KPCC President: ಡಿಕೆ ಶಿವಕುಮಾರ್ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನ ಯಾರಿಗೆ? ಕ್ಲಾರಿಟಿ ಕೊಟ್ಟ ಹಿರಿಯ ನಾಯಕ
ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಐದು ವರ್ಷಗಳನ್ನು ಪೂರೈಸುತ್ತಿದ್ದಾರೆ. ಈ ಹಿನ್ನೆಲೆ ಅಧ್ಯಕ್ಷ ಸ್ಥಾನ ಬದಲಾಗುವುದು ಫಿಕ್ಸ್ ಎಂದು ಹೇಳಲಾಗುತ್ತಿದೆ. ಆದರೆ, ಕೆಪಿಸಿಸಿ ಪಟ್ಟದಿಂದ ಡಿಕೆಶಿ ಅವರನ್ನು ಕೆಳಗಿಳಿಸುತ್ತಾರಾ? ಎಂಬ ಪ್ರಶ್ನೆ ಕೂಡ ಎಲ್ಲರಲ್ಲಿದೆ. ಇದಕ್ಕೆ ಕೊನೆಗೂ ಸ್ಪಷ್ಟ ಉತ್ತರ ಸಿಕ್ಕಿದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಈ ಬಗ್ಗೆ ಕ್ಲಾರಿಟಿಯೂ ಕೊಟ್ಟಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಹಾಗು ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ಮುಖ್ಯಮಂತ್ರಿ ಆಗುವ ಆಸೆ ಯಾರಿಗಿಲ್ಲ ಹೇಳಿ? ಸಿಎಂ ಆಗಬೇಕು ಎಂಬ ಆಸೆ ನನಗೂ ಇದೆ. ಆದರೆ ರಾಜ್ಯದಲ್ಲಿ ಸಿಎಂ ಬದಲಾಗುವವರೆಗೂ ಸಿದ್ದರಾಮಯ್ಯ ಅವರೇ ಆ ಕುರ್ಚಿಯಲ್ಲಿ ಇರುತ್ತಾರೆ. ಸಿಎಂ ಸ್ಥಾನದಲ್ಲಿ ಇರುವವರೆಗೆ ನಾವೆಲ್ಲ ಗೌರವ ಕೊಡಬೇಕು. ಸಿಎಂ ಬದಲಾವಣೆ ಆಗ್ತಾರೆ, ಆಗಲ್ಲ ಅನ್ನೋ ಚರ್ಚೆಗಳ ಬಗ್ಗೆ ನಾನೇನು ಮಾತನಾಡಲ್ಲ. ಅದನ್ನು ಪಕ್ಷದ ಹೈಕಮಾಂಡ್ ನಾಯಕರು ತೀರ್ಮಾನ ಮಾಡ್ತಾರೆ ಎಂದು ಹೇಳಿದ್ದಾರೆ.

ಅಲ್ಲದೆ ಕಾಂಗ್ರೆಸ್‌ನಲ್ಲಿ ನಾಯಕತ್ವದ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಅವರು ಮಾತನಾಡಿದ್ದಾರೆ. ಸದ್ಯಕ್ಕೆ ರಾಜ್ಯದಲ್ಲಿ ಯಾವ ನಾಯಕತ್ವದ ಬದಲಾವಣೆಯೂ ಇಲ್ಲ. ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಅವರೇ ಮತ್ತೆ ಮುಂದುವರಿಯಲಿದ್ದಾರೆ ಎಂದೂ ತನ್ವೀರ್ ಸೇಠ್ ಸ್ಪಷ್ಟಪಡಿಸಿದ್ದಾರೆ. ಇನ್ನು ನಾನು ಕೂಡ ಯಾವಾಗ, ಯಾರು ಅವಕಾಶ ಕೊಡ್ತಾರೋ ಆಗ ಆ ಹುದ್ದೆಯನ್ನು ನಿಭಾಯಿಸುತ್ತೇನೆ ಎಂದೂ ಹೇಳಿದ್ದಾರೆ.
ಇಲ್ಲಿ ಯಾವುದು ಕೂಡ ಶಾಶ್ವತ ಅಲ್ಲ. ಯಾರಿಗೆ ಯಾವ ಹುದ್ದೆಯೂ ಪರ್ಮನೆಂಟ್ ಅಲ್ಲ. ಡಿಕೆ ಶಿವಕುಮಾರ್ ಅವರ ವಿಚಾರಕ್ಕೆ ಬಂದರೆ ಅವರು ಕಾಂಗ್ರೆಸ್ ಪಕ್ಷವನ್ನು ಕಷ್ಟದಲ್ಲಿ ಕೈಹಿಡಿದು ನಡೆಸಿದವರು. ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಅವರ ಪಾತ್ರ ಕೂಡ ಸಾಕಷ್ಟಿದೆ. ಅಲ್ಲದೆ ಮುಂದಿನ ಚುನಾವಣೆಯಲ್ಲೂ ಅವರು ಪಕ್ಷವನ್ನು ಅಧಿಕಾರಕ್ಕೆ ತರುವ ಸಾಮರ್ಥ್ಯ ಅವರಲ್ಲಿದೆ. ಕರ್ನಾಟಕ ಚುನಾವಣೆಯಲ್ಲಿ ಭಾರೀ ಗೆಲುವು ಸಾಧಿಸಿದ ಅವರ ಕಠಿಣ ಪರಿಶ್ರಮ ಮತ್ತು ತಂತ್ರಗಾರಿಗೆ ಬಗ್ಗೆ ಹೈಕಮಾಂಡ್ ಸೇರಿದಂತೆ ಎಲ್ಲರಿಗೂ ಗೊತ್ತಿದೆ ಎಂದು ಕೊಂಡಾಡಿದ್ದಾರೆ.

ನನಗೆ ಸಚಿವ ಸ್ಥಾನದ ಆಸೆ
ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನಲ್ಲೂ ನಾನಿಲ್ಲ, ಇಲ್ಲಿ ನಾನು ಕಾರ್ಯಕರ್ತರ ರೀತಿ ಕೆಲಸ ಮಾಡುತ್ತೇನೆ. ಮುಖ್ಯಮಂತ್ರಿ ಎನ್ನುವುದು ಕೇವಲ ಒಂದು ಸ್ಥಾನವಲ್ಲ. ಇಡೀ ರಾಜ್ಯದ ಭವಿಷ್ಯ ರೂಪಿಸುವ ಹುದ್ದೆ. ಹೀಗಾಗಿ ಇದರ ಬಗ್ಗೆ ನಾನು ಸದ್ಯಕ್ಕೆ ಏನೂ ಚರ್ಚಿಸಲ್ಲ. ಆದರೆ, ನನಗೆ ಸಚಿವ ಸ್ಥಾನದ ಆಸೆಯಂತೂ ಇದೆ. ಆದರೆ ಈಗ ಖಾತೆಗಳು ಯಾವುದೂ ಖಾಲಿ ಇಲ್ಲ, ಮುಂದೆ ನನಗೆ ಸಚಿವ ಸ್ಥಾನ ಕೊಟ್ರೆ ಉತ್ತಮವಾಗಿ ನಿಭಾಯಿಸುತ್ತೇನೆ ಎಂದು ಆಸೆ ಬಿಚ್ಚಿಟ್ಟಿದ್ದಾರೆ.












Click it and Unblock the Notifications