂಚಿಕೊಂಡಿದ್ದಾರೆ. ಹೀಗಾಗಿ ಎಲ್ಲವನ್ನೂ ತಾಳ್ಮೆಯಿಂದ ನೋಡುತ್ತಿದ್ದಾರೆ ಎಂದು ತಿಳಿಸಿದರು.
ಪಂಚಾಯಿತಿ ಚೇರ್ಮನ್ ಗಳೇ ತಮ್ಮ ಸ್ಥಾನ ಬಿಡಲು ಬಯಸುವುದಿಲ್ಲ. ಮದುವೆಯಾಗಲಿ, ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಸಿಕೊಳ್ಳುತ್ತೇನೆ, ಮಾರ್ಚ್ ಅಂತ್ಯ ಮುಗಿಯಲಿ - ಎಂದೆಲ್ಲಾ ನೆಪ ಹೇಳಿ ಮುಂದಕ್ಕೆ ಹಾಕುತ್ತಾರೆ. ಅಧ್ಯಕ್ಷ ಸ್ಥಾನ ಕೊಡುವಾಗ ನನಗೆ ಮೂರು ದಿನ ಅಧಿಕಾರ ಸಾಕು, ಮಾಜಿ ಎಂದು ಕರೆಸಿಕೊಳ್ಳುತ್ತೇನೆ ಸಾಕು ಎನ್ನುತ್ತಾರೆ. ಈ ರೀತಿ ಇದ್ದಾಗ ಏನು ಮಾಡಲು ಆಗುತ್ತೆ. ರಾಜಕಾರಣದಲ್ಲಿ ನಂಬಿಕೆ ಬಹಳ ಮುಖ್ಯವಾಗುತ್ತದೆ. ಶಿವಕುಮಾರ್ ಅವರು ಬಹಳ ಚಿಕ್ಕ ವಯಸ್ಸಿನಿಂದ ಇದೆಲ್ಲವನ್ನು ನೋಡಿಕೊಂಡು ಬಂದಿದ್ದಾರೆ ಎಂದು ಹೇಳಿದರು.












Click it and Unblock the Notifications