ಎ ಖಾತಾ ಪರಿವರ್ತನೆಗೆ 5% ಹಣ, ಆಸ್ತಿ ಮೌಲ್ಯ ದುಪ್ಪಟ್ಟು: ಡಿ ಕೆ ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು, ಅಕ್ಟೋಬರ್ 20: ಎ ಖಾತಾ ಪರಿವರ್ತನೆಗೆ 5% ಹಣ ಪಾವತಿ ಮಾಡುವ ಕುರಿತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದು, ಜನರು ತಮ್ಮ ಆಸ್ತಿ ದಾಖಲೆ ಸರಿ ಮಾಡಿಕೊಳ್ಳಲು ಇದು ದೊಡ್ಡ ಮೊತ್ತವಲ್ಲ. ಖಾತಾ ಪರಿವರ್ತನೆಯಿಂದ ಅವರ ಆಸ್ತಿ ಮೌಲ್ಯ ದುಪ್ಪಟ್ಟಾಗಲಿದೆ ಎಂದು ಹೇಳಿದರು. ಅನೇಕರು ಕಂದಾಯ ನಿವೇಶನ ಖರೀದಿ ಮಾಡಿದ್ದು, ನಾವು ಎಲ್ಲರಿಗೂ ಸಮನಾದ ಸೇವೆ ನೀಡಬೇಕು. ಹೀಗಾಗಿ ಅವರ ಸಹಕಾರ ಬೇಕಾಗಿದೆ. ಈ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲಿದ್ದು, ಯಾರೂ ಲಂಚ ನೀಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಬೆಂಗಳೂರಿನ ಸೌಲಭ್ಯಗಳನ್ನು ಬಳಸಿಕೊಂಡು ಉದ್ಯಮ ಆರಂಭಿಸಿ ದೊಡ್ಡ ಮಟ್ಟಕ್ಕೆ ಬೆಳೆದವರು. ಈಗ ಬೆಂಗಳೂರಿನ ಬಗ್ಗೆ ಟೀಕೆ ಮಾಡಿ ಟ್ವೀಟ್ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಘನತೆಗೆ ಚ್ಯುತಿ ತರುತ್ತಿರುವವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಬೆಂಗಳೂರಿಗೆ ಬಂದು ಬೆಳೆದಿರುವವರು ಹಿಂದೆ ಹೇಗಿದ್ದೆವು, ಪ್ರಸ್ತುತ ಹೇಗಿದ್ದೇವೆ ಎಂಬುದನ್ನು ಮರೆತು ಟ್ವೀಟ್ ಮಾಡುತ್ತಿದ್ದಾರೆ. ನಾವು ನಮ್ಮ ಮೂಲವನ್ನು ಮರೆಯಬಾರದು, ಮೂಲವನ್ನು ಮರೆತರೆ ಯಶಸ್ಸು ಸಾಧಿಸುವುದಿಲ್ಲ ಎಂದು ನಾನು ನಂಬಿದ್ದೇನೆ ಎಂದು ತಿಳಿಸಿದರು.

ನಗರದಾದ್ಯಂತ ಎಲ್ಲೆಲ್ಲಿ ರಸ್ತೆಗುಂಡಿಗಳಿವೆ ಎಂಬುದನ್ನು ಸಾರ್ವಜನಿಕರೇ ಫೋಟೊ ತೆಗೆದು ಅದನ್ನು ಮೊಬೈಲ್ ಆ್ಯಪ್ ಮೂಲಕ ಸರ್ಕಾರದ ಗಮನಕ್ಕೆ ತರುವ ವ್ಯವಸ್ಥೆಯನ್ನು ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ನಾವು ರೂಪಿಸಿದ್ದೇವೆ. ಮಾಧ್ಯಮಗಳೂ ಸಹ ಸುದ್ದಿ ಮಾಡುತ್ತಿವೆ. ನಾನು ಟೀಕೆ ಹಾಗೂ ವಿಮರ್ಶೆಗಳನ್ನು ಸ್ವಾಗತಿಸುತ್ತೇನೆ. ಟೀಕೆಗಳು ಇದ್ದಾಗಲೇ ಪ್ರಜಾಪ್ರಭುತ್ವಕ್ಕೆ ಹೆಚ್ಚು ಮೌಲ್ಯ ಇರುತ್ತದೆ. ಆದರೆ ಕೆಲವರು ವಿಕೋಪಕ್ಕೆ ಹೋಗಿ ಟೀಕೆ ಮಾಡುತ್ತಿದ್ದಾರೆ. ಅಂತಹವರ ಟೀಕೆ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಜನ ನಮಗೆ ಅವಕಾಶ ನೀಡಿದ್ದು, ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ ಎಂದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಯಿತು. ಇತಿಹಾಸ ಗಮನಿಸಿದರೆ ನಾವು ಮಾಡಿದಷ್ಟು ತೀರ್ಮಾನಗಳನ್ನು ಯಾರೂ ಸಹ ಮಾಡಿಲ್ಲ. ನಾವು ಮಾಡಿದ ಕೆಲಸಗಳ ಬಗ್ಗೆ ಸಾರ್ವಜನಿಕರಿಗೆ, ವಿರೋಧ ಪಕ್ಷದವರಿಗೆ ಎಲ್ಲರಿಗೂ ತಿಳಿದಿದೆ. ಇಡೀ ದೇಶದಲ್ಲಿ ಸಮಸ್ಯೆಯಿದೆ. ಅವರೆಲ್ಲಾ ಮಾಧ್ಯಮಗಳನ್ನು ನಿಯಂತ್ರಣ ಮಾಡುತ್ತಿದ್ದಾರೆ. ನಾವು ಮುಕ್ತವಾಗಿ ಬಿಟ್ಟಿದ್ದೇವೆ. ದೆಹಲಿ, ಮುಂಬೈ ಸೇರಿದಂತೆ ಎಲ್ಲಿಗೆ ಬೇಕಾದರೂ ಕರೆದುಕೊಂಡು ಹೋಗಿ ರಸ್ತೆಗಳ ಸಮಸ್ಯೆಗಳನ್ನು ನಾವು ತೋರಿಸುವೆ ಎಂದರು.
ಜಿಬಿಎ ಮಾಡುವಾಗ ವಿರೋಧ ಪಕ್ಷದವರೂ ಸಹಕಾರ ನೀಡಿದರು. ಈ ಮೊದಲು 198 ವಾರ್ಡ್ ಗಳಿದ್ದವು ಈಗ ಐದು ಪಾಲಿಕೆಗಳಿಂದ 369 ವಾರ್ಡ್ ಗಳಾಗಿವೆ. ಇಷ್ಟು ಬೇಗ ಪಾಲಿಕೆ ವಿಭಜನೆಯಿಂದ ಹಿಡಿದು ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವೇ ಎಂದು ದೇಶದಾದ್ಯಂತ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ಜನರ ಬಳಿಗೆ ಸರ್ಕಾರ ಹೋಗಬೇಕು ಎಂದು ಐದು ಪಾಲಿಕೆಗಳನ್ನು ಮಾಡಲಾಗಿದೆ. ಬಿ ಖಾತಾದಿಂದ ಎ ಖಾತೆಗೆ ಬದಲಾವಣೆ ಮಾಡಿಕೊಳ್ಳಲು ಸರ್ಕಾರ ಅತ್ಯುತ್ತಮ ಅವಕಾಶ ನೀಡಿದೆ. ಸಿಎ ನಿವೇಶನಗಳ ಬಗ್ಗೆಯೂ ಪ್ರತ್ಯೇಕ ನೀತಿ ತರಲಾಗುತ್ತಿದೆ. ಗೊಂದಲ ಉಂಟಾಗುವುದು ಬೇಡವೆಂದು ನಗರ ಯೋಜನೆ ಕೆಲಸವನ್ನು ಬಿಡಿಎಯಿಂದ ಜಿಬಿಎಗೆ ನೀಡಲಾಗಿದೆ. ದೊಡ್ಡ ಯೋಜನೆಗಳನ್ನು ಸರ್ಕಾರ ಮಾಡಿದರೆ. ಚಿಕ್ಕ ಕೆಲಸಗಳನ್ನು ಪಾಲಿಕೆಗಳು ಮಾಡುತ್ತವೆ ಎಂದರು.
ಜಿಬಿಎ ಮೂಲಕ ಐದು ಪಾಲಿಕೆಗಳ ರಚನೆ ಬಳಿಕ, ಪಾಲಿಕೆ ಆಯುಕ್ತರ ವೆಚ್ಚ ಮಿತಿಯನ್ನು 1ರಿಂದ 3 ಕೋಟಿಗೆ, ಸ್ಥಾಯಿ ಸಮಿತಿ ವೆಚ್ಚ ಮಿತಿಯನ್ನು 3ರಿಂದ 5 ಕೋಟಿಗೆ, ಪಾಲಿಕೆ ಮೇಯರ್ ವೆಚ್ಚ ಮಿತಿಯನ್ನು 5ರಿಂದ 10 ಕೋಟಿಗೆ ಏರಿಸಲಾಗಿದೆ. ಆಮೂಲಕ ಪಾಲಿಕೆಗಳಿಗೆ ಆರ್ಥಿಕ ಉತ್ತೇಜನ ನೀಡಲಾಗಿದೆ. ನಮ್ಮ ಈ ನಿರ್ಧಾರದಿಂದ ಬಿಜೆಪಿ ನಾಯಕರು ಸಂತೋಷಗೊಂಡಿದ್ದು, ಅದನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿಲ್ಲ. ನೀವು ನಮಗೆ ಸಹಕಾರ ನೀಡಿ ಎಂದರು.












Click it and Unblock the Notifications