ಸಿಎಂ ಬದಲಾವಣೆ; ಮಾಜಿ ಸಂಸದ ಡಿಕೆ ಸುರೇಶ್ ಮಹತ್ವದ ಹೇಳಿಕೆ
ಸತೀಶ್ ಜಾರಕಿಹೊಳಿ ಸದ್ಯ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸಖತ್ ಸುದ್ದಿ ಮಾಡುತ್ತಿದ್ದಾರೆ. ಭಾನುವಾರ ಗೃಹ ಸಚಿವ ಪರಮೇಶ್ವರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಕುತೂಹಲ ಮೂಡಿತ್ತು, ಸೋಮವಾರ ಬೆಳಿಗ್ಗೆ ಸತೀಶ್ ಜಾರಕಿಹೊಳಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಭೇಟಿ ಮಾಡಿದ್ದು ಸಂಚಲನ ಮೂಡಿಸಿತ್ತು. ಸಿಎಂ ಬದಲಾವಣೆಗೆ ಕಾಂಗ್ರೆಸ್‌ನಲ್ಲಿ ಪ್ರಯತ್ನ ನಡೆಯುತ್ತಿದೆಯಾ ಎನ್ನುವ ಅನುಮಾನ ಮೂಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸತೀಶ್ ಜಾರಕಿಹೊಳಿಯವರನ್ನು ಕ್ರೆಸೆಂಟ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸದಲ್ಲಿ ಭೇಟಿ ಮಾಡಿದ ಬೆನ್ನಲ್ಲೇ ಮಾಜಿ ಸಂಸದ ಡಿಕೆ ಸುರೇಶ್ ಕೂಡ ಸತೀಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ವಿಜಯೇಂದ್ರ ಭೇಟಿ ಬೆನ್ನಲ್ಲೇ ಡಿಕೆ ಸುರೇಶ್ ಮಾತುಕತೆ ನಡೆಸಿದ್ದು ಕುತೂಹಲ ಮೂಡಿಸಿದೆ.

ಸತೀಶ್ ಜಾರಕಿಹೊಳಿ ಭೇಟಿ ಬಳಿಕ ಮಾತನಾಡಿದ ಮಾಜಿ ಸಂಸದ ಡಿ.ಕೆ. ಸುರೇಶ್, ಸಿಎಂ ಬದಲಾವಣೆ ವದಂತಿಯನ್ನು ತಳ್ಳಿಹಾಕಿದರು. ಸತೀಶ್ ಜಾರಕಿಹೊಳಿ ಪಕ್ಷದ ಹಿರಿಯರು ಮತ್ತು ಪ್ರಭಾವಿ ಸಚಿವರು, ಕನಕಪುರ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಕೆಲವು ಕಾಮಗಾರಿಗಳ ಮಂಜೂರಾತಿಗಾಗಿ ಮಾತನಾಡಲು ಬಂದಿದ್ದೆ, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಿಎಂ ಹಣ ಬಿಡುಗಡೆ ಮಾಡುತ್ತಿದ್ದಂತೆ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಇದು ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಪಟ್ಟಂತ ವಿಚಾರ, ರಾಮನಗರ ಕ್ಷೇತ್ರದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಬೇಕು ಎಂದು ಕೇಳಿದ್ದೇನೆ, ಅದಕ್ಕೂ ಅವರು ಒಪ್ಪಿಗೆ ಕೊಟ್ಟರು ಎಂದು ಹೇಳಿದ್ದಾರೆ.
ಸಿಎಂ ಬದಲಾವಣೆ ಆಗ್ತಾರ
ಡಿ.ಕೆ. ಶಿವಕುಮಾರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನ ಭೇಟಿ ಮಾಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರು ರಾಷ್ಟ್ರೀಯ ಅಧ್ಯಕ್ಷರು ಅವರು ಬೆಂಗಳೂರಿಗೆ ಬಂದಾಗಲೆಲ್ಲಾ ಭೇಟಿಯಾಗುವುದು ಸಂಪ್ರದಾಯ, ಅದರಲ್ಲಿ ಯಾವ ರಾಜಕೀಯವೂ ಇಲ್ಲ ಎಂದರು. ಕಾಂಗ್ರೆಸ್ ಪಕ್ಷದ ನಾಯಕರನ್ನೇ ಭೇಟಿಯಾಗುವುದು ತಪ್ಪಾ? ಅವರೇನೂ ಬಿಎಸ್‌ವೈ, ಹೆಚ್‌ಡಿ ಕುಮಾರಸ್ವಾಮಿ ಅವರ ಜೊತೆ ಗುಪ್ತವಾಗಿ ಚರ್ಚೆ ಮಾಡಿದ್ದಾರಾ ಎಂದು ಪ್ರಶ್ನೆ ಮಾಡಿದರು.
ನಾಯಕತ್ವ ಬದಲಾವಣೆ ಪ್ರಶ್ನೆ ಇಲ್ಲವೇ ಇಲ್ಲ, ಸಿದ್ದರಾಮಯ್ಯ ಅವರೇ ಮುಂದಿನ ಅವಧಿಯವರೆಗೆ ಮುಖ್ಯಮಂತ್ರಿಗಳಾಗಿ ಇರುತ್ತಾರೆ. ನ್ಯಾಯಾಲಯ ತನಿಖೆ ಮಾಡಬೇಕು ಎಂದು ಹೇಳಿದೆ, ತನಿಖೆ ನಡೆದು ವರದಿ ಬರಲಿ. ಸಿಎಂ ಸಿದ್ದರಾಮಯ್ಯ ಕೂಡ ತನಿಖೆಗೆ ಸಹಕಾರ ಕೊಡುತ್ತಿದ್ದಾರೆ. ನಮ್ಮ ಸರ್ಕಾರ ಕಳಂಕರಹಿತವಾಗಿ ಹೊರಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಡಿ ಪ್ರಕರಣ ದಾಖಲಿಸಿಕೊಂಡ ತಕ್ಷಣ ಸಿಎಂ ಸಿದ್ದರಾಮಯ್ಯರನ್ನು ಬಂಧಿಸಲು ಆಗಲ್ಲ, ಅದಕ್ಕೆ ಸಾಕ್ಷಿ ಬೇಕು. ಈ ಪ್ರಕರಣದಲ್ಲಿ ಹಣಕಾಸಿನ ವ್ಯವಹಾರವೇ ಇಲ್ಲ, ಸೈಟುಗಳನ್ನು ಈಗಾಗಲೇ ಸೈಟು ವಾಪಸ್ ಕೊಟ್ಟಿದ್ದಾರೆ. ಈ ಬಗ್ಗೆ ಲೋಕಾಯುಕ್ತ ತನಿಖೆ ಮಾಡಲಿದೆ ಎಂದು ಹೇಳಿದರು.












Click it and Unblock the Notifications